ಸ್ವಚ್ಛ ಬಡಾವಣೆ ರೂಪಿಸಲು ಒತ್ತಾಯ

ರಸ್ತೆ, ಒಳಚರಂಡಿ ದುರಸ್ತಿ: ವಾಕಥಾನ್‌

ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಎಚ್‌ಎಸ್‌ಆರ್‌ ನಾಗರಿಕ ಕಾರ್ಯಪಡೆಯ ನೇತೃತ್ವದಲ್ಲಿ ನಿವಾಸಿಗಳು ಭಾನುವಾರ ವಾಕಥಾನ್‌ ನಡೆಸಿದರು.

ವಾಕಥಾನ್‌ನಲ್ಲಿ ಎಚ್‌ಎಸ್‌ಆರ್‌ ಬಡಾವಣೆಯ ನಿವಾಸಿಗಳು –ಪ್ರಜಾವಾಣಿ ಚಿತ್ರ

ಬೆಂಗಳೂರು: ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಎಚ್‌ಎಸ್‌ಆರ್‌ ನಾಗರಿಕ ಕಾರ್ಯಪಡೆಯ ನೇತೃತ್ವದಲ್ಲಿ ನಿವಾಸಿಗಳು ಭಾನುವಾರ ವಾಕಥಾನ್‌ ನಡೆಸಿದರು.

ಬಿಡಿಎ ಸಂಕೀರ್ಣದ ಬಳಿ ಸೇರಿದ್ದ ನಿವಾಸಿಗಳು, ‘ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಸುರಿದ ನಿರಂತರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದರಿಂದ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಒಳಚರಂಡಿ, ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಹೂಳನ್ನು ತೆರವುಗೊಳಿಸಲು ಕಾಲುವೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದರಿಂದ ಮನೆಗಳಿಗೆ ಹೋಗಲು ತೊಂದರೆ ಉಂಟಾಗಿದೆ. ಕುಡಿಯುವ ನೀರು ಹಾಗೂ ಒಳಚರಂಡಿಗೆ ಸಂಪರ್ಕ ಕಲ್ಪಿಸಿದ್ದ ಕೊಳವೆಗಳನ್ನು ಕತ್ತರಿಸಲಾಗಿದೆ. ಇದರಿಂದ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ’ ಎಂದು ಅಳಲು ತೋಡಿಕೊಂಡರು.

‘ಕೊಳಚೆ ನೀರಿನಿಂದಾಗಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ’ ಎಂದರು.

‘ಬಡಾವಣೆಯಲ್ಲಿರುವ ಚರಂಡಿಗಳನ್ನು ಮುಚ್ಚಬೇಕು. ಕೊಳಚೆ ನೀರು ರಾಜಕಾಲುವೆಗೆ ಹರಿಯದಂತೆ ನೋಡಿಕೊಳ್ಳಬೇಕು. ಮಂಗಮ್ಮನಪಾಳ್ಯ ಹಾಗೂ ಬೊಮ್ಮನಹಳ್ಳಿ ಕಡೆಯಿಂದ ಬರುವ ಕೊಳಚೆ ನೀರನ್ನು ಬೇರೆಡೆ ತಿರುಗಿಸಬೇಕು.

‘ರಸ್ತೆ ಮಧ್ಯ ಇರುವ ಕಾಲುವೆಗಳ ಹೂಳನ್ನು ತೆರವುಗೊಳಿಸಬೇಕು. ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ನಿವಾಸಿಗಳು ಮನೆಗೆ ಹೋಗಲು ಸುರಕ್ಷಿತ ಪಾದಚಾರಿ ಮಾರ್ಗವನ್ನು ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ಬಡಾವಣೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು, ಅಧಿಕಾರಿಗಳ ಹೆಸರು, ಯೋಜನೆಯ ಮೊತ್ತ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಫಲಕದಲ್ಲಿ ಪ್ರದರ್ಶಿಸಬೇಕು’ ಎಂದು ಆಗ್ರಹಿಸಿದರು.

ನಿವೇಶನಗಳ ಹಣ ನೀಡಿ: ‘ಈ ಬಡಾವಣೆಯನ್ನು ಬಿಡಿಎ ಅಭಿವೃದ್ಧಿ ಪಡಿಸಿದೆ. ಇಲ್ಲಿನ ಅನೇಕ ಮೂಲೆ ನಿವೇಶನಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಖರ್ಚು ಕಳೆದು ಉಳಿದ ಹಣವನ್ನು ಈ ಬಡಾವಣೆಯ ಮೂಲಸೌಕರ್ಯಕ್ಕೆ ವಿನಿಯೋಗಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಒತ್ತಾಯಿಸಿದರು.

ಸೈಕಲ್‌ ಪಥ ನಿರ್ಮಾಣ: ‘ಇಲ್ಲಿ ಸೈಕಲ್‌ ಪಥ ಹಾಗೂ ಪಾದಚಾರಿ ಮಾರ್ಗ ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಕೆಲವರು ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ತಿಳಿಸಿದರು.

‘ತೆರಿಗೆಯ ಶೇ 10ರಷ್ಟು ಹಣ ಕೊಡಿ’

‘ಬೊಮ್ಮನಹಳ್ಳಿ ಕ್ಷೇತ್ರದಿಂದ ಪ್ರತಿ ವರ್ಷ ಸುಮಾರು ₹500 ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರ ಶೇ 10ರಷ್ಟು ಪಾಲನ್ನು ಕೊಡಲಿ. ಇದರಿಂದ ರಸ್ತೆ, ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಬಹುದು. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ₹150 ಕೋಟಿ ನೀಡಲಾಗಿದೆ. ಆದರೆ, ಬೊಮ್ಮನಹಳ್ಳಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ಶಾಸಕ ಸತೀಶ್‌ ರೆಡ್ಡಿ ದೂರಿದರು.

‘ಬಡಾವಣೆಯ ರಸ್ತೆಗಳನ್ನು ವೈಟ್‌ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲು ಹೆಚ್ಚಿನ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

‘ಉಗ್ರಪ್ಪನವರ ಮನೆ ಒಡೆಯಲಿ’

‘ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ಕಟ್ಟುತ್ತಿದ್ದಾರೆ. ಅಂತಹ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌ಎಸ್‌ಆರ್‌ ಬಡಾವಣೆ ವಾರ್ಡ್‌ ಸದಸ್ಯ ಗುರುಮೂರ್ತಿ ರೆಡ್ಡಿ, ‘ಉಗ್ರಪ್ಪ ಅವರು ಕೆರೆ ಜಾಗದಲ್ಲಿ ಮನೆ ಕಟ್ಟಿಕೊಂಡಿ
ದ್ದಾರೆ. ಆದರೆ, ಬಡವರ ಮನೆಗಳನ್ನು ಒಡೆದು ಹಾಕಬೇಕು ಎಂದು ಹೇಳುತ್ತಿದ್ದಾರೆ. ಮೊದಲು ಅವರ ಮನೆಯನ್ನು ಒಡೆಯಬೇಕು’ ಎಂದು ಒತ್ತಾಯಿಸಿದರು.

ನಿವಾಸಿಗಳು ಏನು ಹೇಳುತ್ತಾರೆ?

ರಾಜಕಾರಣಿಗಳು, ಅಧಿಕಾರಿಗಳು ಭಾಷಣ ಬಿಗಿದು ಹೋಗುತ್ತಾರೆ. ಆದರೆ, ಸಮಸ್ಯೆಗಳು ಮಾತ್ರ ಬಗೆಹರಿಯುವುದಿಲ್ಲ. ಚರಂಡಿ, ರಸ್ತೆಯನ್ನು ಸರಿಪಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಭಾಷಣ ಬಿಗಿಯುತ್ತಿದ್ದಾರೆ. ಈ ಅವ್ಯವಸ್ಥೆಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವವರೆಗೂ ನಾವು ತೆರಿಗೆ ಕಟ್ಟುವುದಿಲ್ಲ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕು.

– ಸರಸ್ವತಿ, ಸ್ಥಳೀಯ ನಿವಾಸಿ

 

ಈ ಭಾಗದ ಕಸದ ಗುತ್ತಿಗೆ ಸೇರಿದಂತೆ ಅನೇಕ ಕಾಮಗಾರಿಗಳ ಗುತ್ತಿಗೆಯನ್ನು ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ ಅವರ ತಮ್ಮನಿಗೆ ನೀಡಲಾಗುತ್ತಿದೆ. ಮೂಲಸೌಕರ್ಯಕ್ಕಾಗಿ ಪಾಲಿಕೆಯು ₹40 ಲಕ್ಷ ಮಂಜೂರು ಮಾಡಿ ಮೂರು ತಿಂಗಳು ಕಳೆದಿವೆ. ಆದರೆ, ಈವರೆಗೂ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ.

– ಕವಿತಾ ರೆಡ್ಡಿ, ಸ್ಥಳೀಯ ನಿವಾಸಿ

ಬಡಾವಣೆಯಲ್ಲಿ ಚರಂಡಿ ಹಾಗೂ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಮಕ್ಕಳು, ವೃದ್ಧರು ಓಡಾಡಲು ಕಷ್ಟವಾಗುತ್ತಿದೆ. ಇವುಗಳನ್ನು ಕೂಡಲೇ ಸರಿಪಡಿಸಬೇಕು.

– ವಸಂತಾ ಗೋವಿಂದರಾಜ್‌

Comments
ಈ ವಿಭಾಗದಿಂದ ಇನ್ನಷ್ಟು
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

ಪ್ರತಿ ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ನಿರ್ಬಂಧ
ಬೆಂಗಳೂರು ಉಳಿವಿಗಾಗಿ ’ವಿರಳ ಸಂಚಾರ ದಿನ’ ಅಭಿಯಾನ

13 Dec, 2017
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

ತುಂಡಾಗಿದ್ದ ತಂತಿ
ವಿದ್ಯುತ್ ಪ್ರವಹಿಸಿ ಬಾಲಕ ದುರ್ಮರಣ

13 Dec, 2017
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌
17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

13 Dec, 2017

₹17 ಸಾವಿರ ಲಂಚ
ಲಂಚ: ಸಹಾಯಕ ನಿರ್ದೇಶಕ ಎಸಿಬಿಗೆ ಬಲೆಗೆ

ಹೆಬ್ಬಾಳದಲ್ಲಿರುವ ರೆಸ್ಟೋರೆಂಟ್‌ವೊಂದರ ಮಾಲೀಕರು ನೀರಿನ ಬಾಟಲಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಈ ಬಗ್ಗೆ, ರೆಸ್ಟೋರೆಂಟ್‌ಗೆ ಇಲಾಖೆ ನೋಟಿಸ್ ನೀಡಿತ್ತು. ನಂತರ, ಕ್ರಮ ಕೈಗೊಳ್ಳದಿರಲು...

13 Dec, 2017
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸ್ಪಷ್ಟನೆ
ಸ್ವಾಧೀನಾನುಭವ ಪತ್ರ: ಪಾಲಿಕೆ ನಿಯಮ ಪಾಲನೆ

13 Dec, 2017