ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ

Last Updated 6 ಡಿಸೆಂಬರ್ 2017, 8:42 IST
ಅಕ್ಷರ ಗಾತ್ರ

ಮುಳಬಾಗಿಲು: ‘ಆಟೊ ಚಾಲಕರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ನೀಡುತ್ತಿದ್ದು, ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತ್ರಿಚಕ್ರ ಆಟೋ ಚಾಲಕರ ಸಂಘದ ಜಂಟಿ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ.ಸುರೇಶ್‍ ಕುಮಾರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ತ್ರಿಚಕ್ರ ವಾಹನ ಚಾಲಕರ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಆಟೊ ಕಲಿಕಾ ಚಾಲನಾ ಪರವಾನಗಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಟೊ ಚಾಲಕರ ಕುಟುಂಬ ಭದ್ರತೆಗಾಗಿ ₹ 2ಲಕ್ಷ ವಿಮೆ, ಅಪಘಾತಕ್ಕೆ ₹ 3ಲಕ್ಷ, ಅಪಘಾತದಲ್ಲಿ ಸಂಪೂರ್ಣ ಅಂಗವೈಕಲ್ಯವಾದರೆ ₹ 5ಲಕ್ಷದವರೆಗೂ ಸರ್ಕಾರ ನೀಡಲಿದೆ. ಚಾಲಕರು ಪರವಾನಿಗೆಯನ್ನು ಪಡೆದುಕೊಳ್ಳಲು ಎಸ್ಸೆಸ್ಸೆಲ್ಸಿ ವಿದ್ಯಾಭ್ಯಾಸ ಪಡೆದುಕೊಂಡ ಪ್ರಮಾಣ ಪತ್ರ ಸಲ್ಲಿಸಬೇಕಾಗಿತ್ತು. ಆದರೆ ಈಗ ಎಂಟನೇ ತರಗತಿ ಪ್ರಮಾಣ ಪತ್ರ ಸಲ್ಲಿಸಿದರೆ ಚಾಲನೆ ಪರವಾನಗಿ ಪತ್ರ ಪಡೆದುಕೊಳ್ಳುವ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ಆಟೊ ಚಾಲಕರು ಪರವಾನಿಗೆಯನ್ನು ಪಡೆದುಕೊಳ್ಳಲು ಆರ್.ಟಿ.ಒ ಕಚೇರಿ ಬಳಿ ದಲ್ಲಾಳಿಗಳಿಗೆ ಸಾವಿರಗಟ್ಟಲೆ ಹಣ ನೀಡಬೇಕಾಗಿತ್ತು. ಭ್ರಷ್ಟಾಚಾರ ತಡೆಯುವ ಉದ್ದೇಶದಿಂದ ಸ್ಥಳದಲ್ಲಿಯೇ ಪರವಾನಗಿ ಪತ್ರ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆಟೊ ಚಾಲನೆ ಮಾಡುವಾಗ ಅನುಸರಿಸಬೇಕಾದ ಸಂಚಾರಿ ನಿಯಮಗಳು ಹಾಗೂ ಚಾಲನೆ ಪರವಾನಿಗೆ ಪಡೆದುಕೊಳ್ಳುವ ಬಗ್ಗೆ ಚಾಲಕರಿಗೆ ತ್ರಿಚಕ್ರ ಆಟೊ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ಶ್ರೀನಿವಾಸಮೂರ್ತಿ ಅವರು ಕಾನೂನು ಅರಿವು ಮೂಡಿಸಿದರು.

‘ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡುವುದರಿಂದ ಹಾಗೂ ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಆದ್ದರಿಂದ ಪ್ರತಿಯೊಬ್ಬ ಚಾಲಕರು ಎಚ್ಚರಿಕೆಯಿಂದ ಜಾಗೃತರಾಗಿ ಚಾಲನೆ ಮಾಡಬೇಕು’ ಎಂದು ಆರ್.ಟಿ.ಒ ಸಂಚಾರಿ ಅಧಿಕಾರಿ ಬಾಲಕೃಷ್ಣ ಸಲಹೆ ನೀಡಿದರು.

ತ್ರಿಚಕ್ರ ಆಟೊ ಚಾಲಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಕೋಲಾರ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಯ್ಯದ್ ಬಾಬು, ಆರ್.ಟಿ.ಒ ಅಧಿಕಾರಿಗಳಾದ ಮೋಹನ್ ಗೋಕರ್, ಹೇಮಂತ್, ಜಗದೀಶ್, ಶ್ರೀನಿವಾಸ್, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT