ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾವೇಶದ ಮೂಲಕವೇ ಉತ್ತರ’

Last Updated 5 ಡಿಸೆಂಬರ್ 2017, 8:51 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಗದುಗಿನಲ್ಲಿ ಡಿ.24ರಂದು ನಡೆಯುವ ವೀರಶೈವ–ಲಿಂಗಾಯತ ಸಮನ್ವಯ ಸಮಾವೇಶವನ್ನು ಯಶಸ್ವಿ ಗೊಳಿಸಲು ಮತ್ತು ಪ್ರತ್ಯೇಕ ಧರ್ಮದ ಕುರಿತು ಎದ್ದಿರುವ ಎಲ್ಲ ಗೊಂದಲಗಳಿಗೆ ಈ ಸಮಾವೇಶದ ಮೂಲಕ ತೆರೆ ಎಳೆಯಲು ಸೋಮವಾರ ಇಲ್ಲಿನ ವೀರಗಂಗಾಧರ ಸಮುದಾಯ ಭವನ ದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು. ಮಾಜಿ ಶಾಸಕ ಜಿ.ಎಂ. ಮಹಾಂತ ಶೆಟ್ಟರ ಮತ್ತು ಜಿ.ಎಸ್‌. ಗಡ್ಡದೇವರಮಠ ಅವರು ಸಸಿಗೆ ನೀರುಣಿಸುವ ಮೂಲಕ ಪೂರ್ವಭಾವಿ ಸಭೆ ಉದ್ಘಾಟಿಸಿದರು.

‘ಶಿರಹಟ್ಟಿ ತಾಲ್ಲೂಕಿನಿಂದ ಕನಿಷ್ಠ 25 ಸಾವಿರ ಜನರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೀರಶೈವ–ಲಿಂಗಾಯತ ಒಂದೇ ಎಂದು ಪ್ರತಿಪಾದಿಸುವರು ಈ ಸಮಾವೇಶಕ್ಕೆ ಭಾಗವಹಿಸಬೇಕು. ಈ ಮೂಲಕ ಪ್ರತ್ಯೇಕ ಧರ್ಮದ ಮಾನ್ಯತೆಗೆ ಆಗ್ರಹಿಸುತ್ತಿರುವವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಬೇಕು’ ಎಂದು ಈ ಇಬ್ಬರೂ ಅಭಿಪ್ರಾಯಪಟ್ಟರು.

ಸಮಾವೇಶದ ಮೂಲಕ ಉತ್ತರ: ಬಾಲೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ ‘ವೀರಶೈವ–ಲಿಂಗಾಯತ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಕೆಲ ಸ್ವಾರ್ಥ ರಾಜಕಾರಣಿಗಳು ಈ ಅಖಂಡ ಧರ್ಮವನ್ನು ಒಡೆಯಲು ಸಂಚು ರೂಪಿಸಿ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ರಾಜಕಾರಣಿಗಳಿಗೆ ಕೆಲವು ಮಠಾಧೀಶರೂ ಬೆಂಬಲ ಸೂಚಿಸಿ, ವೀರಶೈವ–ಲಿಂಗಾಯತ ಒಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಸಮಾಜವೇ ಇವರಿಗೆ ತಕ್ಕ ಉತ್ತರ ನೀಡಲಿದೆ. ಡಿ.24ರಂದು ಗದುಗಿನಲ್ಲಿ ನಡೆಯಲಿರುವ ಸಮನ್ವಯ ಸಮಾ ವೇಶವು, ಇವರೆಲ್ಲರಿಗೆ ತಕ್ಕ ಉತ್ತರ, ಎಚ್ಚರಿಕೆ ನೀಡಲಿದೆ’ ಎಂದರು.

ಸೋಮಣ್ಣ ಮುಳಗುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ತಿಮಂದಿರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಂಜಿಗಟ್ಟಿ ಚರಮೂರ್ತೀಶ್ವರ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ, ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಬಸವರಾಜ ಸ್ವಾಮೀಜಿ, ಲಕ್ಷ್ಮೇಶ್ವರ ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹೊಳೆಇಟಗಿಯ ಮಡಿವಾಳ ಸ್ವಾಮೀಜಿ, ಬನ್ನಿಕೊಪ್ಪ ಜಪದಕಟ್ಟಿಮಠದ ಡಾ.ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಸೂಗೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಕುಂಟೋಜಿ ಚೆನ್ನವೀರ ಸ್ವಾಮೀಜಿ, ಹುಲ್ಲತ್ತಿಯ ಮಹಾಲಿಂಗ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಪಿ. ಬಳಿಗಾರ ಇದ್ದರು.

ಲಕ್ಷ್ಮೇಶ್ವರ, ಶಿಗ್ಲಿ, ಬಾಲೆಹೊಸೂರು, ದೊಡ್ಡೂರು, ಮಾಗಡಿ, ಗೊಜನೂರು, ದೊಡ್ಡೂರು, ಸೂರಣಗಿ, ರಾಮಗಿರಿ, ಗೋವನಾಳ, ಯಳವತ್ತಿ ಸೇರಿದಂತೆ ಹಲವು ಗ್ರಾಮಗಳಿಂದ ವೀರಶೈವ–ಲಿಂಗಾಯತ ಸಮಾಜ ನೂರಾರು ಜನರು ಸಭೆಯಲ್ಲಿ ಭಾಗವಹಸಿದ್ದರು. ಗಂಗಾಧರ ಮೆಣಸಿನಕಾಯಿ, ಮಹೇಶ ಹೊಗೆಸೊಪ್ಪಿನ ನಿರೂಪಿಸಿದರು.

* * 

ಕೆಲವು ರಾಜಕಾರಣಿಗಳು, ಮಠಾಧೀಶರು ವೀರಶೈವ–ಲಿಂಗಾಯತ ಒಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಗದುಗಿನಲ್ಲಿ ನಡೆಯುವ ಸಮಾವೇಶದಲ್ಲಿ ತಕ್ಕ ಉತ್ತರ ನೀಡಲಿದೆ
ದಿಂಗಾಲೇಶ್ವರ ಸ್ವಾಮೀಜಿ ಬಾಲೆಹೊಸೂರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT