ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್‌ ಮಾಹಿತಿ ನಿಯಂತ್ರಣ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆಂಡ್ರಾಯ್ಡ್ ಬಳಕೆದಾರರ ಖಾಸಗಿ ಮಾಹಿತಿ ಹಾಗೂ ಅವರು ಬಳಸುವ ಸೇವೆಗಳ ಮಾಹಿತಿಯನ್ನು ಗೂಗಲ್‌ ಸಂಗ್ರಹಿಸುತ್ತದೆ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಆದರೆ, ಹೀಗೆ ಗೂಗಲ್‌ ಮಾಹಿತಿ ಸಂಗ್ರಹಿಸುವುದನ್ನು ಬಳಕೆದಾರರು ನಿಯಂತ್ರಿಸಲೂ ಅವಕಾಶವಿದೆ. ಬಳಕೆದಾರರು ತಮ್ಮ ಸ್ಥಳದ ಮಾಹಿತಿ (location data) ಹಾಗೂ ಸ್ಥಳದ ಮಾಹಿತಿಯ ಇತಿಹಾಸವನ್ನು (location history) ಗೂಗಲ್‌ಗೆ ಸಿಗದಂತೆ ಮಾಡಬಹುದು. ತಮ್ಮ ಖಾಸಗಿ ಮಾಹಿತಿಯನ್ನು ಗೂಗಲ್‌ಗೆ ಸಿಗದಂತೆ ನಿಯಂತ್ರಿಸಲೂಬಹುದು.

ಬಹುತೇಕ ಮೊಬೈಲ್‌ ತಯಾರಿಕಾ ಕಂಪೆನಿಗಳು ಹಾಗೂ ಆ್ಯಪ್‌ ಅಭಿವೃದ್ಧಿಪಡಿಸುವ ಕಂಪೆನಿಗಳು ತಮ್ಮ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಬಳಕೆದಾರರ ಮಾಹಿತಿ ಸಂಗ್ರಹಿಸುತ್ತವೆ. ಆದರೆ, ಕಲೆಹಾಕುವ ಈ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಇತ್ತೀಚಿನ ವರದಿಯೊಂದರ ಪ್ರಕಾರ, ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಸ್ಥಳದ ಮಾಹಿತಿಯನ್ನು (location) ಆಫ್‌ ಮಾಡಿದ್ದರೂ ಆಂಡ್ರಾಯ್ಡ್‌ ಡಿವೈಸ್‌ಗಳು ಹತ್ತಿರದ ಟವರ್‌ಗಳ ಮೂಲಕ ಸ್ಥಳದ ಮಾಹಿತಿ ಸಂಗ್ರಹಿಸಿ ಅದನ್ನು ಗೂಗಲ್‌ಗೆ ಕಳಿಸುತ್ತವೆ. ಈ ವರದಿಗೆ ಪ್ರತಿಕ್ರಿಯಿಸಿರುವ ಗೂಗಲ್‌, ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಸಂದೇಶ ಸ್ವೀಕೃತಿಯ ಮಾಹಿತಿ ಸೇವೆ ಉತ್ತಮಗೊಳಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಹೀಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದೆ.

ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಗೂಗಲ್‌ ಸೇರಿದಂತೆ ಹಲವು ತಂತ್ರಜ್ಞಾನ ಕಂಪೆನಿಗಳು ಬಳಕೆದಾರರ ಮಾಹಿತಿ ಸಂಗ್ರಹದ ಬಗ್ಗೆ ಖಾಸಗಿತನದ ನೀತಿಯಲ್ಲಿ (privacy policy) ತಿಳಿಸಿರುತ್ತವೆ. ಬಳಕೆದಾರರು ತಮ್ಮ ಮಾಹಿತಿಯನ್ನು ಸೇವಾ ಸಂಸ್ಥೆಗಳ ಜತೆಗೆ ಹಂಚಿಕೊಳ್ಳಬಹುದು ಅಥವಾ ಹಂಚಿಕೊಳ್ಳದೆಯೂ ಇರಬಹುದು. ಮಾಹಿತಿ ಹಂಚಿಕೆಯನ್ನು ನಿಯಂತ್ರಿಸುವ ಆಯ್ಕೆಯೂ ಇಲ್ಲಿ ಬಳಕೆದಾರರಿಗೆ ಇದೆ. ಎಲ್ಲಾ ಸಂದರ್ಭದಲ್ಲಿ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಿದರೆ ಕೆಲವು ಸೇವೆಗಳನ್ನು ಪಡೆಯಲು ಅದು ತೊಡಕೂ ಆಗಬಹುದು.

ಸ್ಥಳದ ಮಾಹಿತಿ ಹಂಚಿಕೊಳ್ಳದಿರಲು

ಬಳಕೆದಾರರ ಐಪಿ ಅಡ್ರೆಸ್‌, ಜಿಪಿಎಸ್‌, ವೈಫೈ ಆಕ್ಸೆಸ್‌ ಪಾಯಿಂಟ್‌ ಇಲ್ಲವೇ ಮೊಬೈಲ್‌ ಟವರ್‌ಗಳ ಮೂಲಕ ಗೂಗಲ್‌ ಮಾಹಿತಿ ಸಂಗ್ರಹಿಸುತ್ತದೆ. ಗೂಗಲ್‌ ಅಸಿಸ್ಟನ್ಸ್, ಗೂಗಲ್‌ ನಕ್ಷೆ ಮುಂತಾದ ಸೇವೆಗಳಿಗಾಗಿ ಗೂಗಲ್‌ ಈ ಮಾಹಿತಿಯನ್ನು ಸಂಗ್ರಹಿಸುತ್ತದೆ. ಬಳಕೆದಾರರು ತಮ್ಮ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳದಿರಲು ತಮ್ಮ ಡಿವೈಸ್‌ನ ಸೆಟಿಂಗ್ಸ್‌ನಲ್ಲಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ.

ಸ್ಥಳದ ಮಾಹಿತಿ ಹಂಚಿಕೆಯನ್ನು ನಿಯಂತ್ರಿಸಲು ಮೊದಲು ಡಿವೈಸ್‌ನ Settingsಗೆ ಹೋಗಿ ಅಲ್ಲಿ ಕಾಣುವ Google ಮೇಲೆ ಕ್ಲಿಕ್ ಮಾಡಿ. ಬಳಿಕ Location ಮೇಲೆ ಕ್ಲಿಕ್ ಮಾಡಿ. ಇಲ್ಲಿ Location ಅನ್ನು Off ಮತ್ತು On ಮಾಡುವ ಆಯ್ಕೆಗಳಿರುತ್ತವೆ. ಇಲ್ಲಿ Off ಆಯ್ಕೆ ಮಾಡಿ. ಇಲ್ಲೇ ಕೆಳಗೆ ಕಾಣುವ Location history ಮೇಲೆ ಕ್ಲಿಕ್ ಮಾಡಿ. ಇಲ್ಲಿ Off ಆಯ್ಕೆ ಮಾಡಿಕೊಳ್ಳುವ ಮೂಲಕ ಸ್ಥಳ ಮಾಹಿತಿಯ ಇತಿಹಾಸದ ಮಾಹಿತಿಯನ್ನೂ ನೀವು ನಿಯಂತ್ರಿಸಬಹುದು.

ಜಾಹೀರಾತು ನಿಯಂತ್ರಣಕ್ಕೆ
ಪ್ರತಿಯೊಂದೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌, ವಿಶಿಷ್ಟವಾದ ಜಾಹೀರಾತು ಸಂಖ್ಯೆಯನ್ನು (Advertising ID) ಹೊಂದಿರುತ್ತದೆ. ಇದು ಬಳಕೆದಾರರ ಮನೋಭಾವ ಹಾಗೂ ಅವರ ಇಷ್ಟಾನಿಷ್ಟಗಳನ್ನು ಗೂಗಲ್‌ಗೆ ದೊರೆಯುವಂತೆ ಮಾಡುತ್ತದೆ.

ಬಳಕೆದಾರರು ಜಾಹೀರಾತು ನಿಯಂತ್ರಿಸಲು ಡಿವೈಸ್‌ನ Settingsಗೆ ಹೋಗಿ Google ಮೇಲೆ ಕ್ಲಿಕ್ ಮಾಡಿ. ಬಳಿಕ Ads ಮೇಲೆ ಕ್ಲಿಕ್ಕಿಸಿ. ಇಲ್ಲಿ ನೀವು ಜಾಹೀರಾತು ನಿಯಂತ್ರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

ಥರ್ಡ್‌ ಪಾರ್ಟಿ ಆ್ಯಪ್‌ಗಳಿಂದ ಆತಂಕ
ಥರ್ಡ್‌ ಪಾರ್ಟಿ ಆ್ಯಪ್‌ಗಳ ಮೂಲಕ ಲಾಗ್‌ಇನ್‌ ಆಗುವ ಆಯ್ಕೆಯನ್ನು ಗೂಗಲ್‌ ಒದಗಿಸುತ್ತಿದೆ. ಬಹುತೇಕ ಬಳಕೆದಾರರು ಮತ್ತೆ ಮತ್ತೆ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಟೈಪ್‌ ಮಾಡುವುದು ತಪ್ಪುತ್ತದೆ ಎನ್ನುವ ಕಾರಣಕ್ಕಾಗಿ ಥರ್ಡ್‌ ಪಾರ್ಟಿ ಆ್ಯಪ್‌ಗಳಿಂದ ಲಾಗ್‌ಇನ್‌ ಆಗುವ ಆಯ್ಕೆಯನ್ನು ಆರಿಸಿಕೊಂಡಿರುತ್ತಾರೆ. ಆದರೆ, ಈರೀತಿಯ ಆಯ್ಕೆಯಿಂದ ಖಾಸಗಿ ಮಾಹಿತಿಯ ಬಗ್ಗೆ ಆತಂಕ ತಪ್ಪಿದ್ದಲ್ಲ. ಬಳಕೆದಾರರು ಗೂಗಲ್‌ ಪ್ಲಸ್‌ಗೆ ಹೋಗಿ ಈ ಥರ್ಡ್‌ ಪಾರ್ಟಿ ಆ್ಯಪ್‌ಗಳನ್ನು ಡಿಲಿಂಕ್ ಮಾಡಬಹುದು.

ನಿಮ್ಮ ಅಂತರ್ಜಾಲ ಚಟುವಟಿಕೆಗಳು
(online activity) ಗೂಗಲ್‌ನ My Activity pageನಲ್ಲಿ ಸೇವ್‌ ಆಗಿರುತ್ತದೆ. ಬಳಕೆದಾರರು ಈ ಮಾಹಿತಿಯನ್ನೂ ಅಳಿಸಿ ಹಾಕಬಹುದು. ಗೂಗಲ್‌ಗೆ ಹೋಗಿ My Activity ಕ್ಲಿಕ್ ಮಾಡಿ Activity Controls ಆಯ್ಕೆ ಮಾಡಿಕೊಳ್ಳಿ. ಇಲ್ಲಿ ನಿಮ್ಮ ಅಂತರ್ಜಾಲ ಚಟುವಟಿಕೆಗಳನ್ನು ನಿಯಂತ್ರಿಸಬಹುದು. ನಿಮ್ಮ ಬ್ರೌಸಿಂಗ್‌ ಇತಿಹಾಸವನ್ನು (browser history) ಅಳಿಸುವ ಮೂಲಕವೂ ನಿಮ್ಮ ಅಂತರ್ಜಾಲ ಚಟುವಟಿಕೆಗಳ ಮಾಹಿತಿಯನ್ನು ಅಳಿಸಬಹುದು. ಇದಕ್ಕಾಗಿ ನಿಮ್ಮ ಬ್ರೌಸರ್‌ ಆಯ್ಕೆಗಳಿಗೆ ಹೋಗಿ Clear Browsing history ಒತ್ತಿ. ಈಗ ನೀವು ಬ್ರೌಸ್‌ ಮಾಡಿದ ಮಾಹಿತಿ ಎಲ್ಲವೂ ಅಳಿಸಿಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT