ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಿಗೆಗೆ ಬೀಗಮುದ್ರೆ: ಮರು ಹರಾಜಿಗೆ ಸಿದ್ಧತೆ

Last Updated 4 ಡಿಸೆಂಬರ್ 2017, 6:21 IST
ಅಕ್ಷರ ಗಾತ್ರ

ಕೋಲಾರ: ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಕಿ ವಸೂಲಿಗೆ ಮೈಕೊಡವಿ ನಿಂತಿರುವ ಅಧಿಕಾರಿಗಳು ಮಳಿಗೆಗಳಿಗೆ ಬೀಗಮುದ್ರೆ ಹಾಕಿ ಬಾಡಿಗೆದಾರರಿಗೆ ಬಿಸಿ ಮುಟ್ಟಿಸುವ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಎಂ.ಜಿ.ರಸ್ತೆ, ಅಂಚೆ ಕಚೇರಿ ರಸ್ತೆ, ಹಳೆ ಬಸ್‌ ನಿಲ್ದಾಣ, ಅಂತರಗಂಗೆ ರಸ್ತೆ ಸೇರಿದಂತೆ ನಗರದ ಹಲವೆಡೆ ನಗರಸಭೆಯ 244 ವಾಣಿಜ್ಯ ಮಳಿಗೆಗಳಿವೆ. ತರಕಾರಿ, ಹೂವು, ಹಣ್ಣು, ಪೀಠೋಪಕರಣ, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಬೇಕರಿ, ಜೆರಾಕ್ಸ್‌, ಔಷಧ, ಪಾದರಕ್ಷೆ, ಸೈಬರ್‌ ಸೆಂಟರ್‌, ಮೊಬೈಲ್‌ ವ್ಯಾಪಾರಿಗಳು ಈ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದಾರೆ.

ಈ ಮಳಿಗೆಗಳಿಂದ ನಗರಸಭೆಗೆ ಬಾಡಿಗೆ ರೂಪದಲ್ಲಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಆದರೆ, ಕೆಲ ವರ್ಷಗಳಿಂದ ಮಳಿಗೆಗಳ ಬಾಡಿಗೆ ವಸೂಲಾತಿ ಪ್ರಕ್ರಿಯೆ ಹಳಿ ತಪ್ಪಿದೆ. ಇದರಿಂದ ಬಾಡಿಗೆ ಬಾಕಿ ಸುಮಾರು ₹ 40 ಲಕ್ಷಕ್ಕೆ ಏರಿಕೆಯಾಗಿದೆ.

2017–18ನೇ ಹಣಕಾಸು ವರ್ಷದಲ್ಲಿ ಮಳಿಗೆಗಳಿಂದ ₹ 48.36 ಲಕ್ಷ ಬಾಡಿಗೆ ವಸೂಲು ಮಾಡುವ ಗುರಿ ಇದೆ. ಹಿಂದಿನ ವರ್ಷಗಳ ಬಾಕಿ ಸೇರಿದಂತೆ ಒಟ್ಟಾರೆ ₹ 83.55 ಲಕ್ಷ ಬಾಡಿಗೆ ವಸೂಲಾಗಬೇಕು. ಇದರಲ್ಲಿ ₹ 43.77 ಲಕ್ಷ ವಸೂಲಾಗಿದ್ದು, ಬಾಡಿಗೆ ಸಂಗ್ರಹಣೆಯಲ್ಲಿ ಶೇ 52.38ರ ಸಾಧನೆಯಾಗಿದೆ.

ರಾಜಕೀಯ ಒತ್ತಡ: 211 ಮಳಿಗೆಗಳ ಬಾಡಿಗೆ ಕರಾರು ಅವಧಿ ಮುಗಿದಿದ್ದು, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಮಳಿಗೆಗಳನ್ನು ಖಾಲಿ ಮಾಡಿಸಿಲ್ಲ. ಬಾಡಿಗೆದಾರರು ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ತಂದು ಬಾಡಿಗೆ ಕಟ್ಟದೆ ಅದೇ ಮಳಿಗೆಗಳಲ್ಲಿ ಮುಂದುವರಿದಿದ್ದು, ಬಾಡಿಗೆ ಬಾಕಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಪುರಸಭೆ ಕಾಯ್ದೆ 1964ರ ಕಲಂ 72(2) ಪ್ರಕಾರ ನಗರಸಭೆಯು ಕಾಲಕಾಲಕ್ಕೆ ಹೊಸದಾಗಿ ಟೆಂಡರ್‌ ನಡೆಸಿ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಬೇಕು. ಆದರೆ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ. ಜನಪ್ರತಿನಿಧಿಗಳು ಬಹಿರಂಗ ಹರಾಜು ನಡೆಸದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಮಳಿಗೆಗಳು ತಮ್ಮ ಆಪ್ತರು ಅಥವಾ ಪರಿಚಿತರ ಹಿಡಿತದಲ್ಲೇ ಇರುವಂತೆ ನೋಡಿಕೊಂಡಿದ್ದಾರೆ ಎಂಬ ಮಾತುಗಳು ಪುರಸಭೆ ಅಂಗಳದಲ್ಲಿ ಕೇಳಿ ಬರುತ್ತಿವೆ.

ಆದಾಯ ಖೋತಾ: ಬಾಡಿಗೆದಾರರು ಸಕಾಲಕ್ಕೆ ಬಾಡಿಗೆ ಕಟ್ಟದಿದ್ದರೂ ಅಧಿಕಾರಿಗಳು ಮಳಿಗೆ ಖಾಲಿ ಮಾಡಿಸಿಲ್ಲ. ಕೆಲ ಅಧಿಕಾರಿಗಳು ಒಳಗೊಳಗೆ ಮಳಿಗೆಗಳ ಬಾಡಿಗೆ ಬಾಕಿ ಪಡೆದು ಹಲವು ವರ್ಷಗಳಿಂದ ಟೆಂಡರ್‌ ನವೀಕರಿಸದೆ ಹಳೆ ಬಾಡಿಗೆದಾರರನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಅಕ್ರಮದಿಂದ ನಗರಸಭೆಗೆ ಆದಾಯ ಖೋತಾ ಆಗಿದೆ.

ಸಚಿವರ ಚಾಟಿ: ಜಿಲ್ಲೆಯಲ್ಲಿ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಕಿ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದ್ದರು. ಅಲ್ಲದೇ, ಬಾಡಿಗೆ ವಸೂಲಿ ಮಾಡದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.

’ಸಚಿವರ ಖಡಕ್‌ ಎಚ್ಚರಿಕೆಗೆ ಬೆದರಿರುವ ಅಧಿಕಾರಿಗಳು ವಾರದ ಅಂತರದಲ್ಲಿ ಸುಮಾರು ₹ 10 ಲಕ್ಷ ಬಾಡಿಗೆ ಬಾಕಿ ವಸೂಲಿ ಮಾಡಿದ್ದಾರೆ. ಬಾಡಿಗೆ ಕಟ್ಟದ 20 ಮಳಿಗೆಗಳಿಗೆ ಬೀಗಮುದ್ರೆ ಹಾಕಿ, ಆ ಮಳಿಗೆಗಳ ಮರು ಹರಾಜಿಗೆ ಸಿದ್ಧತೆ ನಡೆಸಿದ್ದಾರೆ’ ಪುರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

* * 

ನಗರಸಭೆಯ ಬಹುಪಾಲು ವಾಣಿಜ್ಯ ಮಳಿಗೆಗಳ ಬಾಡಿಗೆ ಬಾಕಿ ಇದೆ. ಬಾಡಿಗೆ ಕಟ್ಟುವಂತೆ ಬಾಡಿಗೆದಾರರಿಗೆ ನೋಟಿಸ್‌ ಜಾರಿ ಮಾಡುತ್ತಿದ್ದೇವೆ. ಬಾಡಿಗೆ ಕಟ್ಟದ ಮಳಿಗೆದಾರರನ್ನು ಖಾಲಿ ಮಾಡಿಸಿ, ಮಳಿಗೆಗಳಿಗೆ ಬೀಗ ಮುದ್ರೆ ಹಾಕುತ್ತೇವೆ
ಎಸ್‌.ಎ.ರಾಮ್‌ಪ್ರಕಾಶ್‌, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT