ಚಾಮರಾಜನಗರ

ಸರಕು ಸಾಗಣೆಗೆ ನೂರೆಂಟು ಸಮಸ್ಯೆ

ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮತ್ತು ಅಲ್ಲಿಂದ ಉಗ್ರಾಣದವರೆಗಿನ ರಸ್ತೆಗಳು ಸಮರ್ಪಕವಾಗಿವೆ. ಸರಕುಗಳನ್ನು ತುಂಬುವ ಮತ್ತು ಇಳಿಸುವ ಜಾಗಗಳಲ್ಲಿಯೇ ಹೆಚ್ಚು ಸಮಸ್ಯೆ

ಚಾಮರಾಜನಗರದ ರೈಲು ನಿಲ್ದಾಣದಲ್ಲಿ ಸರಕುಗಳನ್ನು ತುಂಬಿಸುವ ಜಾಗಕ್ಕೆ ತೆರಳುವ ರಸ್ತೆಯ ಸ್ಥಿತಿ

ಚಾಮರಾಜನಗರ: ನಗರಕ್ಕೆ ಗೂಡ್ಸ್‌ ರೈಲಿನಲ್ಲಿ ಬರುವ ಸರಕುಗಳನ್ನು ಸೀಮಿತ ಕಾಲಾವಧಿಯಲ್ಲಿ ಸಾಗಿಸಲು ಗುತ್ತಿಗೆದಾರರು ಮತ್ತು ಲಾರಿ ಚಾಲಕರು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕುಗಳನ್ನು ಲಾರಿಗಳಿಗೆ ತುಂಬಿಸುವ ಸ್ಥಳದಿಂದ ಉಗ್ರಾಣಕ್ಕೆ ಸುಮಾರು 3 ಕಿ.ಮೀ. ದೂರವಿದ್ದು, ಇದರಲ್ಲಿ 1 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲದೇ, ಇರುವ ರಸ್ತೆಯೂ ತೀರಾ ಕಡಿದಾಗಿ ಹಾಗೂ ಕಿರಿದಾಗಿರುವುದರಿಂದ ಒಮ್ಮೆ ಒಂದು ಲಾರಿ ಮಾತ್ರ ಸಂಚರಿಸಲು ಸಾಧ್ಯ. ಆದ್ದರಿಂದ ತಾಸುಗಟ್ಟಲೆ ಕಾಯಬೇಕಾಗುತ್ತದೆ ಎನ್ನುವುದು ಲಾರಿ ಮಾಲೀಕರ ದೂರು.

ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮತ್ತು ಅಲ್ಲಿಂದ ಉಗ್ರಾಣದವರೆಗಿನ ರಸ್ತೆಗಳು ಸಮರ್ಪಕವಾಗಿವೆ. ಸರಕುಗಳನ್ನು ತುಂಬುವ ಮತ್ತು ಇಳಿಸುವ ಜಾಗಗಳಲ್ಲಿಯೇ ಹೆಚ್ಚು ಸಮಸ್ಯೆ ಎನ್ನುತ್ತಾರೆ ಅವರು.

ರೈಲ್ವೆ ಇಲಾಖೆಗೆ ಸೇರಿದ ಈ ರಸ್ತೆಯನ್ನು ಇಲಾಖೆಯೇ ಅಭಿವೃದ್ಧಿಪಡಿಸಬೇಕು. ಇಲ್ಲಿ ಎಕರೆಗಟ್ಟಲೆ ವಿಶಾಲ ಜಾಗವಿದೆ. ಆದರೆ, ರಸ್ತೆಗೆ ಡಾಂಬರು ಅಥವಾ ಜಲ್ಲಿ ಹಾಕಿಸುವ ಮತ್ತು ಎರಡು ಲಾರಿಗಳು ಸರಾಗ ಚಲಿಸುವಷ್ಟು ಅದನ್ನು ವಿಸ್ತರಿಸುವ ಗೋಜಿಗೆ ಹೋಗಿಲ್ಲ. ಇದರಿಂದ ಲಾರಿ ಓಡಿಸಲು ಕಷ್ಟಪಡಬೇಕಾಗಿದೆ ಎಂದೂ ಅವರು ಹೇಳಿದರು.

ಲಾರಿ ಸರತಿ ಸಾಲು: ರೈಲು ನಿಲ್ದಾಣದಿಂದ ಸರಕು ತುಂಬಿಸುವ ಸ್ಥಳಕ್ಕೆ ತೆರಳುವ ರಸ್ತೆ ತೀರಾ ಕಿರಿದಾಗಿದೆ. ಸುಮಾರು 60–70 ಲಾರಿಗಳು ಸರಕು ಸಾಗಿಸುವ ಸಂದರ್ಭದಲ್ಲಿ ಸಂಚರಿಸುತ್ತವೆ. ಒಮ್ಮೆ ಸರಕು ತುಂಬಿಕೊಂಡು ಬರುವ ಲಾರಿಗಳು ಹೊರಬರುವವರೆಗೂ ಉಳಿದ ಲಾರಿಗಳು ಒಳಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಗಂಟೆಗಟ್ಟಲೆ ಕಾಯುವಂತಾಗುತ್ತಿದೆ. ರಸ್ತೆ ವಿಸ್ತರಣೆ ಮಾಡಿ ದುರಸ್ತಿಪಡಿಸುವಂತೆ ಅಧಿಕಾರಿಗಳಿಗೆ ಕೋರಿದ್ದರೂ ಪ್ರಯೋಜನವಾಗಿಲ್ಲ ಎಂದು ಮಾಲೀಕರು ದೂರುತ್ತಾರೆ.

ತಡವಾದರೆ ಹೆಚ್ಚುವರಿ ಹಣ: ಗೂಡ್ಸ್‌ ನಿಲ್ದಾಣ ತಲುಪಿದ 6 ಗಂಟೆಯಲ್ಲಿ ಅದರಲ್ಲಿರುವ ಸಂಪೂರ್ಣ ಸರಕನ್ನು ಖಾಲಿ ಮಾಡಿ ಸಾಗಿಸಬೇಕು. ಈ ಕಾಲಮಿತಿಯಲ್ಲಿ ಅದು ಸಾಧ್ಯವಾಗದಿದ್ದರೆ ಗುತ್ತಿಗೆದಾರರು ಪ್ರತಿ ಗಂಟೆಗೆ ₹6,500 ಹೆಚ್ಚುವರಿ ಹಣ ಪಾವತಿಸಿ ಸರಕು ಸಾಗಿಸಬೇಕು ಎಂದು ಗುತ್ತಿಗೆದಾರ ನಟರಾಜು ಅಳಲು ತೋಡಿಕೊಂಡರು.

ರಸ್ತೆಯ ಅವ್ಯವಸ್ಥೆ, ಮಳೆಯ ಸಮಸ್ಯೆ ಮುಂತಾದವುಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಸರಕು ಇಳಿಸುವ ಜಾಗದಲ್ಲಿ ಕೂಲಿ ಕಾರ್ಮಿಕರಿಗೆ ಕುಡಿಯಲು ನೀರು ಸಹ ಸಿಗುವುದಿಲ್ಲ. ಕತ್ತಲಾದ ಬಳಿಕ ಸರಕು ಸಾಗಿಸಲು ವಿದ್ಯುತ್‌ ಸೌಲಭ್ಯವೂ ಇಲ್ಲ. ಮೂಲ ಸೌಕರ್ಯದ ಕೊರತೆಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸರಕು ಇಳಿಸಲು ವ್ಯವಸ್ಥೆ ಇಲ್ಲ: ‘ಬೇರೆ ರೈಲು ನಿಲ್ದಾಣಗಳಲ್ಲಿ ತಡವಾದರೆ ಸರಕುಗಳನ್ನು ಕೆಳಕ್ಕೆ ಇಳಿಸಿಡಲು ಪ್ಲಾಟ್‌ಫಾರ್ಮ್‌ ಸೌಲಭ್ಯವಿದೆ. ಆದರೆ, ಇಲ್ಲಿ ಲಾರಿ ಬಂದು ನಿಲ್ಲುವವರೆಗೂ ಚೀಲಗಳನ್ನು ಇಳಿಸುವಂತಿಲ್ಲ. ಮಳೆಬಂದರಂತೂ ಪರಿಸ್ಥಿತಿ ಇನ್ನೂ ಅಧ್ವಾನವಾಗುತ್ತದೆ. ನಮಗೂ ಇಲ್ಲಿ ಮಳೆಯಿಂದ ರಕ್ಷಣೆಗೆ ವ್ಯವಸ್ಥೆಯಿಲ್ಲ ಎನ್ನುತ್ತಾರೆ ವೇರ್‌ಹೌಸ್‌ನ ಸಿಬ್ಬಂದಿ.

ನಿಲ್ದಾಣದಿಂದ ಮೂರು ಕಿ.ಮೀ. ದೂರದಲ್ಲಿ ಉಗ್ರಾಣವಿದ್ದು, ರೈಲ್ವೆ ಇಲಾಖೆಯು ಅದನ್ನು ಖಾಸಗಿಯವರಿಗೆ ಬಾಡಿಗೆ ತೆತ್ತು ನಡೆಸುತ್ತಿದೆ. ಇಲ್ಲಿಯೂ ಲಾರಿಗಳ ನಿಲುಗಡೆಗೆ ಸರಿಯಾದ ಜಾಗವಿಲ್ಲ.

ಗೂಡ್ಸ್‌ನ 42 ಬೋಗಿಗಳಲ್ಲಿ ಸರಕು ಬರುತ್ತದೆ. ಒಂದು ಬೋಗಿಯಿಂದ 4 ಟ್ರಿಪ್‌ ಸಾಗಿಸಬಹುದು. ಹೀಗೆ ಒಂದು ಲಾರಿ 3 ರಿಂದ 4 ಟ್ರಿಪ್‌ ಮಾಡಲು ಸಾಧ್ಯ. ಲೋಡ್‌ ಮತ್ತು ಅನ್‌ಲೋಡ್‌ ಮಾಡುವ ಎರಡೂ ಕಡೆಗಳಲ್ಲಿ ತಲಾ 80ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಜಾಬಿರ್‌ ಪಾಷ ತಿಳಿಸಿದರು.

ಇದೇ ಶೌಚಾಲಯ
ರೈಲು ನಿಲ್ದಾಣದ ಸಮೀಪದಲ್ಲಿನ ಬಡಾವಣೆಯ ನಿವಾಸಿಗಳು ರೈಲ್ವೆಗೆ ಸೇರಿದ ಪಾಳು ಜಾಗವನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ. ಈ ಜಾಗದ ತುಂಬ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಸ್ವಂತ ಶೌಚಾಲಯವಿಲ್ಲದ ನಿವಾಸಿಗಳು ಈ ಜಾಗವನ್ನೇ ಅವಲಂಬಿಸಿದ್ದಾರೆ. ಹೀಗಾಗಿ, ಇಡೀ ಪ್ರದೇಶ ಗಬ್ಬುನಾರುತ್ತಿದ್ದು, ದುರ್ವಾಸನೆ ರೈಲು ನಿಲ್ದಾಣದವರೆಗೂ ಹರಡುತ್ತಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

ಚಾಮರಾಜನಗರ
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

22 Jan, 2018
ಇಂದು, ನಾಳೆ ಪರಿವರ್ತನಾ ಯಾತ್ರೆ

ಚಾಮರಾಜನಗರ
ಇಂದು, ನಾಳೆ ಪರಿವರ್ತನಾ ಯಾತ್ರೆ

20 Jan, 2018

ಯಳಂದೂರು
ಚಿತ್ರಗಳ ಮೂಲಕ ಮಕ್ಕಳಿಗೆ ಸಂಚಾರ ಪಾಠ

‘ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಬೊಂಬೆ ಪ್ರದರ್ಶನದ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ಚಿತ್ರ ಮತ್ತು ಬೊಂಬೆ ಪ್ರದರ್ಶನದ ಬಗ್ಗೆ ತಿಳಿಸಲಾಗುತ್ತದೆ.

20 Jan, 2018
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

ಚಾಮರಾಜನಗರ
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

19 Jan, 2018

ಚಾಮರಾಜನಗರ
ನೂತನ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

ಎನ್‌ಪಿಎಸ್‌ ಯೋಜನೆಗೆ ಒಳಪಡುವ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು. ನೌಕರರ ಹಿತ ಕಾಪಾಡಬೇಕು

19 Jan, 2018