ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ 50 ಸುಪ್ತ ಖಾತೆಗಳಲ್ಲಿ ₹200 ಕೋಟಿ ಪತ್ತೆ

Last Updated 5 ಡಿಸೆಂಬರ್ 2017, 20:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ 50 ಸುಪ್ತ ಬ್ಯಾಂಕ್‌ ಖಾತೆಗಳಲ್ಲಿ ₹200 ಕೋಟಿ ಇರುವುದನ್ನು ಪತ್ತೆ ಮಾಡಲಾಗಿದೆ.

ನಗರದಾದ್ಯಂತ ವಿವಿಧ ಬ್ಯಾಂಕ್‌ಗಳಲ್ಲಿ 630ಕ್ಕೂ ಹೆಚ್ಚಿನ ಖಾತೆಗಳನ್ನು ಬಿಬಿಎಂಪಿ ಹೊಂದಿದೆ. ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರುವ ಉದ್ದೇಶದಿಂದ ಅನವಶ್ಯಕ ಬ್ಯಾಂಕ್‌ ಖಾತೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಇಂತಹ ಸುಪ್ತ ಖಾತೆಗಳನ್ನು ಮುಖ್ಯ ಲೆಕ್ಕಾಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಮಾಡುತ್ತಿದ್ದಾರೆ.

‘ನಾವು 630 ಖಾತೆಗಳ ಪಟ್ಟಿಯನ್ನು ಪರಿಶೀಲಿಸಿದಾಗ, ಐದು ಅಂಕಿಯ ಖಾತೆ ಸಂಖ್ಯೆಗಳು ಇರುವುದು ಗಮನಕ್ಕೆ ಬಂತು. ಇವು ಕೋರ್‌ ಬ್ಯಾಂಕಿಂಗ್‌ ಜಾರಿಗೊಳಿಸುವ ಮುನ್ನ ಇದ್ದ ಸಂಖ್ಯೆಗಳು. ಈ ಖಾತೆಗಳ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದೆವು’ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಹಣವನ್ನು ಕಸದ ಬಿಲ್‌, ಬೀದಿ ದೀಪಗಳಿಗೆ ಬಿಲ್‌ ಪಾವತಿಸಲು ಹಾಗೂ ಹುಡ್ಕೊ ಸಾಲವನ್ನು ತೀರಿಸಲು ಬಳಸಿಕೊಂಡಿದ್ದೇವೆ’ ಎಂದರು.

‘ಈ ಖಾತೆಗಳಲ್ಲದೆ 35 ಸುಪ್ತ ಖಾತೆಗಳನ್ನು ಪತ್ತೆ ಮಾಡಿದ್ದೇವೆ. ಈ ಖಾತೆಗಳಲ್ಲಿ ಎಷ್ಟು ಹಣ ಇದೆ ಎಂಬ ಮಾಹಿತಿ ಸಿಕ್ಕಿಲ್ಲ’ ಎಂದು ಹೇಳಿದರು.

‘ಅನಗತ್ಯ ಬ್ಯಾಂಕ್‌ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸುತ್ತಿದ್ದೇವೆ. ಅಗತ್ಯ ಇರುವ ಖಾತೆಗಳಲ್ಲಿ ಕನಿಷ್ಠ ಠೇವಣಿ ಇಡುತ್ತೇವೆ. ಏಕೆಂದರೆ, ಮುಂದಿನ ದಿನಗಳಲ್ಲಿ ಖಾತೆಗಳ ವಿವರ ಪರಿಶೀಲಿಸಬೇಕಾದರೆ ಪಾಸ್‌–ಶೀಟ್‌ನ ಅಗತ್ಯವಿರುತ್ತದೆ. ಖಾತೆಗಳನ್ನು ಸಂಪೂರ್ಣವಾಗಿ ಮುಚ್ಚಿದರೆ ಪಾಸ್‌–ಶೀಟ್‌ ಸಿಗುವುದಿಲ್ಲ’ ಎಂದರು.

‘ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಪಾಲಿಕೆಗೆ ಸಂಬಂಧಿಸಿದ ಖಾತೆಗಳಿದ್ದರೆ ಅದರ ಮಾಹಿತಿ ನೀಡುವಂತೆ ಪತ್ರ ಬರೆಯುತ್ತೇವೆ. ಖಾತೆಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದು, ಸುಪ್ತ ಖಾತೆಗಳಲ್ಲಿ ಮತ್ತಷ್ಟು ಹಣ ಪತ್ತೆಯಾಗುವ ವಿಶ್ವಾಸವಿದೆ’ ಎಂದು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಮಹಾದೇವ್‌ ತಿಳಿಸಿದರು.

‘419 ಕ್ರಿಯಾಶೀಲ ಬ್ಯಾಂಕ್ ಖಾತೆಗಳಲ್ಲಿ ನಿಯಮಿತವಾಗಿ ವಹಿವಾಟು ನಡೆಸಲಾಗುತ್ತಿದೆ’ ಎಂದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ‘ಪಾಲಿಕೆಯ ಆರ್ಥಿಕ ಅಶಿಸ್ತಿನ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಅಧಿಕಾರಿಗಳು ತಮ್ಮ ಇಚ್ಛಾನುಸಾರ ಖಾತೆಗಳನ್ನು ತೆರೆಯುತ್ತಾರೆ. ಅವರು ವರ್ಗಾವಣೆಯಾದ ಬಳಿಕ, ಆ ಸ್ಥಾನಕ್ಕೆ ಬರುವ ಅಧಿಕಾರಿಗಳಿಗೆ ಈ ಖಾತೆಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಕೆಲ ಅಧಿಕಾರಿಗಳಿಗೆ ಮಾತ್ರ ಖಾತೆ ತೆರೆಯುವ ಅಧಿಕಾರ ನೀಡಬೇಕು’ ಎಂದು ಒತ್ತಾಯಿಸಿದರು.

**

ಒಂದು ಖಾತೆಯಲ್ಲೇ ₹6.36 ಕೋಟಿ ಪತ್ತೆ

‘ಪಾಲಿಕೆಯ ಅನೇಕ ಖಾತೆಗಳನ್ನು ಪರಿಶೀಲಿಸಿದಾಗ ಒಂದು ಖಾತೆಯಲ್ಲೇ ₹6.36 ಕೋಟಿ ಇರುವುದು ಪತ್ತೆಯಾಗಿದೆ. ಇದು ಆಯುಕ್ತರ ಹೆಸರಿನಲ್ಲಿತ್ತು. ಈ ಖಾತೆಯನ್ನು ಮುಚ್ಚಿ, ಅದರಲ್ಲಿದ್ದ ಹಣವನ್ನು ಪಾಲಿಕೆಯ ಮುಖ್ಯ ಖಾತೆಗೆ ವರ್ಗಾಯಿಸಿದ್ದೇವೆ’ ಎಂದು ಮಹಾದೇವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT