ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕೂನ್‌ಗುನ್ಯಾಕ್ಕೆ ಅಣಬೇರು ಗ್ರಾಮಸ್ಥರು ತತ್ತರ

Last Updated 6 ಡಿಸೆಂಬರ್ 2017, 7:03 IST
ಅಕ್ಷರ ಗಾತ್ರ

ಮಾಯಕೊಂಡ: ‘ಊರಾಗೆ ಸಾವಿರ ಜನಕ್ಕೆ ಚಿಕೂನ್‌ಗುನ್ಯಾ ಬಂದೈತೆ. ಬದುಕೇ ಹಾಳಾಗೈತಿ, ಕಾಲು, ಕೀಲು ನೋವು ತಡೆಯಾಕಾಗಲ್ಲ, ಯಮಯಾತನೆ ಯಾರಿಗೂ ಬೇಡ. ನಲಕುಂದ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ, ಮಣಿಪಾಲದ ಆಸ್ಪತ್ರೆಗೆ ಸೇರಿರುವ ಜನ ಇನ್ನೂ ಬಂದಿಲ್ಲ, ಏನಿಲ್ಲ ಅಂದ್ರೂ 25 ಸಾವಿರ ಖರ್ಚಾಗೈತಿ, ಫಜೀತಿ ಹೇಳಬಾರದು…’ ಹೋಬಳಿಯ ಅಣಬೇರು ಗ್ರಾಮಸ್ಥರು ಈ ರೀತಿ ಚಿಕೂನ್‌ಗುನ್ಯಾ ಬಾಧೆಯ ಪರಿ ಬಿಚ್ಚಿಟ್ಟರು.

ಒಂದೂವರೆ ತಿಂಗಳಿನಿಂದ ಚಿಕೂನ್‌ಗುನ್ಯಾ ಕಾಯಿಲೆ ಅಣಬೇರಿಗೆ ದಾಳಿಯಿಟ್ಟಿದೆ. ನಾಲ್ಕು ಸಾವಿರ ಜನರಲ್ಲಿ ಅಂದಾಜು ಸಾವಿರ ಜನರಲ್ಲಿ  ಚಿಕೂನ್‌ಗುನ್ಯಾ ಕಾಣಿಸಿಕೊಂಡಿದೆ .ಇದ್ದಕ್ಕಿದ್ದಂತೆ ಕೆಮ್ಮು, ಚಳಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರ ಬಿಟ್ಟ ಮೇಲೂ ಎಲ್ಲಾ ಕೀಲುಗಳಲ್ಲೂ ಸಹಿಸಲಸಾಧ್ಯ ನೋವಿನಿಂದ ಜನ ನರಳುತ್ತಿದ್ದಾರೆ. ನಡೆದಾಡಲು ಸಮಸ್ಯೆ. ಕುಳಿತರೆ ಏಳುವುದು ಕಷ್ಟ. ವೃದ್ಧರು ಮತ್ತು ಮಕ್ಕಳಂತೂ ಈ ಕಾಯಿಲೆಯಿಂದ ತತ್ತರಿಸಿದ್ದಾರೆ. . ಪ್ರತಿ ಮನೆಯಲ್ಲಿ ಕನಿಷ್ಠ ಇಬ್ಬರು– ಮೂವರು ತೊಂದರೆಗೊಳಗಾಗಿದ್ದಾರೆ. ಮನೆಗೆ 20 ಸಾವಿರದಿಂದ 50 ಸಾವಿರವರೆಗೆ ಚಿಕಿತ್ಸೆಗೆಂದು ಖರ್ಚಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

‘ಆರೋಗ್ಯ ಇಲಾಖೆಯವರು ಯಾರೂ ಭೇಟಿ ನೀಡಿಲ್ಲ. ನಮ್ಮೂರ ಆಯುರ್ವೇದ ಆಸ್ಪತ್ರೆಯಲ್ಲಿ ಅಗತ್ಯ ಔಷಧ ಸಿಗುತ್ತಿಲ್ಲ. ಒಬ್ಬೊಬ್ಬರೇ ಇರುವವರ, ದನ, ಕರು ಸಾಕಿಕೊಂಡವರ ಪಡಿಪಾಟಲು ಹೇಳತೀರದು’ ಎಂದು ಮುಖಂಡ ಮಾಳಿಗೇರ ಶಿವಣ್ಣ ಪರಿಸ್ಥಿತಿ ವಿವರಿಸಿದರು.
‘ಚಾನೆಲ್‌ನಲ್ಲಿ ನೀರಿಲ್ಲ, ಭತ್ತದ ಬೆಳೆಯಿಲ್ಲ. ಸಾಲ ಮಾಡಿ ಜೀವನ ನಿರ್ವಹಿಸುವಂತಾಗಿದೆ. ಚಿಕೂನ್‌ಗುನ್ಯಾ ಬಾಧೆಯಿಂದ ಮತ್ತೆ ಸಾಲ ಮಾಡಬೇಕಿದೆ. ಅಮ್ಮನ್ನ ಕಳುಹಿಸಿದರೆ ಕಡಿಮೆಯಾಗುತ್ತೆ ಅಂಥಾ ಪೂಜೆ ಮಾಡಿ ಅಮ್ಮನ ಕಳುಹಿಸುತ್ತಿದ್ದೇವೆ’ ಎಂದು ಗ್ರಾಮದ ಮುಖಂಡ ಕೊಟ್ಯಾಳ್ ರಾಜಣ್ಣ, ವಾಗೀಶಪ್ಪ ಹೇಳಿದರು.

ಅಮ್ಮನ ಕಳಿಸಿಸುವ ಸಂಪ್ರದಾಯ: ಚಿಕೂನ್‌ಗುನ್ಯಾದಿಂದ ತತ್ತರಿಸಿದ ಗ್ರಾಮಸ್ಥರು ದೇವಿ ಮೊರೆಹೋಗಿದ್ದಾರೆ. ಅಮ್ಮನ ಮುನಿಸೇ ಈ ಮಾರಿ ತಟ್ಟಲು ಕಾರಣ ಎಂದು ಭಾವಿಸಿ, ದೇವಿ ಶಾಂತಿಗೆ ಮುಂದಾದರು. ಕಳೆದ ಶುಕ್ರವಾರ ಅಮ್ಮನನ್ನು ಕಳುಹಿಸುವ ಪೂಜೆ ಹಮ್ಮಿಕೊಳ್ಳಲಾಗಿತ್ತು.
ಊರ ಕರೆಕಲ್ಲಿನ ಬಳಿ ಕುಕ್ಕವಾಡೇಶ್ವರಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. ಮನೆಗಳಲ್ಲಿ ಹೋಳಿಗೆ, ಅನ್ನ, ಎಡೆ ಮಾಡಲಾಯಿತು. ಮಣ್ಣಿನ ಚಿಕ್ಕ ಕುಡಿಕೆಯಲ್ಲಿ ಅಕ್ಕಿ, ಬೇವಿನ ಸೊಪ್ಪು ಇಟ್ಟು ‘ಕೇಲು’ ಸಹಿತ ಎಡೆ ತಂದು, ಊರ ಕರೆಕಲ್ಲಿನ ಬಳಿ ಪ್ರತಿಷ್ಠಾಪಿಸಿದ್ದ ಕುಕ್ಕವಾಡೇಶ್ವರಿಗೆ ಸಮರ್ಪಿಸಲಾಯಿತು. ದೇವಿ ಪ್ರತಿಮೆಯೊಂದಿಗೆ ಎಲ್ಲಾ ಎಡೆಯನ್ನು ಊರ ಗಡಿಯಾಚೆ ಒಯ್ದು ಪೂಜೆ ಸಲ್ಲಿಸಿ, ಎಡೆ ಅಲ್ಲಿಯೇ ಬಿಟ್ಟು ಬರಲಾಯಿತು.

‘ನಲಕುಂದ, ಬಾಡಾ, ದಾವಣಗೆರೆ, ಮಣಿಪಾಲ್, ಮಂಗಳೂರು ಆಸ್ಪತ್ರೆಗಳಿಗೆ ತಿರುಗಿದರೂ ಕಾಯಿಲೆ ಕಡಿಮೆಯಾಗಿಲ್ಲ. ಈ ರೀತಿ ಎಡೆ ಮಾಡಿ, ಗಡಿದಾಟಿಸಿದರೆ ದೇವಿ ತೃಪ್ತಳಾಗಿ ಊರಿನಿಂದ ಹೋಗುತ್ತಾಳೆ ಎಂಬುದು ಅನಾದಿ ಕಾಲದ ನಂಬಿಕೆ. ಹೇಗಾದರೂ ಕಾಯಿಲೆ ತೊಲಗಲಿ ಎಂದು ಈ ರೀತಿ ಮಾಡಿದೆವು’ ಎಂದು ದೇವಿ ಪೂಜೆಯ ಮೊರೆಹೋದ ಕಾರಣ ಬಿಚ್ಚಿಡುತ್ತಾರೆ ಮುಖಂಡ ಅತ್ತಿಗೆರೆರ ಶರಣಪ್ಪ.

ಆಸ್ಪತ್ರೆ ಮಂಜೂರು ಮಾಡಿ:‘ಜನ ತಿಂಗಳುಗಟ್ಟಲೆ ನರಳಿದರೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಾಳಜಿಯಿಲ್ಲ. ಊರಿಗೆ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಜಿಲ್ಲಾಡಳಿತದವರೇ ಊರಲ್ಲಿ ಕ್ಯಾಂಪ್ ಮಾಡಿಸಿ ತುರ್ತು ಚಿಕಿತ್ಸೆ ನೀಡಬೇಕು’ ಎನ್ನುತ್ತಾರೆ ಗ್ರಾಮದ ಮುಖಂಡ ಮೂರ್ತೆಪ್ಪ, ಜೆಡಿಎಸ್ ಮುಖಂಡ ಜಿ.ಎಂ.ಅನಿಲ್ ಕುಮಾರ್.

‘ಶೀಘ್ರ ಚಿಕಿತ್ಸೆ’

‘ಸೊಳ್ಳೆ ಕಡಿತದಿಂದ ಚಿಕೂನ್‌ಗುನ್ಯಾ ಬರುತ್ತದೆ. ಕೆಮ್ಮು, ಮೈ ಕೈ ನೋವು ಇರುತ್ತದೆ. ರಕ್ತ ಪರೀಕ್ಷೆ, ಚಿಕಿತ್ಸೆ ಅತ್ಯಗತ್ಯ. ಅಣಬೇರಿಗೆ ಕೂಡಲೇ ಆರೋಗ್ಯಾಧಿಕಾರಿ ಕಳಿಸಿ, ಸರ್ವೆ ಮಾಡಿಸಿ, ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ ಎಲ್. ಪಾಟೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT