ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾದಾಟದ ಕಣ ಆಗುವುದು ಬೇಡ

Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಸಮ್ಮೇಳನದಲ್ಲಿ ರಾಜಕೀಯ ನಿಲುವು: ತಪ್ಪೇನಿದೆ?’ ಲೇಖನದಲ್ಲಿ (ಪ್ರ.ವಾ., ಪೃಥ್ವಿ ದತ್ತ ಚಂದ್ರ ಶೋಭಿ, ನ. 30) ಎತ್ತಿರುವ ಮುಖ್ಯ ಪ್ರಶ್ನೆಗೆ ಜಾರ್ಜ್ ಆರ್ವೆಲ್ ಹೇಳಿದನು ಎನ್ನಲಾದ ‘ಸಾಹಿತಿಯೊಬ್ಬನು ವ್ಯಕ್ತಿಯಾಗಿ, ನಾಗರಿಕನಾಗಿ, ಹೊರಗಿನವನಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಬಹುದು... ಇವುಗಳ ನಡುವೆ ಬರಹಗಾರನೊಬ್ಬ ಮಾಡಲೇಬೇಕಿರುವ ಕೆಲಸ, ಪಡೆದಿರಲೇಬೇಕಾದ ಎಚ್ಚರ- ತನ್ನ ಆಯ್ಕೆಯ ರಾಜಕೀಯ ಪಕ್ಷಕ್ಕೆ ಬರೆಯಬಾರದು, ತನ್ನ ಸಾಹಿತ್ಯಿಕ ನಿಷ್ಠೆಯನ್ನು ಸಂಪೂರ್ಣವಾಗಿ ಉಳಿಸಿಕೊಳ್ಳಬೇಕು’ ಎಂಬ ಅವರ ಕೊನೆಯ ವಾಕ್ಯದಲ್ಲೇ ಉತ್ತರವಿದೆ.

ಜನ ಈಗ ತಕರಾರು ಮಾಡುತ್ತಿರುವುದು ಆರ್ವೆಲ್ ಹೇಳಿದಂತೆ ಅವರು ನಡೆದುಕೊಂಡಿಲ್ಲ ಎಂಬ ಕಾರಣಕ್ಕೇನೆ. ಸಾಹಿತ್ಯವು ರಾಜಕೀಯದಿಂದ ಹೊರತಲ್ಲ– ಅದರಲ್ಲೂ ನಾವು ಪ್ರಜಾಪ್ರಭುತ್ವದಲ್ಲಿ ಇರುವಾಗ. ದೇಶದ ಇಂದಿನ ರಾಜಕಾರಣ ಸಾಗುತ್ತಿರುವ ದಿಕ್ಕು-ದೆಸೆ, ರಾಜಕೀಯ ವ್ಯಕ್ತಿಗಳು ಬಳಸುತ್ತಿರುವ ಭಾಷೆ, ದೇಶದ ಒಟ್ಟಾರೆ ಸಾಂಸ್ಕೃತಿಕ ಸ್ವರೂಪವನ್ನೇ ಹದಗೆಡಿಸುವ ರೀತಿಯಲ್ಲಿ ಸಾಗುತ್ತಿರುವ ಪಕ್ಷ ರಾಜಕಾರಣ... ಇವೇ ಮುಂತಾದ ವಿಷಯಗಳನ್ನು ಚರ್ಚಿಸಲು ಸಾಹಿತ್ಯ ಸಮ್ಮೇಳನ ಖಂಡಿತ ವೇದಿಕೆಯಾಗಬೇಕು.

ಆದರೆ, ನಮ್ಮ ಸದ್ಯದ ಸಂದರ್ಭದಲ್ಲಿ ಸಂವಿಧಾನದಲ್ಲಿ ಹೇಳಿರುವ ರೀತಿಯ ನಿಜವಾದ ಜಾತ್ಯತೀತ ಧೋರಣೆಯನ್ನು ಯಾವೊಂದು ರಾಜಕೀಯ ಪಕ್ಷವೂ ಉಳಿಸಿಕೊಂಡಿಲ್ಲ. ತಾನು ಹೇಳುತ್ತಿರುವುದು ಮತ್ತು ಮಾಡುತ್ತಿರುವುದೇ ಜಾತ್ಯತೀತ ತತ್ವ ಮತ್ತು ಅದರ ಅನುಷ್ಠಾನ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿವೆ. ರಾಜಕೀಯ ಭ್ರಷ್ಟಾಚಾರದಲ್ಲಿ ಒಂದನ್ನು ಮತ್ತೊಂದು ಮೀರಿಸುತ್ತಿವೆ. ಸದ್ಯ ಕನ್ನಡ ನಾಡಿನಲ್ಲಿ ಅಧಿಕೃತವಾಗಿ ಪ್ರಾದೇಶಿಕ ಪಕ್ಷವೆಂಬುದು ವಾಸ್ತವವಾಗಿ ಯಾವುದೂ ಇಲ್ಲ. ತನ್ನ ಪಕ್ಷಕ್ಕೆ ರಾಷ್ಟ್ರೀಯ ಅಧ್ಯಕ್ಷರೊಬ್ಬರು ಇದ್ದಾರೆ ಎಂದು ಪಕ್ಷವೊಂದು ಸ್ಪಷ್ಟವಾಗಿ ಬಿಂಬಿಸುತ್ತಿದ್ದರೂ ಅದು ವಾಸ್ತವದಲ್ಲಿ ರಾಜ್ಯದ ಒಂದು ಭಾಗಕ್ಕೆ ಮತ್ತು ಒಂದು ಜಾತಿಗೆ ಸೀಮಿತವಾದಂತಿದೆ. ಅಲ್ಲದೇ ಅದು ಕುಟುಂಬ ನಿಯಂತ್ರಿತ ಪಕ್ಷವಾಗಿದೆ. ಆದ್ದರಿಂದ ಆ ಯಾವುದೇ ಪಕ್ಷದ ಹೆಸರು ಹೇಳದೆ ಮಗುಮ್ಮಾಗಿ ಅವುಗಳು ಹೇಳಿಕೊಳ್ಳುವ ಧೋರಣೆಗಾಗಿ ಇಂಥ ಪಕ್ಷ ಅಥವಾ ಪಕ್ಷಗಳಿಗೆ ವೋಟು ಕೊಡಿ ಎಂದು ಹೇಳುವಂಥ ಕೆಲಸವನ್ನು ಅಂದರೆ ಚುನಾವಣಾ ಪ್ರಚಾರ ವೇದಿಕೆಯಲ್ಲಿ ಮಾಡಬೇಕಿರುವಂಥದ್ದನ್ನು ಸಾಹಿತ್ಯ ಸಮ್ಮೇಳನದಂಥ ವೇದಿಕೆಯಿಂದ ಮಾಡಬಾರದು ಎನ್ನುವುದಷ್ಟೇ ಸಾಹಿತ್ಯಾಸಕ್ತರ ನಿರೀಕ್ಷೆ. ಅವರು ಹೇಳುತ್ತಿರುವುದು ಸದ್ಯ ಅದನ್ನೇ.

‘ಬರಹಗಾರರು ಮತ್ತು ಕಲಾವಿದರಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ ಎನ್ನುವ ಮಾತು ನಮ್ಮಲ್ಲಿ ಆಗಾಗ ಕೇಳಿ ಬರುತ್ತದೆ. ಇದು ಅರ್ಥಹೀನ’ ಎಂದು ಹೇಳಿ ‘ಪ್ರತಿಯೊಬ್ಬ ಬರಹಗಾರನೂ ರಾಜಕೀಯದಲ್ಲಿ ಇರುವವನೇ. ಆದರೆ ಅದು ಯಾವ ಮತ್ತು ಯಾರ ರಾಜಕಾರಣದಲ್ಲಿ ಎನ್ನುವುದು ಮಾತ್ರ ನಮ್ಮ ಮುಂದಿರುವ ಪ್ರಶ್ನೆ’ ಎಂಬ ಗೂಗಿ ವಂಥಿಯಾಗೋ ಮಾತನ್ನು ಶೋಭಿ ಉಲ್ಲೇಖಿಸುತ್ತಾರೆ. ವ್ಯಕ್ತಿಗತ ನೆಲೆಯಲ್ಲಿ ಒಂದು ರಾಜಕೀಯ ಚಿಂತನೆ ಅಥವಾ ರಾಜಕೀಯ ಪಕ್ಷವೊಂದರ ಪರ ಸಮರ್ಥನೆ ಮಾಡಿದರೆ ಅದರಿಂದ ಏನೂ ತೊಂದರೆ ಇಲ್ಲ. ಆದರೆ ಅದು ಅಷ್ಟಕ್ಕೇ ನಿಲ್ಲುತ್ತದೆಯೆ? ಅದರಲ್ಲೂ ತನ್ನ ರಾಜಕೀಯ ಒಲವು ನಿಲುವುಗಳನ್ನು ಒತ್ತಟ್ಟಿಗಿಟ್ಟು ಸಾಹಿತ್ಯದ ಸಂದರ್ಭದಲ್ಲಿ ನಿಷ್ಪಕ್ಷಪಾತವಾಗಿ ಸಾಹಿತಿಗಳು ವರ್ತಿಸಲು ಸಾಧ್ಯವಾಗುತ್ತದೆಯೇ?

ಅದಕ್ಕೆ ಉತ್ತರಗಳು ನಮ್ಮ ಮುಂದೆ ಸೂಕ್ಷ್ಮರೂಪದಲ್ಲಿ ಈಗಾಗಲೇ ಕಾಣಿಸಿಕೊಳ್ಳತೊಡಗಿವೆ. ಕಾಂಗ್ರೆಸ್ ಸಾಹಿತಿಗಳು, ಕಮ್ಯುನಿಸ್ಟ್ ಸಾಹಿತಿಗಳು, ಬಿಜೆಪಿ ಸಾಹಿತಿಗಳು, ಜೆಡಿಎಸ್ ಸಾಹಿತಿಗಳು ಅಥವಾ ಎಡಪಂಥೀಯ ಸಾಹಿತಿಗಳು, ಬಲಪಂಥೀಯ ಸಾಹಿತಿಗಳು ... ಹೀಗೆ ಸ್ಥೂಲವಾಗಿ ಯಾರು ಯಾರೆಂದು ಕೆಲವರ ವಿಷಯದಲ್ಲಾದರೂ ಅರಿವಿಗೆ ಬರುತ್ತಿದೆ. ಈ ಮಧ್ಯೆ ನ್ಯೂಟ್ರಲ್ ಅಥವಾ ನಡುಪಂಥೀಯರನ್ನು ಹುಡುಕಬೇಕಾಗಿದೆ.

ಅಧಿಕಾರಕ್ಕೆ ಬರುವ ಪಕ್ಷವೊಂದಕ್ಕೆ ತನ್ನ ಧೋರಣೆಗಳನ್ನು ಬೆಂಬಲಿಸುವ ಸಾಹಿತಿಗಳು ಯಾರೆಂದು ಸ್ಥೂಲವಾಗಿ ಗೊತ್ತಿದ್ದು ಅಥವಾ ಗೊತ್ತು ಮಾಡಿಕೊಂಡು ಸರ್ಕಾರದ ಸಾಹಿತ್ಯಿಕ ಸಂಸ್ಥೆಗಳಲ್ಲಿ ಅಂಥವರನ್ನೇ ಸಾಧ್ಯವಾದಷ್ಟು ಮಟ್ಟಿಗೆ ಮುಖ್ಯಸ್ಥರಾಗಿ ನೆಲೆಯೂರಿಸುವ ಕೆಲಸವೂ ಕೆಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದೇನೂ ಸುಳ್ಳಲ್ಲ. ಹಾಗೆ ಮುಖ್ಯಸ್ಥರಾದವರು ತಮ್ಮ ರಾಜಕೀಯ ಒಲವಿನ ಗುಂಪಿನವರನ್ನೇ ಸದಸ್ಯರನ್ನಾಗಿ ಪ್ರತಿಷ್ಠಾಪಿಸುವುದೂ ಹಾಗಲ್ಲದವರನ್ನು ಕಡೆಗಣಿಸುತ್ತ ಬಂದಿರುವುದೂ ವಿರಳವಾಗಿಯಾದರೂ ಆಗುತ್ತಲೇ ಇದೆ. ಹಾಗೆಯೇ ಕೇಂದ್ರದ ಮಟ್ಟದಲ್ಲೂ ಬಲಪಂಥೀಯರು ಅಧಿಕಾರದಲ್ಲಿದ್ದಾಗ ತಮ್ಮ ಧೋರಣೆಯ ಮೂಗಿನ ನೇರಕ್ಕೆ ಇತಿಹಾಸ ಬರೆಯುವವರನ್ನು ಆಯ್ದು ಅವರಿಂದ ಇತಿಹಾಸ ಬರೆಸುವ– ತಿರುಚುವ ಇಲ್ಲವೆ ಶಿಕ್ಷಣ ಕ್ರಮ ರೂಪಿಸುವ ಕೆಲಸ ನಡೆದಿದೆ.

ಹಾಗೆಯೇ ಬಲಪಂಥೀಯ ಅಲ್ಲದ ಸರ್ಕಾರವಿದ್ದಾಗ ತನ್ನ ಧೋರಣೆಗೆ ಅನುಸಾರವಾಗಿ ಇತಿಹಾಸ ಬರೆಸುವ, ಶಿಕ್ಷಣ ಕ್ರಮ ರೂಪಿಸುವ ಕೆಲಸ ಈಗ್ಗೆ ಹಲವು ವರ್ಷಗಳಿಂದ ನಡೆದು ಬರುತ್ತಿರುವುದು ಕೂಡ ನಿಜವೇ ಆಗಿದೆ. ಇಂಥದು ಬೇಕೆ?

ರೂಸೊಗೆ ವಾಲ್ಟೇರ್ ಹೇಳಿದ ‘ನಿನ್ನ ಅಭಿಪ್ರಾಯದ ಒಂದಕ್ಷರವನ್ನೂ ನಾನು ಒಪ್ಪುವುದಿಲ್ಲ; ಆದರೆ ಅದನ್ನು ವ್ಯಕ್ತಪಡಿಸಲು ನಿನಗಿರುವ ಸ್ವಾತಂತ್ರ್ಯವನ್ನು ಕಾಪಾಡುವ ಸಲುವಾಗಿ ನನ್ನ ಪ್ರಾಣವನ್ನೇ ಕೊಟ್ಟೇನು’ ಎನ್ನುವಂಥ ನಿಷ್ಪಕ್ಷಪಾತ ದೃಷ್ಟಿಯನ್ನಾಗಲೀ ‘ಈ ಪುಸ್ತಕವನ್ನು ವೈಯಕ್ತಿಕವಾಗಿ ನಾನು ಮೆಚ್ಚುವುದಿಲ್ಲ; ಆದರೆ ಒಂದು ಸತ್ವಯುತ ಕೃತಿ ಇರಬೇಕಾದ್ದು ಹೀಗೆಯೇ ಅಥವಾ ಇದನ್ನು ಬರೆದವನನ್ನು ಕಂಡರೆ ನನಗಾಗುವುದಿಲ್ಲ. ಆದರೆ ಈ ಪುಸ್ತಕವನ್ನು ಮೆಚ್ಚದಿರುವುದು ಹೇಗೆ?’ ಎಂಬಂಥ ನಿರ್ವಿಕಾರ ದೃಷ್ಟಿಯನ್ನು ಅಥವಾ ವಿಮರ್ಶಾ ಮನೋಭಾವವನ್ನು ನಾವು ರಾಜಕೀಯ ಪಕ್ಷವೊಂದರ ಧೋರಣೆ ಮೆಚ್ಚುತ್ತ ಅದರಲ್ಲಿ ಸ್ಪರ್ಧಿಸಿದವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಕೂಡ ಮಾಡುವಂಥ ಸಾಹಿತಿಗಳಿಂದ ನಿರೀಕ್ಷಿಸಲು ಸಾಧ್ಯವೇ?

ಹಾಗಾಗಿ ಸಾಹಿತ್ಯದ ವೇದಿಕೆಯಲ್ಲಿ ರಾಜಕೀಯ ಚರ್ಚೆ ಅತ್ಯಂತ ಅಪೇಕ್ಷಿತವೇ. ಸಾಹಿತಿಗಳ ರಾಜಕೀಯ ನಿಲುವು ಪ್ರಕಟವಾಗುವುದು ಕೂಡ ಅನಪೇಕ್ಷಣೀಯವೇನಲ್ಲ. ಆದರೆ, ಆ ವೇದಿಕೆಯು ಮುಂದೆ ಆ ಸಾಹಿತಿಯ ಧೋರಣೆಯ ರಾಜಕೀಯ ಪಕ್ಷದ ಮೇಲಿನ ಒಲವಾಗಬಾರದು. ಈಗ ರಾಜಕೀಯ ಪಕ್ಷಗಳ ಧುರೀಣರು ಕಾದಾಡುತ್ತಿರುವ ಹಾಗೆ ಸಾಹಿತ್ಯದ ವೇದಿಕೆಯೂ ಆಯಾ ಪಕ್ಷದ ಸದಸ್ಯತ್ವ ಪಡೆದುಕೊಂಡ ಇಲ್ಲವೆ ಅವುಗಳ ಧೋರಣೆ ಆರಾಧಿಸುವ ಸಾಹಿತಿಗಳ ಕಾದಾಟದ ಕಣವಂತೂ ಆಗಲೇಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT