ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮಳೆ ಕಂಗಾಲಾದ ತೊಗರಿ ಬೆಳೆಗಾರರು

Last Updated 4 ಡಿಸೆಂಬರ್ 2017, 5:31 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನಲ್ಲಿ ಸಕಾಲಕ್ಕೆ ಮಳೆ ಬಾರದಿರುವುದು ಹಾಗೂ ಹವಾಮಾನ ವೈಪರಿತ್ಯದಿಂದಾಗಿ ತೊಗರಿ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ತಾಲ್ಲೂಕಿನಲ್ಲಿ 2201 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಪ್ರಾರಂಭದಲ್ಲಿ ಮಳೆ ಕೈಕೊಟ್ಟರು ಸಹ ನಂತರ ಬಂದ ಮಳೆಯಿಂದಾಗಿ ತೊಗರಿ ಹುಲುಸಾಗಿ ಬೆಳೆದು ರೈತರಲ್ಲಿ ಉತ್ತಮ ಬೆಳೆಯ ಆಶಾಭಾವನೆಯನ್ನು ಮೂಡಿಸಿತ್ತು.

ಆದರೆ ಈಗ ಮಳೆ ಕೈಕೊಟ್ಟಿರುವುದರಿಂದ ರೈತರಲ್ಲಿ ಚಿಂತೆ ಮೂಡಿಸಿದೆ. ಮುಂಗಾರು ಪ್ರಾರಂಭದಲ್ಲಿ ಬಿತ್ತನೆ ಮಾಡಿರುವ ತೊಗರಿ ಹೂವು ಬಿಟ್ಟಿದ್ದರೆ ನಂತರ ತಡವಾಗಿ ಬಿತ್ತನೆ ಮಾಡಿರುವ ತೊಗರಿ ಇದುವರೆಗೂ ಹೂವನ್ನು ಸಹ ಬಿಟ್ಟಿಲ್ಲ.

ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದರು ಸಹ ಇತ್ತೀಚಿನ ದಿನಗಳಲ್ಲಿ ಮಳೆಯಿಲ್ಲದೆ ಶೇಂಗಾ ಬೆಳೆ ವಿಫಲವಾಗುತ್ತಿರುವುದರಿಂದ ಕೆಲವು ರೈತರು ತೊಗರಿಯ ಕಡೆ ಮುಖ ಮಾಡಿದ್ದಾರೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಪ್ರಾರಂಭದಲ್ಲಿ ಕೀಟ ಬಾಧೆಯಿಂದ ಸುಮಾರು 200 ಹೆಕ್ಟೇರ್ ಪ್ರದೇಶಲ್ಲಿ ಬೆಳೆ ನಷ್ಟವಾಗಿದ್ದರೆ ಈಗ ಮಳೆಯಿಲ್ಲದೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.

ತೀವ್ರ ಬರದ ನಡುವೆ ಸಹ ರೈತರು ಸಾಲ ಮಾಡಿ ತೊಗರಿ ಬಿತ್ತನೆ ಮಾಡಿದ್ದಾರೆ ಈಗ ಮಳೆಯಿಲ್ಲದೆ ರೈತರ ಸ್ಥಿತಿ ಚಿಂತಾಜನಕವಾಗಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಏನು ಮಾಡಬೇಕು ಎನ್ನುವ ಆತಂಕ ರೈತರಲ್ಲಿ ಕಾಡುವಂತಾಗಿದೆ.

ಒಂದು ಕಡೆ ಮಳೆಯಿಲ್ಲದೆ ತೊಗರಿ ಹೂವು ಬಿಡದಿದ್ದರೆ, ಮತ್ತೊಂದು ಕಡೆ ಬಿಟ್ಟಿರುವ ತೊಗರಿ ಹೂವು ಸಹ ಮಳೆಯಿಲ್ಲದೆ ಉದುರಿ ಹೋಗುತ್ತಿದೆ. ತೊಗರಿ ಬೆಳೆಗೆ ಈಗ ಮಳೆಯ ಅವಶ್ಯಕತೆಯಿದ್ದು, ಒಂದು ಹದ ಮಳೆಯಾದರೆ ಉತ್ತಮ ಬೆಳೆ ನಿರೀಕ್ಷೆ ಮಾಡಬಹುದು.

‘ಪ್ರಜಾವಾಣಿ’ಯೊಂದಿಗೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ನಾಗರಾಜು ಮಾತನಾಡಿ, ‘ತೊಗರಿಗೆ ಈಗ ಮಳೆಯ ಅವಶ್ಯಕತೆ ಇದೆ. ಒಂದು ಮಳೆ ಬಂದರೆ ಉತ್ತಮ ಫಸಲು ನಿರೀಕ್ಷೆ ಮಾಡಬಹುದು. ಜತೆಗೆ ಕೀಟಗಳ ಬಾಧೆ ಸಹ ಇರುವುದರಿಂದ ರೈತರು ಕೀಟನಾಶಗಳನ್ನು ಸಿಂಪಡಿಸುವುದು ಅವಶ್ಯ. ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ 50ರಷ್ಟು ರಿಯಾಯಿತಿಯಲ್ಲಿ ಕೀಟನಾಶಕಗಳನ್ನು ವಿತರಿಸುಲಾಗುತ್ತಿದೆ’ ಎಂದರು.

ಬಡಮಂಗನಹಟ್ಟಿ ಗ್ರಾಮದ ರೈತ ಬಿ.ಎಂ.ಹರೀಶ್ ಮಾತನಾಡಿ, ‘ಮಳೆಯಿಲ್ಲದೆ ತೊಗರಿ ಹೂವನ್ನು ಸಹ ಬಿಟ್ಟಿಲ್ಲ. ಈಗ ಮಳೆ ಬಂದರೆ ಮಾತ್ರ ತೊಗರಿ ಬೆಳೆ ನಿರೀಕ್ಷೆ ಮಾಡಬಹುದು. ಇಲ್ಲದಿದ್ದರೆ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT