ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗಾಗಿ ಕೈ ಜೋಡಿಸಿದ ‘ಮುಂಜಾನೆ ಮಿತ್ರರು’

Last Updated 4 ಡಿಸೆಂಬರ್ 2017, 8:58 IST
ಅಕ್ಷರ ಗಾತ್ರ

ಹಾಸನ: ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ನಗರದಲ್ಲಿ ‘ಮುಂಜಾನೆ ಮಿತ್ರರು’ ಸಂಘಟನೆ ಆರಂಭಗೊಂಡಿದೆ. ನಿತ್ಯ ವಾಯುವಿಹಾರಕ್ಕೆ ಬರುವವರು ‘ಮುಂಜಾನೆ ಮಿತ್ರರು’ ಎಂಬ ಸಂಘಟನೆ ಮಾಡಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡಿ ಗಲೀಜು ಮಾಡಲಾಗುತ್ತಿತ್ತು.

ಇದನ್ನು ಗಮನಿಸಿದ ಸಮಾನ ಮನಸ್ಕ ಸ್ನೇಹಿತರು, ತಮ್ಮ ಸ್ವಂತ ಖರ್ಚಿನಲ್ಲಿ ಆರು ಕಸದ ತೊಟ್ಟಿಗಳನ್ನು ಖರೀದಿಸಿ, ಕ್ರೀಡಾಂಗಣದ ಸುತ್ತ ಇಡುವ ಮೂಲಕ ಪರಿಹಾರ ಕಂಡುಕೊಂಡರು.ವಾಟರ್ ಬಾಟಲ್‌, ತಿಂಡಿ, ತಿನಿಸು ತಿಂದ ಬಳಿಕ ಪ್ಲಾಸ್ಟಿಕ್ ಹಾಗೂ ಪೇಪರ್‌ಗಳನ್ನು ಕಸದ ತೊಟ್ಟಿಯಲ್ಲಿಯೇ ಹಾಕುವಂತೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

‘ನಮ್ಮ ನಡಿಗೆ ಬೆಳಕಿನಡೆಗೆ, ಮುಂಜಾನೆಯ ನಡಿಗೆ ಆರೋಗ್ಯದೆಡೆಗೆ’ ಎಂಬ ಜಾಗೃತಿ ಘೋಷವಾಕ್ಯಗಳನ್ನು  ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರ ಮಾಡುವವರಿಗೆ ಹಾಗೂ ಕ್ರೀಡಾ ಅಭ್ಯಾಸ ಮಾಡಲು ಬರುವವರಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಮಾಡಲು ನಿರ್ಧರಿಸಿದ್ದಾರೆ.

ಮುಂಜಾನೆ ಮಿತ್ರರು ವೇದಿಕೆ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ‘ಹಲವು ವರ್ಷಗಳಿಂದ ವಾಯು ವಿಹಾರಕ್ಕೆಂದು ಜಿಲ್ಲಾ ಕ್ರೀಡಾಂಗಣಕ್ಕೆ ಸ್ನೇಹಿತರಾದ ಉಮೇಶ್, ಆನಂದ್, ಮನುಕುಮಾರ್, ರಾಘವೇಂದ್ರ, ಯೋಗೀಶ್, ಅರುಣ್, ಅಜಿತ್, ಡಾ. ಪಾಟೀಲ್, ಸುಧೀರ್ ಬರುತ್ತಿದ್ದೇವೆ. ಎಲ್ಲೆಂದರಲ್ಲಿ ಕಸ ಬಿಸಾಡಿರುವುದು ನೋಡಿ ಮನಸ್ಸಿಗೆ ಬೇಜಾರಾಯಿತು. ಇದರಿಂದ ಸಾಕಷ್ಟು ತೊಂದರೆ ಆಗುತಿತ್ತು. ಎಲ್ಲಾವನ್ನು ಸರ್ಕಾರ ಮಾಡಲಿ ಎಂದು ಸುಮ್ಮನಾಗಲಿಲ್ಲ. ಸ್ನೇಹಿತರೆಲ್ಲಾ ಹಣ ಹೊಂದಿಸಿ ಕಸದ ತೊಟ್ಟಿಗಳನ್ನು ಇಟ್ಟಿದ್ದೇವೆ. ಸಾರ್ವಜನಿಕರಿಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.

‘ಕಸದ ತೊಟ್ಟಿ ತುಂಬಿದ ನಂತರ ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡಬೇಕು. ಈ ಬಗ್ಗೆ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ. ಕ್ರೀಡಾಂಗಣದೊಳಗೆ ಅಲ್ಲಲ್ಲಿ ಕಲ್ಲುಗಳು ಇದ್ದು, ವಾಯು ವಿಹಾರ ಮಾಡುವವರಿಗೆ ತೊಂದರೆ ಆಗುತ್ತಿದೆ. ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾವು ವಾಸಿಸುವ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿದ್ದರೆ ಎಷ್ಟೋ ಕಾಯಿಲೆಗಳಿಂದ ದೂರ ಇರಬಹುದು. ಪ್ರತಿಯೊಬ್ಬರೂ ಸೇವಾ ಮನೋಭಾವ ಮೈಗೂಡಿಸಿಕೊಂಡರೇ ಕಸದ ಸಮಸ್ಯೆ ಪೂರ್ಣ ಪ್ರಮಾಣವಾಗಿ ಬಗೆಹರಿಸಬಹುದು’ ಎಂದು ಹಿರಿಯರಾದ ಧರ್ಮ ಹೇಳಿದರು.

* * 

ಕ್ರೀಡಾಂಗಣದಲ್ಲಿ ಶೌಚಾಲಯದ ಸಮಸ್ಯೆ ಇದ್ದು, ಅದರ ಸ್ವಚ್ಛತೆ ಕಾಪಾಡಬೇಕು.
ಉದಯ್‌ ಕುಮಾರ್‌, ಹಿರಿಯ ನಾಗರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT