ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ.ಕ ನೆಲದ ಬನಿ ಆಧಾರಿತ ಪ್ರಯೋಗ!

Last Updated 6 ಡಿಸೆಂಬರ್ 2017, 8:29 IST
ಅಕ್ಷರ ಗಾತ್ರ

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ 1ನೇ ಶತಮಾನದಿಂದ 20ನೇ  ಶತಮಾನದವರೆಗಿನ ಆಗಿ ಹೋದ ದಾರ್ಶನಿಕರ, ವಚನಕಾರರ ಮತ್ತು ಸೂಫಿ ಸಂತರ ಸಾಹಿತ್ಯ ಆಧರಿಸಿ ನಾಟಕ ಪ್ರದರ್ಶಿಸಲು ಕಲಬುರ್ಗಿ ರಂಗಾಯಣ ಸಿದ್ಧತೆ ನಡೆಸಿದೆ.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ದಾಸ ಸಾಹಿತ್ಯ, ಶರಣ ಸಾಹಿತ್ಯ, ಮಹಮ್ಮದ್ ಗವಾನ್, ಗುರು ನಾನಕ್, ಖಾಜಾ ಬಂದಾ ನವಾಜ್, ಶರಣ ಬಸವೇಶ್ವರ, ಬಸವಣ್ಣ, ಶರಣಬಸವಪ್ಪ ಅಪ್ಪ ಅವರ ವಚನ ಮತ್ತು ಸಾಹಿತ್ಯವನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲು ತಯಾರಿ ಮಾಡಿಕೊಳ್ಳುತ್ತಿದೆ.

1ನೇ  ಶತಮಾನದಿಂದ 20ನೇ  ಶತಮಾನದವರೆಗಿನ ಸಾಹಿತ್ಯ ಘಟ್ಟವನ್ನು ಮೂರು ಗಂಟೆಯಲ್ಲಿ ಪ್ರದರ್ಶಿಸುವುದು ರಂಗಾಯಣ ಉದ್ದೇಶವಾಗಿದೆ. ಇದಕ್ಕೆ ರಂಗ ಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗಾಗಲೇ ಒಪ್ಪಿಗೆ ನೀಡಿವೆ. ಕಲಬುರ್ಗಿ ರಂಗಾಯಣದ 12 ಕಲಾವಿದರು ಮತ್ತು ಮೂವರು ತಂತ್ರಜ್ಞರನ್ನು ಬಳಸಿಕೊಂಡು 90 ದಿನ ತಾಲೀಮು ಮಾಡಿ ನಾಟಕ ಪ್ರದರ್ಶಿಸಲು ಯೋಜನೆ ರೂಪಿಸಲಾಗಿದೆ.

ಸಾಹಿತ್ಯ ರಚನೆಕಾರರು ಯಾರು?: ಹೈದರಾಬಾದ್ ಕರ್ನಾಟಕ ಭಾಗದವರೇ ಆದ ಪ್ರೊ.ವಸಂತ ಕುಷ್ಟಗಿ, ಸುಜಾತಾ ಜಂಗಮಶೆಟ್ಟಿ, ಪ್ರಭಾಕರ ಜೋಶಿ, ಪ್ರೊ.ಸ್ವಾಮಿರಾವ ಕುಲಕರ್ಣಿ, ಪ್ರಭಾಕರ ಸಾತಖೇಡ, ಎ.ಕೆ.ರಾಮೇಶ್ವರ, ಸುಬ್ರಾವ ಕುಲಕರ್ಣಿ, ಡಿ.ಎಂ.ನದಾಫ್, ಜ್ಯೋತಿ ಕುಲಕರ್ಣಿ, ಲಕ್ಷ್ಮಿ ಶಂಕರ ಜೋಶಿ, ಮಹಾಂತೇಶ ನವಲಕಲ್, ಎಲ್.ಬಿ.ಕೆ.ಅಲ್ದಾಳ, ಮಹಿಪಾಲರೆಡ್ಡಿ ಮುನ್ನೂರ, ವಿಕ್ರಮ ವಿಸಾಜಿ, ರಿಯಾಜ್ ಅಹಮ್ಮದ್, ಮೀನಾಕ್ಷಿ ಬಾಳಿ, ಕಾಶಿನಾಥ ಅಂಬಲಗೆ, ಪ್ರಭು ಖಾನಾಪುರೆ, ಶಿವರಾಜ ಪಾಟೀಲ, ಶಿವಶಾಂತರೆಡ್ಡಿ, ಅಮೃತಾ ಕಟಕೆ, ಡಾ.ಸೂರ್ಯಕಾಂತ ಸುಜ್ಯಾತ, ಶಿವಕವಿ ಹಿರೇಮಠ, ರವಿ ಹಿರೇಮಠ ಮತ್ತು ಪ್ರೇಮಾ ಹೂಗಾರ ಅವರು ಸಾಹಿತ್ಯ ಬರೆದುಕೊಡಲು ಒಪ್ಪಿಕೊಂಡಿದ್ದಾರೆ.

‘ಇಂದಿನ ಮಕ್ಕಳು ನೆಲದ ಬನಿಯನ್ನು ಮರೆಯುತ್ತಿದ್ದಾರೆ. ವಾಟ್ಸ್‌ ಆ್ಯಪ್, ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿದ್ದಾರೆ. ಅವರಿಗೆ ಅವರದ್ದೇ ನೆಲದ ಇತಿಹಾಸ, ಸುವರ್ಣ ಕಾಲದ ಬಗ್ಗೆ ಮಾಹಿತಿ, ತಿಳಿವಳಿಕೆ ಇಲ್ಲ. ಹಾಗಂತ ನಾವು ಸುಮ್ಮನೆ ಕೂರಲಾಗದು.

ಈ ಕಾರಣಕ್ಕಾಗಿಯೇ ಹೈದರಾಬಾದ್ ಕರ್ನಾಟಕ ಪ್ರದೇಶದ ಇತಿಹಾಸವನ್ನು ನವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಾಟಕ ಪ್ರದರ್ಶನಕ್ಕೆ ಮುಂದಾಗಿದ್ದೇವೆ’ ಎಂದು ಕಲಬುರ್ಗಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT