ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದಲ್ಲಿ ಗಾಳಿ ಸಹಿತ ಮಳೆ

Last Updated 6 ಡಿಸೆಂಬರ್ 2017, 8:36 IST
ಅಕ್ಷರ ಗಾತ್ರ

ಕಾರವಾರ/ಬೆಳಗಾವಿ: ಒಖಿ ಚಂಡ ಮಾರುತ ಪ್ರಭಾವದಿಂದಾಗಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮಂಗಳವಾರ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಕಾರವಾರದಲ್ಲಿ ಬೆಳಿಗ್ಗೆ ನಾಲ್ಕೈದು ತಾಸು ಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಒಣಗಿದ ಎಲೆಗಳು ಹಾಗೂ ಮರದ ಕೊಂಬೆಗಳು ನೆಲಕ್ಕೆ ಉದುರಿದವು. ಭಟ್ಕಳ, ಕುಮಟಾ ಹಾಗೂ ಹಳಿಯಾಳದಲ್ಲಿ ತುಂತುರು ಮಳೆಯಾಗಿದೆ.

ಲಂಗರು ಹಾಕಿದ ದೋಣಿಗಳು: ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಅಲ್ಲದೇ ಗಾಳಿ ವೇಗವೂ ಅಧಿಕವಾಗಿದೆ. ಸುರಕ್ಷತೆ ದೃಷ್ಟಿಯಿಂದ ಕಳೆದ ನಾಲ್ಕು ದಿನಗಳಿಂದ ದೋಣಿಗಳು ಮತ್ಸ್ಯಶಿಕಾರಿಗೆ ತೆರಳದೇ ಬಂದರಿನಲ್ಲೇ ಬೀಡುಬಿಟ್ಟಿವೆ. ಬುಧವಾರ ಕೂಡ ಪ್ರತಿಕೂಲ ವಾತಾವರಣ ಇರುವ ಮುನ್ಸೂಚನೆ ಇದ್ದು, ದೋಣಿಗಳು ಕಡಲಿಗಿಳಿಯುವುದು ಅನುಮಾನ.

ಬಂದರಿಗೆ ನುಗ್ಗಿದ ನೀರು: ಗೋಕರ್ಣದ ತದಡಿ ಬಂದರಿನ ಧಕ್ಕೆಗೆ ಸೋಮವಾರ ರಾತ್ರಿ ಸುಮಾರು 3 ಅಡಿ ನೀರು ನುಗ್ಗಿದೆ. ಕುಡ್ಲೆ ಬೀಚ್, ಓಂ ಬೀಚ್‌ಗಳಲ್ಲಿಯೂ ಸಮುದ್ರದ ನೀರು ಮೇಲಕ್ಕೆ ಬಂದಿದ್ದು, ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಬೇಲೆಕಾನ್ ಸಮುದ್ರದಲ್ಲಿ ಅಲೆಗಳು ರಸ್ತೆಯ ಮೇಲೆ ಉಕ್ಕಿದ್ದರಿಂದ ಸಂಚಾರಕ್ಕೆ ಅಡಚಣೆ ಯಾಗಿದೆ.

ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿಯಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿ ನಾಗಪ್ಪ ಪಾಂಡು ಮೇಸ್ತ ಎಂಬುವವರ ಮನೆಗೆ ಭಾಗಶಃ ಹಾನಿಯಾಗಿದೆ. ಅಲೆಗಳ ಅಬ್ಬರಕ್ಕೆ ಬೆದರಿ, ಸಮುದ್ರ ತೀರದ ನಾಲ್ಕು ಮನೆಗಳ ಜನರು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಬೆಳಗಾವಿ ಸೇರಿದಂತೆ ಜಿಲ್ಲೆಯ ಖಾನಾಪೂರ, ಕಿತ್ತೂರ, ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಬೈಲಹೊಂಗಲ, ಹುಕ್ಕೇರಿಯಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT