ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರದಲ್ಲೊಂದು ತೇಲುವ ನಗರ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತೇಲುವ ನಗರ... ಇದೊಂದು ಕಲ್ಪನೆಯಂತೆ ಕಂಡರೂ ಸಾಕಾರವಾಗುವ ಸಮಯ ಹತ್ತಿರವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2020ಕ್ಕೆ ತೇಲುವ ನಗರವೊಂದು ಅಸ್ತಿತ್ವಕ್ಕೆ ಬರಲಿದೆ. ಸಮುದ್ರದ ಮೇಲೆ ಈ ನಗರ ನಿರ್ಮಾಣವಾಗಲಿದೆ.

ಈವರೆಗೆ ತೇಲುವ ಮನೆಗಳು, ಮಾರುಕಟ್ಟೆ, ವೇದಿಕೆಗಳು ಸಾಮಾನ್ಯವಾಗಿದ್ದವು. ಈ ಪಟ್ಟಿಗೆ ಈಗ ತೇಲುವ ನಗರ ಸಹ ಸೇರ್ಪಡೆಯಾಗಲಿದೆ. ಜನವಸತಿಗಾಗಿ ಹೊಸಹೊಸ ನೆಲೆಗಳನ್ನು ಅನ್ವೇಷಣೆ ಮಾಡಲು ಹೊರಟ ಮನುಷ್ಯ ಎಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾನೆ ಎಂಬುದಕ್ಕೆ ಈ ನಗರ ನಿದರ್ಶನವಾಗಲಿದೆ.

ತೇಲುವ ನಗರಕ್ಕೆ ಎಂಜಿನಿಯರಗಳು, ವಾಸ್ತುಶಿಲ್ಪಿಗಳು ಮತ್ತು ಸರ್ಕಾರದ ಸಹಕಾರವಿದೆ. ವಿಶ್ವದ ಮೊದಲ ತೇಲುವ ನಗರ ಪೆಸಿಫಿಕ್‌ ಸಮುದ್ರದಲ್ಲಿ ಇನ್ನು ಮೂರು ವರ್ಷಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಈ ನಗರದಲ್ಲಿ ಹೋಟೆಲ್‌, ಮನೆ, ಕಚೇರಿ, ರೆಸ್ಟೋರೆಂಟ್‌ ಮತ್ತಿತರ   ಕೇಂದ್ರಗಳಿರುತ್ತವೆ. ಇದಕ್ಕಾಗಿ ಮರ, ಬಿದಿರು ಮತ್ತು ತೆಂಗಿನ ಫೈಬರ್‌ ಅಲ್ಲದೆ ಮರುಬಳಕೆ ಮಾಡಿದ ಲೋಹ ಹಾಗೂ ಪ್ಲಾಸ್ಟಿಕ್‌  ಬಳಸಲಾಗುತ್ತದೆ.

ಸ್ಯಾನ್‌ಫ್ರಾನ್ಸಿಸ್ಕೊದ ಸರ್ಕಾರೇತರ ಸಂಸ್ಥೆಯಾಗಿರುವ ಸೀ ಸ್ಟೀಡಿಂಗ್ ಸಂಸ್ಥೆಯ (Seasteading Institute) ಪ್ರಯತ್ನವೇ ತೇಲುವ ನಗರ. 2008ರಲ್ಲಿ ಆರಂಭವಾಗಿರುವ ಈ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಈ ಸಂಬಂಧ ಕೆಲಸ ಮಾಡುತ್ತಿತ್ತು. ತೇಲುವ ನಗರ ಆರಂಭದಲ್ಲಿ ಹುಚ್ಚರ ಆಲೋಚನೆ ಎಂದು ನಗೆಪಾಟಲಿಗೆ ಈಡಾಗಿತ್ತು. ಆದರೆ ಅದೀಗ ಸಾಕಾರವಾಗಲಿದೆ. ‘ಕಾಯಿನ್‌ ಆಫರಿಂಗ್’ ( coin offering) ಎಂಬ ಹಣ ಸಂಗ್ರಹದ ಹೊಸ ಪರಿಕಲ್ಪನೆಯ ಮೂಲಕ ಈ ನಗರಕ್ಕೆ ಹಣ ಒಟ್ಟು ಮಾಡಲಾಗಿದೆ. ಮನುಷ್ಯರನ್ನು ರಾಜಕಾರಣಿಗಳಿಂದ ಸ್ವತಂತ್ರಗೊಳಿಸಲು ಈ ನಗರ ನಿರ್ಮಾಣವಾಗುತ್ತಿದೆ ಎಂದು ಸೀ ಸ್ಟೀಡಿಂಗ್ ಹೇಳಿಕೊಂಡಿದೆ. 2050 ರ ಹೊತ್ತಿಗೆ ಇನ್ನಷ್ಟು ತೇಲುವ ನಗರಗಳು ಆರಂಭವಾಗಬೇಕು ಎಂಬ ಆಶಯವನ್ನು ಸೀ ಸ್ಟೀಡಿಂಗ್‌ನ ಅಧ್ಯಕ್ಷ ಜೋ ಕ್ವಿರ್ಕ್‌ ವ್ಯಕ್ತಪಡಿಸಿದ್ದಾರೆ.

1981ರಲ್ಲೇ ಸಮುದ್ರದಲ್ಲಿ ನಗರ ಎಂಬ ಪರಿಕಲ್ಪನೆ ಜಾರಿಯಲ್ಲಿತ್ತು. ನೌಕಾಯಾನದಲ್ಲಿ ಅದಮ್ಯ ಆಸಕ್ತಿ ಹೊಂದಿದ್ದ ಕೆನ್‌ ನೂಮೆಯರ್‌ ಎಂಬಾತ ಬರೆದಿದ್ದ ‘ಸೇಲಿಂಗ್‌ ದಿ ಫಾರ್ಮ್‌’ ಎಂಬ ಪುಸ್ತಕದಲ್ಲಿ ಸಮುದ್ರದಲ್ಲಿ ಮನುಷ್ಯ ವಾಸ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಿತ್ತು.  20 ವರ್ಷಗಳ ನಂತರ ಪಾಟ್ರಿ ಫ್ರೈಡ್‌ ಮ್ಯಾನ್‌ ಎಂಬಾತ (ಖ್ಯಾತ ಅರ್ಥಶಾಸ್ತ್ರಜ್ಞ ಮಿಲ್ಟನ್‌ ಫ್ರೈಡ್‌ ಮ್ಯಾನ್‌ ಮೊಮ್ಮಗ) ತೇಲುವ ನಗರದ ಬಗ್ಗೆ  ಆಸಕ್ತಿ ಹೊಂದಿದ್ದರು.   

ಸೀ ಸ್ಟೀಡಿಂಗ್‌ ಸಂಸ್ಥೆ ತಾನು ನಿರ್ಮಿಸಲಿರುವ ತೇಲುವ ನಗರದ ಬಗ್ಗೆ ಈ ವರ್ಷದ ಜನವರಿಯಲ್ಲಿ ಬಹಿರಂಗಪಡಿಸಿತ್ತು. ಇದಕ್ಕೆ   ಸರ್ಕಾರ ಅನುಮತಿಯನ್ನೂ ನೀಡಿತ್ತು.  ಇದಕ್ಕಾಗಿ ಸರ್ಕಾರ ಒಂದು ಹೊಸ ವಿಶೇಷ ಆರ್ಥಿಕ ವಲಯವನ್ನೂ ನಿರ್ಮಿಸುತ್ತಿದೆ. ಇದರಿಂದ ತೇಲುವ ನಗರ ತನ್ನದೇ ಆದ ವ್ಯಾಪಾರ ಕಾನೂನುಗಳನ್ನು ಹೊಂದಬಹುದಾಗಿದೆ.

‌ಇದೊಂದು ಮಹತ್ವಾಕಾಂಕ್ಷಿ ಯೋಜನೆಯಂತೆ ಕಂಡು ಬಂದರೂ ಸಾಗರದ ಮಧ್ಯೆ ಇರುವ ನಗರದಲ್ಲಿನ ಜನರ ಸುರಕ್ಷತೆ ಬಗ್ಗೆ ಆತಂಕವಿದೆ. ಅಲ್ಲದೆ ಸಮುದ್ರದ ಮಟ್ಟ ಏರಿಕೆಯಾದರೆ ಮತ್ತು ಇತರ ನೈಸರ್ಗಿಕ ಪ್ರಕೋಪಗಳನ್ನು ಈ ನಗರ ಎಷ್ಟರಮಟ್ಟಿಗೆ ತಡೆದುಕೊಳ್ಳಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ.

**

ನಿರ್ಮಾಣ ಹೇಗೆ?
ಮೊದಲಿಗೆ ತೇಲುವ ನಗರವನ್ನು 11 ಆಯತಾಕಾರದ ಜಾಲ ಮತ್ತು ಐದು  ಬದಿಗಳ ವೇದಿಕೆ ರೀತಿ ನಿರ್ಮಾಣ ಮಾಡಲಾಗುತ್ತದೆ. ಇದನ್ನು ಬೇಕಾದರೆ ನಿವಾಸಿಗಳ ಅಗತ್ಯಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಬದಲಾಯಿಸಬಹುದು. ಒಂದೊಂದು ವೇದಿಕೆಗಳು 50 ಮೀಟರ್‌ಗಳಿರುತ್ತವೆ. ಇದರ  ಉದ್ದ 50 ಮೀಟರ್‌.

**

4,900 ಮೈಲು – ಆಸ್ಟ್ರೇಲಿಯಾದಿಂದ ತೇಲುವ ನಗರ ಇರುವ ದೂರ

50x 50 ಮೀಟರ್‌ – 2018ರ ಹೊತ್ತಿಗೆ ತೇಲಲಿರುವ ಮೊದಲ ಮಾದರಿಗಳ ಅಗಲ.

300 – ಮೊದಲಿಗೆ ನಗರದಲ್ಲಿ ಇಷ್ಟು ಜನರ ವಾಸಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

100 ಎಕರೆ – ಸೀ ಸ್ಟೀಡಿಂಗ್ ಸಂಸ್ಥೆಗೆ ಸಂಶೋಧನಾ ಉದ್ದೇಶಗಳಿಗಾಗಿ ನೀಡಲಾಗಿರುವ ಜಾಗ

**

ಸಮುದ್ರ, ನೆಲ ಮತ್ತು ಗಾಳಿಯನ್ನು ನಾವು  ವಸತಿ, ತಯಾರಿಕೆ ಮತ್ತು ಸಾರಿಗೆ ಉದ್ದೇಶಗಳಿಗೆ ಆದಷ್ಟು ಬಳಸಿಕೊಳ್ಳಬೇಕು.
ಸಿ.ಎಂ.ವಾಂಗ್‌, ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT