ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ಬಿಡುಗಡೆಗೆ ರೈತರ ಆಗ್ರಹ

Last Updated 5 ಡಿಸೆಂಬರ್ 2017, 8:45 IST
ಅಕ್ಷರ ಗಾತ್ರ

ಧಾರವಾಡ: ‘ಕಳೆದ ಸಾಲಿನ ಮುಂಗಾರಿನ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ವಿಮೆ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲಾಧಿಕಾರಿಯೂ ಸೇರಿದಂತೆ ಪ್ರತಿಯೊಬ್ಬರಲ್ಲಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾದರೆ ಜನಸಂಪರ್ಕ ಸಭೆ ನಡೆಸಿ ಪ್ರಯೋಜನ ಏನು’ ಎಂದು ರೈತ ದ್ಯಾವನಗೌಡ ಪಾಟೀಲ ಖಾರವಾಗಿ ಪ್ರಶ್ನಿಸಿದರು.

ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಈ ಹಿಂದಿನ ಜನ ಸಂಪರ್ಕ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ಇದನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದ್ದರು. ಆದರೆ, ಈವರೆಗೂ ಈಡೇರಿಲ್ಲ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ ಮಾತನಾಡಿ, ‘ಹತ್ತಿ, ಮೆಣಸಿನಕಾಯಿಗೆ ಸಂಬಂಧಿಸಿದಂತೆ ಮುಂಗಾರಿನ ₹79 ಕೋಟಿ ಬೆಳೆವಿಮೆ ಬಾಕಿ ಇದೆ. ಸಮಸ್ಯೆ ಬಗೆಹರಿಸಲು ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಸಮಿತಿಯು ವರದಿಯನ್ನೂ ನೀಡಿದೆ. ಈಗ ₹1.59 ಕೋಟಿ ಜಮೆ ಆಗಿದೆ. ಶೀಘ್ರವೇ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು’ ಎಂದು ತಿಳಿಸಿದರು.

ಶಿರೂರ ಹೆಬ್ಬಾಳ ರಸ್ತೆ, ಕಿತ್ತೂರಿನಿಂದ ನವಲಗುಂದಕ್ಕೆ ಬಸ್‌ ಸಂಚಾರ, ಸಾಮಾಜಿಕ ಭದ್ರತಾ ಪಿಂಚಣಿ, ಮಲಪ್ರಭಾ ಎಡ ಹಾಗೂ ಬಲದಂಡೆ ಕಾಲುವೆ ಆಧುನೀಕರಣ, ರಾಷ್ಟ್ರೀಕೃತ ಬ್ಯಾಂಕ್‌ ರೈತರ ಸಾಲಮನ್ನಾ, ಕಳಸಾ ಬಂಡೂರಿ ನಾಲಾ ಜೋಡಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಪಾಟೀಲ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿನಯ ಕುಲಕರ್ಣಿ, ‘ಮಹದಾಯಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ವಿಷಯ ಕೇಂದ್ರಕ್ಕೆ ಬಿಟ್ಟಿದ್ದು. ಇದನ್ನು ಅವರಿಗೇ ಕೇಳಬೇಕು. ರಾಜ್ಯ ಸರ್ಕಾರ ರೈತರ ಹಿತಕಾಯಲು ಬದ್ಧವಾಗಿದೆ’ ಎಂದರು.

ಸಾಮಾಜಿಕ ಭದ್ರತೆ ಪಿಂಚಣಿ ಹಣವನ್ನು ಸರಿಯಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿಲ್ಲ. ತಿಂಗಳಿಗೆ ₹1200 ಬರಬೇಕಾದವರಿಗೆ ₹500, ₹700 ಹಾಕಲಾಗುತ್ತಿದೆ. ಎರಡು ತಿಂಗಳು ಬಿಟ್ಟು ಇನ್ನಷ್ಟು ಹಣ ಜಮೆ ಮಾಡುತ್ತಿದ್ದಾರೆ. ಇದರಿಂದ ತೀವ್ರ ತೊಂದರೆಯಾಗಿದೆ ಎಂದು ಸಭೆಯಲ್ಲಿದ್ದ ಅಂಗವಿಕಲರು ದೂರಿದರು.

‘ಸಾಮಾಜಿಕ ಭದ್ರತೆ ಪಿಂಚಣಿಯಲ್ಲಿ ಯಾವುದೇ ಲೋಪವಾಗಬಾರದು. ಸಿಬ್ಬಂದಿ ಇತ್ಯಾದಿ ಸಮಸ್ಯೆಗಳನ್ನು ಬ್ಯಾಂಕ್ ಅಧಿಕಾರಿಗಳೇ ಬಗೆಹರಿಸಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ, ಶಾಸಕ ಎನ್‌.ಎಚ್.ಕೋನರಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT