ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಂಸ್ಕೃತಿಕ ವೈವಿಧ್ಯ ಕನ್ನಡದ ಶಕ್ತಿ’

Last Updated 4 ಡಿಸೆಂಬರ್ 2017, 5:14 IST
ಅಕ್ಷರ ಗಾತ್ರ

ಸಾಗರ: ಕನ್ನಡ ನಾಡಿನ ಜಾನಪದ, ಸಾಹಿತ್ಯ, ರಂಗಭೂಮಿ ಸೇರಿ ಸಮೃದ್ಧವಾಗಿರುವ ಸಾಂಸ್ಕೃತಿಕ ವೈವಿಧ್ಯ ಕನ್ನಡ ಭಾಷೆಯ ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಬಿಜೆಪಿ ಮುಖಂಡ ಗೋಪಾಲಕೃಷ್ಣ ಬೇಳೂರು ಹೇಳಿದರು. ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆ ಅನುಷ್ಠಾನಗೊಳ್ಳಲು ನೌಕರರ ಸಹಕಾರ ಅತ್ಯಗತ್ಯ. ಯಾವುದೇ ರಾಜ್ಯದಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆ ಆಡಳಿತದ ಭಾಷೆಯಾಗಿರಬೇಕು. ಆಗ ಮಾತ್ರ ಸಮಾಜದ ಎಲ್ಲಾ ವರ್ಗಗಳ ಜನರ ಸಮಸ್ಯೆಗಳಿಗೆ ಆಡಳಿತ ಸ್ಪಂದಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಎಲ್‌.ಎಂ.ಹೆಗಡೆ, ‘ಕನ್ನಡ ಭಾಷೆ ಉಳಿದಿರುವುದು ಗ್ರಾಮೀಣ ಜನರಿಂದ. ಇತರ ಭಾಷೆಗಳಿಂದ ಕೊಟ್ಟು ತೆಗೆದುಕೊಳ್ಳುವ ಪರಿಪಾಠವನ್ನು ಕನ್ನಡ ಭಾಷೆ ಮೊದಲಿನಿಂದಲೂ ನಡೆಸಿಕೊಂಡು ಬಂದಿದೆ. ಭಾಷೆಯ ಬಳಕೆ ಕಡಿಮೆಯಾಗದಂತೆ ನೋಡಿಕೊಳ್ಳುವ ಎಚ್ಚರವನ್ನು ನಾವು ವಹಿಸಬೇಕು’ ಎಂದು ಹೇಳಿದರು.

ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ.ಪರಮೇಶ್ವರ್‌ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಬೀಬಿ ಫಸಿಯಾ, ಉಪಾಧ್ಯಕ್ಷೆ ಸರಸ್ವತಿ, ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್‌.ನಾಗೇಂದ್ರ, ಕಾರ್ಯದರ್ಶಿ ಬಿ.ಗಿರಿಧರ್‌ರಾವ್, ಖಜಾಂಚಿ ನಾಗೇಂದ್ರ ಕುಮಟಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್‌.ವಿ.ಹಿತಕರ ಜೈನ್‌, ನೌಕರರ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್‌.ನಾಗಭೂಷಣ್‌, ತಾಲ್ಲೂಕು ಪಂಚಾಯ್ತಿ ಸದಸ್ಯ ಕಲಸೆ ಚಂದ್ರಪ್ಪ ಹಾಜರಿದ್ದರು.

ನಿವೃತ್ತ ನೌಕರರು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ನೌಕರರು, ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳನ್ನು ಗೌರವಿಸಲಾಯಿತು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೋಹನ್‌ ಪ್ರಾರ್ಥಿಸಿದರು. ವೈ.ಮೋಹನ್‌ ಸ್ವಾಗತಿಸಿದರು. ಮಂಜುನಾಥ ಎಲ್‌. ವಂದಿಸಿದರು. ಕೆ.ಜಗನ್ನಾಥ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT