ಎಐಸಿಸಿ

ಚಿನ್ನದ ತಟ್ಟೆಯ ಮುಳ್ಳಿನ ಕಿರೀಟ

ರಾಹುಲ್‌ ಗಾಂಧಿ ತಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಮರುಶೋಧನೆಗೆ ಒಡ್ಡಬೇಕಿದೆ. ಮುರಿದು ಕಟ್ಟಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕಾಲದಲ್ಲಾದರೂ ವಂಶಪಾರಂಪರ್ಯದ ನೊಗದಿಂದ ಬಿಡಿಸಬೇಕಿದೆ

ಚಿನ್ನದ ತಟ್ಟೆಯ ಮುಳ್ಳಿನ ಕಿರೀಟ

ರಾಹುಲ್‌ ಗಾಂಧಿ ತಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಮರುಶೋಧನೆಗೆ ಒಡ್ಡಬೇಕಿದೆ, ಮುರಿದು ಕಟ್ಟಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕಾಲದಲ್ಲಾದರೂ ವಂಶಪಾರಂಪರ್ಯದ ನೊಗದಿಂದ ಬಿಡಿಸಬೇಕಿದೆ.

ನೆಹರೂ-ಗಾಂಧಿ ಮನೆತನದ ಕುಡಿ ರಾಹುಲ್ ಗಾಂಧಿ ಅನತಿ ಕಾಲದಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಈ ಗಾದಿಯನ್ನು ಏರುತ್ತಿರುವ ನೆಹರೂ- ಗಾಂಧಿ ಮನೆತನದ ಆರನೆಯ ಕುಡಿ ಅವರು. ಮೋತಿಲಾಲ್, ಜವಾಹರಲಾಲ್, ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಎದುರಿಸಿದ್ದಕ್ಕಿಂತ ಕಡು ಕಠಿಣ ಸವಾಲುಗಳು ರಾಹುಲ್ ಅವರಿಗೆ ಮುಖಾಮುಖಿಯಾಗಿವೆ. ಪ್ರತಿಭೆ, ಜಾಣ್ಮೆ, ಕೂಟನೀತಿ, ದಿಟ್ಟತನ, ನಿಷ್ಠುರ ಗುಣಗಳು ಹಿಂದೆಂದಿಗಿಂತಲೂ ಇಂದಿನ ದಿನಗಳ ಕಾಂಗ್ರೆಸ್ ಸಾರಥಿಗೆ ಅತ್ಯಗತ್ಯ.

ಚುನಾವಣೆಯ ರಣಕ್ಷೇತ್ರದ ನಡುವೆಯೇ ಅಧ್ಯಕ್ಷ ಪದಕ್ಕೆ ತಲೆ ಒಡ್ಡಿರುವ ರಾಹುಲ್ ಅವರಿಗೆ ಜನಾದೇಶ ಪಡೆಯುವ ಅಗ್ನಿಪರೀಕ್ಷೆಗಳು ಸಾಲುಗಟ್ಟಿ ನಿಂತಿವೆ. ಗುಜರಾತಿನಲ್ಲಿ ಕಾಂಗ್ರೆಸ್ಸಿನ ಪರಿಸ್ಥಿತಿ ದಯನೀಯವೇನೂ ಅಲ್ಲ. ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ವಿಧಾನಸಭೆ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಇನ್ನಷ್ಟು ಬೆಳಕಿನ ದಿನಗಳನ್ನು ಕಾಣುವುದು ಸಾಧ್ಯವೇ ವಿನಾ ಇನ್ನಷ್ಟು ಕೆಳಗೆ ಜಾರುವ ಸೂಚನೆಗಳು ಇಲ್ಲ. ಈ ಚುನಾವಣೆಗಳು ಕಳೆಯುತ್ತಿದ್ದಂತೆಯೇ ಮರುವರ್ಷ ಲೋಕಸಭಾ ಚುನಾವಣೆಯ ಮಹಾಪರೀಕ್ಷೆ ರಾಹುಲ್ ಎದುರು ನಿಲ್ಲಲಿದೆ. ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್ಸನ್ನು ಸೋಲಿಸುತ್ತಾರೆ ಎಂಬುದಾಗಿ ತಮ್ಮ ತಲೆಗೆ ಕಟ್ಟಿರುವ ಸೋಲಿನ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸವಾಲು ರಾಹುಲ್ ಮುಂದೆ ಗಹಗಹಿಸಿದೆ.

ತಲೆಮಾರುಗಳು ಬದಲಾಗುತ್ತಿವೆ. ಆಶೋತ್ತರಭರಿತ ಯುವ ಭಾರತದ ಅಪೇಕ್ಷೆಗಳು ನಿರೀಕ್ಷೆಗಳಿಗೆ ಅನುಗುಣವಾದ ಹೊಸ ನುಡಿಗಟ್ಟಿನ ತಾಜಾ ರಾಜಕಾರಣವನ್ನು ಅವರು ಕಟ್ಟಿಕೊಡಬೇಕಿದೆ. ದಡ್ಡ ಮಾತುಗಳನ್ನು ಆಡುವ ಪಪ್ಪು ಎಂಬುದಾಗಿ ತಮ್ಮನ್ನು ಕುರಿತು ಬಿಜೆಪಿ ಯಶಸ್ವಿಯಾಗಿ ಕಟ್ಟಿರುವ ಮಿಥ್ಯೆಗೆ ರಾಹುಲ್ ಆಗಾಗ ನೀರು, ಗೊಬ್ಬರ ಎರೆದದ್ದು ಹೌದು. ಅವರ ತಂದೆ ರಾಜೀವ್‌ ಗಾಂಧಿ ಕೂಡ ಇಂತಹ ತಪ್ಪುಗಳನ್ನು ಮಾಡಿದ್ದು ಉಂಟು. ಆದರೆ ಮಾಡಿದ ತಪ್ಪನ್ನು ಒಪ್ಪಿ ತಿದ್ದಿಕೊಳ್ಳಲು ಅವರು ತಡ ಮಾಡಲಿಲ್ಲ. ತಡವಾಗಿಯಾದರೂ ರಾಹುಲ್ ಪಕ್ವತೆಯತ್ತ ನಡೆಯುತ್ತಿರುವ ದೂರದ ಸೂಚನೆಗಳಿವೆ. ಇತ್ತೀಚಿನ ದಿನಗಳಲ್ಲಿ ದೇಶದ ರಾಜಕಾರಣವು ರಾಹುಲ್ ಅವರನ್ನು ನೋಡುವ ಬಗೆಯೂ ಬದಲಾಗತೊಡಗಿದೆ. ಮೋದಿಯವರ ಪ್ರಭಾವಳಿ ಈಗ ಮೊದಲಿನಷ್ಟು ಪ್ರಖರ ಅಲ್ಲ. ಕಾಲದೇಶಗಳು ರಾಹುಲ್ ಅವರನ್ನು ಅವರ ಎಲ್ಲ ಮಿತಿಗಳು ಮತ್ತು ದಡ್ಡತನದ ನಡುವೆಯೂ ಅತ್ಯಂತ ಕಠಿಣವಾಗಿಯೂ ನಿರ್ದಯವಾಗಿಯೂ ನಡೆಸಿಕೊಂಡಿರುವುದು ಹೌದು. ಇಂದಿರಾ ಗಾಂಧಿ ಹತ್ಯೆ- ರಾಜೀವ್‌ ಗಾಂಧಿ ಹತ್ಯೆಗಳ ಕೌಟುಂಬಿಕ ದುರಂತಗಳನ್ನು ಎಳೆಯದರಲ್ಲೇ ಕಂಡವರು ರಾಹುಲ್ ಮತ್ತು ಪ್ರಿಯಾಂಕಾ. ಭದ್ರ ಮೈಗಾವಲಿನ ಚಿನ್ನದ ಪಂಜರದಲ್ಲಿ ಅಸಹಜ ಬಾಲ್ಯ ಕಳೆದ ಮಕ್ಕಳು. ಅವರ ಮೌಲ್ಯಮಾಪನ ಮಾಡುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ರಾಹುಲ್ ಹೆಗಲ ಮೇಲೆ ತಮ್ಮ ಪೂರ್ವಜರ ಹೊಳೆಯುವ ವರ್ಚಸ್ಸುಗಳ ಬೆಟ್ಟದಷ್ಟು ಭಾರವಿದೆ. ಈ ಒಜ್ಜೆಯನ್ನು ಇಳಿಸಿಕೊಂಡು ಹಗುರಾಗಬೇಕು. ಜನರ ದನಿಯನ್ನು ಆಲಿಸಿ ನಡೆಯಬೇಕು. ಸರಳವೂ ನೇರವೂ ಪ್ರಾಮಾಣಿಕವೂ ಆದ ತಮ್ಮದೇ ಹೊಸ ದಾರಿಯನ್ನು ಅವರು ತುಳಿಯಬೇಕು. ವಂಶಪಾರಂಪರ್ಯದ ವೃತ್ತಿ-ಪ್ರವೃತ್ತಿಯಾಗಿ ತಮಗೆ ದಾಟಿ ಬಂದಿರುವ ರಾಜಕಾರಣವನ್ನು ರಾಹುಲ್ ಮನಸಾರೆ ಬಯಸುತ್ತಾರೆಯೇ? ಅವರ ಆಯ್ಕೆಗೇ ಬಿಟ್ಟಿದ್ದರೆ ಬೇರೆಯದೇ ಆದ ಬದುಕುವ ದಾರಿ ಹಿಡಿಯುತ್ತಿದ್ದರೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಮನಸಿದ್ದೋ ಮನಸಿಲ್ಲದೆಯೋ ಅವರು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದ ಪಾತಾಳಕ್ಕೆ ಕುಸಿದಿದೆ. ಯಥಾಸ್ಥಿತಿವಾದಿ ಶಕ್ತಿಗಳು ಸಮಾಜವನ್ನು ಗತದ ಅಸಮಾನತೆಯ ದಿನಗಳಿಗೆ ಒಯ್ಯುವ ಸನ್ನಾಹದಲ್ಲಿವೆ. ಸಮಾನತೆ ಆಶಯಗಳಿಗೆ ಕುತ್ತು ಒದಗಿದೆ. ರಾಜಕೀಯ ಎದುರಾಳಿಯಾಗಿ ನರೇಂದ್ರ ಮೋದಿಯವರಂತಹ ಪ್ರಚಂಡ ನಾಯಕ ಎತ್ತರಕ್ಕೆ ನಿಂತಿದ್ದಾರೆ. ಕಟ್ಟರ್ ರಾಷ್ಟ್ರವಾದದ ಹೆದ್ದೆರೆಗಳು ಜನಜೀವನವನ್ನು ಅಪ್ಪಳಿಸಿವೆ. ತಮ್ಮನ್ನು ಮತ್ತು ಕಾಂಗ್ರೆಸ್ಸನ್ನು ಮರುಶೋಧನೆಗೆ ಒಡ್ಡಬೇಕು, ಮುರಿದು ಕಟ್ಟಬೇಕಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನು ತಮ್ಮ ಕಾಲದಲ್ಲಾದರೂ ವಂಶಪಾರಂಪರ್ಯದ ನೊಗದಿಂದ ಬಿಡಿಸಬೇಕಿದೆ.

Comments
ಈ ವಿಭಾಗದಿಂದ ಇನ್ನಷ್ಟು
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

ಸಂಪಾದಕೀಯ
ನ್ಯಾಯಾಂಗ ಉತ್ತರದಾಯಿ ಮಸೂದೆಗೆ ಮರುಜೀವ ನೀಡಿ

23 Apr, 2018
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

ಅತ್ಯಾಚಾರಕ್ಕೆ ಮರಣ ದಂಡನೆ
ಮರಣದಂಡನೆ ಮದ್ದಲ್ಲ ಶಿಕ್ಷಾಭಯ ಮೂಡಿಸಿ

22 Apr, 2018
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

ಸಂಪಾದಕೀಯ
ಆರ್‌ಟಿಐ ವ್ಯಾಪ್ತಿಗೆ ಬಿಸಿಸಿಐ ಶಿಫಾರಸು ಸ್ವಾಗತಾರ್ಹ

20 Apr, 2018
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

ಸಂಪಾದಕೀಯ
ನಗದು ಕೊರತೆ ಆತಂಕ ತಕ್ಷಣ ದೂರವಾಗಲಿ

19 Apr, 2018
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

ಸಂಪಾದಕೀಯ
ಸಿರಿಯಾ ಮೇಲೆ ದಾಳಿ ಸಂಯಮ ಅಗತ್ಯ

18 Apr, 2018