ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಗದ್ದುಗೇಶ್ವರಸ್ವಾಮಿ ರಥೋತ್ಸವ

Last Updated 5 ಡಿಸೆಂಬರ್ 2017, 8:42 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಹೊನ್ನಾಳಿ ತಾಲ್ಲೂಕಿನ ಪ್ರಸಿದ್ಧ ಕ್ಷೇತ್ರ ಗದ್ದುಗೇಶ್ವರಸ್ವಾಮಿ ಕಾರ್ತೀಕ ಮಹೋತ್ಸವ ಭಾನುವಾರ ಮತ್ತು ಸೋಮವಾರ ವೈಭವದಿಂದ ನೆರವೇರಿತು. ಉತ್ಸವದ ಅಂಗವಾಗಿ ಭಾನುವಾರ ರಾತ್ರಿಯಿಂದ ಸೋಮವಾರದವರೆಗೆ ಕೂಲಂಬಿಗೆ ಭಕ್ತಸಾಗರ ಹರಿದುಬಂದಿತ್ತು.

ಸೋಮವಾರ ಮುಂಜಾನೆ ನಡೆದ ಗದ್ದುಗೇಶ್ವರಸ್ವಾಮಿ ರಥೋತ್ಸವದಲ್ಲಿ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ನಡೆದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿ ವಧೂ ವರರನ್ನು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಂತನಗೌಡ ಅವರು, ‘ಭಕ್ತರು ಇಂತಹ ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮಕ್ಕಳ ಮದುವೆ ನಡೆಸಬೇಕು. ಸರಳತೆಯ ಜೊತೆಗೆ ದುಂದುವೆಚ್ಚ ಕಡಿಮೆ ಮಾಡಿ ಇತರರಿಗೆ ಮಾದರಿಯಾಬೇಕು. ಗದ್ದುಗೇಶ್ವರಸ್ವಾಮಿಯ ಸನ್ನಿಧಿಯಲ್ಲಿ ವರ್ಷ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ನಡೆಯುತ್ತಿರುವುದು ಸ್ವಾಗತಾರ್ಹ’ ಎಂದರು.

ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ‘ನೂರಾರು ವರ್ಷಗಳ ಇತಿಹಾಸವಿರುವ ಗದ್ದುಗೇಶ್ವರರ ಸನ್ನಿಧಿ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಹೊಂದಿದೆ. ಸಹಸ್ರಾರು ಮಹಿಳೆಯರು ದೀಪಗಳೊಂದಿಗೆ ಮೆರವಣಿಗೆಯಲ್ಲಿ ಬಂದು ಸ್ವಾಮಿಗೆ ಕಾರ್ತೀಕೋತ್ಸವ ನಡೆಸುವ ನೂರಾರು ವರ್ಷಗಳಿಂದ ನಡೆಸುತ್ತಿರುವುದು ಧಾರ್ಮಿಕತೆಗೆ ಮೆರುಗು ನೀಡಿದೆ’ ಎಂದರು.

ಹೊನ್ನಾಳಿ ತಹಶೀಲ್ದಾರ್‌ ನಾಗರಾಜ್‌, ಜಿಲ್ಲಾ ಪಂಚಾಯ್ತಿ ಸದಸ್ಯೆ ರೂಪಾ ಜಗದೀಶ್‌, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಬಿ.ಟಿ.ಮುರಿಗೆಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಾಯತ್ರಿ ಪ್ರಶಾಂತ್‌ ಮಾತನಾಡಿದರು.

ವಧೂ ವರರಿಗೆ ಗಣ್ಯರು ಮದುವೆಯ ಉಡುಪುಗಳನ್ನು ನೀಡಿದರು. ದೇಗುಲ ಸಮಿತಿ ಅಧ್ಯಕ್ಷ ಟಿ.ಎಸ್‌.ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೈ.ಎಂ.ಬಸವಲಿಂಗಪ್ಪ ಸ್ವಾಗತಿಸಿದರು. ಬಿ.ಎಸ್‌.ಲಿಂಗರಾಜ್‌ ನಿರೂಪಿಸಿದರು. ಹೇಮಂತರಾಜ್‌ ವಂದಿಸಿದರು.

ಭಾನುವಾರ ರಾತ್ರಿ ನಡೆದ ಕಾರ್ತೀಕೋತ್ಸವದಲ್ಲಿ ಮಹಿಳೆಯರು ಗದ್ದುಗೇಶ್ವರಸ್ವಾಮಿಗೆ ದೀಪ ಬೆಳಗಿಸಿ ಕಾರ್ತೀಕೋತ್ಸವ ನಡೆಸಿದರು. ಗ್ರಾಮದ ಕೆರೆಯಲ್ಲಿ ಬೆಳದಿಂಗಳಿನಲ್ಲಿ ಗದ್ದುಗೇಶ್ವರಸ್ವಾಮಿಯ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಭಜನಾ ತಂಡಗಳಿಂದ ಅಹೋರಾತ್ರಿ ಭಜನೆ ನಡೆಯಿತು. ಸೋಮವಾರ ಸಂಜೆ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT