ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಕಣಜದಲ್ಲಿ ನೆಲಕಚ್ಚಿದ ಬೆಳೆ– ಆತಂಕ

Last Updated 4 ಡಿಸೆಂಬರ್ 2017, 6:43 IST
ಅಕ್ಷರ ಗಾತ್ರ

ಆನೇಕಲ್‌: ರಾಗಿ ಕಣಜವೆಂದೇ ಖ್ಯಾತಿಗಳಿಸಿರುವ ಆನೇಕಲ್ ತಾಲ್ಲೂಕಿನಲ್ಲಿ ಈ ವರ್ಷ 5,598ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದ್ದು ಉತ್ತಮ ಬೆಳೆಯಾಗಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕೊಯ್ಲಿಗೆ ಬಂದಿದ್ದ ಬೆಳೆ ನೆಲಕಚ್ಚಿದ್ದು ರೈತರಲ್ಲಿ ಚಿಂತೆ ಮೂಡಿಸಿದೆ.

ಒಖಿ ಚಂಡಮಾರುತಕ್ಕೆ ಮುನ್ನ ನಳನಳಿಸುತ್ತಿದ್ದ ರಾಗಿ ಬೆಳೆಯು ಮಳೆಯಿಂದಾಗಿ ನೆಲಕಚ್ಚಿದ್ದು ಸಂತಸದಲ್ಲಿದ್ದ ರೈತರನ್ನು ಆತಂಕಕ್ಕೆ ದೂಡಿದೆ. ಕಳೆದ ವರ್ಷ ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಯು ನೆಲದಿಂದ ಮೇಲಕ್ಕೆದ್ದಿರಲಿಲ್ಲ. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದು ರಾಗಿ ಬೆಳೆಯಂತೂ ಅತ್ಯಂತ ಹುಲುಸಾಗಿ ಬೆಳೆದು ಕಳೆದ ವರ್ಷದ ನಷ್ಟ ಈ ವರ್ಷ ತುಂಬುವ ಉತ್ಸಾಹದಲ್ಲಿ ರೈತರಿದ್ದರು. ಆದರೆ ಮಳೆಯಿಂದಾಗಿ ಬೆಳೆ ಬಹುತೇಕ ಹಾಳಾಗಿದೆ.

ಒಂದು ವಾರದ ಹಿಂದೆಯಷ್ಟೇ ಮಾಯಸಂದ್ರದ ಬಳಿ ಭಕ್ತಿಪುರದ ಹೊಲವೊಂದರಲ್ಲಿ ನಳನಳಿಸುತ್ತಿದ್ದ ಬೆಳೆಯನ್ನು ನೋಡಿ ಸಂತಸದಲ್ಲಿದ್ದರು ಆದರೆ ಕೇವಲ ಒಂದೇ ವಾರದಲ್ಲಿ ರೈತನ ಸಂತಸ ನೀರುಪಾಲಾಯಿತು ಎಂದು ಗ್ರಾಮದ ರೈತರು ಅಲವತ್ತುಕೊಂಡರು.

ತಾಲ್ಲೂಕಿನ ಕರ್ಪೂರಿನ ರೈತ ಮುನಿಯಪ್ಪ ಮಾತನಾಡಿ ಈ ಹಿಂದೆ ಹತ್ತು ಎಕರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಜಮೀನುಗಳ ಮಾರಾಟದಿಂದಾಗಿ ವ್ಯವಸಾಯದ ಭೂಮಿ ಕಡಿಮೆಯಾಗಿದೆ. ಆದರೆ ಈ ವರ್ಷ ಎರಡು ಎಕರೆ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲಾಗಿದ್ದು ಒಂದು ಎಕರೆ ಕೊಯ್ಲು ಪೂರ್ಣಗೊಳಿಸಲಾಗಿದೆ. ಕೊಯ್ಲಿನ ನಂತರ ಮಳೆ ಬೀಳುತ್ತಿರುವುದರಿಂದ ಕೊಯ್ಲು ಮಾಡಲಾದ ಬೆಳೆ ತೊಯ್ದು ಹೋಗಿದೆ ಎಂದರು.

ಸಾಮಾನ್ಯವಾಗಿ ಮಳೆಯಲ್ಲಿ ತೊಯ್ದರೆ ಹುಲ್ಲು ಹಾಳಾಗುತ್ತದೆ. ದನಕರುಗಳು ತೊಯ್ದ ಹುಲ್ಲನ್ನು ತಿನ್ನುವುದಿಲ್ಲ. ರಾಗಿ ಸಹ ಕಪ್ಪಾಗುತ್ತದೆ, ಮೊಳಕೆ ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಬೆಳೆಯು ಹಾಳಾಗಿದೆ ಎಂದರು.

ಮಳೆಯಿಂದಾಗಿ ಬೆಳೆಯು ನೆಲಕಚ್ಚಿರುವುದರಿಂದ ಕೊಯ್ಲು ಕಷ್ಟವಾಗುತ್ತದೆ. ಒಂದು ಎಕರೆ ಕೊಯ್ಲಿಗೆ 5000–6000ರೂ. ಕೂಲಿ ನೀಡಬೇಕಾಗುತ್ತದೆ. ಹಾಗಾಗಿ ಉತ್ತಮ ಬೆಳೆಯಾಯ್ತು ಎಂದು ಸಂತಸದಿಂದಿರುವಾಗ ಅಕಾಲಿಕ ಮಳೆಯು ಬರಸಿಡಿಲಿನಂತೆ ಬಂದೆರೆಗಿದೆ ಎನ್ನುತ್ತಾರೆ.

ತಾಲ್ಲೂಕಿನ ಹೊಂಪಲಘಟ್ಟ, ಕರ್ಪೂರು, ಹಾಲ್ದೇನಹಳ್ಳಿ, ರಾಚಮಾನಹಳ್ಳಿ, ಮಾಯಸಂದ್ರ, ಭಕ್ತಿಪುರ, ದಾಸನಪುರ, ಗೆರಟಿಗನಬೆಲೆ, ಸಬ್‌ಮಂಗಲ, ಚಿಕ್ಕಹೊಸಹಳ್ಳಿ, ಇಂಡ್ಲವಾಡಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿಯಿದ್ದು ರೈತರು ಪರದಾಡುತ್ತಿದ್ದಾರೆ.

ಪ್ರಗತಿಪರ ರೈತ ಅರೇನೂರು ಮುನಿಸ್ವಾಮಿರೆಡ್ಡಿ ಅವರನ್ನು ಮಾತನಾಡಿಸಿದಾಗ ಈ ಹಿಂದೆ ಬೆಳೆಯುತ್ತಿದ್ದ ಕಡ್ಡಿ ರಾಗಿ ದೇಸಿ ಬೆಳೆಯಾಗಿದ್ದು ಆಹಾರಕ್ಕೆ ಉತ್ತಮವಾಗಿತ್ತು. ರುಚಿ ಹಾಗೂ ಪೌಷ್ಟಿಕತೆಯಲ್ಲಿ ದೇಸಿ ರಾಗಿ ತನ್ನದೇ ಆದ ವೈಶಿಷ್ಟ್ಯವನ್ನು ಬೆಳೆಸಿಕೊಂಡಿತ್ತು.

ಕೃಷಿ ಇಲಾಖೆ ಸಂಶೋಧನೆ ಮಾಡಿರುವ ಹೈಬ್ರೀಡ್‌ ರಾಗಿ ಬೆಳೆ ಫಸಲು ಹೆಚ್ಚು ಬಂದರೂ ರುಚಿ ಹಾಗೂ ಪೌಷ್ಠಿಕತೆಯಲ್ಲಿ ಕಡ್ಡಿ ರಾಗಿಯಷ್ಟು ವಿಶೇಷತೆಯಿಲ್ಲ. ದೇಸಿ ರಾಗಿ ಬೆಳೆಯ ಬೀಜಗಳನ್ನು ಸಂಶೋಧನೆ ಮಾಡುವತ್ತ ಹಾಗೂ ರೈತರಿಗೆ ಪೂರೈಕೆ ಮಾಡುವತ್ತ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.

ಈ ವರ್ಷದ ಮಳೆಯಿಂದಾಗಿ ಬೆಳೆ ಬಹುತೇಕ ಹಾಳಾಗಿದ್ದು ಮಳೆಯ ವಾತಾವರಣ ಬೇಗ ಕಡಿಮೆಯಾಗಿ ಬಿಸಿಲು ಬಂದರೆ ಹಾನಿ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

* * 

ಕೊಯ್ಲಿನ ನಂತರ ಮಳೆ ಬೀಳುತ್ತಿರುವುದರಿಂದ ಕೊಯ್ಲು ಮಾಡಲಾದ ಬೆಳೆ ತೊಯ್ದು ಹೋಗಿದೆ
ಮುನಿಯಪ್ಪ
ಕರ್ಪೂರಿನ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT