ಚಾಮರಾಜನಗರ

ಯೋಗೇಶ್ ಅವಿರೋಧ ಆಯ್ಕೆ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಿರೀಕ್ಷೆಯಂತೆಯೇ ಯಳಂದೂರು ಕಸಬಾ ಕ್ಷೇತ್ರದ ಸದಸ್ಯ ಜೆ. ಯೋಗೇಶ್‌ ಅವಿರೋಧವಾಗಿ ಆಯ್ಕೆಯಾದರು.

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಿರೀಕ್ಷೆಯಂತೆಯೇ ಯಳಂದೂರು ಕಸಬಾ ಕ್ಷೇತ್ರದ ಸದಸ್ಯ ಜೆ. ಯೋಗೇಶ್‌ ಅವಿರೋಧವಾಗಿ ಆಯ್ಕೆಯಾದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ 1 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಕಾಂಗ್ರೆಸ್‌ನ ಯೋಗೇಶ್‌ ಒಬ್ಬರೇ ಉಮೇದುವಾರಿಕೆ ಸಲ್ಲಿಸಿದ್ದರು.

ಆರಂಭದಲ್ಲಿ ಎಲ್ಲ ಸದಸ್ಯರ ಹಾಜರಾತಿ ಪಡೆದ, ಚುನಾವಣಾಧಿಕಾರಿ ಯಾಗಿದ್ದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು, ನಾಮಪತ್ರ ಹಿಂದಕ್ಕೆ ಪಡೆದುಕೊಳ್ಳಲು 2 ನಿಮಿಷ ಕಾಲಾವಕಾಶ ನೀಡಿದರು.

ಬಳಿಕ ಯೋಗೇಶ್‌ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. 2021ರ ಏಪ್ರಿಲ್‌ 29ರವರೆಗೂ ಯೋಗೇಶ್‌ ಅವರ ಅಧಿಕಾರಾವಧಿ ಇರಲಿದೆ ಎಂದು ತಿಳಿಸಿದರು. 10 ನಿಮಿಷಗಳಲ್ಲಿಯೇ ಸಂಪೂರ್ಣ ಪ್ರಕ್ರಿಯೆ ಮುಗಿಯಿತು.

23 ಸದಸ್ಯರ ಪೈಕಿ ಒಟ್ಟು 20 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿಯ ಮೂವರು ಸದಸ್ಯೆಯರು ಗೈರಾಗಿದ್ದರು. ಜಿಲ್ಲಾಧಿಕಾರಿ ಬಿ. ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌ ಭಾಗವಹಿಸಿದ್ದರು.

ಪಕ್ಷದ ಒಪ್ಪಂದ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚಾಮರಾಜನಗರ ತಾಲ್ಲೂಕಿನ ಎಂ. ರಾಮಚಂದ್ರ ಅವರನ್ನು ಆಯ್ಕೆ ಮಾಡಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ತಾಲ್ಲೂಕುಗಳ ಸದಸ್ಯರಿಗೆ ಸಮಾನ ಪ್ರಾತಿನಿಧ್ಯ ನೀಡಲು ಪಕ್ಷದಲ್ಲಿ ಆಂತರಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಅದರಂತೆ ಚುನಾವಣೆ ನಡೆದ 2016ರ ಫೆಬ್ರುವರಿಯಿಂದ ಉಪಾಧ್ಯಕ್ಷರಾಗಿದ್ದ ಕೊಳ್ಳೇಗಾಲ ತಾಲ್ಲೂಕು ರಾಮಾಪುರ ಕ್ಷೇತ್ರದ ಎಸ್‌. ಬಸವರಾಜು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಯಳಂದೂರು ತಾಲ್ಲೂಕಿನ ಕಸಬಾ ಕ್ಷೇತ್ರದ ಸದಸ್ಯ ಜೆ. ಯೋಗೇಶ್‌ ಅವರ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಬಿ.ಕೆ. ಬೊಮ್ಮಯ್ಯ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಬಾಲರಾಜ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ. ಚಂದ್ರು ಸೇರಿದಂತೆ ಪಕ್ಷದ ಸದಸ್ಯರು ಯೋಗೇಶ್‌ ಅವರನ್ನು ಅಭಿನಂದಿಸಿದರು.

‘ಮೂಲಸೌಕರ್ಯಕ್ಕೆ ಒತ್ತು’

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯದ ಅಭಿವೃದ್ಧಿಗೆ ಒತ್ತು ನೀಡುವುದಾಗಿ ನೂತನ ಉಪಾಧ್ಯಕ್ಷ ಯೋಗೇಶ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸುಧಾರಣೆಗೆ ಆದ್ಯತೆ ನೀಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ಜನಪರ ಯೋಜನೆಗಳ ಕುರಿತು ಜನರಿಗೆ ತಿಳಿಸುವ ಮೂಲಕ ಪಕ್ಷವನ್ನು ಜಿಲ್ಲೆಯಲ್ಲಿ ಮತ್ತಷ್ಟು ಬಲಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

‘ಎಲ್ಲಿಯವರೆಗೆ ಅಧಿಕಾರದಲ್ಲಿ ಮುಂದುವರಿಯುವಂತೆ ಪಕ್ಷ ಸೂಚಿಸುತ್ತದೆಯೋ ಅಲ್ಲಿಯವರೆಗೂ ಇರುತ್ತೇನೆ. ರಾಜೀನಾಮೆ ಕೇಳಿದಾಗ ಕೊಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

ಚಾಮರಾಜನಗರ
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿ

22 Jan, 2018
ಇಂದು, ನಾಳೆ ಪರಿವರ್ತನಾ ಯಾತ್ರೆ

ಚಾಮರಾಜನಗರ
ಇಂದು, ನಾಳೆ ಪರಿವರ್ತನಾ ಯಾತ್ರೆ

20 Jan, 2018

ಯಳಂದೂರು
ಚಿತ್ರಗಳ ಮೂಲಕ ಮಕ್ಕಳಿಗೆ ಸಂಚಾರ ಪಾಠ

‘ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಬೊಂಬೆ ಪ್ರದರ್ಶನದ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಷಯವಾರು ಚಿತ್ರ ಮತ್ತು ಬೊಂಬೆ ಪ್ರದರ್ಶನದ ಬಗ್ಗೆ ತಿಳಿಸಲಾಗುತ್ತದೆ.

20 Jan, 2018
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

ಚಾಮರಾಜನಗರ
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

19 Jan, 2018

ಚಾಮರಾಜನಗರ
ನೂತನ ಪಿಂಚಣಿ ಯೋಜನೆ ರದ್ದತಿಗೆ ಆಗ್ರಹ

ಎನ್‌ಪಿಎಸ್‌ ಯೋಜನೆಗೆ ಒಳಪಡುವ ನೌಕರರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ ಕ್ರಮವಹಿಸಬೇಕು. ನೌಕರರ ಹಿತ ಕಾಪಾಡಬೇಕು

19 Jan, 2018