ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತು ಬೀಳುತ್ತಿದೆ ಅಂಗನವಾಡಿ ಚಾವಣಿ

Last Updated 5 ಡಿಸೆಂಬರ್ 2017, 8:13 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೆರಟಹಳ್ಳಿ ಗ್ರಾಮದ ಅಂಗನವಾಡಿಯು ಶಿಥಿಲಗೊಂಡಿದ್ದು, ಯಾವಾಗ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲೇ ಮಕ್ಕಳು ಕಾಲ ಕಳೆಯುತ್ತಿದ್ದಾರೆ.

ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣಿಯ ಕಾಂಕ್ರಿಟ್ ಗಾರೆ ಕಿತ್ತು ಬೀಳುತ್ತಿದೆ. ಕಬ್ಬಿಣದ ಸರಳು ಹೊರ ಕಾಣುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಕೇಂದ್ರಕ್ಕೆ ಪ್ರತಿದಿನ 20ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಸಂಜೆಯವರೆಗೂ ಕೇಂದ್ರದಲ್ಲಿ ಪಾಠ ಪ್ರವಚನ, ಆಟೋಟಗಳಲ್ಲಿ ತೊಡಗಿರುತ್ತಾರೆ. ಮಧ್ಯಾಹ್ನ ಊಟವಾದ ಬಳಿಕ ಸಂಜೆಯವರೆಗೂ ಅಲ್ಲೇ ಮಲಗುತ್ತಾರೆ. ಆದರೆ, ಕೇಂದ್ರದ ಮೇಲ್ಛಾವಣಿ ಶಿಥಿಲಗೊಂಡಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

ಮಾತೃಪೂರ್ಣ ಯೋಜನೆಯ ಎಂಟು–ಹತ್ತು ಫಲಾನುಭವಿಗಳು ಕೂಡಾ ಇದೇ ಕೇಂದ್ರದಲ್ಲಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರದಲ್ಲಿ ಇರುವ ಶೌಚಾಲಯ ಸಹ ಹದಗೆಟ್ಟು ವರ್ಷವಾಗಿದೆ.

ಎರಡು ವರ್ಷದ ಹಿಂದೆ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಳಪಾಯವನ್ನು ತೆಗೆಯಲಾಯಿತು. ಬಳಿಕ, ಯಾವುದೇ ಕಾಮಗಾರಿ ನಡೆದಿಲ್ಲ. ಜನ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾರು ಸಹ ಈ ಕೇಂದ್ರದ ಬಗ್ಗೆ ಗಮನ ನೀಡಿಲ್ಲ. ಮುಂದೆ ಮಳೆಗಾಲ ಬರುತ್ತಿದ್ದು, ಅಷ್ಟರೊಳಗೆ ಕೇಂದ್ರವನ್ನು ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸುವುದಿಲ್ಲ ಎಂದು ಪೋಷಕರೊಬ್ಬರು ಅಸಮಾಧಾನದಿಂದ ಹೇಳಿದರು.

‘ಅಂಗನವಾಡಿಗಳಿಗೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರುತ್ತಿಲ್ಲ. ಇದರಿಂದ ಹಲವು ಕೇಂದ್ರಗಳು ಮುಚ್ಚಿವೆ. ಬೆರಳಣಿಕೆಯಷ್ಟು ಮಕ್ಕಳು ಬರುವ ಕೇಂದ್ರವೂ ಹೀಗೆ ಅವ್ಯವಸ್ಥೆಯಿಂದ ಕೂಡಿದರೆ ಮಕ್ಕಳು ಬರುತ್ತಾರೆಯೇ’ ಎನ್ನುವುದು ಅಂಗನವಾಡಿ ಶಿಕ್ಷಕರ ಪ್ರಶ್ನೆ.

‘ಶಿಥಿಲಗೊಂಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪಿಡಬ್ಲ್ಯೂಡಿಗೆ ಪತ್ರ ಬರೆಯಲಾಗಿದೆ. ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಪ್ರಾರಂಭಿಸಲಾ ಗುವುದು’ ಎಂದು ಸಿಡಿಪಿಒ ಜಯಶೀಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT