ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಅವಮಾನಿಸಿಲ್ಲ

ಕಾರಜೋಳ, ಜಿಗಜಿಣಗಿ ಆರೋಪ ಸತ್ಯಕ್ಕೆ ದೂರ: ಚಂದ್ರಶೇಖರ ಕೊಡಬಾಗಿ ಸ್ಪಷ್ಟನೆ
Last Updated 6 ಡಿಸೆಂಬರ್ 2017, 8:51 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್ ಪಕ್ಷ ಡಾ.ಬಿ.ಆರ್‌.ಅಂಬೇಡ್ಕರರನ್ನು ಹೀನಾಯವಾಗಿ ನಡೆಸಿಕೊಂಡಿದೆ ಎಂಬ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಶಾಸಕ ಗೋವಿಂದ ಕಾರಜೋಳ ಮಾಡಿರುವ ಆಪಾದನೆ ಸತ್ಯಕ್ಕೆ ದೂರ ಎಂದು ಕಾಂಗ್ರೆಸ್ ಮುಖಂಡ ಚಂದ್ರಶೇಖರ ಕೊಡಬಾಗಿ ಹೇಳಿದರು.

ಅಂಬೇಡ್ಕರವರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಹೀನಾಯವಾಗಿ ನಡೆಸಿಕೊಂಡಿಲ್ಲ. ವಿನಾಕಾರಣ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಗೋವಿಂದ ಕಾರಜೋಳ ಇಲ್ಲ-ಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಂಬೇಡ್ಕರರ ಅಂತ್ಯಸಂಸ್ಕಾರಕ್ಕೆ ರಾಜಘಾಟ್‌ನಲ್ಲಿ ಕಾಂಗ್ರೆಸ್ ಜಾಗ ನೀಡಲಿಲ್ಲ ಎಂದು ಜಿಗಜಿಣಗಿ ಆರೋಪಿಸಿದ್ದಾರೆ. ಆದರೆ, ಅವರ ಅಂತ್ಯಸಂಸ್ಕಾರ ಅವರ ಕರ್ಮಭೂಮಿಯಲ್ಲಿ ನಡೆಯಬೇಕು ಎಂಬ ಬಹುಜನರ ಆಶಯದಂತೆ ನಡೆದಿದೆ. ಜಿಗಜಿಣಗಿ ಹೊರೆಸಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಾಂಗ್ರೆಸ್ ಪಕ್ಷದಿಂದ ದಲಿತರ ಉದ್ಧಾರವಾಗಿಲ್ಲ, ಕಾಂಗ್ರೆಸ್ ಪಕ್ಷದಿಂದ ಕೇವಲ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಮಾತ್ರ ಉದ್ಧಾರವಾಗಿದ್ದಾರೆ ಎಂದು ಕಾರಜೋಳ ಹೊರೆಸಿದ ಆರೋಪದಲ್ಲಿಯೂ ಯಾವುದೇ ಹುರುಳಿಲ್ಲ ಎಂದ ಅವರು, ಬಿಜೆಪಿಯಿಂದ ಎಷ್ಟು ಜನ ದಲಿತರು ಉದ್ಧಾರವಾಗಿದ್ದಾರೆ, ಅಲ್ಲಿ ಉದ್ಧಾರವಾದವರು ಜಿಗಜಿಣಗಿ, ಜಿಗಜಿಣಗಿ ಅಳಿಯ, ಕಾರಜೋಳ ಅವರ ಮಕ್ಕಳು ಮಾತ್ರ ಉದ್ಧಾರವಾಗಿದ್ದಾರೆ ಎಂದರು.

ಮನುವಾದಿ ಬಿಜೆಪಿಯಲ್ಲಿರುವ ದಲಿತ ನಾಯಕರು ಸಹ ಮನುವಾದ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಂತಹ ಮನುವಾದಿ ಸಿದ್ಧಾಂತ ಒಪ್ಪಿಕೊಂಡಿರುವ ಜಿಗಜಿಣಗಿ, ಕಾರಜೋಳ ಅವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ. ಕಾರಜೋಳ, ಜಿಗಜಿಣಗಿ ಅಂಬೇಡ್ಕರ ಜೀವನ- ಚಿಂತನೆ ತಿಳಿದುಕೊಂಡಿಲ್ಲ, ಮೀಸಲಾತಿಯ ಉಪಯೋಗ ತೆಗೆದುಕೊಂಡು ಅಧಿಕಾರ ಪಡೆದುಕೊಂಡಿರುವ ಅವರು ಬ್ರಾಹ್ಮಣಶಾಹಿಗಳಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಆದರೆ ಸ್ವತ: ತಾವೇ ದೇವಾಲಯಗಳ ಪ್ರವೇಶ ನಿರಾಕರಿಸುವ ಮೂಲಕ ಅಸ್ಪೃಶ್ಯ ಆಚರಣೆಗೆ ಪ್ರೇರೇಪಿಸುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಕ್ರಮವಲ್ಲವೇ? ಎಂದು ಪ್ರಶ್ನಿಸಿದರು.

ಕೆ.ಬಸಣ್ಣ ಚಲವಾದಿ, ಅಡಿವೆಪ್ಪ ಸಾಲಗಲ್ಲ, ಸುರೇಶ ಗೊಣಸಗಿ, ಆಫ್ರಾಬ್ ಖಾದ್ರಿ ಇನಾಮದಾರ, ಸುನೀಲ ಉಕ್ಕಲಿ, ನಾಗರಾಜ ಲಂಬು, ಸಂಗಪ್ಪ ಚಲವಾದಿ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT