ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದ ಸಿಲಿಂಡರ್ ದುರ್ಬಳಕೆ?

ಕರ್ನಾಟಕ ದರ್ಶನ ಪ್ರವಾಸದ ಬಸ್ಸುಗಳಲ್ಲಿ ಮಕ್ಕಳೊಂದಿಗೆ ಸಿಲಿಂಡರ್ ಸಾಗಣೆ ಯತ್ನ; ಆರೋಪ
Last Updated 6 ಡಿಸೆಂಬರ್ 2017, 5:37 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ನಿಯಮ ಉಲ್ಲಂಘಿಸಿ ಸಾರಿಗೆ ನಿಗಮದ ಬಸ್ಸುಗಳಲ್ಲಿ ‘ಕರ್ನಾಟಕ ದರ್ಶನ’ ಪ್ರವಾಸಕ್ಕೆ ತೆರಳುತ್ತಿದ್ದ ಮಕ್ಕಳ ಊಟ ಮತ್ತು ತಿಂಡಿ ತಯಾರಿಕೆಗಾಗಿ 6 ಸಿಲಿಂಡರ್ ತೆಗೆದುಕೊಂಡು ಹೋಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಮಾಹಿತಿ ತಿಳಿದ ಪೋಷಕರು ಹಾಗೂ ಕೆಲವು ಶಿಕ್ಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಸಿಲಿಂಡರ್ ಕೆಳಗಿಳಿಸಿ ಪ್ರವಾಸಕ್ಕೆ ತೆರಳಿದರು.

‘ಈ ಎಲ್ಲವೂ ಬಿಸಿಯೂಟ ತಯಾರಿಕೆಗಾಗಿ ಶಾಲೆಗಳಿಗೆ ವಿತರಣೆ ಯಾಗಿದ್ದ ಸಿಲಿಂಡರ್‌ಗಳಾಗಿವೆ. ಮಕ್ಕಳ ಊಟಕ್ಕಾಗಿಯೇ ಸರ್ಕಾರ ಹಣ ನೀಡುತ್ತದೆ. ಆದರೆ, ಇಲ್ಲಿ ಬಿಸಿಯೂಟದ ಸಿಲಿಂಡರ್ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಲಾಗಿದೆ’ ಎಂದು ಪೋಷಕರು ಆರೋಪಿಸಿದರು.

ತಾಲ್ಲೂಕಿನ ವಿವಿಧ ಶಾಲೆಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 176 ವಿದ್ಯಾರ್ಥಿಗಳು ಕರ್ನಾಟಕ ದರ್ಶನಕ್ಕೆ ಪ್ರವಾಸ ತೆರಳಿದರು. ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಯ ವೆಚ್ಚವಾಗಿ ₹ 3,200 ನೀಡುತ್ತದೆ. ಅದರಂತೆ ತಾಲ್ಲೂಕಿಗೆ ಈ ಬಾರಿ ₹ 7.65 ಲಕ್ಷ ಬಿಡುಗಡೆಯಾಗಿದೆ. ನಿಯಮದ ಪ್ರಕಾರ ಮಕ್ಕಳಿಗೆ ಪ್ರವಾಸಿ ಸ್ಥಳಗಳಲ್ಲಿ ಸಿಗುವ ಉತ್ತಮ ಊಟ– ತಿಂಡಿ ಕಲ್ಪಿಸಬೇಕು. ಆದರೆ, ಈ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಮಕ್ಕಳ ಶೈಕ್ಷಣಿಕ ಸಾಧನೆ ಮತ್ತು ಇತರೆ ಚಟುವಟಿಕೆ ಆಧರಿಸಿ ಪ್ರತಿ ಶಾಲೆಯಿಂದ 5ರಂತೆ 176 ಮಕ್ಕಳು ಆಯ್ಕೆಯಾಗಿದ್ದಾರೆ. ಪ್ರವಾಸ ಹೋಗಲು ದೂರದ ಊರುಗಳಿಂದ ತಾಲ್ಲೂಕು ಕೇಂದ್ರಕ್ಕೆ ರಾತ್ರಿಯೇ ಬರುವ ಮಕ್ಕಳಿಗೆ ಇಲಾಖೆಯಿಂದಲೇ ಊಟ ಮತ್ತು ವಸತಿ ಒದಗಿಸಬೇಕು.

ಆದರೆ, ಇಲ್ಲಿ ಕ್ಷೇತ್ರ ಸಂಪನ್ಮೂಲ ಕಚೇರಿ ಪಕ್ಕದ ಕಸ್ತೂರಬಾ ವಸತಿ ನಿಲಯದಲ್ಲಿ ಊಟ ಹಾಕಿಸಿ ಅಲ್ಲಿಯೇ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೋಷಕರು ಆರೋಪಿಸಿದರು.

ಬಿಸಿಯೂಟಕ್ಕೆ ಬಳಸುವ ಎಣ್ಣೆ, ತೊಗರಿ ಬೇಳೆ ಕೂಡ ತೆಗೆದುಕೊಂಡಿ ದ್ದಾರೆ. ಈ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳು ತನಿಖೆ ಮಾಡಿದರೆ ಯೋಜನೆಗೆ ಸಾರ್ಥಕತೆ ಸಿಗುತ್ತದೆ ಎಂಬುದು ಪೋಷಕರು ಆಗ್ರಹಿಸಿದರು.

‘ಈ ಬಾರಿ ಶಿಕ್ಷಕರು ಮಕ್ಕಳ ಜತೆ ಪ್ರವಾಸಕ್ಕೆ ತೆರಳಿಲ್ಲ. ಬದಲಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯ ಆದೇಶದ ಅನುಸಾರ ಸಿ.ಆರ್.ಪಿ, ಬಿ.ಆರ್.ಪಿಗಳು ಮತ್ತು ಅವರಿಗೆ ಬೇಕಾದ ಕೆಲವೇ ಕೆಲವು ಶಿಕ್ಷಕರು ಹೋಗಿದ್ದಾರೆ’ ಎಂದು ಇತರೆ ಶಿಕ್ಷಕರು ಆರೋಪಿಸಿದರು.

ತಾಲ್ಲೂಕಿನ ಹಂಪಾಪುರ ಗ್ರಾಮ ಪಂಚಾಯಿತಿ ಉಪಚುನಾವಣೆ ನಿಗದಿ ಯಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಶಿಧರ್ ಪ್ರವಾಸಕ್ಕೆ ತೆರಳಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ್ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ವೆಂಕಟಸ್ವಾಮಿ ಹಸಿರು ಬಾವುಟ ತೋರಿಸುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT