ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ನೆಮ್ಮದಿಯ ಅನುಭವವದ ತಾಣ

Last Updated 6 ಡಿಸೆಂಬರ್ 2017, 6:08 IST
ಅಕ್ಷರ ಗಾತ್ರ

ಆನೇಕಲ್‌: ಸುತ್ತಲೂ ಪ್ರಶಾಂತ ವಾತಾವರಣ ನಡುವೆ ಸುಂದರ ದೇವಾಲಯ, ಶಾಂತಿ ನೆಮ್ಮದಿಯೊಂದಿಗೆ ಆಧ್ಯಾತ್ಮಿಕ ಅನುಭವ ನೀಡುವ ಸುಂದರ ತಾಣ ತಾಲ್ಲೂಕಿನ ರಾಚಮಾನಹಳ್ಳಿ ಬಳಿಯ ಅನ್ನಪೂರ್ಣೇಶ್ವರಿ ದೇವಾಲಯವಾಗಿದೆ. ಪ್ರತಿನಿತ್ಯ ನೂರಾರು ಭಕ್ತರು ಭೇಟಿ ನೀಡುತ್ತಿದ್ದು ದೇವಾಲಯ ನಿರ್ಮಿಸಿದ ಒಂದೂವರೆ ವರ್ಷದಲ್ಲಿ ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿದೆ.

ಗ್ರಾಮದ ಹೊರಭಾಗದಲ್ಲಿ ನಿರ್ಮಿಸಿರುವ ಅನ್ನಪೂರ್ಣೇಶ್ವರಿ ದೇವಾಲಯದ ಮುಂಭಾಗದಲ್ಲಿ ಎತ್ತರವಾದ ಗರುಡಗಂಭ, ಸುತ್ತಲೂ ಪ್ರಾಂಗಣ, ಉತ್ತಮ ಕೆತ್ತನೆ ಕೆಲಸಗಳಿಂದ ಭಕ್ತರನ್ನು ಆಕರ್ಷಿಸುವ ಗೋಪುರ, ದೇವಾಲಯದ ಹಿಂಭಾಗದಲ್ಲಿ ಗಣಪತಿ ಹಾಗೂ ವೀರಭದ್ರಸ್ವಾಮಿ ದೇವಾಲಯಗಳು, ದೇವಾಲಯದ ಮುಂಭಾಗದಲ್ಲಿ ಯಾಗ ಮಂಟಪವಿದ್ದು ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ಎಲ್ಲಾ ಚಿಂತೆಗಳು ದೂರವಾಗಿ ಶಾಂತಿ ನೆಮ್ಮದಿಯ ಅನುಭವವನ್ನು ನೀಡುವ ತಾಣವಾಗಿದೆ.

ದೇವಾಲಯದಲ್ಲಿ ನಿತ್ಯ ಪೂಜೆ, ಅಭಿಷೇಕ ನಡೆಯುತ್ತದೆ. ಮಂಗಳವಾರ ಮತ್ತು ಶುಕ್ರವಾರ, ಅಮಾವಾಸ್ಯೆ ಹಾಗೂ ವಿಶೇಷ ದಿನಗಳಂದು ವಿಶೇಷ ಪೂಜೆ, ಅಲಂಕಾರ, ಅಭಿಷೇಕ ನಡೆಯುತ್ತದೆ. ಪ್ರತಿ ತಿಂಗಳು ಹುಣ್ಣಿಮೆ ದಿನದಂದು ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ನಡೆಸಿಕೊಂಡು ಬರಲಾಗುತ್ತಿದೆ.

ನಿತ್ಯ ತ್ರಿಕಾಲ ಪೂಜೆ ನಡೆಯುವಂತೆ ದೇವಾಲಯ ಸಮಿತಿಯು ವ್ಯವಸ್ಥೆ ಮಾಡಿದ್ದು ಈ ದಿನಗಳಲ್ಲಿ ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ಬಂದು ತಾಯಿ ಅನ್ನಪೂರ್ಣೇಶ್ವರಿಯ ದರ್ಶನ ಪಡೆಯುತ್ತಾರೆ. ಅನ್ನದಾಸೋಹ ದೇವಾಲಯದಲ್ಲಿ ನಡೆಯುತ್ತದೆ.

ರಾಚಮಾನಹಳ್ಳಿಯ ಲಿಂಗಾರೆಡ್ಡಿ ಕುಟುಂಬದವರು ದಾನಿಗಳ ನೆರವಿನಿಂದ ಈ ದೇವಾಲಯವನ್ನು ನಿರ್ಮಿಸಿದ್ದು ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿದೆ. ದೇವಾಲಯವನ್ನು 2015 ಏಪ್ರಿಲ್‌ ತಿಂಗಳಿನಲ್ಲಿ ನಿರ್ಮಾಣ ಪ್ರಾರಂಭಿಸಿ ಕೇವಲ ಒಂದು ವರ್ಷದಲ್ಲಿ 2016 ಏಪ್ರಿಲ್‌ ತಿಂಗಳ 25ರಂದು ದೇವಾಲಯದ ಪ್ರಾರಂಭೋತ್ಸವ ನೆರವೇರಿಸಲಾಯಿತು.

ಅಂದಿನಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿವೆ. ಜಮೀನಿನ ಹಿನ್ನೆಲೆಯ ಬಗ್ಗೆ ಪರಿಶೀಲಿಸಿದಾಗ ಈ ಜಮೀನು ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದೆಂದು ತಿಳಿದುಬಂದಿತು. ಅದರಂತೆ ದೇವಾಲಯವನ್ನು ನಿರ್ಮಿಸಿ ತಾಯಿ ಅನ್ನಪೂರ್ಣೇಶ್ವರಿಯ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಸಮಿತಿಯವರು ಮಾಹಿತಿ ನೀಡಿದರು.

ವಾರ್ಷಿಕೋತ್ಸವ

ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ದೇವಾಲಯದ ವಾರ್ಷಿಕೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಹೊಂದಿಕೊಂಡಿರು ಗ್ರಾಮಗಳಾದ ಕರ್ಪೂರು, ಬೆಸ್ತಮಾನಹಳ್ಳಿ, ರಾಚಮಾನಹಳ್ಳಿ, ಮೇಡಹಳ್ಳಿ, ಬಿದರಗೆರೆ ಗ್ರಾಮಗಳಿಗೆ ದೇವರ ಉತ್ಸವ ಮೂರ್ತಿಯೊಂದಿಗೆ ಭಿಕ್ಷೆಗೆ ತೆರಳಲಾಗುತ್ತದೆ. ಗ್ರಾಮಸ್ಥರು ನೀಡಿದ ದವಸ, ಧಾನ್ಯಗಳನ್ನು ಪಡೆದು ದಾಸೋಹ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತದೆ.

* *

ಕೇರಳ ತಂತ್ರಿಗಳ ಮೂಲಕ ನಡೆಸಲಾಗುವ ಧಾರ್ಮಿಕ ಕಾರ್ಯಗಳು ದೇವಾಲಯದಲ್ಲಿ ಕೇರಳ ಶೈಲಿಯಲ್ಲಿ ನಡೆಯುತ್ತವೆ
ಕೃಷ್ಣಾರೆಡ್ಡಿ , ದೇವಾಲಯ ಟ್ರಸ್ಟ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT