ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವನ ಅಸ್ಮಿತೆಯೇ ಶರಣ ಸಂಸ್ಕೃತಿ’

Last Updated 4 ಡಿಸೆಂಬರ್ 2017, 6:34 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಬಸವ ಸಂಸ್ಕೃತಿಯೇ ಶರಣ ಸಂಸ್ಕೃತಿಯಾಗಿದೆ. ಸಹಕಾರಿ ತತ್ವದ ಮೂಲಕ ಅನೇಕರ ಬದುಕು ಬೆಳಗಿಸಿದ ಕೀರ್ತಿ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಸಲ್ಲುತ್ತದೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಹೇಳಿದರು.

ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕಿನ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಜಾತಿ, ಧರ್ಮ ಹಾಗೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವಾಗಬಾರದು. ಈ ನಿಟ್ಟಿನಲ್ಲಿಬ್ಯಾಂಕ್ ಮುನ್ನಡೆಯುತ್ತಿದೆ. ತಪಶೆಟ್ಟಿ ಅವರು ಅದ್ಭುತ ವ್ಯಕ್ತಿಯಾಗಿದ್ದಾರೆ’ ಎಂದರು.

ಮಾಜಿ ಸಚಿವ ಎಸ್.ಎಸ್.ಪಾಟೀಲ ಮಾತನಾಡಿ, ‘ಜೀವನದಲ್ಲಿ ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ತಪಶೆಟ್ಟಿ ಅವರು ಉಧಾಹರಣೆಯಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಹೆಚ್ಚು ಮನ್ನಣೆ ಗಳಿಸಿದ ಕೆಲವೇ ಕೆಲವು ಬ್ಯಾಂಕ್‌ಗಳಲ್ಲಿ ಬಸವೇಶ್ವರ ಬ್ಯಾಂಕ್‌ ಕೂಡಾ ಒಂದಾಗಿದ್ದು, ಇದರ ಶ್ರೇಯ ಆಡಳಿತ ಮಂಡಳಿಗೆ ಸಲ್ಲುತ್ತದೆ’ ಎಂದರು.

‘ವಿಶ್ವಕ್ಕೆ ಧರ್ಮ ಸಂದೇಶವನ್ನು ನೀಡಿದ ಭಾರತ ದೇಶದಲ್ಲಿಂದು ಅತ್ಯಾಚಾರ, ಅನಾಚಾರ, ಅನೀತಿ ಹಾಗೂ ಅಧರ್ಮ ತಾಂಡವವಾಡುತ್ತಿದೆ. ಹೆಣ್ಣುಮಕ್ಕಳ ಶೋಷಣೆ ನಡೆಯುತ್ತಿದೆ. ಅವರನ್ನು ಕೂಡಾ ಸಹಕಾರಿ ತತ್ವದಲ್ಲಿ ಕೊಂಡೊಯ್ಯುವ ಕಾರ್ಯವಾಗಬೇಕಿದೆ’ ಎಂದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ‘ಇತರೆ ಬ್ಯಾಂಕ್‌ಗಳಿಗೆ ಮಾದರಿಯಾಗಿರುವ ಬಸವೇಶ್ವರ ಬ್ಯಾಂಕ್‌, ಸಾವಿರಾರು ರೈತರು, ನೇಕಾರರು ಹಾಗೂ ವಾಣಿಜೋದ್ಯಮಿಗಳಿಗೆ ಸಾಲಸೌಲಭ್ಯ ಕಲ್ಪಿಸುವ ಮೂಲಕ ಹೆಚ್ಚು ಸಹಕಾರಿಯಾಗಿದೆ’ ಎಂದರು.

ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ‘ಪ್ರಕೃತಿ ಹಾಗೂ ನಾಗರಿಕತೆಯಲ್ಲಿ ಪರಸ್ಪರ ಸಹಕಾರ ಮುಖ್ಯವಾಗಿದೆ. ಸರಿಯಾದ ವ್ಯಕ್ತಿಯನ್ನು ಸರಿಯಾದ ಜಾಗದಲ್ಲಿ ಸಂಪೂರ್ಣ ಜವಾಬ್ದಾರಿ ಹಾಗೂ ಸ್ವಾತಂತ್ರ್ಯದೊಂದಿಗೆ ಕೂಡಿಸಿದಾಗ ದೇಶದ ಪ್ರಗತಿಯನ್ನು ಕಾಣಬಹುದಾಗಿದೆ’ ಎಂದರು.

‘ಹಣ ಜಮಾ ಮಾಡುವವರು ಹಾಗೂ ಸಾಲಗಾರರನ್ನು ದೇವರಂತೆ ಕಾಣಬೇಕು. ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿತ್ವವನ್ನು ರೂಡಿಸಿಕೊಳ್ಳಬೇಕು. ಅಧಿಕಾರ, ಜವಾಬ್ದಾರಿ ಹಾಗೂ ಸ್ವಾತಂತ್ರ್ಯ ಎಲ್ಲವೂ ಒಟ್ಟಿಗೆ ಇರಬೇಕು. ಯಾವ ಕಾರಣಕ್ಕೂ ಅಡ್ಡದಾರಿಯನ್ನು ಹಿಡಿಯಬಾರದು. ಸಹಕಾರ ತತ್ವದಡಿ ಮುಂದುವರೆಯಬೇಕು’ ಎಂದರು.

ಹುನ್ನೂರ–ಮಧುರಖಂಡಿಯ ಬಸವಜ್ಞಾನ ಗುರುಕುಲದ ಡಾ.ಈಶ್ವರ ಮಂಟೂರ ಮಾತನಾಡಿ, ‘ವಿಶ್ವಗುರು ಬಸವಣ್ಣನ ಹೆಸರಿನಲ್ಲಿ ಜನರಿಗೆ ಹಣಕಾಸಿನ ಸುಭದ್ರತೆ ನೀಡುವ ಮೂಲಕ ನೂರು ವರ್ಷ ಪೂರೈಸಿರುವುದು ಸಂತದಸಂಗತಿಯಾಗಿದೆ’ ಎಂದರು.

‘ಶಾಲಾ–ಕಾಲೇಜುಗಳ ಪಠ್ಯದಲ್ಲಿ ಸಹಕಾರಿ ಕ್ಷೇತ್ರದ ಕುರಿತು ಪಠ್ಯ ಅಳವಡಿಸಬೇಕಿದೆ. ಮಹಿಳೆಯರು ಹಾಗೂ ರೈತರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳು ಅವರ ಹಿತಕಾಪಾಡಲು ಪ್ರಯತ್ನಿಸಬೇಕು’ ಎಂದರು.

ಉದ್ಯಮಿ ವಿಜಯ ಸಂಕೇಶ್ವರ ಮಾತನಾಡಿ, ‘ಬ್ಯಾಂಕಿಂಗ್ ಕ್ಷೇತ್ರದಲ್ಲಿಂದು ಹೆಚ್ಚು ಪೈಪೋಟಿ ಇದೆ. ಹಣವನ್ನು ಸಂತುಲನ ಮಾಡುವುದು ತುಂಬಾ ಕಷ್ಟಕರವಾಗಿದ್ದು, ಜಾಗ್ರತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ’ ಎಂದರು.

‘ಪಂಜಾಬ್ ಕೋ–ಆಪರೇಟಿವ್‌ ಬ್ಯಾಂಕ್‌ ವರ್ಷದ 362 ದಿನಗಳ ಕಾಲ ಕಾರ್ಯನಿರ್ವಹಣೆ ಮಾಡುತ್ತಿದೆ. ಅದೇ ನಿಟ್ಟಿನಲ್ಲಿ ಬಸವೇಶ್ವರ ಬ್ಯಾಂಕ್ ವರ್ಷದ ಎಲ್ಲ ದಿನಗಳ ಹಾಗೂ ದಿನದ 12 ಗಂಟೆಗಳಕಾಲ ಕಾರ್ಯನಿರ್ವಹಿಸಬೇಕು. ಹಾಗಾದಾಗ ಮಾತ್ರ ಹೆಚ್ಚಿನ ಪ್ರಗತಿ ಹೊಂದಲು ಸಾಧ್ಯವಿದೆ’ ಎಂದರು.

ಶ್ರೀಶೈಲಂ ಮಲ್ಲಿಕಾರ್ಜುನ ದೇವಸ್ಥಾನದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ‘ದೇಶದಲ್ಲಿ ಲಿಂಗ ಸಮಾನತೆ, ವಯಸ್ಸು, ಜಾತಿ, ವರ್ಣಗಳ ಸಮಾನತೆ ಬರಬೇಕು. ಆರ್ಥಿಕ ಸಮಾನತೆ ಬಂದಾಗ ಮಾತ್ರ ಈ ಎಲ್ಲ ಸಮಾನತೆಗಳನ್ನು ಕಾಣಲು ಸಾಧ್ಯ’ ಎಂದರು.

‘ಎಲ್ಲ ಅಸಮಾನತೆಗಳು ಆರ್ಥಿಕ ಅಸಮಾನತೆಯಿಂದಾಗಿ ಬರುತ್ತವೆ. ಅವೆಲ್ಲವನ್ನು ನಿವಾರಿಸಲು ಬ್ಯಾಂಕ್‌ ಮಹತ್ವದ ಪಾತ್ರವಹಿಸುತ್ತವೆ. ಸಹಕಾರ ತತ್ವದಡಿ ಪ್ರಾಮಾಣಿಕವಾಗಿ ಮುನ್ನಡೆಯಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ಸಿದ್ದು ಸವದಿ, ಮಲ್ಲಿಕಾರ್ಜುನ ಬನ್ನಿ, ಸಿ.ಆರ್.ಸೊರಗಾವಿ, ರಾಜಶೇಖರ ಶೀಲವಂತ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಜಗದೀಶ ಗುಡಗುಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚರಂತಿಮಠ ಭಾಗಿ
ಸಮಾರಂಭದಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಪಾಲ್ಗೊಂಡಿದ್ದರು. ನಿರೂಪಕರು ಚರಂತಿಮಠ ಹೆಸರು ಹೇಳಿದಾಗಲೆಲ್ಲಾ ಸಭಾಂಗಣದಲ್ಲಿ ಚಪ್ಪಾಳೆ, ಕೇಕೆ ಕೇಳಿಸಿತು. 20 ನಿಮಿಷ ಕಾಲ ವೇದಿಕೆಯಲ್ಲಿ ಇದ್ದ ಚರಂತಿಮಠ ಸಂಸದ ಪಿ.ಸಿ.ಗದ್ದಿಗೌಡರ ಅವರೊಂದಿಗೆ ತೆರಳಿದರು. ಇದಕ್ಕೂ ಮುನ್ನ ಪ್ರಕಾಶ ತಪಶೆಟ್ಟಿ ಚರಂತಿಮಠ ಅವರನ್ನು ಸನ್ಮಾನಿಸಿದರು. ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ವೇದಿಕೆ ಹಂಚಿಕೊಳ್ಳದ ಇಬ್ಬರೂ ಶತಮಾನೋತ್ಸವ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡರು. ಮುಂದಿನ ರಾಜಕೀಯ ಬೆಳವಣಿಗೆಯ ಬಗ್ಗೆ ಈ ವೇಳೆ ನೆರೆದವರಿಂದ ಗುಸುಗುಸು ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT