ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷವಾದರೂ ಭದ್ರೆ ನೀರು ಬರಲ್ಲ

Last Updated 6 ಡಿಸೆಂಬರ್ 2017, 6:54 IST
ಅಕ್ಷರ ಗಾತ್ರ

ಹೊಸದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ನೀರನ್ನು ಬೇಗನೆ ಹರಿಸುತ್ತೇವೆಂದು ರಾಜಕಾರಣಿಗಳು ಹೇಳುತ್ತಿದ್ದಾರೆ. ಈ ಯೋಜನೆ ಅವೈಜ್ಞಾನಿಕ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇನ್ನೂ 20 ವರ್ಷ ಕಳೆದರೂ ಈ ಯೋಜನೆಯ ಎಡದಂಡೆಯ ನೀರು ಹರಿಯುವುದು ಕಷ್ಟ’ ಎಂದು ಯುವ ಬ್ರಿಗೇಡ್‌ ರಾಜ್ಯ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಪಟ್ಟಣದ ಗಣೇಶ ಸದನದಲ್ಲಿ ತಾಲ್ಲೂಕು ಯುವ ಬ್ರಿಗೇಡ್‌ ಘಟಕ ಮಂಗಳವಾರ ಆಯೋಜಿಸಿದ್ದ ‘ನನ್ನ ಕನಸಿನ ಕರ್ನಾಟಕ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ₹ 15,000 ಕೋಟಿ ಅನುದಾನ ಮೀಸಲಿಟ್ಟರೂ ಕೆಲಸ ಪೂರ್ಣಗೊಂಡಿಲ್ಲ. ₹ 100 ಕೋಟಿ ಮೀಸಲಿಟ್ಟರೆ ಹಲವು ಕೆರೆಗಳನ್ನು ಅಭಿವೃದ್ಧಿ ಪಡಿಸಬಹುದು. ಕೆರೆಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ಮೀಸಲಿಡುತ್ತಿಲ್ಲ. ಆದರೆ, ರಾಜಕಾರಣಿಗಳ ಕಮಿಷನ್‌ಗೆ ಅನುಕೂಲ ಆಗುವಂತಹ ಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತಿದೆ. ಈ ರೀತಿಯ ಮನೋಭಾವ ನಮ್ಮ ರಾಜಕಾರಣಿಗಳಿಗೆ ಬ್ರಿಟಿಷರಿಂದ ಬಂದಿದೆ ಎಂದು ದೂರಿದರು.

‘ಜನರಿಗೆ ದುಡ್ಡು ಕೊಟ್ಟರೆ ವೋಟ್‌ ಹಾಕುತ್ತಾರೆ ಎಂಬ ಭ್ರಮೆ ರಾಜಕಾರಣಿಗಳಿಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ತಾನು ಆಯ್ಕೆ ಮಾಡಿದ ರಾಜಕಾರಣಿ ಸೇವಕನಾಗಿ ಜೀವಿಸುವಂತಾಗಿದೆ. ಒಂದು ಸಾವಿರ ಕೊಟ್ಟವರನ್ನು ಗೆಲ್ಲಿಸಿದರೆ, ಐದು ವರ್ಷದಲ್ಲಿ ದಿನಕ್ಕೆ ₹ 50 ಪೈಸೆ ಮಾತ್ರ ಮತದಾರನ ಕೈಗೆ ಸಿಗುತ್ತದೆ. ಒಬ್ಬ ಎಂಎಲ್‌ಎ ಪ್ರತಿ ತಿಂಗಳು ₹ 50,000 ಸಂಬಳ ಪಡೆಯುತ್ತಿದ್ದಾರೆ. ಹಲವು ದಂಧೆಗಳಲ್ಲಿ ಶಾಮೀಲಾಗಿ ಅದರಲ್ಲೂ ಹಣ ಮಾಡುತ್ತಿದ್ದಾರೆ’ ಎಂದು ಎಚ್ಚರಿಸಿದ ಅವರು, ‘ಮುಂದಿನ ಚುನಾವಣೆ ನಿಮ್ಮ ಕನಸು, ಅಪೇಕ್ಷೆಯಂತೆ ಆಗಬೇಕು. ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡುವಂತವರನ್ನು ಆಯ್ಕೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ರೈತನಿಗೆ 24 ತಾಸು ವಿದ್ಯುತ್‌, ನೀರು ಕೊಟ್ಟರೆ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕು. ಇದರಿಂದ ರೈತರು ರಾಜಕಾರಣಿ ಬಳಿ ಕೈಚಾಚುವ ಅಗತ್ಯ ಇರುವುದಿಲ್ಲ. ಜನರು ಸ್ವಲ್ಪ ಪ್ರಜ್ಞಾವಂತರಾದರೆ ರಾಜಕಾರಣಿಗಳನ್ನು ನಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದು. ನಾವು ಸಮರ್ಥರಾದರೆ ಅಧಿಕಾರಿ, ಜನಪ್ರತಿನಿಧಿಗಳು ಪ್ರಜ್ಞಾವಂತರಾಗಿ ಕೆಲಸ ಮಾಡುತ್ತಾರೆ. ಪ್ರಜ್ಞಾವಂತರು ನಾವಾಗದಿದ್ದರೆ ಅಯೋಗ್ಯರು ನಮ್ಮನ್ನಾಳುತ್ತಾರೆ. ರಾಜಕಾರಣ ಸ್ವಚ್ಛ ಆಗುವವರೆಗೂ ನಾನು ಯುವಜನಾಂಗದಲ್ಲಿ ನನ್ನ ಕನಸು ಕರ್ನಾಟಕ ನಿರ್ಮಾಣ ಮಾಡುವ ಕೆಲಸದಿಂದ ಹಿಂದೆ ಸರಿಯುವುದಿಲ್ಲ’ ಎಂದು ತಿಳಿಸಿದರು.

ಗಣೇಶ ಸದನದ ಅಧ್ಯಕ್ಷ ಹಂಜಿ ಶಿವಸ್ವಾಮಿ ಮಾತನಾಡಿ, ‘ಚಕ್ರವರ್ತಿ ಸೂಲಿಬೆಲೆ ಫಲಾಪೇಕ್ಷೆ ಇಲ್ಲದೇ ದೇಶದ ಅಭಿವೃದ್ಧಿಗಾಗಿ ಯುವಜನಾಂಗವನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ. ಈ ಕಾರ್ಯದ ಯಶಸ್ಸಿಗೆ ದುಡ್ಡಿನ ಹಿಂದೆ ಓಡುತ್ತಾ ಜೀವನ ಹಾಳು ಮಾಡಿಕೊಳ್ಳುತ್ತಿರುವ ಯುವಪೀಳಿಗೆ ತಿದ್ದುವ ಕೆಲಸ ಶಾಲಾ–ಕಾಲೇಜಿನಿಂದ ಆಗಬೇಕು’ ಎಂದು ತಿಳಿಸಿದರು.

ಉಪನ್ಯಾಸ ಕಾರ್ಯಕ್ರಮದ ನಂತರ ಸಂವಾದ ನಡೆಯಿತು. ಆರ್‌.ಜಿ. ಪ್ರಸನ್ನಕುಮಾರ್‌ ಕಾರ್ಯಕ್ರಮ ನಿರೂಪಿಸಿದರು. ಭರತ್‌ ರಾಯ್ಕರ್‌ ಪ್ರಾರ್ಥಿಸಿದರು. ಯುವ ಬ್ರಿಗೇಡ್‌ ತಾಲ್ಲೂಕು ಘಟಕದ ಸಂಚಾಲಕ ಪ್ರದೀಪ್‌, ರವೀಂದ್ರನಾಥ್‌, ಕೆ.ಓ.ನವೀನ್‌, ನಿರಂಜನ್‌ ಕಲ್ಮಠ್‌, ಅರುಣ್‌, ಮೋಹನ್‌ ಗುಜ್ಜಾರ್‌, ಸೀತಾರಾಘವ ಬ್ಯಾಂಕ್‌ ವ್ಯವಸ್ಥಾಪಕ ಮಂಜುನಾಥ್‌, ವಿಜಯಲಕ್ಷ್ಮಿ, ಆರ್‌. ಶಮಂತ್‌, ದತ್ತ, ವಿವಿಧ ಶಾಲಾ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.

‘ಸಾವಿರಾರು ಕೋಟಿ ಮದ್ಯದ ಆದಾಯ’

‘ಮದ್ಯ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸಾವಿರಾರು ಕೋಟಿ ಆದಾಯವಿದೆ. ಈ ಹಣದಲ್ಲಿ ಸರ್ಕಾರ ಆಡಳಿತ ನಡೆಸುತ್ತಿದೆ. ವರ್ಷಕ್ಕೆ ಇನ್ನಷ್ಟು ಮದ್ಯದ ಆದಾಯ ಹೆಚ್ಚಿಸುವ ಭರವಸೆಯನ್ನು ಅಬಕಾರಿ ಸಚಿವರು ನೀಡಿದ್ದಾರೆ. ಎಂಎಲ್‌ಎ, ಎಂಪಿಗಳು ತಮ್ಮ ದುಡ್ಡಿನ ಖಜಾನೆ ದೊಡ್ಡದಾಗಿಸಿ ಕೊಳ್ಳುತ್ತಿದ್ದಾರೆ. ಇವರೆಲ್ಲ
ಹೆಂಡ ನಿಷೇಧ ಮಾಡುತ್ತಾರೆ’ ಎಂದು ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT