ಭಾಲ್ಕಿ

ಸಮಸ್ಯೆಗಳ ಆಗರ ಸರ್ಕಾರಿ ಪ್ರೌಢಶಾಲೆ

ತಾಲ್ಲೂಕು ಕೇಂದ್ರದಿಂದ 26 ಕಿ.ಮೀ ದೂರದಲ್ಲಿರುವ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿವಿಧ ಸಮಸ್ಯೆಗಳಿಂದ ನರಳುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಹೊಡೆತ ಬೀಳುತ್ತಿದೆ.

ಭಾಲ್ಕಿ ತಾಲ್ಲೂಕಿನ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿರುಕುಬಿಟ್ಟ ಶಾಲೆಯ ಕೋಣೆಗಳು

ಭಾಲ್ಕಿ: ತಾಲ್ಲೂಕು ಕೇಂದ್ರದಿಂದ 26 ಕಿ.ಮೀ ದೂರದಲ್ಲಿರುವ ಬಾಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ವಿವಿಧ ಸಮಸ್ಯೆಗಳಿಂದ ನರಳುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಹೊಡೆತ ಬೀಳುತ್ತಿದೆ.

‘ನಮ್ಮ ಶಾಲೆಯಲ್ಲಿ ಎರಡು ವರ್ಷಗಳಿಂದ ಹಿಂದಿ ವಿಷಯ ಶಿಕ್ಷಕರಿಲ್ಲ, ಮೂರು ವರ್ಷಗಳಿಂದ ಕಾಯಂ ಮುಖ್ಯ ಶಿಕ್ಷಕರಿಲ್ಲ. ಶಾಲೆಯಲ್ಲಿ ಕೋಣೆಗಳ ಸಮಸ್ಯೆಯಿಂದ ಗಣಕ ಯಂತ್ರಗಳಿಲ್ಲ. ಶಿಕ್ಷಕರೂ ಇಲ್ಲ. ಚಿತ್ರಕಲಾ ಶಿಕ್ಷಕರಂತೂ ಇಲ್ಲವೇ ಇಲ್ಲ. ಇನ್ನು ನೈಸರ್ಗಿಕ ಕರೆಗೆ ಉತ್ತರಿಸಲು ವಿದ್ಯಾರ್ಥಿಗಳು, ಶಿಕ್ಷಕರು ಶಿಥಿಲಗೊಂಡಿರುವ ಒಂದೇ ಶೌಚಾಲಯ ಉಪಯೋಗಿಸುವ ಸ್ಥಿತಿ ಇದೆ ಎಂದು ವಿದ್ಯಾರ್ಥಿಗಳ ನೋವು ತೋಡಿಕೊಳ್ಳುತ್ತಾರೆ.

ಈ ಶಾಲೆಗೆ ಡೊಂಗರಗಿ, ಚಂದಾಪೂರ, ಜೈನಾಪೂರ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಶಾಲೆಯ 8ನೇ ತರಗತಿಯಲ್ಲಿ 32, 9ನೇ ತರಗತಿಯಲ್ಲಿ 41, ಹತ್ತನೇ ವರ್ಗದಲ್ಲಿ 45 ಸೇರಿದಂತೆ ಒಟ್ಟು 118 ವಿದ್ಯಾರ್ಥಿಗಳಿದ್ದಾರೆ. ಶಾಲೆಯಲ್ಲಿ ಸದ್ಯಕ್ಕೆ ಕೇವಲ ಐದು ಕೋಣೆಗಳು ಮಾತ್ರ ಇವೆ. ಹಳೆಯ ಐದು ಕೋಣೆಗಳು ಬಿರುಕು ಬಿಟ್ಟಿರುವ ಕಾರಣ ಉಪಯೋಗಕ್ಕೆ ಇಲ್ಲದಂತಾಗಿವೆ. ಆದರೆ, ಸುಮಾರು ವರ್ಷಗಳಿಂದ ಅವುಗಳನ್ನು ನೆಲಸಮಗೊಳಿಸದೆ ಇರುವುದರಿಂದ ಯಾವಾಗ ಕುಸಿದುಬಿದ್ದು ಮಕ್ಕಳಿಗೆ ಅಪಾಯ ತಂದೊಡ್ಡುತ್ತವೋ ಎಂಬ ಭಯ ನಮನ್ನು ಕಾಪಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪಾಲಕರು.

ಶಾಲೆಯಲ್ಲಿ ಎಲ್ಲ ವಿಷಯ ಶಿಕ್ಷಕರು, ಗ್ರಂಥಾಲಯ, ಪ್ರಯೋಗಾಲಯ, ಗಣಕ ಯಂತ್ರಗಳು, ಸುಸಜ್ಜಿತ ಆಟದ ಮೈದಾನ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣದಿಂದ ವಂಚಿತರಾಗಿದ್ದಾರೆ. 2015–16ನೇ ಸಾಲಿನಲ್ಲಿ ಶಾಲೆಯ ಫಲಿತಾಂಶ ಶೇ 76.19 ಆಗಿತ್ತು. ಆದರೆ ಕಳೆದ ವರ್ಷದ ಫಲಿತಾಂಶ ಕೇವಲ ಶೇ 43.35 ಆಗಿದೆ. ಇದಕ್ಕೆ ಪ್ರಬಲ ಕಾರಣ ಕಾಯಂ ಮುಖ್ಯಶಿಕ್ಷಕ, ಹಿಂದಿ ವಿಷಯ ಶಿಕ್ಷಕರ ಕೊರತೆ ಎಂದು ದೂರುತ್ತಾರೆ ಹೆಸರು ಹೇಳಲಿಚ್ಛಿಸದ ಪಾಲಕ.

ಕೋಣೆಗಳ ಸಮಸ್ಯೆ ಇರುವುದರಿಂದ ಗಣಕ ಯಂತ್ರ, ಪ್ರಯೋಗಾಲಯದ ಸಾಮಗ್ರಿ, ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕ ತರಿಸಲಾಗಿಲ್ಲ. ಶಾಲೆಗೆ ಕೆಲವೆಡೆ ಮಾತ್ರ ಕಾಂಪೌಂಡ್‌ ನಿರ್ಮಿಸಲಾಗಿದೆ. ನಾಯಿ, ದನ ಶಾಲೆಯ ಆವರಣ ಪ್ರವೇಶಿಸಿ ಹೊಲಸು ಮಾಡುತ್ತಿವೆ. ಕೆಲ ಪುಂಡ, ಪೊಕರಿಗಳು ಶಾಲೆಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಶೌಚಾ ಲಯದ ಮೇಲಿದ್ದ ಸಿಂಟೆಕ್ಸ್‌ ಹಾಗೂ ಇತರ ವಸ್ತುಗಳನ್ನೂ ಧ್ವಂಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಿಬ್ಬಂದಿ.

ಕೋಣೆ ನೆಲಸಮಗೊಳಿಸುವ ಸಂಬಂಧ ಈಗಾಗಲೇ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾರೆ. ಹೊಸ ಐದು ಕೋಣೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಪ್ರಭಾರಿ ಮುಖ್ಯಶಿಕ್ಷಕ ಅನಿಲ್‌ಕುಮಾರ ಬುರಾಡಿ ತಿಳಿಸುತ್ತಾರೆ.
 

* * 

ಮುಖ್ಯಶಿಕ್ಷಕ, ಶಿಕ್ಷಕರ ಹುದ್ದೆ ಭರ್ತಿ ಸೇರಿದಂತೆ ಶಾಲೆಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲಾಗುವುದು. ಸೂರ್ಯಕಾಂತ ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ

 

Comments
ಈ ವಿಭಾಗದಿಂದ ಇನ್ನಷ್ಟು
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

ಭಾಲ್ಕಿ
ನಿಟ್ಟೂರ (ಬಿ): ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಗರಿ

21 Jan, 2018
770 ಖ್ಯಾತನಾಮರ ಸೇರಿಸಲು ನಿರ್ಣಯ

ಬೀದರ್‌
770 ಖ್ಯಾತನಾಮರ ಸೇರಿಸಲು ನಿರ್ಣಯ

20 Jan, 2018
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

ಬೀದರ್‌
ಹಣ ಸಂಗ್ರಹಿಸಲು ನಾಲ್ವರು ಸಚಿವರ ನಿಯೋಜನೆ

19 Jan, 2018

ಹುಮನಾಬಾದ್
ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

‘ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತರಬೇಕು. ಶಿಕ್ಷಣದ ಜೊತೆ ಶಿಸ್ತು ಮತ್ತು ಸಂಸ್ಕಾರವೂ ಅಷ್ಟೇ ಮುಖ್ಯ'. ...

18 Jan, 2018
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

ಬೀದರ್‌
ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ

18 Jan, 2018