ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಮುಗಿಯಲು ಬೇಕು 10 ತಿಂಗಳು

Last Updated 4 ಡಿಸೆಂಬರ್ 2017, 7:45 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಜಿಲ್ಲಾ ಆಸ್ಪತ್ರೆ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆ ಸಾಮರ್ಥ್ಯದ ಸರ್ಕಾರಿ ಹೈಟೆಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣದ ಮೊದಲ ಹಂತ ಮುಗಿದಿದ್ದು, ಇನ್ನೂ ಆಸ್ಪತ್ರೆ ಪೂರ್ಣಗೊಳ್ಳಲು 10 ತಿಂಗಳಾದರೂ ಬೇಕಾಗಬಹುದು.

ಹಳೇ ಬಂದೀಖಾನೆಯಿದ್ದ ಸ್ಥಳದಲ್ಲಿ 28,245 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಸ್ಪತ್ರೆಗೆ ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಶಂಕುಸ್ಥಾಪನೆ ನೆರವೇರಿಸಿದ್ದರು.

ಅಂದು ಒಂದು ವರ್ಷದಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಇಂದಿನ ಪ್ರಗತಿಯನ್ನು ಗಮನಿಸಿದರೆ, ಅದು ಸಾಧ್ಯವಿಲ್ಲ ಎನ್ನಿಸುತ್ತಿದೆ. ಆದರೆ, ಒಪ್ಪಂದದಲ್ಲಿ ಅಕ್ಟೋಬರ್ 2018ರವರೆಗೆ ಕಾಮಗಾರಿ ಪೂರ್ಣಗೊಳಿಸಲು ಅವಕಾಶವಿದ್ದು, ನಿಗದಿತ ಸಮಯದೊಳಗೆ ಕಟ್ಟಡ ಸಿದ್ಧಗೊಳ್ಳಬಹುದು.

ಪ್ರಸ್ತುತ ತಳಹದಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಪ್ಲಿಂತ್ ಹಂತದವರೆಗೂ ಬಂದಿದೆ. ಸೂಪರ್ ಸ್ಟ್ರಕ್ಚರ್ ಕೆಲಸ ಶುರುವಾಗಿ. ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್‌ಗಳನ್ನು ಹಾಕಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ರಮೇಶ್ ಮಾಹಿತಿ ನೀಡಿದ್ದಾರೆ.

ಮೊದಲ ಹೈಟೆಕ್ ಆಸ್ಪತ್ರೆಯಾಗಲಿದೆ: 450 ಹಾಸಿಗೆಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ತಿಂಗಳಿಗೆ ಅಂದಾಜು 700 ಹೆರಿಗೆಗಳಾಗುತ್ತವೆ. ಇಷ್ಟು ಮಂದಿಯ ಪೋಷಣೆಗೆ ಈಗಿರುವ ತಾಯಿ ಮತ್ತು ಮಕ್ಕಳ ವಿಭಾಗ ತುಂಬಾ ಕಿರಿದಾಗುತ್ತಿದೆ. ಹಾಸಿಗೆಗಳ ಕೊರತೆ, ಚಿಕಿತ್ಸಾ ಸೌಲಭ್ಯಗಳ ಕೊರತೆಯೂ ಇದೆ.

ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬೇಕು ಎಂದು ಜಿಲ್ಲಾ ಆಸ್ಪತ್ರೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಸರ್ಕಾರ ₹ 11 ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ (ಜಿ + 1) ಬೃಹತ್ ಹಾಗೂ ಆಧುನಿಕ ವ್ಯವಸ್ಥೆಯ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, ಜಿಲ್ಲೆಯಲ್ಲೇ ಮೊದಲ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಲಿದೆ.

ಎರಡು ಲಿಫ್ಟ್, ಎರಡು ರ‍್ಯಾಂಪ್: 28 ಸಾವಿರ ಚದುರ ಅಡಿ ವಿಸ್ತೀರ್ಣದಷ್ಟು ವಿಶಾಲ ಜಾಗದಲ್ಲಿ ನಿರ್ಮಾಣವಾಗುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ದೊಡ್ಡ ವಾರ್ಡ್ ಇರುತ್ತದೆ. ಪಕ್ಕದಲ್ಲೇ ಶಸ್ತ್ರಚಿಕಿತ್ಸಾ ಕೊಠಡಿ (ಆಪರೇಷನ್ ಥಿಯೇಟರ್) ಮತ್ತು ಲೇಬರ್ ವಾರ್ಡ್‌ಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದೆ.

ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಹೊರ ರೋಗಿಗಳ ವಿಭಾಗಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರಯೋಗಾಲಯ ಹಾಗೂ ಎಕ್ಸ್ ರೇ ಕೊಠಡಿಗಳು ಕೆಳ ಅಂತಸ್ತಿನಲ್ಲಿ ಪ್ರತ್ಯೇಕವಾಗಿರುತ್ತವೆ. ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಲಿಫ್ಟ್ ಅಳವಡಿಸಲಾಗುತ್ತಿದೆ. ಈ ಆಸ್ಪತ್ರೆಗೆ ಎರಡು ಲಿಫ್ಟ್ ಮತ್ತು ಎರಡು ರ‍್ಯಾಂಪ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಎಂಜಿನಿಯರ್ ರಮೇಶ್ ವಿವರಿಸಿದರು.

100 ಹಾಸಿಗೆಗೆ ವಿಸ್ತರಿಸಲು ಅವಕಾಶ: ಪ್ರಸ್ತುತ 50 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾದರೂ, ಇನ್ನೊಂದು ಅಂತಸ್ತು ಎತ್ತರಿಸಲು ಹಾಗೂ 100 ಹಾಸಿಗೆಗಳಿಗೆ ವಿಸ್ತರಿಸಲು ಸಾಧ್ಯವಾಗುವಂತೆ ಈ ಮೊದಲೇ ವಿನ್ಯಾಸ ಮಾಡಿಕೊಳ್ಳಲಾಗಿದೆ. ಹಾಗಾಗಿ ಸರ್ಕಾರದಿಂದ ಇನ್ನೊಂದು ಅಂತಸ್ತು ಕಟ್ಟಲು ಅನುಮೋದನೆ ದೊರೆತು, ಹಣಕಾಸು ವ್ಯವಸ್ಥೆಯಾದರೆ ಎರಡನೇ ಅಂತಸ್ತು ನಿರ್ಮಿಸಬಹುದು.

ಮೊದಲು ಕೆ.ಎಚ್.ಎಸ್.ಆರ್.ಪಿ ಅವರಿಗೆ ಈ ನಿರ್ಮಾಣ ಕಾಮಗಾರಿಯನ್ನು ವಹಿಸಲಾಗಿತ್ತು. ಆ ಯೋಜನೆ ಮುಗಿದಿದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಂಜಿನಿಯರಿಂಗ್ ವಿಭಾಗಕ್ಕೇ ಈ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ.

* * 

ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಆದಷ್ಟು ಬೇಗ ಮುಗಿಸಿಕೊಟ್ಟರೆ, ಜಿಲ್ಲಾ ಆಸ್ಪತ್ರೆಯ ಮೇಲಿನ ಒತ್ತಡ ಒಂದಷ್ಟು ಕಡಿಮೆಯಾಗುತ್ತದೆ.
ಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT