ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ

Last Updated 5 ಡಿಸೆಂಬರ್ 2017, 5:52 IST
ಅಕ್ಷರ ಗಾತ್ರ

ಸಿಂಧನೂರು: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರಾಜ್ಯದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು. ಮುಸ್ಲಿಂ ಸಮಾಜದ ಬಹುದಿನಗಳ ಬೇಡಿಕೆಯಾದ ಸಾಚಾರ್ ಸಮಿತಿಯನ್ನು ಜಾರಿಗೊಳಿಸಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು.

ನಗರದ ಸತ್ಯಗಾರ್ಡನ್‌ನಲ್ಲಿ ಜೆಡಿಎಸ್ ತಾಲ್ಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ‘ಮನೆ-ಮನೆಗೆ ಕುಮಾರಣ್ಣ’ ಹಾಗೂ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಬದಲಾಗಿ ಒಬ್ಬರ ಮೇಲೊಬ್ಬರು ಗೂಬೆ ಕೂರಿಸುವ ಕೆಲಸದಲ್ಲಿ ನಿರತರಾಗಿ ರೈತ ಹಿತ ಕಡೆಗಣಿಸಿದ್ದಾರೆ. ಈ ಹಿಂದೆ ಆಡಳಿತ ನಡೆಸಿದ ಜೆಡಿಎಸ್ ನೇತೃತ್ವದ ಸರ್ಕಾರ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಸ್ಪಂದಿಸಿ ರೈತಪರವೆಂದು ಸಾಬೀತು ಪಡಿಸಿದೆ’ ಎಂದು ಹೇಳಿದರು.

‘ರಾಜ್ಯದಾದ್ಯಂತ ಜೆಡಿಎಸ್‌ಗೆ ಒಲವು ವ್ಯಕ್ತವಾಗುತ್ತಿದ್ದು, ವಿಶೇಷವಾಗಿ ಯುವಕರು ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅಲ್ಲದೇ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಮೆಚ್ಚಿ ಪಕ್ಷ ಬೆಂಬಲಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದ್ದು, ದಲಿತ ವರ್ಗಕ್ಕೆ ಸೇರಿದ ನಾಯಕರನ್ನು ಉಪಮುಖ್ಯಮಂತ್ರಿಯಾಗಿ ಮಾಡಲಾಗುವುದು. ಮುಸ್ಲಿಂ ಸಮುದಾಯವನ್ನು ದೇವೇಗೌಡರ ಕುಟುಂಬ ಯಾವಾಗಲೂ ಪ್ರೀತಿ, ವಿಶ್ವಾಸದಿಂದ ಕಾಣುತ್ತದೆ. ಸ್ಥಳೀಯ ಸಿಂಧನೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾಡಗೌಡರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ಯುವ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ರಾಜ್ಯವನ್ನು ಉತ್ತಮ ರೀತಿಯಲ್ಲಿ ತೆಗದುಕೊಂಡು ಹೋಗುವ ಶಕ್ತಿ ಕುಮಾರಸ್ವಾಮಿ ಅವರಲ್ಲಿದೆ ಎಂಬುದು ಕಂಡು ಬಂಗಾರಪ್ಪನವರು ಜೆಡಿಎಸ್‌ ಬೆಂಬಲಿಸಿದರು. ಭಾಷೆ, ನೆಲ, ಜಲ ಇನ್ನಿತರ ವಿಷಯಗಳಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಆದರೆ ರಾಷ್ಟ್ರೀಯ ಪಕ್ಷಗಳು ಈ ಬಗ್ಗೆ ಕಾಳಜಿ ವಹಿಸಿಲ್ಲ. ಇವುಗಳ ವಿರುದ್ಧ ಹೋರಾಡಲು ಮತ್ತು ಕೇಂದ್ರ ಸರ್ಕಾರವನ್ನು ಅಲುಗಾಡಿಸಲು ರಾಜ್ಯದ ಜನತೆ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು’ ಎಂದ ಮನವಿ ಮಾಡಿದರು.

‘ಈಗಾಗಲೇ ರಾಜ್ಯ ಸರ್ಕಾರ ರೈತರ ₹ 50 ಸಾವಿರ ಸಾಲಮನ್ನಾ ಮಾಡಿದೆ. ಆದರೆ ಕೇಂದ್ರ ಬಿಜೆಪಿ ಸರ್ಕಾರ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮತ್ತು 18 ಜನ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಾಲಮನ್ನಾ ಮಾಡಿಸದೆ ಜಯಂತಿ ಆಚರಣೆ ವಿಚಾರದಲ್ಲಿ ಗುದ್ದಾಡುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅವನತ್ತಿಯತ್ತ ಸಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಬೇರೆಯವರು ಬೇಕಾಗಿಲ್ಲ. ರಾಹುಲ್‌ಗಾಂಧಿ ಒಬ್ಬರು ಸಾಕು’ ಎಂದು ವ್ಯಂಗ್ಯವಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ‘ನಾನು ಸಿಂಧನೂರು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಯಾವುದೇ ತಲೆ ತಗ್ಗಿಸುವಂತ ಕೆಲಸ ಎಂದಿಗೂ ಮಾಡಿಲ್ಲ’ ಎಂದು ಹೇಳಿದರು.

ಜೆಡಿಎಸ್ ಮಾನ್ವಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಜಾವೆಂಕಟಪ್ಪ ನಾಯಕ, ಮಸ್ಕಿ ಅಭ್ಯರ್ಥಿ ರಾಜಾಸೋಮನಾಥ ನಾಯಕ, ಮುಖಂಡ ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಅಂಗವಿಕಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಸತ್ಯನಾರಾಯಣ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸುಗೂರು, ಯುವ ಘಟಕದ ಜಿಲ್ಲಾ ಅಧ್ಯಕ್ಷ ಎಂ.ಪವನಕುಮಾರ, ಮುಖಂಡರಾದ ವಿರೂಪಾಕ್ಷಗೌಡ ಗಂಗಾವತಿ, ಆರ್.ಕೆ.ರಡ್ಡಿ ಗಂಗಾವತಿ, ಸಮೀರ ರಹೆಮಾನ್, ಅಶೋಕ ಉಮಲೂಟಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಉದ್ಯಮಿ ಬಿ.ಹರ್ಷ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹರ್ಷ ಅವರನ್ನು ಪಕ್ಷದ ಮುಖ್ಯ ಸಂಚಾಲಕರನ್ನಾಗಿ ನೇಮಕ ಮಾಡಿಲಾಯಿತು. ಇದಕ್ಕೂ ಮುನ್ನ ಗಂಗಾವತಿ ಮುಖ್ಯರಸ್ತೆಯಲ್ಲಿರುವ ರಿಲಿಯನ್ಸ್ ಪೆಟ್ರೊಲ್ ಬಂಕ್‌ನಿಂದ ಪ್ರಮುಖ ಬೀದಿಗಳಲ್ಲಿ ಪ್ರಜ್ವಲ್ ರೇವಣ್ಣ ಅವರೊಂದಿಗೆ ಬೈಕ್‌ ರ‍್ಯಾಲಿ ನಡೆಸಲಾಯಿತು.

* * 

ತುಂಗಭದ್ರಾ ಜಲಾಶಯದಿಂದ ರೈತರ ಬೆಳೆಗೆ ನೀರು ಬಿಡುವ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಮಾರ್ಚ್ 30ರವರೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು.
ಪ್ರಜ್ವಲ್ ರೇವಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT