ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಗೆ ಆರೋಗ್ಯ ವಿಮೆ ಏಕೆ ಅಗತ್ಯ?

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಮಹಿಳೆ ಎಷ್ಟು ಬಲಿಷ್ಠವಾಗಿರುತ್ತಾಳೋ, ಸಮುದಾಯಗಳು, ದೇಶ, ಅಂತಿಮವಾಗಿ ಇಡೀ ವಿಶ್ವ ಅಷ್ಟು ಬಲಿಷ್ಠವಾಗಿರುತ್ತದೆ’ ಎಂದು ಅಮೆರಿಕದ ಮಾಜಿ ಮೊದಲ ಮಹಿಳೆ ಮಿಷೆಲ್‌ ಒಬಾಮ ಹೇಳಿದ್ದರು.

ಭಾರತದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತ, ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಆದರೆ, ಈ ಧಾವಂತದ ನಡುವೆ ತಮಗರಿವಿಲ್ಲದಂತೆಯೇ ತಮ್ಮ ಆರೋಗ್ಯವನ್ನು ಹಿನ್ನೆಲೆಗೆ ಸರಿಸುತ್ತಾರೆ. ಪ್ರತಿ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ‘ಸ್ತನ ಕ್ಯಾನ್ಸರ್‌ ಜಾಗೃತಿ ಮಾಸ’ ಆಚರಿಸಲಾಗುತ್ತಿದೆ. ಸ್ವಲ್ಪ ತಡವಾಗಿದ್ದರೂ, ಆರೋಗ್ಯ ವಿಮೆಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಇದು ಪ್ರಶಸ್ತ ಸಮಯ ಎಂದು ಭಾವಿಸಿದ್ದೇನೆ.

ನಮ್ಮಲ್ಲಿ ಬಹುತೇಕ ಮಹಿಳೆಯರು ಆರೋಗ್ಯ ವಿಮೆಯ ಆಯ್ಕೆಯೂ ಸೇರಿದಂತೆ ತಮಗೆ ಸಂಬಂಧಿಸಿದ ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳಲು ತಮ್ಮ ಕುಟುಂಬದ ಪುರುಷರನ್ನೇ ಅವಲಂಬಿಸುತ್ತಾರೆ. ಹೀಗೆ ಮಾಡುವಾಗ ಕೆಲವು ಪ್ರಮುಖ ವಿಚಾರಗಳನ್ನು ಅವರು ಕಡೆಗಣಿಸುವ ಸಾಧ್ಯತೆ ಇದೆ ಎಂಬುದನ್ನು ಮರೆಯುತ್ತಾರೆ.

ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಈಚೆಗೆ ನಡೆಸಿದ ಅಧ್ಯಯನದ ಪ್ರಕಾರ, ಒಟ್ಟು ಇರುವ 6.72 ಕೋಟಿ ಕುಟುಂಬ ಉಳಿತಾಯ ಖಾತೆಗಳಲ್ಲಿ ಮಹಿಳೆಯರ ಪಾಲು ಶೇ 7.16ರಷ್ಟು ಮಾತ್ರ. ದೇಶದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ವೃತ್ತಿನಿರತರಾಗಿದ್ದರೂ, ವೇತನ ತಾರತಮ್ಯ ಈಗಲೂ ಚಿಂತೆಯ ವಿಚಾರವಾಗಿದೆ.

ಭಾರತದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ 69 ವರ್ಷ. ಹೀಗಿರುವಾಗ ಜೀವನದ ಸಂಧ್ಯಾಕಾಲದಲ್ಲಿ ಬರಬಹುದಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಅವರು ಹೆಚ್ಚು ಹೆಚ್ಚು ಉಳಿತಾಯ ಮಾಡುವುದು ಅಗತ್ಯ. ಆದ್ದರಿಂದ ಅವರು ತಮಗೆ ಹೊಂದಿಕೆಯಾಗುವಂತಹ, ಒಳ್ಳೆಯ ಆರೋಗ್ಯ ವಿಮೆ ಮಾಡಿಸುವುದು ಅಗತ್ಯ. ವಯೋಮಾನಕ್ಕೆ ಅನುಗುಣವಾಗಿ ಮಹಿಳೆಯರಿಗಾಗಿಯೇ ಅನೇಕ ಆರೋಗ್ಯ ವಿಮೆ ಯೋಜನೆಗಳನ್ನು ವಿವಿಧ ಕಂಪನಿಗಳು ರೂಪಿಸಿವೆ.

ಯಾವುದೇ ಕುಟುಂಬಕ್ಕೆ, ಮಗುವಿನ ಜನನ ಎಂಬುದು ವಿಶೇಷ ಸಂದರ್ಭ. ಮನೆಗೆ ಹೊಸ ಸದಸ್ಯನನ್ನು ಸ್ವಾಗತಿಸಲು ಹಣದ ಸಮಸ್ಯೆ ಅಡ್ಡಿಯಾಗಬಾರದು. ಆದರೆ, ಆಸ್ಪತ್ರೆಗಳ ದುಬಾರಿ ವೆಚ್ಚ ವಿಶೇಷವಾಗಿ ಸಿಜೇರಿಯನ್‌ ಮೂಲಕ ಹೆರಿಗೆಯಾದರೆ ಬರುವ ದೊಡ್ಡ ವೆಚ್ಚವನ್ನು ಭರಿಸುವುದು ಅನೇಕ ಕುಟುಂಬಗಳಿಗೆ ಸವಾಲಾಗಿ ಪರಿಣಮಿಸುತ್ತದೆ.

ಸಾಮಾನ್ಯ ಆರೋಗ್ಯ ವಿಮೆಗಳಲ್ಲಿ ಹೆರಿಗೆ ವೆಚ್ಚ ಭರಿಸಲು ಅವಕಾಶ ಇರುವುದಿಲ್ಲ. ಆದರೆ, ಕೆಲವು ಮಹಿಳಾ ಕೇಂದ್ರಿತ ವಿಮೆಗಳ ಮೂಲಕ ಹೆರಿಗೆಯ ಸಂದರ್ಭದಲ್ಲೂ ಕೆಲವು ಸೌಲಭ್ಯಗಳನ್ನು ಪಡೆಯಲು ಅವಕಾಶ ಇರುತ್ತದೆ. ಇನ್ನೂ ಕೆಲವು ವಿಮೆಗಳಲ್ಲಿ ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆಯಿಂದ ಸಾವು ಸಂಭವಿಸಿದರೆ ಪರಿಹಾರ ಪಡೆಯಲೂ ಅವಕಾಶ ಇರುತ್ತದೆ.

ಮಹಿಳೆಯರು ಸ್ತನ ಕ್ಯಾನ್ಸರ್‌ ಅಥವಾ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಗೆ ಒಳಗಾಗುವ ಅಪಾಯ ಹೆಚ್ಚು ಎಂಬುದನ್ನು ಹಲವು ಅಧ್ಯಯನಗಳು ದೃಢಪಡಿಸಿವೆ. ಮಹಿಳೆಯರ ಪಾಲಿಗೆ ಇವು ಅತ್ಯಂತ ಅಪಾಯಕಾರಿ ಕಾಯಿಲೆಗಳು. ಆದ್ದರಿಂದ ಮಹಿಳೆಯರು ಕ್ಯಾನ್ಸರ್‌ ಸೇರಿದಂತೆ ಅಪಾಯಕಾರಿ ರೋಗಗಳಿಗೂ ಅನ್ವಯವಾಗುವಂಥ ವಿಮೆಯನ್ನು ಮಾಡಿಸಬೇಕು. ವಿಶೇಷವಾಗಿ ಕುಟುಂಬದಲ್ಲಿ ಹಿಂದೆ ಯಾರಾದರೂ ಇಂತಹ ಕಾಯಿಲೆಗೆ ತುತ್ತಾಗಿದ್ದ ಇತಿಹಾಸವಿದ್ದರೆ ಅಂತಹ ಮಹಿಳೆಯರು ಈ ನಿಟ್ಟಿನಲ್ಲಿ ಎಚ್ಚರ ವಹಿಸಲೇಬೇಕು.

ಮಹಿಳೆಯರಿಗೆ ವಯಸ್ಸಾದಂತೆ ಅನೇಕ ಕಾಯಿಲೆಗಳು ಅವರನ್ನು ಆವರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಜೀವನದ ದೀರ್ಘ ಕಾಲದವರೆಗೆ ಆರೋಗ್ಯ ಕಾಪಾಡುವುದಕ್ಕಾಗಿ ಮಾಡುವ ವೆಚ್ಚದ ಮೇಲೆ ನಿಯಂತ್ರಣ ಸಾಧಿಸಬೇಕಾದರೆ ಶೀಘ್ರದಲ್ಲೇ ಒಳ್ಳೆಯ ವಿಮೆ ಆಯ್ಕೆ ಮಾಡಿಕೊಳ್ಳುವುದೊಂದೇ ಸರಿಯಾದ ಮಾರ್ಗ.

ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಹಾರ್ಮೋನ್‌ಗಳ ಏರುಪೇರಿನಿಂದಾಗಿ ಬರುವ ಕೆಲವು ಸಮಸ್ಯೆಗಳು ವಿಮಾ ವ್ಯಾಪ್ತಿಗೆ ಬರುವುದಿಲ್ಲ. ಈ ಸಮಯದಲ್ಲಿ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆಗಳೂ ಬರಬಹುದು. ಮುಟ್ಟು ನಿಲ್ಲುವ ಸಮಯ ಮಹಿಳೆಯರಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕೆಲವು ಸಮಸ್ಯೆಗಳು ಕಂಡು ಬರುತ್ತವೆ. ಇಂತಹ ಸಂದರ್ಭದಲ್ಲಿ ಅನೇಕರಿಗೆ ಮನೋರೋಗ ಚಿಕಿತ್ಸೆ ಅಥವಾ ಆಪ್ತ ಸಮಾಲೋಚನೆಯ ಅಗತ್ಯ ಇರುತ್ತದೆ. ಮಹಿಳೆಯರಿಗಾಗಿಯೇ ರೂಪಿಸಿದ ಕೆಲವು ಆರೋಗ್ಯ ವಿಮೆಗಳು ಇಂತಹ ವೆಚ್ಚಗಳನ್ನೂ ಒಳಗೊಂಡಿವೆ. ಈ ವಯಸ್ಸಿನಲ್ಲಿ ವಿಮಾ ಕಂತು ದುಬಾರಿಯಾಗುವುದರಿಂದ ಸಾಕಷ್ಟು ಮುಂಚಿತವಾಗಿಯೇ ವಿಮೆ ಮಾಡಿಸಿಕೊಳ್ಳುವುದು ಸೂಕ್ತ.

ಮಹಿಳೆಯರಿಗಾಗಿಯೇ ರೂಪಿಸಿರುವ ಕೆಲವೇ ಕೆಲವು ವಿಮೆಗಳು ಮಾತ್ರ ಅವರಿಗೆ ಜೀವನದಲ್ಲಿ ಎದುರಾಗುವ ಎಲ್ಲ ಬಗೆಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒಳಗೊಂಡಿರುತ್ತವೆ. ಆದ್ದರಿಂದ ಸರಿಯಾದ ಕಾಲದಲ್ಲಿ ಸರಿಯಾದ ವಿಮೆಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.

ಸಾಮಾನ್ಯವಾಗಿ ಮಹಿಳೆಯರು ಸಣ್ಣ ವಯಸ್ಸಿನಲ್ಲೇ ಹೂಡಿಕೆ ಮಾಡಲು ಮುಂದಾದರೂ, ವಿವಾಹದ ನಂತರ ಎಲ್ಲವನ್ನೂ ಮರೆತು ಕುಟುಂಬದವರಿಂದ ಆರ್ಥಿಕ ನೆರವು ಯಾಚಿಸುತ್ತಾರೆ. ಸಮಗ್ರವಾದ ಒಂದು ಆರೋಗ್ಯ ವಿಮೆ ಮಾತ್ರ ಮನೆಯ ಆರ್ಥಿಕ ಸ್ಥಿತಿಗೆ ಯಾವುದೇ ಧಕ್ಕೆ ಆಗದಂತೆ ಮಹಿಳೆಗೆ ಆರೋಗ್ಯ ರಕ್ಷಣೆಗೆ ತುರ್ತು ನೆರವು ಒದಗಿಸಬಲ್ಲದು ಎಂಬುದನ್ನು ಅರಿಯುವುದು ಮುಖ್ಯ. ದೀರ್ಘಾವಧಿಯಲ್ಲಿ ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ವಹಿಸಿಕೊಳ್ಳಲು ಇಂತಹ ವಿಮೆ ಸಹಕಾರಿಯಾಗುತ್ತದೆ.

ಮಹಿಳೆ ಒಂದು ಇಡೀ ಕುಟುಂಬ ಮಾತ್ರವಲ್ಲ, ಒಂದು ರಾಷ್ಟ್ರದ ಚಾಲನಾ ಶಕ್ತಿಯೂ ಹೌದು. ಬಹುದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹೊತ್ತುಕೊಂಡ ಮಹಿಳೆ, ತನ್ನ ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು. ಮಹಿಳೆ ಯಶಸ್ಸಿನ ಮತ್ತು ಆರೋಗ್ಯಕರ ಭವಿಷ್ಯವನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ.

(ಎಸ್‌ಬಿಐ ಜನರಲ್‌ ಇನ್ಶೂರನ್ಸ್‌ನ ಉತ್ಪನ್ನ ಅಭಿವೃದ್ಧಿ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT