ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರಿನಿಂದ ಕಂಗೊಳಿಸುವ ಪುಟ್ಟ ಶಾಲೆ

Last Updated 6 ಡಿಸೆಂಬರ್ 2017, 9:08 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಪೈದೊಡ್ಡಿ ಕ್ಲಸ್ಟರ್‌ಗೆ ಒಳಪಡುವ ಗೊಲಪಲ್ಲಿ ಬ್ರಿಜ್‌ ಹತ್ತಿರ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಸಿರಿನಿಂದ ಕಂಗೊಳಿಸುವ ಮೂಲಕ ಎಲ್ಲರನ್ನು ಆರ್ಕಷಿಸುತ್ತದೆ. ಶಾಲೆಯ ಆವರಣದಲ್ಲಿ ಸುಂದರವಾದ ಹಸಿರಿನ ವನವು ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಿದೆ.

2008ರಲ್ಲಿ ಸಣ್ಣ ಕಟ್ಟಡದಲ್ಲಿ ಆರಂಭವಾದ ಈ ಶಾಲೆಯು ಈಗ ಇದು ಹಳೆಯ ಗೊಲಪಲ್ಲಿ ಗ್ರಾಮದ ಹೆಮ್ಮೆಯ ಶಾಲೆಯಾಗಿದೆ. ಈ ಶಾಲೆಗೆ ಪಕ್ಕದ ಆರ್ಯರ ದೊಡ್ಡಿಯ ಮಕ್ಕಳು ಸಹ ಬರುತ್ತಾರೆ. ಒಟ್ಟು 18 ಜನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕರಿದ್ದಾರೆ ಶಾಲೆಯ ಸುತ್ತ ಬೆಳೆದ ಹಸಿರು ಸಿರಿ ಮನಸ್ಸಿಗೆ ಮುದ ನೀಡುತ್ತದೆ.

ಶಾಲೆ ಆರಂಭವಾದ ಸಂದರ್ಭದಲ್ಲಿ ಗ್ರಾಮದ ಜನರು, ಶಾಲಾ ಉಸ್ತುವಾರಿ ಸಮಿತಿಯ ಪದಾಧಿಕಾರಿಗಳ ನೆರವಿನೊಂದಿಗೆ ಶಾಲೆ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳಸಲಾಗಿದ್ದು, ಇದರ ಪರಿಣಾಮ ಹಸಿರಿನಿಂದ ಕೂಡಿದ ಈ ಶಾಲೆಗೆ 2014ರಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ‘ಹಸಿರು ಶಾಲೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ರಾಯಚೂರಿನ ಪಿ.ಕೆ. ಸುಬ್ರಮಣ್ಯಂ ಚಾರಿಟೇಬಲ್‌ ಟ್ರಸ್ಟ್‌ ನೀಡುವ ‘ಕಿತ್ತಳೆ ಶಾಲೆ’ ಎಂಬ ಪ್ರಶಸ್ತಿಯನ್ನು ಈ ಶಾಲೆ 2016ರಲ್ಲಿ ಪಡೆದುಕೊಂಡಿದೆ.

ಶಾಲಾ ಆವರಣದಲ್ಲಿ ಬಾದಾಮಿ, ನುಗ್ಗೆ, ಕರಿಬೇವು, ಅಡಿಕೆ, ಸೀತಾಫಲ, ಬೇವು, ಮಾವು, ತೆಂಗು, ಹುಣಸೆ, ನಿಂಬೆ, ಪೇರು, ಬಾಳೆ, ಪಪ್ಪಾಯಿ, ಚಿಕ್ಕು, ಈಚಲು ಮತ್ತು ಅಶೋಕ ಗಿಡಗಳು ಸೇರಿದಂತೆ ದ್ರಾಕ್ಷಿ ಬಳ್ಳಿ ಹಾಕಲಾಗಿದೆ. ಗುಲಾಬಿ, ಮಲ್ಲಿಗೆ, ದುಂಡುಮಲ್ಲಿಗೆ, ಎಕ್ಷೆ, ಕಣಗಲ ಹೂವು, ದಾಸವಾರ ಬಿಳಿ ಮತ್ತು ಕೆಂಪು ಹಾಗೂ ಗಂಟೆ ಹೂವಿನಗಿಡಗಳು ಸೇರಿದಂತೆ ಅಲಂಕಾರಿಕ ಗಿಡಗಳು ವಿಫುಲವಾಗಿ ಬೆಳೆದು ನಿಂತಿವೆ.

‘ಒಬ್ಬ ವಿದ್ಯಾರ್ಥಿಗೆ ಒಂದು ಗಿಡದ ನಿರ್ವಹಣೆಯನ್ನು ಒಪ್ಪಿಸಲಾಗಿದ್ದು, ವಿದ್ಯಾರ್ಥಿಗಳ ಜೊತೆ ಪಾಲಕರು ನಿರ್ವಹಣೆಯಲ್ಲಿ ಕೈಜೋಡಿಸುತ್ತಾರೆ’ ಎಂದು ಮುಖ್ಯಶಿಕ್ಷಕ ಶಿವಾನಂದ ಹೇಳುತ್ತಾರೆ.

‘ಶಾಲೆಗೆ ಕಾಂಪೌಂಡ್‌ ಇಲ್ಲದೇ ಇರುವುದರಿಂದ ಗಿಡಗಳನ್ನು ರಕ್ಷಿಸಲು ತಾತ್ಕಾಲಿಕವಾಗಿ ತಂತಿಯ ಬೇಲಿ ನಿರ್ಮಿಸಲಾಗಿದೆ. ಬೇಸಿಗೆ ರಜೆಯಲ್ಲಿ ಶಾಲೆಯ ಆವರಣದಲ್ಲಿ ಬೆಳೆಸಿದ ಗಿಡ ಮರಗಳನ್ನು ಎಸ್‌ಡಿಎಂಸಿ ಅದ್ಯಕ್ಷ ಆದಪ್ಪ ಛಲವಾದಿ ನೋಡಿಕೊಳ್ಳುತ್ತಾರೆ. ಶಾಲೆಯ ಅಭಿವೃದ್ಧಿಗಾಗಿ ಎಲ್ಲರೂ ಸಹಕಾರ ನೀಡುತ್ತಾರೆ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಥೆ ಹೇಳುವುದು, ಹಾಡುಗಾರಿಕೆ ಹಾಗೂ ಕಂಠ ಪಾಠ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ’ ಎಂದು ಮುಖ್ಯಶಿಕ್ಷಕ ಹೇಳುತ್ತಾರೆ.

‘ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಸಿ ಪಂಪ್‌ ಅಳವಡಿಸಿದ್ದರಿಂದ ವಿದ್ಯಾರ್ಥಿಗಳ ಕುಡಿಯುವ ನೀರು ಹಾಗೂ ಗಿಡ–ಮರಗಳಿಗೆ ನೀರು ಪೂರೈಕೆಗೆ ಯಾವುದೇ ತೊಂದರೆ ಇಲ್ಲ. ಶಾಲೆಗೆ ಭೇಟಿ ನೀಡಿದ್ದ ಇಲಾಖೆ ಅಧಿಕಾರಿಗಳು ಶಾಲೆಯ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಆದಪ್ಪ ಛಲವಾದಿ ನೆನೆಯುತ್ತಾರೆ.

* * 

ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಗಿಡಗಳ ರಕ್ಷಣೆಗಾಗಿ ಶಾಲೆಯ ಸುತ್ತ ಕಾಂಪೌಂಡ್‌ ನಿರ್ಮಿಸಿ ಕೊಡುವಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗುವುದು.
ಆದಪ್ಪ ಛಲವಾದಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT