ಹೈಬ್ರಿಡ್ ಯೋಜನೆ

ಗಾಳಿ ವಿದ್ಯುತ್‌ ಗ್ರಾಮ

ಹೆಬ್ಬಳ್ಳಿಯ ಗ್ರಾಮ ಪಂಚಾಯಿತಿ ಕಟ್ಟಡ ಗಮನ ಸೆಳೆಯುತ್ತಿರುವುದು ತನ್ನ ಪವನ ವಿದ್ಯುತ್ ಘಟಕದಿಂದ. ತಾನು ಬಳಸುವ ವಿದ್ಯುತ್ ಅನ್ನು ತಾನೇ ಉತ್ಪಾದಿಸುತ್ತಿದೆ ಈ ಪಂಚಾಯಿತಿ.

ಗ್ರಾಮ ಪಂಚಾಯಿತಿ ಕಟ್ಟಡದ ಮೇಲೆ ಪವನ ವಿದ್ಯುತ್ ಉತ್ಪಾದನಾ ಘಟಕ

ಕೆಲವು ದಿನಗಳ ಹಿಂದೆ ಹಾಗೇ ಸುತ್ತಾಟಕ್ಕೆಂದು ಆ ಊರಿಗೆ ಹೋದಾಗ ಮಕ್ಕಳ ಕೈಯಲ್ಲಿನ ಗಿರಿಗಿಟ್ಲೆಯಂತೆ ಗ್ರಾಮ ಪಂಚಾಯಿತಿ ಕಟ್ಟಡದ ಮೇಲಿನ ಆ ತಗಡಿನ ರೆಕ್ಕೆಗಳು ಗಿರ ಗಿರ ತಿರುಗುತ್ತಿದ್ದವು. ‘ಏನಿದರ ಮಜಕೂರು? ಏತಕ್ಕಾಗಿ ಈ ಗಿರಿಗಿಟ್ಲೆಯನ್ನು ಕಟ್ಟಡದ ಮೇಲೆ ನಿಲ್ಲಿಸಿದ್ದಾರೆ’ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದವು.

‘ನಮ್ಮ ಪಂಚಾಯಿತಿ ಕಟ್ಟಡ ತಾನು ಬಳಸುವ ವಿದ್ಯುತ್ತನ್ನು ಪವನಶಕ್ತಿಯ ಮೂಲಕ ತಾನೇ ಉತ್ಪಾದನೆ ಮಾಡಿಕೊಳ್ಳುತ್ತಿದೆ ಗೊತ್ತೆ? ಮೇಲೆ ತುರಾಯಿಯಂತಿರುವ ಆ ಫಂಕದಿಂದಲೇ ವಿದ್ಯುತ್‌ ಸಿಗುತ್ತಿದೆ’ ಎಂದು ಗ್ರಾಮಸ್ಥರು ಉತ್ಸಾಹದಿಂದ ಹೇಳಿದರು. ಪವನ ವಿದ್ಯುತ್‌ ಎಂದರೆ ಬಯಲಲ್ಲಿ –ವಿಶೇಷವಾಗಿ ಹೊಲಗಳಲ್ಲಿ– ನಿಲ್ಲಿಸಿದ ದೈತ್ಯಾಕಾರದ ಕಂಬಗಳ ಮೇಲೆ ತಿರುಗುವ ರೆಕ್ಕೆಗಳಿಂದ ಉತ್ಪಾದನೆ ಆಗುವ ಶಕ್ತಿಯ ಮೂಲ ಎಂದಷ್ಟೇ ತಿಳಿದಿದ್ದ ನಮಗೆ ಈ ಪುಟ್ಟ ಗಾಳಿಯಂತ್ರ ನೋಡಿ ಸೋಜಿಗವಾಯಿತು.

ನಾವು ಹೋಗಿದ್ದ ಆ ಗ್ರಾಮದ ಹೆಸರು ಹೆಬ್ಬಳ್ಳಿ ಎಂದು. ಧಾರವಾಡ ಜಿಲ್ಲೆಯ ಈ ಗ್ರಾಮ ಜಿಲ್ಲಾಕೇಂದ್ರಕ್ಕೆ ಬಲು ಹತ್ತಿರದಲ್ಲೇ ಇದೆ. ಇಲ್ಲಿನ ಪಂಚಾಯಿತಿ ಯಲ್ಲಿ ಪ್ರತಿದಿನ ಹತ್ತು ಟ್ಯೂಬ್‌ ಲೈಟ್‌ಗಳು ಬೆಳಗಲು, ನಾಲ್ಕು ಫ್ಯಾನ್‌ಗಳು ತಿರುಗಲು, ತಲಾ ಎರಡು ಕಂಪ್ಯೂಟರ್‌, ಪ್ರಿಂಟರ್‌ ಹಾಗೂ ಒಂದು ಟಿ.ವಿ ಚಾಲನೆಯಲ್ಲಿ ಇರಲು ವಿದ್ಯುತ್‌ ಸಿಗು ತ್ತಿರುವುದು ಪಂಚಾಯಿತಿ ಕಟ್ಟಡದ ಮೇಲಿನ ಪುಟ್ಟ ಗಾಳಿಯಂತ್ರದಿಂದ.

ಹೆಬ್ಬಳ್ಳಿ ಗ್ರಾಮ ಪಂಚಾಯಿತಿಗೆ ಎರಡು ವರ್ಷಗಳ ಹಿಂದೆ ‘ಗಾಂಧಿ ಗ್ರಾಮ’ ಪುರಸ್ಕಾರ ಸಿಕ್ಕಿತ್ತು. ಪ್ರಶಸ್ತಿ ಜತೆ ಸಿಕ್ಕ ₹ 5 ಲಕ್ಷದಲ್ಲಿ ₹1.50 ಲಕ್ಷ ವ್ಯಯಿಸಿ ಗಾಳಿ ವಿದ್ಯುತ್ ಉತ್ಪಾದನಾ ಘಟಕವನ್ನು ಕಟ್ಟಡದ ಮೇಲೆ ಅಳವಡಿಸಲಾಗಿದೆ.

ಯಥೇಚ್ಛವಾಗಿ ಸಿಗುವ ಗಾಳಿಯಿಂದ ರೆಕ್ಕೆಗಳು ತಿರುಗುತ್ತಲೇ ಇರುತ್ತವೆ. ರೆಕ್ಕೆಗಳು ತಿರುಗಿದಂತೆಲ್ಲ ವಿದ್ಯುತ್‌ ಉತ್ಪಾದನೆಯಾಗಿ ಸಂಗ್ರಹವಾಗುತ್ತದೆ. ಹೆಸ್ಕಾಂ ಪೂರೈಸುವ ವಿದ್ಯುತ್‌ ಬಳಕೆಯನ್ನು ಕೈಬಿಟ್ಟಿದ್ದರಿಂದ ತಿಂಗಳಿಗೆ ₹2,500ದಷ್ಟು ವಿದ್ಯುತ್‌ ಬಿಲ್‌ ಉಳಿತಾಯವಾಗಿದೆ. ಅಲ್ಲದೆ, ಲೋಡ್‌ ಶೆಡ್ಡಿಂಗ್‌ನ ಭಯವಿಲ್ಲದೆ ನಿರಂತರವಾಗಿ ವಿದ್ಯುತ್‌ ಪಡೆಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪುಟ್ಟ ಗಾಳಿಯಂತ್ರದಿಂದ ವಿದ್ಯುತ್‌ ಉತ್ಪಾದನೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬನೆ ಸಾಧಿಸಿದ ರಾಜ್ಯದ ಮೊದಲ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ರತ್ನವ್ವ ಮಾರುತಿ ಸುಣಗಾರ ಹೆಮ್ಮೆಯಿಂದ ಹೇಳುತ್ತಾರೆ. ‘ಸರ್ಕಾರದ ಪ್ರತಿಯೊಂದು ಕಟ್ಟಡದಲ್ಲಿ ಸಹ ಇದೇ ರೀತಿ ವಿದ್ಯುತ್‌ ಉತ್ಪಾದನೆ ಆರಂಭಿಸಬೇಕು’ ಎಂಬ ಸಲಹೆಯನ್ನೂ ಅವರು ನೀಡುತ್ತಾರೆ.

ಈ ಪುಟ್ಟ ಪವನ ವಿದ್ಯುತ್‌ ಘಟಕದಿಂದ ಪ್ರತಿದಿನ ಸುಮಾರು 600 ವಾಟ್‌ ವಿದ್ಯುತ್‌ ಉತ್ಪಾದನೆ ಆಗುತ್ತದೆ. ಪಂಚಾಯಿತಿ ಕಟ್ಟಡಕ್ಕೆ 24 ಗಂಟೆಗಳ ವರೆಗೆ ನಿರಂತರ ಬಳಕೆಗೆ ಇದು ಸಾಕಾಗುತ್ತದೆ. ‘ಪವನ ವಿದ್ಯುತ್‌ ಘಟಕದ ನಿರ್ವಹಣೆ ವೆಚ್ಚವೂ ಅಷ್ಟಾಗಿಲ್ಲ’ ಎನ್ನುತ್ತಾರೆ ಗುರು ರೇಣುಕಾ ಎಲೆಕ್ಟ್ರಿಕಲ್ಸ್‌ನ ಮಹಾಂತೇಶ.

‘ಪ್ರತಿ ಗ್ರಾಮದಲ್ಲಿ ಇಂತಹ ಗಾಳಿ ಯಂತ್ರದ ಜೊತೆಗೆ ಸೌರಶಕ್ತಿ ಬಳಸಿಕೊಂಡು ವಿದ್ಯುತ್ ಅಭಾವವನ್ನು ಸಂಪೂರ್ಣ ತಪ್ಪಿಸಬಹುದು. ಇದಕ್ಕೆ ತಗಲುವ ವೆಚ್ಚ ಕಡಿಮೆ. ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಎಲ್ಲ ಪಂಚಾಯಿತಿ ಕಟ್ಟಡಗಳಲ್ಲಿ ಶೀಘ್ರವೇ ಈ ಸೌಲಭ್ಯವನ್ನು ವಿಸ್ತರಿಸುತ್ತೇವೆ’ ಎನ್ನುತ್ತಾರೆ ಧಾರವಾಡ ಜಿಲ್ಲಾ ಪಂಚಾಯಿತಿ ಸಿ.ಇ.ಒ ಸ್ನೇಹಲ್.

ವಿಂಡ್- ಸೋಲಾರ್ (ಪವನ ಹಾಗೂ ಸೌರಶಕ್ತಿ) ಹೈಬ್ರಿಡ್ ಯೋಜನೆ ಜಾರಿಗೆ ತಂದರೆ ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಸೌರಶಕ್ತಿ ಹಾಗೂ ಅನಂತರ ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ ರಾಜ್ಯದಲ್ಲಿ ವಿದ್ಯುತ್‌ ಅಭಾವ ನೀಗಲಿದೆ ಎಂದು ತಜ್ಞರು ಸಹ ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಂತೆ ವಿದ್ಯುತ್ ಉತ್ಪಾದನೆ ಆಗದೆ ಅನಿಯಮಿತ ವಿದ್ಯುತ್ ಕಡಿತದ ಸಮಸ್ಯೆ ಕೂಡ ಮಾಮೂಲಾಗಿದೆ. ಈ ಸಮಸ್ಯೆಗೆ ಪವನ ವಿದ್ಯುತ್‌ ತಕ್ಕ ಪರಿಹಾರ ಒದಗಿಸಬಲ್ಲುದು. ಸರ್ಕಾರ ಇಂತಹ ಪ್ರಯತ್ನಗಳ ಕಡೆಗೆ ತಿರುಗಿ ನೋಡಿ, ಪ್ರೋತ್ಸಾಹಿಸುವ ಕೆಲಸ ಮಾಡಬೇಕಷ್ಟೇ.

Comments
ಈ ವಿಭಾಗದಿಂದ ಇನ್ನಷ್ಟು
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

ಕರ್ನಾಟಕ ದರ್ಶನ
ಎಪ್ಪತ್ತೇಳು ಮಲೆಗಳ ಕಣಿವೆ ಗ್ರಾಮ!

16 Jan, 2018
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

ಕರ್ನಾಟಕ ದರ್ಶನ
ಬರಡಾದ ಬೆಟ್ಟದಲಿ ಬೀಜ ಬಿತ್ತಿದವರು...

16 Jan, 2018
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

ಕರ್ನಾಟಕ ದರ್ಶನ
ಮಡಿಕೆ ಮಣ್ಣಿನಲ್ಲಿ ಮೂಡಿದ ಬೆಳಕು

16 Jan, 2018
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

ಕರ್ನಾಟಕ ದರ್ಶನ
ಕಲ್ಲೂಡಿಯ ಹಪ್ಪಳ ಮಾಡಿತಲ್ಲ ಸಪ್ಪಳ!

9 Jan, 2018
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

ಕರ್ನಾಟಕ ದರ್ಶನ
ತೇರಿಲ್ಲದ ಜಾತ್ರೆಗೆ 100ರ ಸಂಭ್ರಮ

9 Jan, 2018