ದೊಡ್ಡಬಳ್ಳಾಪುರ

ಬೈರಗೊಂಡ್ಲು ಜಲಾಶಯ ತೀವ್ರ ವಿರೋಧ

ರೈತರು ಗಾಳಿ ಸುದ್ಧಿಗಳನ್ನು ನಂಬಿ ಆತಂಕಕ್ಕೆ ಒಳಗಾಗಬಾರದು. ಜಲಾಶಯದ ಯಾವುದೇ ರೀತಿಯ ಮಾಹಿತಿ ಬೇಕಿದ್ದರು ಅದನ್ನು ರೈತರು ಪಡೆದು ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು

ದೊಡ್ಡಬಳ್ಳಾಪುರ:ಎತ್ತಿನಹೊಳೆ ಯೋಜನೆ ಬಯಲು ಸೀಮೆಯ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ರೂಪಿಸಲಾಗಿದೆ ಎಂದು ಬೈರಗೊಂಡ್ಲು ಜಲಾಶಯ ನಿರ್ಮಾಣ ವಿಶೇಷ ಭೂಸ್ವಾಧೀನ ಅಧಿಕಾರಿ ಆರತಿ ಆನಂದ್‌ ತಿಳಿಸಿದರು.

ಇಲ್ಲಿ ನಡೆದ ಬೈರಗೊಂಡ್ಲು ಜಲಾಶಯ ಕುರಿತುಂತೆ ನಡೆದ ಅಧಿಕೃತ ಗ್ರಾಮ ಸಭೆ ಮಾತನಾಡಿದ ಅವರು, ಜಲಾಶಯ ನಿರ್ಮಾಣದಿಂದ ಭೂಮಿಯನ್ನು ಕಳೆದುಕೊಳ್ಳುವ, ಸಂಪೂರ್ಣವಾಗಿ ಮುಳುಗಡೆಯಾಗಲಿರುವ ಗ್ರಾಮಗಳ ಜನರ ಸಾಮಾಜಿಕ ಸ್ಥಿತಿಗತಿಯ, ಜೀವನ ವಿಧಾನ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಇದರ ಆಧಾರದ ಮೇಲೆಯೇ ಭೂ ಸ್ವಾಧಿನ ಹಾಗೂ ಪರಿಹಾರ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

2013 ಭೂ ಸ್ವಾಧಿನ ಕಾಯಿದೆಯಂತೆಯೇ ರೈತರಿಗೆ ಪರಿಹಾರವನ್ನು ನೀಡಲಾಗುತ್ತದೆ. ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ರೂಪಿಸಲಾಗಿದ್ದು ಇದನ್ನು ಎಲ್ಲರು ಸ್ವಾಗತಿಸಬೇಕಿದೆ. ರೈತರಿಂದ ಬಲವಂತವಾಗಿ ಭೂಮಿಯನ್ನು ಕಿತ್ತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗಲಿರುವ ಗರುಡಗಲ್ಲು, ಲಕ್ಕೇನಹಳ್ಳಿ ಗ್ರಾಮಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಹಾಗೂ ಮುಳುಗಡೆಯಾಗಲಿರುವ ಮನೆಗಳಿಗೆ ಲೋಕೋಯೋಗಿ ಇಲಾಖೆ ಎಂಜಿನಿಯರ್‌ಗಳು ವೈಜ್ಞಾನಿಕವಾಗಿ ಬೆಲೆ ನಿಗದಿಗೊಳಿಸಲಿದ್ದಾರೆ. ರೈತರ ಯಾವುದೇ ಒಂದು ಕುಟುಂಬವನ್ನು ಬೀದಿಗೆ ಬೀಳುವಂತಹ ಕೆಲಸವನ್ನು ಸರ್ಕಾರ ಮಾಡುವುದಿಲ್ಲ ಎಂದರು.

ರೈತರು ಗಾಳಿ ಸುದ್ಧಿಗಳನ್ನು ನಂಬಿ ಆತಂಕಕ್ಕೆ ಒಳಗಾಗಬಾರದು. ಜಲಾಶಯದ ಯಾವುದೇ ರೀತಿಯ ಮಾಹಿತಿ ಬೇಕಿದ್ದರು ಅದನ್ನು ರೈತರು ಪಡೆದು ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು ಸೂಚಿಸಿದರು.

ಈಗಾಗಲೇ ಹಾಸನ ಜಿಲ್ಲೆಯ ಸಕಲೇಶ್ವರ ಸಮೀಪದ ಎತ್ತಿನಹೊಳೆಯಲ್ಲಿ ಶೇ 58 ರಷ್ಟು ಕೆಲಸ ಮುಕ್ತಾಯವಾಗಿದೆ. ಹೀಗಾಗಿ ಜಲಾಶಯ ನಿರ್ಮಾಣ ಕುರಿತಂತೆ ರೈತರೊಂದಿಗೆ ಇದೇ ಪ್ರಥಮ ಬಾರಿಗೆ ಗ್ರಾಮ ಸಭೆಯನ್ನು ನಡೆಸಲಾಗುತ್ತಿದೆ. ರೈತರು ತಮ್ಮ ಅನುಮಾನಗಳನ್ನು ಅಧಿಕಾರಿಗಳಿಂದ ಕೇಳಿ ಬಗೆಹರಿಸಿಕೊಳ್ಳಬೇಕು ಎಂದರು.

ಜಲಾಶಯ ನಿರ್ಮಾಣಕ್ಕೆ ಸ್ವಾಧೀನಗೊಳ್ಳುವ ಭೂಮಿಗೆ ಸಂಬಂಧಿಸಿದಂತೆ ಕಂದಾಯ ವಿಭಾಗದಲ್ಲಿ ಇರುವ ಎಲ್ಲ ವಿವಾದಗಳನ್ನು ತ್ವರಿತವಾಗಿ ಇತ್ಯಾರ್ಥಗೊಳಿಸಲು ಹಾಗೂ ಪೋಡಿ ಮುಕ್ತಗೊಳಿಸಲು ಉಪವಿಭಾಗಾಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ರಾಜ್ಯ ರೈತ ಸಂಘ(ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ವೀರೇಂದ್ರಕುಮಾರ್‌ ಮಾತನಾಡಿ, ನಮ್ಮ ನಿರ್ಧಾರ ಅಚಲ ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧ ಇಲ್ಲ ಎಂದರು.

ಬೈರಗೊಂಡ್ಲು ಜಲಾಶಯ ನಿರ್ಮಾಣ ಅವೈಜ್ಞಾನಿಕ. ಎತ್ತಿನಹೊಳೆ ನೀರು ಸಂಗ್ರಹಕ್ಕೆ ಈಗಾಗಲೇ ರೈತ ಸಂಘದ ವತಿಯಿಂದ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಚ್ಚೇನಹಳ್ಳಿ ಗ್ರಾಮದ ನಿವಾಸಿ ದೊಡ್ಡನಾಗಪ್ಪ ಮಾತನಾಡಿ, ಮಳೆ ಬರುವ ಭೀತಿಯಿಂದ ರೈತರು ರಾಗಿ ಕೊಯ್ಲಿನಲ್ಲಿ ತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮ ಸಭೆ ನಡೆಸಿದರೆ ರೈತರು ಕೆಲಸ ಬಿಟ್ಟು ಹೇಗೆ ಬಂದು ಸಭೆಯಲ್ಲಿ ಭಾಗವಹಿಸಲು ಹಾಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಮಂಗಳವಾರ ಸಂಸತ್‌ ಸದಸ್ಯ ಎಂ.ವೀರಪ್ಪಮೊಯಿಲಿ ಅವರು ಭಾಗವಹಿಸುವ ಗ್ರಾಮ ಸಭೆಯನ್ನು ಬಹಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ.

ಭೂಮಿ ಕಳೆದುಕೊಳ್ಳುವ ರೈತರ ತೀವ್ರ ವಿರೋಧದ ನಡುವೆ ಎತ್ತಿನಹೊಳೆ ನೀರು ಸಂಗ್ರಹಿಸಲು ಸೋಮವಾರ ಗ್ರಾಮ ಸಭೆ ನಡೆಸಲಾಯಿತು. ಸಾಸಲು ಹೋಬಳಿಯ ಗರುಡಗಲ್ಲು ಸಮೀಪ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಜಲಾಶಯ ಕುರಿತುಂತೆ ಅಧಿಕಾರಿಗಳಿಂದ ಅಧಿಕೃತ ಗ್ರಾಮ ಸಭೆ ನಡೆಯಿತು.

ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡುವುದಿಲ್ಲ. ನೀರು ಸಂಗ್ರಹಣೆಗೆ ನಾವು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಜಾರಿಗೆ ತನ್ನಿ ಎಂದು ಘೋಷಣೆ ಕೂಗಿ ಸಭೆ ಬಹಿಷ್ಕರಿಸಿ ಹೊರನಡೆದರು.

ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಅನಿತಾ ರಾಜಗೋಪಾಲ್‌, ಸಾಸಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ರಾಜಣ್ಣ, ಉಪವಿಭಾಗಾಧಿಕಾರಿ ಎನ್‌.ಮಹೇಶ್‌ಬಾಬು, ತಹಶೀಲ್ದಾರ್‌ ಬಿ.ಎ.ಮೋಹನ್‌ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

ದೊಡ್ಡಬಳ್ಳಾಪುರ
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

27 Mar, 2018
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

ಆನೇಕಲ್‌
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

27 Mar, 2018
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

ವಿಜಯಪುರ
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

27 Mar, 2018

ವಿಜಯಪುರ
ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮನವಿ

ಪ್ರತಿ ವಾರ್ಡಿಗೊಂದರಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು...

24 Mar, 2018
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

ದೊಡ್ಡಬಳ್ಳಾಪುರ
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

24 Mar, 2018