ಆರೋಗ್ಯ ಇಲಾಖೆಯಲ್ಲಿ ಹೀಗೊಂದು ಪ್ರಕರಣ

ರದ್ದು ಪಡಿಸಿದ್ದ ನೇಮಕಾತಿ ಪಟ್ಟಿಗೆ ಮತ್ತೆ ಹಸಿರು ನಿಶಾನೆ

ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಆಯ್ಕೆ ಮಾಡಿದ್ದ 13 ಉಪನ್ಯಾಸಕರ ನೇಮಕಾತಿ ಪಟ್ಟಿಯನ್ನು ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ರದ್ದುಪಡಿಸಿದ್ದ ಆರೋಗ್ಯ ಇಲಾಖೆ, ಕೇವಲ ಎಂಟು ತಿಂಗಳೊಳಗೆ ಮತ್ತೆ ಅನುಮೋದನೆ ನೀಡಿದೆ.

ಬೆಂಗಳೂರು: ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಆಯ್ಕೆ ಮಾಡಿದ್ದ 13 ಉಪನ್ಯಾಸಕರ ನೇಮಕಾತಿ ಪಟ್ಟಿಯನ್ನು ನಿಯಮ ಉಲ್ಲಂಘನೆಯಾಗಿದೆ ಎಂಬ ಕಾರಣಕ್ಕೆ ರದ್ದುಪಡಿಸಿದ್ದ ಆರೋಗ್ಯ ಇಲಾಖೆ, ಕೇವಲ ಎಂಟು ತಿಂಗಳೊಳಗೆ ಮತ್ತೆ ಅನುಮೋದನೆ ನೀಡಿದೆ.

ಕಾಲೇಜು ಆಡಳಿತ ಮಂಡಳಿಯ ಮನವಿ ಇಲ್ಲದಿದ್ದರೂ ಕಡತವನ್ನು ಸ್ವಯಂ ಪ್ರೇರಿತವಾಗಿ ವಾಪಸ್ ತರಿಸಿಕೊಂಡ ಆರೋಗ್ಯ ಇಲಾಖೆ ಹಿಂದಿನ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ತಾವೇ ತಿರಸ್ಕರಿಸಿದ್ದ ಪಟ್ಟಿಗೆ ಅನುಮೋದನೆ ನೀಡಿದ್ದಾರೆ’ ಎಂದು ಈ ಸಂಬಂಧ ಕಾನೂನು ಹೋರಾಟ ನಡೆಸುತ್ತಿರುವ ಡಾ. ಸಂತೋಷ್ ಬಿ ಆಪಾದಿಸಿದ್ದಾರೆ.

ಸಂತೋಷ್ ಹಾಗೂ ಪತ್ರಕರ್ತ ಶಿವಕುಮಾರ್ ಭೋಜಶೆಟ್ಟರ್ ಅವರು, ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ‍ಪಡೆದುಕೊಂಡಿದ್ದಾರೆ.

ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ ಮಹಾವಿದ್ಯಾಲಯ 2015ರ ಸೆಪ್ಟೆಂಬರ್‌ನಲ್ಲಿ ಉಪನ್ಯಾಸಕರ ಆಯ್ಕೆಗಾಗಿ ಸಂದರ್ಶನ ನಡೆಸಿತ್ತು. ಆಯ್ಕೆ ಪಟ್ಟಿಯನ್ನು ಅನುಮೋದನೆಗಾಗಿ ಆಯುಷ್‌ ನಿರ್ದೇಶನಾಲಯಕ್ಕೆ ಕಳುಹಿಸಿತ್ತು. ಏತನ್ಮಧ್ಯೆ, ಡಾ. ಸಂತೋಷ್ ಬಿ, ಡಾ. ರಘುವೀರ್, ಡಾ.ಜುನೇತ್ ಎಸ್ತರ್ ಮತ್ತಿತರರು, ಆಯ್ಕೆ ಪ್ರಕ್ರಿಯೆ ಕಾನೂನು ಸಮ್ಮತವಾಗಿ ನಡೆದಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದರು.

ಆಯುಷ್‌ ನಿರ್ದೇಶಕರ ಅಧ್ಯಕ್ಷತೆಯಲ್ಲಿ 2016ರ ಮಾರ್ಚ್‌ನಲ್ಲಿ ನಡೆದ ಸಭೆ ಆಕ್ಷೇಪಣೆಗಳನ್ನು ಪರಿಶೀಲಿಸಿತ್ತು.

‘ನೇಮಕಾತಿ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಪ್ರಾತಿನಿಧ್ಯ ಇರಲಿಲ್ಲ, ಆಡಳಿತ ಮಂಡಳಿಯೇ ಸಂದರ್ಶನ ನಡೆಸಿತ್ತು. ಸಮಿತಿಯಲ್ಲಿ ವಿಷಯ ಪರಿಣತರು ಇದ್ದರು ಎಂಬುದಕ್ಕೆ ಅಧಿಕೃತ ದಾಖಲೆ ಇಲ್ಲ. ಸಮಿತಿ ಸದಸ್ಯರ ಸಹಿ ಇರುವುದಿಲ್ಲ. ರೋಸ್ಟರ್‌ಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆದಿರುವುದಕ್ಕೆ ಯಾವುದೇ ದಾಖಲೆಗಳು ಇಲ್ಲ. ಅರ್ಹರು ಅವಕಾಶ ವಂಚಿತರಾಗಿರುವುದು ಇದರಿಂದ ಸ್ಪಷ್ಟ’ ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು.

ಒಂಬತ್ತು ಅಂಶಗಳನ್ನು ಮುಂದಿಟ್ಟು ಆಯ್ಕೆ‍ಪಟ್ಟಿ ತಿರಸ್ಕರಿಸುವಂತೆ ಸಮಿತಿ ಕೈಗೊಂಡಿದ್ದ ನಿರ್ಣಯ ಆಧರಿಸಿ, ನಿಯಮಾನುಸಾರ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ‌2016 ಏಪ್ರಿಲ್‌ನಲ್ಲಿ ಆಯುಷ್ ನಿರ್ದೇಶಕರು ಆದೇಶಿಸಿದ್ದರು.

ಎಲ್ಲ ಉಲ್ಟಾಪಲ್ಟಾ:

ಆರೋಗ್ಯ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2016ರ ಮೇ 27ರಂದು ನಡೆದ ಸಭೆ, ನಿಯಮ, ಹುದ್ದೆಗಳ ವರ್ಗೀಕರಣ, ಮೀಸಲಾತಿ ಅಂಶಗಳನ್ನು ಅನುಸರಿಸದೆ ನೇಮಕಾತಿ ಮಾಡಲಾಗಿದೆ ಎಂದು ಪ್ರತಿಪಾದಿಸಿತ್ತಲ್ಲದೆ, ಆಯುಷ್ ನಿರ್ದೇಶಕರ ಆದೇಶವನ್ನು ಎತ್ತಿ ಹಿಡಿದಿತ್ತು. ಇದಾದ ಬಳಿಕ, ಮಹಾವಿದ್ಯಾಲಯ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು.

ಏತನ್ಮಧ್ಯೆ, ಅದೇ ವರ್ಷದ ಸೆಪ್ಟೆಂಬರ್ 16ರಂದು ಶಾಲಿನಿ ರಜನೀಶ್, ನೇಮಕಾತಿಗೆ ಸಂಬಂಧಿಸಿದ ಕಡತವನ್ನು ಕೂಡಲೇ ವಾಪಸ್‌ ತರಿಸುವಂತೆ ಸೂಚಿಸಿದ್ದರು. ಆಯ್ಕೆ ಪಟ್ಟಿ ರದ್ದಪಡಿಸುವುದಕ್ಕಿಂತ ಮೊದಲು ವಿಧಾನಪರಿಷತ್ತಿನ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಬರೆದಿದ್ದ ಪತ್ರವನ್ನೂ ಅವರು ಉಲ್ಲೇಖಿಸಿದ್ದರು.

ಶಾಲಿನಿ ರಜನೀಶ್‌ ಸೂಚನೆ ಮೇರೆಗೆ, ಕಡತ ವಾಪಸ್‌ ತರಿಸಿಕೊಂಡ ಆರೋಗ್ಯ ಇಲಾಖೆ ಮತ್ತೆ ಹಳೆಯ ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಆರಂಭಿಸಿತು.

ಕಡತ ಪರಿಶೀಲಿಸಿದ ಆರೋಗ್ಯ ಸಚಿವ ಕೆ.ಆರ್. ರಮೇಶ್‌ ಕುಮಾರ್‌,  ‘ನೇಮಕಾತಿ ಪಟ್ಟಿಗೆ ಸಲ್ಲಿಕೆಯಾಗಿರುವ ಆಕ್ಷೇಪಣೆಗಳು ಯಾವುದೇ ಖಚಿತ ನ್ಯೂನತೆ ತೋರಿಸಿರುವುದಿಲ್ಲ. ಸಮರ್ಥನೀಯ ದಾಖಲೆಗಳನ್ನು ಒದಗಿಸಿಲ್ಲ’ ಎಂದು ಉಲ್ಲೇಖಿಸಿ 2016ರ ನವೆಂಬರ್ 16ರಂದು ಕಡತಕ್ಕೆ ಅನುಮೋದನೆ ನೀಡಿದ್ದರು.

‘ಸಚಿವರು ಅನುಮೋದಿಸಿದ ಎರಡು ದಿನಗಳಲ್ಲೆ ರಾಜ್ಯಪತ್ರದಲ್ಲಿ ಆದೇಶ ಪ್ರಕಟಿಸಲಾಗಿದೆ. ಸರ್ಕಾರ ಇಷ್ಟು ತರಾತುರಿಯಲ್ಲಿ ಆದೇಶ ಹೊರಡಿಸಿರುವುದು ಅನುಮಾನ ಮೂಡಿಸಿದೆ’ ಎಂದು ಅಭ್ಯರ್ಥಿಯೂ ಆಗಿದ್ದ ಡಾ. ಸಂತೋಷ ತಿಳಿಸಿದ್ದಾರೆ.

ಈ ಬಗ್ಗೆ ಅಭಿಪ್ರಾಯ ಪಡೆಯಲು ಆರೋಗ್ಯ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ಶಾಲಿನಿ ಹಾಗೂ ಈಗಿನ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಠ್‌ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

ಅಗ್ನಿಶಾಮಕ ದಳದ 100ಕ್ಕೂ ಹೆಚ್ಚು ಸಿಬ್ಬಂದಿ ಭಾಗಿ
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

20 Jan, 2018
ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಯುವತಿ

ಅಡ್ಡಾದಿಡ್ಡಿ ಕಾರು ಚಾಲನೆ
ಕಾನ್‌ಸ್ಟೆಬಲ್ ಕಪಾಳಕ್ಕೆ ಹೊಡೆದ ಯುವತಿ

20 Jan, 2018

ಬೆಂಗಳೂರು
ಮಹಿಳೆ ಜೊತೆ ಅನುಚಿತ ವರ್ತನೆ: ಆರೋಪಿ ಸೆರೆ

50 ವರ್ಷದ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಪೆಟ್ರೋಲ್ ಬಂಕ್ ನೌಕರ ಶಿವಾನಂದ (23) ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.

20 Jan, 2018

ಬೆಂಗಳೂರು
ರೈಲಿನಲ್ಲಿ 19 ಕೆ.ಜಿ ಚಿನ್ನ ಕಳವು!

ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಕುರ್ಲಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ದುಷ್ಕರ್ಮಿಗಳು ಉದ್ಯಮಿಯೊಬ್ಬರ 19 ಕೆ.ಜಿ 239 ಗ್ರಾಂ ಚಿನ್ನ ದೋಚಿದ್ದಾರೆ.

20 Jan, 2018

ಬೆಂಗಳೂರು
ಕೌನ್‌ ಬನೇಗಾ ಕರೋರ್‌ ಪತಿ ₹1.15 ಲಕ್ಷ ವಂಚನೆ

‘ಕೌನ್‌ ಬನೇಗಾ ಮಹಾ ಕರೋರ್‌ಪತಿ’ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತನೊಬ್ಬ, ಬಹುಮಾನದ ಆಮಿಷವೊಡ್ಡಿ ಗ್ಯಾರೇಜ್‌ ಮಾಲೀಕ ಇಸ್ಮಾಯಿಲ್‌ ಎಂಬುವರಿಂದ ₹1.15 ಲಕ್ಷ ಸುಲಿಗೆ ಮಾಡಿದ್ದಾನೆ. ...

20 Jan, 2018