ಮಂಗಳೂರು

5 ವರ್ಷಗಳ ಬಳಿಕ ಕಂಬಳದ ಸಂಭ್ರಮ

ಬರೋಬ್ಬರಿ 5 ವರ್ಷಗಳ ಬಳಿಕ ಮಂಗಳೂರಿನಲ್ಲಿ ಕಂಬುಳದ ಧ್ವನಿ. ರಾಮಕರೆ–ಲಕ್ಷ್ಮಣ ಕರೆಯ ಮಂಜೊಟ್ಟಿಯ ಮೇಲೆ ಕೋಣಗಳ ಮೈಮೇಲೆ ನೀರು ಎರಚುವವರು.

ಮಂಗಳೂರಿನ ಕೂಳೂರಿನಲ್ಲಿ ಭಾನುವಾರ ನಡೆದ ರಾಮ–ಲಕ್ಷ್ಮಣ ಜೋಡುಕರೆ ಕಂಬಳದದ ಒಂದು ರೋಚಕ ದೃಶ್ಯ.

ಮಂಗಳೂರು: ಬರೋಬ್ಬರಿ 5 ವರ್ಷಗಳ ಬಳಿಕ ಮಂಗಳೂರಿನಲ್ಲಿ ಕಂಬುಳದ ಧ್ವನಿ. ರಾಮಕರೆ–ಲಕ್ಷ್ಮಣ ಕರೆಯ ಮಂಜೊಟ್ಟಿಯ ಮೇಲೆ ಕೋಣಗಳ ಮೈಮೇಲೆ ನೀರು ಎರಚುವವರು. ಹೊಳ್ಳೆಗಳಿಗೆ ತುಸುವೇ ನೀರು ಚಿಮುಕಿಸುತ್ತ, ಬೆನ್ನಿಗೆ ಎಣ್ಣೆಯನ್ನು ಹೊಯ್ಯುತ್ತ ಕೋಣಗಳನ್ನು ಮುದ್ದು ಮಾಡುವವರು.

ಕೈಯಲ್ಲಿರುವ ಬೆತ್ತಕ್ಕೆ ಸುಂದರವಾದ ಕುಚ್ಚನ್ನು ಅಂಟಿಸಿ, ಅದೇ ಬಣ್ಣದ ಕುಚ್ಚನ್ನು ಕೋಣಗಳ ಹಣೆಯ ಮೇಲೆ ಹಗ್ಗಕ್ಕೆ ಜೋಡಿಸಿ... ಸಿಂಗಾರವನ್ನು ಮತ್ತೆ ಮತ್ತೆ ನೋಡುವವರು.

ಮಂಗಳೂರು ಕಂಬಳ ಸಮಿತಿಯ ವತಿಯಿಂದ ನಗರದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿಯಲ್ಲಿ ಆಯೋಜಿಸಿದ್ದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ನೋಡಲು ಸಾವಿರಾರು ಜನಸ್ತೋಮ. ಅಪಾರ ಸಂಖ್ಯೆಯ ಯುವಜನರು ಕಂಬುಳ ನೋಡಲು ಬಂದಿದ್ದು ವಿಶೇಷವಾಗಿತ್ತು. ಸಂಜೆವೇಳೆಗೆ ಇನ್ನಷ್ಟು ಜನರು ಗೋಲ್ಡ್‌ಫಿಂಚ್‌ ಸಿಟಿಯತ್ತ ಧಾವಿಸಿದರು. ಕೋಣಗಳ ಜತೆ ಕರೆಯ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸುವವರ ದಂಡೇ ನೆರೆದಿತ್ತು. ಪಾರ್ಕಿಂಗ್‌ ಮತ್ತು ಆಸನ ವ್ಯವಸ್ಥೆಯನ್ನು ಯಥೇಚ್ಛವಾಗಿ ಕಲ್ಪಿಸಲಾಗಿತ್ತು.  ನೋಡುಗರಿಗೆ ಆಸನ ವ್ಯವಸ್ಥೆ ಕಲ್ಪಿಸಿದಂತೆಯೇ ಕೋಣಗಳ ವಿಶ್ರಾಂತಿಗೇ ಪ್ರತ್ಯೇಕ ಟೆಂಟ್‌ ಹಾಕಲಾಗಿತ್ತು.

ಮಂಗಳೂರು ಕಂಬಳದಲ್ಲಿ 6 ವಿಭಾಗಗಳಲ್ಲಿ ಒಟ್ಟು 85 ಜತೆ ಕೋಣಗಳು ಭಾಗವಹಿಸಿವೆ. ನೇಗಿಲು ಕಿರಿಯ ವಿಭಾಗದಲ್ಲಿ 26, ನೇಗಿಲು ಹಿರಿಯ ವಿಭಾಗದಲ್ಲಿ 25, ಹಗ್ಗ ಕಿರಿಯ ವಿಭಾಗದಲ್ಲಿ 12, ಹಗ್ಗ ಹಿರಿಯ ವಿಭಾಗದಲ್ಲಿ 14, ಅಡ್ಡ ಹಲಗೆಯಲ್ಲಿ 6, ಕನೆ ಹಲಗೆಯಲ್ಲಿ 2 ಜತೆ ಕೋಣಗಳು ಭಾಗವಹಿಸಿದ್ದವು.

ಕಂಬಳಕ್ಕೆ ಚಾಲನೆ ನೀಡಿದವರು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ . ‘ನಾಡಿನ ಪುರಾತನ ಸಂಸ್ಕೃತಿಯನ್ನು ಬಿಂಬಿಸುವ ಈ ಕಂಬಳ ಇದೇ ರೀತಿ ನೂರ್ಕಾಲ ನಡೆಯಬೇಕು. ಈ ಮೂಲಕ ಜಿಲ್ಲೆಯ ಜನತೆಗೆ ಕಂಬಳದ ಸೌಂದರ್ಯ ಲಭ್ಯವಾಗಲಿ’ ಎಂದು ಹಾರೈಸಿದರು.

ಜೋಡುಕರೆಯನ್ನು ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಅತಿಥಿಯಾಗಿದ್ದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ‘ನೆಲದ ಗ್ರಾಮೀಣ ಕ್ರೀಡೆ ಎನಿಸಿರುವ ಕಂಬಳಕ್ಕೆ ಕಾನೂನು ತೊಡಕು ಎದುರಾದಾಗ ಅದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮರ್ಥವಾಗಿ ನಿಭಾಯಿಸಿ ಮತ್ತೆ ಕಂಬಳಕ್ಕೆ ಅವಕಾಶ ಮಾಡಿಕೊಟ್ಟಿವೆ. ಇದೀಗ ಮಂಗಳೂರು ನಗರದಲ್ಲೇ ದೊಡ್ಡ ಮಟ್ಟದ ಕಂಬಳ ನಡೆಯುತ್ತಿರುವುದು ಸಂತೋಷ’ ಎಂದರು.

ವಿಧಾನ ಪರಿಷತ್ ಸದಸ್ಯ ಕ್ಯಾ .ಗಣೇಶ್ ಕಾರ್ಣಿಕ್ ಮಾತನಾಡಿ, ‘ತುಳುನಾಡಿನಲ್ಲಿ ಕೋಣಗಳನ್ನು ತರಬೇತುಗೊಳಿಸಿ ಈ ರೀತಿ ಕಂಬಳವನ್ನು ನಡೆಸುವುದು ದೇಶದ ಯಾವುದೇ ಭಾಗದಲ್ಲೂ ಕಾಣಲು ಸಿಗುವುದಿಲ್ಲ. ಇದನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಾಗಿದೆ’ ಎಂದರು.

ಕಂಬಳ ಸಮಿತಿಯ ಅಧ್ಯಕ್ಷ ಕ್ಯಾ ಬೃಜೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು. ವಿಧಾನಸಭಾ ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮೇಯರ್ ಕವಿತಾ ಸನಿಲ್, ಸಮಿತಿಯ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಿ.ಎಂ, ಗೌರವ ಸಲಹೆಗಾರರಾದ ಉಮಾನಾಥ ಕೋಟ್ಯಾನ್, ವಿಜಯಕುಮಾರ್ ಕಂಗಿನಮನೆ ಇದ್ದರು.

ಲೇಸರ್ ಬೀಮ್ ಫಲಿತಾಂಶ
ಕೋಣಗಳ ಓಟಗಳ ನಿಖರ ಫಲಿತಾಂಶಕ್ಕಾಗಿ ಲೇಸರ್ ಬೀಮ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಕಳದ ಸ್ಕೈ ವ್ಯೂ ಸಿಸ್ಟಮ್ಸ್ ನ ರತ್ನಾಕರ್ ಅವರ ನೇತೃತ್ವದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಮಂಜೊಟ್ಟಿಯ ಅಂತ್ಯದಲ್ಲಿ ಕಣ್ಣಿಗೆ ಕಾಣಿಸದ 4 ಲೇಯರ್‍ಗಳು ಎರಡು ಕರೆಗಳ ಮಧ್ಯ ಹಾದು ಹೋಗಿ, ಯಾವ ಕೋಣ ಮೊದಲು ಗುರಿ ಸ್ಪರ್ಶಿಸುತ್ತದೋ, ಆ ಕರೆಯಲ್ಲಿ ಹಸಿರು ದೀಪ ಬೆಳಗುತ್ತದೆ.  0.01 ಸೆಕೆಂಡ್‌ ಕೂಡಾ ಇದರಲ್ಲಿ ದಾಖಲಾಗುತ್ತದೆ. ಆದ್ದರಿಂದ ನಿಖರ ತೀರ್ಪು ಖಚಿತ ಎನ್ನುತ್ತಾರೆ ರತ್ನಾಕರ್.

Comments
ಈ ವಿಭಾಗದಿಂದ ಇನ್ನಷ್ಟು
‘ಆಯೋಗದ ನಿರ್ದೇಶನ ಪಾಲನೆ ಕಡ್ಡಾಯ’

ಬೆಳ್ತಂಗಡಿ
‘ಆಯೋಗದ ನಿರ್ದೇಶನ ಪಾಲನೆ ಕಡ್ಡಾಯ’

20 Apr, 2018

ಮಂಗಳೂರು
ಚುರುಕುಗೊಂಡ ಚುನಾವಣಾ ಪ್ರಕ್ರಿಯೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮೂಡುಬಿದಿರೆಯಿಂದ ಶಾಸಕ ಕೆ.ಅಭಯಚಂದ್ರ ಜೈನ್‌, ಸುಳ್ಯದಲ್ಲಿ ಡಾ.ಬಿ.ರಘು ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಹಾಗೂ ಮುನೀರ್‌...

20 Apr, 2018

ಮಂಗಳೂರು
ಇನ್ನೂ ಮುಗಿಯದ ಟಿಕೆಟ್ ಬೇಗುದಿ

ನಾಮಪತ್ರ ಸಲ್ಲಿಕೆ ಆರಂಭವಾಗಿ ಮೂರು ದಿನ ಕಳೆದರೂ ಮಂಗಳೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ಬಿಜೆಪಿ ವರಿಷ್ಠರಿಗೆ ಸಾಧ್ಯವಾಗಿಲ್ಲ. ದಿನದಿಂದ...

20 Apr, 2018

ಬಜ್ಪೆ
ಕಳವಾಗಿದ್ದ ದೈವದ ಮೊಗ ಬಾವಿಯಲ್ಲಿ ಪತ್ತೆ

ನಾಲ್ಕು ವರ್ಷಗಳ ಹಿಂದೆ ಪೆರ್ಮುದೆಯ ಗರ್ಭಗುಡಿಯಿಂದ ಕಳವಿಗೀಡಾಗಿದ್ದ  ದೈವದ ಮೊಗ ಪೆರ್ಮುದೆಯ ರಾಯಲ್ ಗಾರ್ಡನ್ ಬಸ್‍ ನಿಲ್ದಾಣ ಬಳಿಯ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

18 Apr, 2018

ವಿಟ್ಲ
ವಿಟ್ಲದಲ್ಲಿ ಕಾಂಗ್ರೆಸ್ ಮೌನ ಪ್ರತಿಭಟನೆ

ಜಮ್ಮು ಕಾಶ್ಮೀರದ ಕಠುವಾ  ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಸೇರಿದಂತೆ ಎಲ್ಲಾ ಅತ್ಯಾಚಾರ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ...

18 Apr, 2018