ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶದಲ್ಲಿ ದಕ್ಷಿಣ ಭಾರತದ ಅಕ್ಕಿ ತಿರಸ್ಕೃತ

Last Updated 3 ಡಿಸೆಂಬರ್ 2017, 20:22 IST
ಅಕ್ಷರ ಗಾತ್ರ

ಕೊಪ್ಪಳ: ಮಿತಿಮೀರಿದ ಕೀಟನಾಶಕ ಶೇಷಾಂಶ ಉಳಿದ ಕಾರಣಕ್ಕಾಗಿ ದಕ್ಷಿಣ ಭಾರತದಿಂದ ರಫ್ತಾದ ಅಕ್ಕಿಯನ್ನು ಐರೋಪ್ಯ ಒಕ್ಕೂಟ, ಇರಾನ್‌ ಮತ್ತು ಅಮೆರಿಕದ ಮಾರುಕಟ್ಟೆಗಳು ತಿರಸ್ಕರಿಸಿವೆ.

ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಕೀಟನಾಶಕದ ಅಂಶ  (ಗರಿಷ್ಠ ಶೇಷಾಂಶ) ಅಕ್ಕಿಯಲ್ಲಿ ಇರುವುದು ಇದಕ್ಕೆ ಕಾರಣ. ಈ ಬಗ್ಗೆ ಎಚ್ಚರವಹಿಸಬೇಕು ಮತ್ತು ರೈತ
ರಿಗೆ ಮಾರ್ಗದರ್ಶನ ನೀಡಬೇಕು ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಬಿ.ಕೆ.ಶ್ರೀವಾಸ್ತವ ಅವರು ರಾಜ್ಯ ಕೃಷಿ ಮಿಷನ್‌ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಕೃಷಿ ನಿರ್ವಹಣಾ ಸಂಸ್ಥೆ ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯಗಳಿಗೆ ಇದೇ ವಿಷಯ ಉಲ್ಲೇಖಿಸಿ ಪತ್ರ ಬರೆದಿದೆ.

ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೂ ಈ ಸುತ್ತೋಲೆ ಹೋಗಿದೆ.

ಬೆಂಕಿರೋಗದ ನಿಯಂತ್ರಣಕ್ಕೆಂದು ಸಿಂಪಡಿಸಿದ ಶಿಲೀಂಧ್ರನಾಶಕಗಳನ್ನು ವಿಪರೀತ ಪ್ರಮಾಣದಲ್ಲಿ ಬಳಸಿರುವುದೇ ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಅಭಿಪ್ರಾಯಪಟ್ಟಿದೆ.

‘ಬೆಂಕಿರೋಗಕ್ಕೆ ಟ್ರೈಸೈಕ್ಲೋಝೋಲ್‌ನ್ನು 10 ಲೀಟರ್‌ ನೀರಿಗೆ 6 ಗ್ರಾಂನಷ್ಟು ಬಳಸಬೇಕು. ಅದೇ ರೀತಿ ಐಸೋಪ್ರೋಥಿಯೋಲೆನ್‌ ಎಂಬ ಔಷಧವನ್ನು 10 ಲೀಟರ್‌ ನೀರಿಗೆ 15 ಮಿಲಿಲೀಟರ್‌ನಷ್ಟು ಬಳಸಬೇಕು. ಇದರ ಅರಿವಿಲ್ಲದ ರೈತರು ವಿಪರೀತ ಬಳಸಿ ಅಕ್ಕಿಯಲ್ಲಿ ಕೀಟನಾಶಕದ ಶೇಷಾಂಶ ಉಳಿದಿದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ಬಿ.ಪಾಟೀಲ ಹೇಳಿದರು.

ಯುರೋಪ್‌ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟವಾಗಬೇಕಾದರೆ ಟ್ರೈಸೈಕ್ಲೋಝೋಲ್‌ ಶೇಷಾಂಶ ಪ್ರತಿ ಕೆಜಿಯಲ್ಲಿ 0.01 ಮಿಲಿ ಗ್ರಾಂ ಇರ
ಬಹುದು. ಅಮೆರಿಕದಲ್ಲಿ ಐಸೋಪ್ರೋಥಿಯೋಲೆನ್‌ನ ಶೇಷಾಂಶ ಪ್ರತಿ ಕೆಜಿಗೆ 0.01 ಮಿಲಿ ಗ್ರಾಂ ಮೀರಬಾರದು. ಹೀಗಾಗಿ ಅಕ್ಕಿಯ ಅಂತರರಾಷ್ಟ್ರೀಯ ಮಾರುಕಟ್ಟೆ ಮೇಲೆ ಭಾರೀ ಹೊಡೆತ ಬಿದ್ದಿದೆ ಎಂದು ಶ್ರೀವಾಸ್ತವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಐದು ವರ್ಷಗಳಿಂದ ಭಾರತ ಭಾರೀ ಪ್ರಮಾಣದ ಅಕ್ಕಿ ರಫ್ತುದಾರ ರಾಷ್ಟ್ರವಾಗಿತ್ತು. ಆದರೆ, ಈ ಬೆಳವಣಿಗೆಯಿಂದಾಗಿ ಅಕ್ಕಿಯನ್ನು ಕೊಳ್ಳುವವರಿಲ್ಲವಾಗಿದೆ ಎಂದು ಕೇಂದ್ರ ನಿರ್ದೇಶನಾಲಯ ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.

ಮರಳಿ ಭಾರತೀಯರ ತಟ್ಟೆಗೆ: ತಿರಸ್ಕೃತಗೊಂಡ ಅಕ್ಕಿಯ ಪ್ರಮಾಣ ಗೊತ್ತಾಗಿಲ್ಲ. ಹಾಗಿದ್ದರೂ ಬೃಹತ್‌ ಪ್ರಮಾಣವೇ ಆಗಿರುತ್ತದೆ. ವಾಪಸ್‌ ಬಂದರೆ ಭಾರತೀಯ ಮಾರುಕಟ್ಟೆಗೇ ಬರಬೇಕು. ಕೀಟ ಕೊಲ್ಲುವ ಔಷಧ ಮನುಷ್ಯನನ್ನು ಕೊಲ್ಲದಿರದು ಎಂದು ಆಹಾರ ತಜ್ಞರು ಕಳವಳ ವ್ಯಕ್ತಪಡಿ
ಸುತ್ತಾರೆ.

ಅಕ್ಕಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದರಲ್ಲಿ ಉಳಿದಿರುವ ಕೀಟನಾಶಕ ಅಂಶವೇ ಶೇಷಾಂಶ. ಆದರೆ, ಅಕ್ಕಿ ಸೇವನೆಗೆ ಯೋಗ್ಯವೆನಿಸಬೇಕಾದರೆ ಮಿತಿ ನಿಗದಿಪಡಿಸಲಾದ ಕೀಟನಾಶಕದ ಪ್ರಮಾಣವೇ ಗರಿಷ್ಠ ಶೇಷಾಂಶ. ಉದಾಹರಣೆಗೆ ಪ್ರತಿ ಕೆಜಿ ಅಕ್ಕಿಯಲ್ಲಿ 0.01 ಮಿಲಿಗ್ರಾಂನಷ್ಟು ಕೀಟನಾಶಕದ ಅಂಶ ಉಳಿದಿದ್ದರೆ ಅದು ಕೀಟನಾಶಕ ಅಂಶ ಉಳಿದಿರುವ ಗರಿಷ್ಠ ಶೇಷಾಂಶ. ಶೇಷಾಂಶ ಅದಕ್ಕಿಂತಲೂ ಕಡಿಮೆ ಇರಬೇಕು ಅಥವಾ ಇರಲೇಬಾರದು.

ಮಾನದಂಡದ ಪ್ರಮಾಣಕ್ಕಿಂತ ಶೇಷಾಂಶ ಹೆಚ್ಚು ಇದ್ದರೆ ಅಂತಹ ಅಕ್ಕಿಯ ಸೇವನೆ ಜೀವಕ್ಕೆ ಹಾನಿಕಾರಕ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕೀಟನಾಶಕ ಬಳಕೆ ಬಗ್ಗೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದು, ಹೆಚ್ಚು ಬಳಸಿದರೆ ತುಂಬಾ ಪರಿಣಾಮಕಾರಿ ಎಂಬ ತಪ್ಪು ತಿಳಿವಳಿಕೆ ಈ ಬೆಳವಣಿಗೆಗೆ ಕಾರಣ.
-ಡಾ.ಎಂ.ಬಿ.ಪಾಟೀಲ, ವಿಸ್ತರಣಾ ಮುಂದಾಳು, ರಾಯಚೂರು ಕೃಷಿ ವಿಶ್ವವಿದ್ಯಾಲಯಯದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT