ನಂಜನಗೂಡು

ಸಂಭ್ರಮದ ಚಿಕ್ಕ ಜಾತ್ರೆ ರಥೋತ್ಸವ

ಸಂಪ್ರದಾಯದಂತೆ ಚಿಕ್ಕಜಾತ್ರೆಯಲ್ಲಿ ಮೂರು ರಥಗಳಿಗೂ ಚಾಲನೆ ನೀಡಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳು ಹಾಗೂ ಚಿಣ್ಣರು ಉತ್ಸಾಹದಿಂದ ಗಣಪತಿ ರಥ ಎಳೆದು ರಥಬೀದಿಯಲ್ಲಿ ಸಾಗಿದರು.

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 9.45ಕ್ಕೆ ಸಲ್ಲುವ ಶುಭ ಮಕರ ಲಗ್ನದಲ್ಲಿ ದೇವಾಲಯದ ಆಗಮಿಕ ನಾಗಚಂದ್ರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮ, ಗಣಪತಿ, ಚಂಡಿಕೇಶ್ವರಸ್ವಾಮಿ ಉತ್ಸವಮೂರ್ತಿಗಳಿಗೆ ಚಿನ್ನಾಭರಣ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು. ಬಳಿಕ ಪಲ್ಲಕ್ಕಿಯಲ್ಲಿ ಹೊತ್ತುತಂದ ಖೃತ್ವಿಕರು ರಥಗಳಲ್ಲಿ ಕೂರಿಸಿದರು.

ನಂತರ ಪೂಜೆ ನೆರವೇರಿಸಲಾಯಿತು. ಶಾಸಕ ಕಳಲೆ ಕೇಶವಮೂರ್ತಿ ಶ್ರೀಕಂಠೇಶ್ವರಸ್ವಾಮಿ ಮತ್ತು ಪಾರ್ವತಿ ಅಮ್ಮನವರ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಂಪ್ರದಾಯದಂತೆ ಚಿಕ್ಕಜಾತ್ರೆಯಲ್ಲಿ ಮೂರು ರಥಗಳಿಗೂ ಚಾಲನೆ ನೀಡಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳು ಹಾಗೂ ಚಿಣ್ಣರು ಉತ್ಸಾಹದಿಂದ ಗಣಪತಿ ರಥ ಎಳೆದು ರಥಬೀದಿಯಲ್ಲಿ ಸಾಗಿದರು. ಇದರ ಹಿಂದೆ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿ ಅಮ್ಮನ ಉತ್ಸವಮೂರ್ತಿ ಹೊತ್ತ ರಥ ಸಾಗಿತು.

ತದನಂತರ ಚಂಡಿಕೇಶ್ವರಸ್ವಾಮಿ ರಥ ಸಾಗಿತು. ಭಕ್ತರು ಉಘೇ ಉಘೇ ನಂಜುಂಡ ಎಂದು ಘೋಷಣೆ ಕೂಗುತ್ತಾ ರಥ ಎಳೆದರು. ಈ ಮೂರು ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ಸಾಗಿ 10.45ಕ್ಕೆ ಸ್ವಸ್ಥಾನಕ್ಕೆ ತಲುಪಿದವು.

ರಥ ಬೀದಿಯ ಇಕ್ಕೆಲದಲ್ಲಿ ಸೇರಿದ್ದ ಸಾವಿರಾರು ಭಕ್ತರು ರಥೋತ್ಸವ ಕಣ್ತುಂಬಿಕೊಂಡರು. ಕೆಲವರು ಹಣ್ಣು– ದವನ ಎಸೆದು ಹರಕೆ ಸಲ್ಲಿಸಿದರೆ, ಮತ್ತೆ ಹಲವರು ಇಷ್ಟಾರ್ಥಸಿದ್ಧಿಗಾಗಿ ಪ್ರಾರ್ಥಿಸಿದರು. ಶಾಸಕ ಕೇಶವಮೂರ್ತಿ ರಥೋತ್ಸವದೊಂದಿಗೆ ಸಾಗಿದರು. ದೇವಾಲಯದ ಆನೆ ಕಲ್ಪನಾ ರಥೋತ್ಸವದ ಮುಂದೆ ಸಾಗಿ ಭಕ್ತರ ಗಮನಸೆಳೆಯಿತು.

ಈ ಬಾರಿ ವಿಶೇಷ ಎಂಬಂತೆ ಚಿಕ್ಕಜಾತ್ರೆಯಂದೇ ಹೊಸ್ತಿಲ ಹುಣ್ಣಿಮೆ (ಪೌರ್ಣಿಮೆ) ಒಂದೇ ದಿನ ಬಂದಿದ್ದರಿಂದ ದೇವಾಲಯದಲ್ಲಿ ಭಕ್ತ ಸಾಗರವೇ ಸೇರಿತ್ತು. ವಿವಿಧೆಡೆಯಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬೆಳಗಿನ ಜಾವದಿಂದಲೇ ಕಪಿಲಾ ನದಿಯಲ್ಲಿ ಮಿಂದು ಉರುಳು ಸೇವೆ, ಧೂಪ, ದೀಪದ ಆರತಿ, ಹರಕೆ ಮುಡಿ ಸೇವೆಗಳಲ್ಲಿ ನಿರತರಾಗಿದ್ದರು.

ತಾಲ್ಲೂಕಿನ ವಿವಿಧ ಗ್ರಾಮದಿಂದ ಬಂದಿದ್ದ ಜಾನಪದ ಕಲಾವಿದರು, ನೀಲಗಾರರು, ಗೀಗಿಪದ ಹಾಡಿ ರಥೋತ್ಸವದ ಮೆರಗು ಹೆಚ್ಚಿಸಿದರು. ದೇವಾಲಯದ ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಪಿ.ಎಸ್.ಐ ಪುನೀತ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಮೈಸೂರು
ಹಕ್ಕಿಪಿಕ್ಕಿ; ಗಿಡಮೂಲಿಕೆ ಔಷಧ ಪದ್ಧತಿ ಅಧ್ಯಯನ

ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯ ನೀಡುವ ಗಿಡಮೂಲಿಕೆ ಔಷಧ ಪದ್ಧತಿಯ ವಿಧಾನವನ್ನು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯು ಸಂರಕ್ಷಿಸಿದೆ.

18 Jun, 2018
ಅಭಿವೃದ್ಧಿ ಜತೆ ಪ್ರವಾಸೋದ್ಯಮಕ್ಕೆ ಒತ್ತು

ಮೈಸೂರು
ಅಭಿವೃದ್ಧಿ ಜತೆ ಪ್ರವಾಸೋದ್ಯಮಕ್ಕೆ ಒತ್ತು

18 Jun, 2018
ಕೆಸರು ಗದ್ದೆಯಂತಾದ ಜಾಗನಕೋಟೆ ರಸ್ತೆ

ಎಚ್.ಡಿ.ಕೋಟೆ
ಕೆಸರು ಗದ್ದೆಯಂತಾದ ಜಾಗನಕೋಟೆ ರಸ್ತೆ

18 Jun, 2018

ಮೈಸೂರು
ರೇಸ್‌ ಕೋರ್ಸ್‌ನಲ್ಲಿ ಯೋಗ ತಾಲೀಮು

ಜೂನ್‌ 21ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಅರಮನೆಗಳ ನಗರಿಯಲ್ಲಿ ತಾಲೀಮು ಮತ್ತಷ್ಟು ಬಿರುಸುಗೊಂಡಿದೆ.

18 Jun, 2018

ಮೈಸೂರು
ಬೆಟ್ಟದ ಹಾದಿ–ಅಪಾಯಕ್ಕೆ ಆಹ್ವಾನ

ಚಾಮುಂಡಿಬೆಟ್ಟದ ರಸ್ತೆಯ ಕೆಲವೆಡೆ ತಡೆಗೋಡೆ ಕುಸಿದಿದ್ದು, ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಬೆಟ್ಟದಿಂದ ಉತ್ತನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ...

18 Jun, 2018