ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಅಂತಿಮ ವಿಚಾರಣೆ ಆರಂಭಕ್ಕೆ ಮೊದಲೇ ಜಟಾಪಟಿ

ತೀವ್ರ ವಿರೋಧದ ಕಾರಣ ಫೆ.8ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಂತ ಭಾವನಾತ್ಮಕವಾದ ಅಯೋಧ್ಯೆಯ ರಾಮಮಂದಿರ–ಬಾಬರಿ ಮಸೀದಿ ವಿವಾದದ ಅಂತಿಮ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾಗುವ ಮೊದಲೇ ನ್ಯಾಯಮೂರ್ತಿಗಳು ಮತ್ತು ಸುನ್ನಿ ವಕ್ಫ್‌ ಮಂಡಳಿ ಪರ ವಕೀಲರ ನಡುವೆ ಜಟಾಪಟಿಯೇ ನಡೆಯಿತು.

ಅಂತಿಮ ವಿಚಾರಣೆಯನ್ನು ಮಂಗಳವಾರವೇ ಆರಂಭಿಸುವುದಕ್ಕೆ ಸುನ್ನಿ ವಕ್ಫ್ ಮಂಡಳಿ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಶ್ಯಂತ ದವೆ ಮತ್ತು ರಾಜೀವ್ ಧವನ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಅಂತಿಮ ವಿಚಾರಣೆ ಆರಂಭವನ್ನು 2018ರ ಫೆಬ್ರುವರಿ 8ಕ್ಕೆ ನಿಗದಿ ಮಾಡಿತು.

‘ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ಅಂತಿಮ ವಿಚಾರಣೆ ಆರಂಭಿಸಬೇಡಿ. ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿ’ ಎಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು.

ವಿಚಾರಣೆ ಮುಂದೂಡಿಕೆಯ ಮನವಿಯನ್ನು ಪೀಠ ವಜಾ ಮಾಡಿತು. ‘ವ್ಯಾಜ್ಯವನ್ನು ಸಾಂವಿಧಾನಿಕ ಪೀಠಕ್ಕೆ ಏಕೆ ವರ್ಗಾಯಿಸಬೇಕು’ ಎಂದು ಪ್ರಶ್ನಿಸಿತು. ಪ್ರಶ್ನೆಗೆ ಉತ್ತರಿಸಲು ಸಿಬಲ್ ನಿರಾಕರಿಸಿದರು. ಆಗ ನಿಮ್ಮ ವಾದವನ್ನು ಆರಂಭಿಸಿ ಎಂದು ರಾಮಲಲ್ಲಾ ಮತ್ತು ರಾಮಜನ್ಮ ಭೂಮಿ ನ್ಯಾಸ ಪರ ವಕೀಲರಿಗೆ ಪೀಠ ಸೂಚಿಸಿತು.

‘ನ್ಯಾಯಾಲಯದ ಕೊಠಡಿ ಬಿಟ್ಟು ಹೊರ ನಡೆಯುತ್ತೇವೆ’ ಎಂದು ವಕ್ಫ್ ಮಂಡಳಿ ಪರ ವಕೀಲರು ಆಗ ಬೆದರಿಕೆ ಒಡ್ಡಿದರು.

ವಕ್ಫ್ ಮಂಡಳಿಯ ಪ್ರತಿಪಾದನೆ

* ವಿವಾದಕ್ಕೆ ಸಂಬಂಧಿಸಿದಂತೆ 9,000 ಪುಟಗಳಷ್ಟು ದೀರ್ಘವಾದ ದಾಖಲೆಗಳು ಇವೆ. ಅವನ್ನೆಲ್ಲಾ ಕೂಲಂಕಷವಾಗಿ ಪರಿಶೀಲಿಸಿಯೇ ವಿಚಾರಣೆ ಆರಂಭಿಸಬೇಕು. ವಿಚಾರಣೆ ಆರಂಭಿಸಲು ಆತುರವೇಕೆ?

* ಇದು ಸ್ವಾತಂತ್ರ್ಯದ ಬಳಿಕದ ಅತ್ಯಂತ ಪ್ರಮುಖ ವ್ಯಾಜ್ಯ. ಪ್ರತಿದಿನದ ವಿಚಾರಣೆಯೂ ನ್ಯಾಯಾಲಯದ ಹೊರಗೆ ತೀವ್ರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಆ ಚುನಾವಣೆ ಮುಗಿಯುವವರೆಗೂ ಅಂತಿಮ ವಿಚಾರಣೆಯನ್ನು ಆರಂಭಿಸಬೇಡಿ

* ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಏನೆನೆಲ್ಲಾ ಬರೆದಿದ್ದಾರೆ ಮತ್ತು ಆರ್‌ಎಸ್‌ಎಸ್ ಮುಖಂಡ ಮೋಹನ ಭಾಗವತ್ ಎಂತಹ ಹೇಳಿಕೆಗಳನ್ನೆಲ್ಲಾ ನೀಡಿದ್ದಾರೆ ನೋಡಿ

* ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ’ ಎಂದು ಆಡಳಿತ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು. ಹೀಗಾಗಿ ಚುನಾವಣೆ ಮುಗಿಯುವವರೆಗೂ ವಿಚಾರಣೆ ಆರಂಭಿಸಬಾರದು– ದುಶ್ಯಂತ ದವೆ

* ಅಕ್ಟೋಬರ್ ಹೊತ್ತಿಗೆ ಮುಖ್ಯ ನ್ಯಾಯಮೂರ್ತಿ ನಿವೃತ್ತವಾಗುವಾಗಲೂ ವಿಚಾರಣೆ ಮುಗಿದಿರುವುದಿಲ್ಲ. ಹೀಗಾಗಿ ವ್ಯಾಜ್ಯವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕು– ರಾಜೀವ್ ಧವನ್

ರಾಮಲಲ್ಲಾ ಪರ ವಕೀಲರ ವಾದ

* ನ್ಯಾಯಾಲಯದ ನಿರ್ಧಾರ ಏನಾಗುತ್ತದೆ ಎಂದು ವಕ್ಫ್ ಮಂಡಳಿ ಪರ ವಕೀಲರು ಈಗಲೇ ಊಹಿಸುತ್ತಿದ್ದಾರೆ. ಅವರ ವಾದಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಯಾವುದೇ ಸಾಮಾನ್ಯ ಪ್ರಕರಣವನ್ನು ಪರಿಗಣಿಸಿದಂತೆಯೇ ಈ ಪ್ರಕರಣವನ್ನು ಪರಿಗಣಿಸಬೇಕು– ವಕೀಲ ಹರೀಶ್ ಸಾಳ್ವೆ

* ಪ್ರಕರಣದ ಎಲ್ಲಾ ಮನವಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ರಾಜೀವ್ ಧವನ್ ಅವರ ಮಾತುಗಳು ಅತ್ಯಂತ ದುರದೃಷ್ಟಕರ– ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಪೀಠ ಹೇಳಿದ್ದು

ನಿಮ್ಮ ಮನವಿಗಳನ್ನು ಕೇಳಿ ನಮಗೆ ಆಶ್ಚರ್ಯ ಮತ್ತು ಆಘಾತವಾಗುತ್ತಿದೆ. ನೀವು ಗಂಭೀರವಲ್ಲದ ಮಾತುಗಳನ್ನು ಆಡುತ್ತಿದ್ದೀರಿ. ಇದು ಅತ್ಯಂತ ಮಹತ್ವದ ಪ್ರಕರಣ ಎಂಬುದು ನಮಗೂ ಗೊತ್ತಿದೆ. ಆದರೆ ನ್ಯಾಯಾಲಯದ ಹೊರಗೆ ಏನಾಗುತ್ತದೆ ಎಂಬುದು ನಮಗೆ ಬೇಡದ ವಿಚಾರ. ನೀವು ನಿಮ್ಮ ವಾದವನ್ನು ಜನವರಿಯಲ್ಲೇ ಮಂಡಿಸಿ. ಆದರೆ ಇವತ್ತು ವಾದ ಆರಂಭಿಸಿ ಎಂದಷ್ಟೇ ಹೇಳುತ್ತಿದ್ದೇವೆ.

ಧ್ವಂಸಕ್ಕೆ 25 ವರ್ಷ

ಬಾಬ್ರಿ ಮಸೀದಿ ಧ್ವಂಸ ಮಾಡಿ ಬುಧವಾರಕ್ಕೆ 25 ವರ್ಷ ತುಂಬುವುದ ರಿಂದ ಅಯೋಧ್ಯೆ ಮತ್ತು ಫರೀದಾಬಾದ್‌ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

‘ಕಾಂಗ್ರೆಸ್‌ ನಿಲುವೇನು’

ಕಾಂಗ್ರೆಸ್‌ನ ಮುಖಂಡರು 2014ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ವಕೀಲ ಕೆಲಸಕ್ಕೆ ಮರಳಿ ರಾಮಮಂದಿರ–ಬಾಬರಿ ಮಸೀದಿಯಂತಹ ಸೂಕ್ಷ್ಮ ಪ್ರಕರಣಗಳನ್ನು ಕೈಗೆತ್ತಿಕೊಂಡಿರುವುದು ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

2019ರ ಲೋಕಸಭಾ ಚುನಾವಣೆ ವರೆಗೆ ಅಯೋಧ್ಯೆ ವಿವಾದವನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು ಎಂದು ಕೇಂದ್ರದ ಮಾಜಿ ಸಚಿವ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರ ಬಗ್ಗೆ ಕಾಂಗ್ರೆಸ್‌ ತನ್ನ ನಿಲುವು ಪ್ರಕಟಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT