ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಕೊಳ್ಳದ ನೀರಾವರಿಗೆ ಲಕ್ಷ ಕೋಟಿ ನೆರವು

Last Updated 5 ಡಿಸೆಂಬರ್ 2017, 6:35 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕಾಲಿಗೆ ಬಿದ್ದಾದರೂ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ತರುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಜಿಲ್ಲೆಯ ಕಮಲಾಪುರದ ರಾಂಪುರೆ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಕೃಷ್ಣಾ ಯೋಜನೆಗಳಿಗಾಗಿ 50 ಖರ್ಚು ಮಾಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದರೆ, 700 ಕೋಟಿಯೂ ಖರ್ಚಾಗಿಲ್ಲ. ಎಂ.ಬಿ.ಪಾಟೀಲ ಬೇಜವಾಬ್ದಾರಿ ಸಚಿವ’ ಎಂದು ಅವರು ಹರಿಹಾಯ್ದರು.

‘ದೇಶದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಹಿಮಾಚಲ ಪ್ರದೇಶ, ಗುಜರಾತ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಆನಂತರ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ಮುಖಮಾಡಲಿದ್ದಾರೆ. ಇಲ್ಲಿ 150 ಕ್ಷೇತ್ರಗಳಲ್ಲಿ ಗೆದ್ದು ಸಿದ್ದರಾಮಯ್ಯ, ದೇವೇಗೌಡ ಅವರ ರಾಜಕೀಯ ಕಂಪೆನಿಗಳ ಬಾಗಿಲು ಮುಚ್ಚಿಸಲಾಗುವುದು’ ಎಂದರು.

‘ಸಿದ್ದರಾಮಯ್ಯ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಹಣವೇ ಇಲ್ಲ. ಬರೀ ಶಂಕುಸ್ಥಾಪನೆಯಲ್ಲಿ ತೊಡಗಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಿವೆ. ಆದರೆ, ರಾಜ್ಯ ಸರ್ಕಾರ ₹50 ಸಾವಿರ ಸಾಲಮನ್ನಾ ಮಾಡಿದೆ. ಅದಕ್ಕೂ ನೂರೆಂಟು ಷರತ್ತು ವಿಧಿಸಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಪ್ರತಾಪ್‌ ಸಿಂಹ ಅವರ ಬಂಧನ ಖಂಡಿಸಿದ ಅವರು, ‘ಪೊಲೀಸರು ಪ್ರತಾಪ್‌ ಸಿಂಹ ಅವರನ್ನು ರಾತ್ರಿ 11ರ ವರೆಗೆ ವಾಹನದಲ್ಲಿ ಸುತ್ತಾಡಿಸಿದ್ದಾರೆ. ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಧಾರ್ಮಿಕ ಆಚರಣೆ, ಉತ್ಸವಗಳಿಗೆ ಅಡ್ಡಿಪಡಿಸುವ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು. ಇದಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ‘ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಲಿದೆ. ಇದಕ್ಕಾಗಿ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಹೇಳಿದರು.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ‘ಮತಕ್ಕಾಗಿ ದಲಿತರು, ಹಿಂದುಳಿದವರನ್ನು ಬಳಸಿಕೊಂಡ ಸಿದ್ದರಾಮಯ್ಯ ಆ ಸಮುದಾಯಗಳಿಗೆ ಏನೂ ಮಾಡಿಲ್ಲ. ನಾವು ದಲಿತರ ಮನೆಗೆ ಉಪಾಹಾರಕ್ಕೆ ಹೋದರೆ ಪ್ರಶ್ನೆ ಮಾಡುವ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಅವರಿಗೆ ದಲಿತರ ಮನೆ ಹುಡುಗಿ ಕೊಟ್ಟು ಮದುವೆ ಮಾಡಿಸಲಿ’ ಎಂದು ಸವಾಲು ಹಾಕಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಆರ್‌ಎಸ್‌ಎಸ್‌ ಹಾಗೂ ಬಿಜೆಪಿಗೆ ಸೇರಿದ 19 ಕಾರ್ಯಕರ್ತರ ಕಗ್ಗೊಲೆಯಾಗಿದೆ’ ಎಂದು ದೂರಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ಸಂಸದರಾದ ಭಗವಂತ ಖೂಬಾ, ಶ್ರೀರಾಮುಲು, ಶಾಸಕರಾದ ಬಿ.ಜಿ.ಪಾಟೀಲ, ದತ್ತಾತ್ರೇಯ ಸಿ ಪಾಟೀಲ ರೇವೂರ, ಕೆ.ಬಿ.ಶಾಣಪ್ಪ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಚವಾಣ, ಜಿ.ಪಂ ಸದಸ್ಯ ಬಸವರಾಜ ಮತ್ತಿಮೂಡ, ಜಿಲ್ಲಾ ಘಟಕದ ಉಪಾಧ್ಯಕ್ಷ ನಾಮದೇವ ರಾಠೋಡ, ಕಾರ್ಯದರ್ಶಿ ರವಿ ಬಿರಾದಾರ, ಸುಭಾಷ್ ಬಿರಾದಾರ ಇದ್ದರು. ಪರಶುರಾಮ ನಸಲವಾಯಿ ಸ್ವಾಗತಿಸಿ, ರಾಜು ಕೋಟಿ ವಂದಿಸಿದರು.

ಕೇಂದ್ರದ ಯೋಜನೆಗೆ ಜಿಲ್ಲೆ ಆಯ್ಕೆ
‘ರಾಷ್ಟ್ರೀಯ ಕೈಗಾರಿಕಾ ನೀತಿ ಅಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗೆ ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಯಡಿಯೂರಪ್ಪ ತಿಳಿಸಿದರು.

‘ಇದರಿಂದ ಈ ಎರಡು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ವೇಗ ದೊರೆಯಲಿದೆ. 2 ಲಕ್ಷ ಮಂದಿಗೆ ನೇರವಾಗಿ, 3 ಲಕ್ಷ ಮಂದಿಗೆ ಪರೋಕ್ಷವಾಗಿ ಉದ್ಯೋಗಾವಕಾಶಗಳು ದೊರೆಯಲಿವೆ. ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರವೂ ಹಣ ನೀಡಿದೆ’ ಎಂದು ಅವರು ತಿಳಿಸಿದರು.

ಹೆಸರು ಮರೆತು, ಬಳಿಕ ನೆನಪಿಸಿಕೊಂಡರು
ಅತಿಥಿಗಳನ್ನು ಸ್ವಾಗತಿಸಿದ ಪರಶುರಾಮ ನಸಲವಾಯಿ ಅವರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರಮುಖ ನಾಯಕರ ಹೆಸರು ಪ್ರಸ್ತಾಪಿಸಲಿಲ್ಲ. ರೇವೂನಾಯಕ ಬೆಳಮಗಿ, ಬಾಬುರಾವ್ ಚವಾಣ ಅವರನ್ನು ಮಾತ್ರ ಸ್ವಾಗತಿಸಿದರು. ಗ್ರಾಮೀಣ ಕ್ಷೇತ್ರದ ಪ್ರಮುಖ ನಾಯಕರಿಗೆ ಸ್ವಾಗತ ನೀಡದ್ದನ್ನು ಮನಗಂಡ ಅವರು, ಅರವಿಂದ ಲಿಂಬಾವಳಿ ಅವರ ಭಾಷಣದ ನಂತರ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮತ್ತಿಮೂಡ, ಮುಖಂಡರಾದ ನಾಮದೇವ ರಾಠೋಡ, ರಾಜು ಚವಾಣ್ ಅವರ ಹೆಸರು ಪ್ರಸ್ತಾಪಿಸಿದರು. ಆಗ ಮೈದಾನದಲ್ಲಿ ಸೇರಿದ್ದ ಅಭಿಮಾನಿ ಬಳಗ ಕರತಾಡನ, ಶಿಳ್ಳೆ, ಕೇಕೆ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT