ಬಳ್ಳಾರಿ

ಕಳಪೆ ಕಾಮಗಾರಿ: ಸದಸ್ಯರ ಆಕ್ಷೇಪ

‘ಘಟನೋತ್ತರ ಮಂಜೂರಾತಿಯನ್ನು ಪಡೆಯುವ ವೇಳೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲ್ಲ. ಮಂಜೂರಾತಿ ಪಡೆದ ಬಳಿಕ ಕೋಟ್ಯಂತರ ರೂಪಾಯಿ ಅನುದಾನ ಖರ್ಚಾಗಿದೆ.

ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಗುಂಡುಮುಣುಗು ಕ್ಷೇತ್ರದ ಸದಸ್ಯೆ ರತ್ನಮ್ಮ ಮಾತನಾಡಿದರು

ಬಳ್ಳಾರಿ: ನಿಯಮಿತವಾಗಿ ನಡೆಯದ ಸಾಮಾನ್ಯ ಸಭೆಯ ಕುರಿತು ಸದಸ್ಯರ ಆಕ್ಷೇಪ, ಕಳಪೆಯಾಗಿರುವ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಮೂರನೆಯವರಿಂದ ಪರಿಶೀಲಿಸುವ ನಿರ್ಧಾರ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯೊಂದಿಗೆ ಸದಸ್ಯೆ ವಾಗ್ವಾದ,.. ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಪ್ರಮುಖ ಅಂಶಗಳು ಇವು.

ಸದಸ್ಯರಾದ ಆನಂದ್‌, ಎ.ಎಂ.ಜೆ.ಹರ್ಷವರ್ಧನ್‌ ಸಭೆಯ ಆರಂಭದಲ್ಲೇ ಆಕ್ಷೇಪಿಸಿ, ‘ಸಾಮಾನ್ಯ ಸಭೆಗಳು ನಿಯಮಿತವಾಗಿ ನಡೆಯದೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ದೊರಕುತ್ತಿಲ್ಲ’ ಎಂದು ದೂರಿದರು.

‘ಘಟನೋತ್ತರ ಮಂಜೂರಾತಿಯನ್ನು ಪಡೆಯುವ ವೇಳೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡಲ್ಲ. ಮಂಜೂರಾತಿ ಪಡೆದ ಬಳಿಕ ಕೋಟ್ಯಂತರ ರೂಪಾಯಿ ಅನುದಾನ ಖರ್ಚಾಗಿದೆ. ಅಧಿಕಾರಿಗಳು ಸದಸ್ಯರನ್ನು ಕತ್ತಲಲ್ಲಿಟ್ಟಿದ್ದಾರೆ’ ಎಂದು ಸದಸ್ಯ ಅಲ್ಲಂ ಪ್ರಶಾಂತ್‌ ವಿಷಾದಿಸಿದರು.

‘ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡದೆ ಸಾಮಾನ್ಯ ಸಭೆಯನ್ನು ನಡೆಸಲು ಅವಕಾಶವಿರಲಿಲ್ಲ. ಈಗ ಸದಸ್ಯರ ಆಯ್ಕೆಯಾಗಿದೆ. ಇದೇ ಸಭೆಯಲ್ಲಿ ಮುಂದಿನ ಸಾಮಾನ್ಯ ಸಭೆಯ ದಿನವನ್ನು ನಿಗದಿ ಮಾಡಬಹುದು’ ಎಂದರು.

ಮೂರನೆಯವರಿಂದ ಪರಿಶೀಲನೆ: ‘ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮತ್ತು ಅವುಗಳಿಗೆ ಬಳಸುತ್ತಿರುವ ಸಾಮಗ್ರಿಗಳ ಗುಣಮಟ್ಟದ ಕುರಿತು ಮೂರನೆಯವರಿಂದ ಪರಿಶೀಲನೆ ನಡಸಿ, ಮುಂದಿನ ಸಾಮಾನ್ಯ ಸಭೆಯ ಹೊತ್ತಿಗೆ ವರದಿ ಸಲ್ಲಿಸಬೇಕು’ ಎಂದು ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು. ‘ಪರಿಶೀಲನೆ ಹೊಣೆಯನ್ನು ನಗರದ ಬಿಐಟಿಎಂ ಕಾಲೇಜಿನ ಸಿವಿಲ್ ವಿಭಾಗಕ್ಕೆ ವಹಿಸಿ’ ಎಂದು ಸ್ಪಷ್ಟಪಡಿಸಿದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸುವ ಹೊಣೆಯನ್ನು ಕಲಬುರಗಿಯ ಪಿಡಿಎ ಎಂಜನಿಯರ್ ಕಾಲೇಜಿಗೆ ವಹಿಸಲು ತೀರ್ಮಾನಿಸಲಾಗಿದೆ’ ಎಂದು ಎಂದು ಸದಸ್ಯೆ ಉಮಾದೇವಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಉಸುಗಿಲ್ಲದೆ ಹೆಲಿಪ್ಯಾಡ್‌ ನಿರ್ಮಾಣ: ‘ಕೊಟ್ಟೂರಿನಲ್ಲಿ ಉಸುಕು ಬಳಸದೆಯೇ ಹೆಲಿಪ್ಯಾಡ್‌ ನಿರ್ಮಿಸಲಾಗುತ್ತಿದೆ’ ಎಂಬ ಸದಸ್ಯರೊಬ್ಬರ ದೂರಿಗೆ ಪ್ರತಿಕ್ರಿಯಿಸಿದ ಸಿಇಓ, ‘ಹೈ–ಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಮಂಡಳಿ ಕಾರ್ಯದರ್ಶಿಯಾಗಿರುವ ಪ್ರಾದೇಶಿಕ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದರು.

ಅಭಿವೃದ್ಧಿ ಅಧಿಕಾರಿ ಕೊರತೆ: ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ‘199 ಪಂಚಾಯಿತಿಗಳ ಪೈಕಿ 115ರಲ್ಲಿ ಮಾತ್ರ ಅಭಿವೃದ್ಧಿ ಅಧಿಕಾರಿಗಳಿದ್ದಾರೆ. ಅವರಿಗೇ ಹೆಚ್ಚುವರಿ ಪಂಚಾಯಿತಿಗಳ ಹೊಣೆ ಹೊರಿಸಲಾಗಿದೆ. ಅಕ್ರಮ ನಡೆಸಿದ ಕಾರಣಕ್ಕೆ ಹಲವರು ಅಮಾನತ್ತಾಗಿದ್ದಾರೆ. ಒಂದು ತಿಂಗಳಲ್ಲಿ ಹೊಸಬರ ನೇಮಕವಾಗುವ ನಿರೀಕ್ಷೆ ಇದ್ದು, ಸಮಸ್ಯೆ ಪರಿಹಾರಗೊಳ್ಳಲಿದೆ’ ಎಂದರು.

ಸಹಕರಿಸಿ:‘ವಿವಿಧ ಯೋಜನೆಗಳ ಕಾನೂನು ಆಯಾಮದ ಕುರಿತು ಗ್ರಾಮೀಣ ಮಟ್ಟದಲ್ಲಿ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ನಿರ್ಧರಿಸಿದ್ದು, ಸದಸ್ಯರು, ಅಧಿಕಾರಿಗಳು ಸಹಕರಿಸಬೇಕು’ ಎಂದು ಜಿ.ಪಂ. ಅಧ್ಯಕ್ಷೆ ಸಿ.ಭಾರತಿ ಕೋರಿದರು, ಉಪಾಧ್ಯಕ್ಷೆ ಪಿ.ದೀನಾ ಉಪಸ್ಥಿತರಿದ್ದರು.

‘ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ಕೇಳುತ್ತಿದ್ದೇವೆಯೇ ಹೊರತು, ನಿಮ್ಮನ್ನು ನಾವು ಲಂಚ ಕೇಳುತ್ತಿಲ್ಲ’ ಎಂದು ಗುಂಡುಮುಣುಗು ಕ್ಷೇತ್ರದ ಸದಸ್ಯೆ ರತ್ನಮ್ಮ ಅವರು ಡಾ.ರಾಜೇಂದ್ರ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದು ಸಭೆಯನ್ನು ಚಕಿತಗೊಳಿಸಿತು,
‘ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ನರೇಗ ಅಡಿಯಲ್ಲಿ ಕೆಲಸ ಮಾಡದೇ ಇರುವವರೆಗೂ ಕೂಲಿ ಪಾವತಿಸಲಾಗಿದೆ. ಬೇಸಿಗೆಯಲ್ಲಿ ಜನರಿಗೆ ನೀರು ಕೊಟ್ಟ ಕೊಳವೆಬಾವಿಗಳ ಮಾಲೀಕರಿಗೆ ಹಣ ಪಾವತಿಸಿಲ್ಲ. ಇಂಥ ದೂರುಗಳನ್ನು ಎಷ್ಟು ಬಾರಿ ಹೇಳಿದರೂ ನೀವು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತೀರಿ. ಆದರೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ರಾಜೇಂದ್ರ, ‘ಕೈಗೊಂಡ ಕ್ರಮಗಳೆಲ್ಲವೂ ನಿಮಗೆ ತಿಳಿದಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ ಕಾಮಗಾರಿಗಳು ಕಳಪೆಯಾಗಿದ್ದರೆ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಶಂಕುಸ್ಥಾಪನೆ ಪೂಜೆಗೆ ಕರೆಯಲಿಲ್ಲ ಎಂದು ನೀವು ದೂರುವ ಅಧಿಕಾರಿಗಳನ್ನು ಅಮಾನತು ಮಾಡಲಾಗುತ್ತದೆಯೇ’ ಎಂದು ಮರು ಪ್ರಶ್ನಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
‘ಶೋಭಾ ಅಕ್ಕ, ಸಿ.ಟಿ.ರವಿ ತಮ್ಮ, ಈಶ್ವರಪ್ಪ ದೊಡ್ಡಣ್ಣ’

ಕೂಡ್ಲಿಗಿ
‘ಶೋಭಾ ಅಕ್ಕ, ಸಿ.ಟಿ.ರವಿ ತಮ್ಮ, ಈಶ್ವರಪ್ಪ ದೊಡ್ಡಣ್ಣ’

22 Jan, 2018

ಬಳ್ಳಾರಿ
ಕನ್ನಡಾಂಬೆ ಸೇವೆಗೆ ಸದಾ ಸಿದ್ಧ

‘ನಿಜವಾದ ಕನ್ನಡಿಗರು ಎಂದರೇ ರೈತರು. ಅವರು ಭಾಷೆಯನ್ನು ಅತೀ ಹೆಚ್ಚು ಬಳಕೆ ಮಾಡುತ್ತಾರೆ. ಕನ್ನಡವನ್ನು ಉಳಿಸಬೇಕಾದರೆ ಕನ್ನಡ ಶಾಲೆಗೆ ಹೆಚ್ಚೆಚ್ಚು ‌ಮಕ್ಕಳನ್ನು ಸೇರಿಸುವ ಕೆಲಸವಾಗಬೇಕು ...

22 Jan, 2018
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

ಬಳ್ಳಾರಿ
ಜಿಲ್ಲೆಯಲ್ಲಿ ಕೌಶಲ ವಿ.ವಿ ಸ್ಥಾಪನೆ

21 Jan, 2018
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದಾಗ ಘಟನೆ
ಬಳ್ಳಾರಿ: ಅನಂತಕುಮಾರ ಹೆಗಡೆಗೆ ದಲಿತ ಸಂಘಟನೆಗಳಿಂದ ಕಪ್ಪು ಬಾವುಟ ಪ್ರದರ್ಶನ

20 Jan, 2018
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

ಸಂಡೂರು
‘ಗಣಿ ಬಾಧಿತ ಜನರಿಗೆ ಪರ್ಯಾಯ ಕೆಲಸ’

20 Jan, 2018