ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ಮೂವರು ಜೀತ ಕಾರ್ಮಿಕರ ರಕ್ಷಣೆ

Last Updated 6 ಡಿಸೆಂಬರ್ 2017, 9:13 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನ ಮರಿಯಪ್ಪನದೊಡ್ಡಿ ಗ್ರಾಮದಲ್ಲಿ ಕೃಷಿಯಲ್ಲಿ ಮತ್ತು ರೇಷ್ಮೆ ಫಾರ್ಮ್‌ ನಲ್ಲಿ ಜೀತ ದಾಳುವಂತೆ ದುಡಿಯುತ್ತಿದ್ದ ಮೂವರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣೆಗೆ ಒಳಗಾದ ಮೂವರು ಒಂದೇ ಕುಟುಂಬದವರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ನವರಾದ ಇವರು ಕಳೆದ ಒಂದೂವರೆ ವರ್ಷದ ಹಿಂದೆ ಕೆಲಸಕ್ಕೆಂದು ಕನಕಪುರಕ್ಕೆ ಬಂದಿದ್ದು, ಅವರಿಗೆ ಕೊಂಚ ಹಣ ನೀಡಿ ನಂತರದಲ್ಲಿ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ವಿಶೇಷ ಬಾಲಾರೋಪಿ ಪೊಲೀಸ್‌ ಘಟಕ (ಎಸ್‌ಜೆಪಿಯು) ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಇದೇ ತಿಂಗಳ 1ರಂದು ದಾಳಿ ನಡೆಸಿ ಈ ಕಾರ್ಮಿಕರನ್ನು ರಕ್ಷಿಸಲಾಯಿತು. ಫಾರ್ಮ್‌ ಮಾಲೀಕರ ವಿರುದ್ಧ ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನಕಪುರ ತಹಶೀಲ್ದಾರ್‌ ಯೋಗಾನಂದ ಸೋಮವಾರ ಈ ಕಾರ್ಮಿಕರಿಗೆ ಬಿಡುಗಡೆ ಪತ್ರ ನೀಡಿ ಊರಿಗೆ ಬೀಳ್ಕೊಟ್ಟರು. ಒಂದೂವರೆ ವರ್ಷದ ಹಿಂದೆ ಈ ಕುಟುಂಬದ ಯಜಮಾನ ತನ್ನ ಪತ್ನಿ ಹಾಗೂ 13 ವರ್ಷದ ಮಗಳೊಂದಿಗೆ ಈ ಫಾರ್ಮ್‌ಗೆ ಕೆಲಸಕ್ಕೆಂದು ಬಂದಿದ್ದು, ಆ ಸಂದರ್ಭ ಅವರಿಗೆ ₹35 ಸಾವಿರ ಮುಂಗಡ ಹಣ ನೀಡಲಾಗಿತ್ತು. ನಂತರದಲ್ಲಿ ತಿಂಗಳಿಗೆ ₹ 2–3 ಸಾವಿರವಷ್ಟೇ ನೀಡುತ್ತಿದ್ದು, ಅದರಲ್ಲಿಯೇ ಅವರು ಜೀವನ ಸಾಗಿಸಬೇಕಿತ್ತು.

ಕೆಲಸಕ್ಕೆ ತಕ್ಕಂತೆ ಸಂಬಳ ನೀಡುತ್ತಿರಲಿಲ್ಲ. ತಮ್ಮನ್ನು ಬಿಟ್ಟುಬಿಡುವಂತೆ ಕಾರ್ಮಿಕರು ಮಾಲೀಕರಿಗೆ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದಿಸಿರಲಿಲ್ಲ. ಒಂದು ವೇಳೆ ಹೋಗುವುದೇ ಆಗಿದ್ದಲ್ಲಿ ತಮಗೆ ನೀಡಿದ ಹಣಕ್ಕೆ ಬಡ್ಡಿ ಸೇರಿಸಿ ₹48 ಸಾವಿರ ನೀಡುವಂತೆ ಮಾಲೀಕ ಒತ್ತಾಯಿಸಿದ್ದ ಎನ್ನಲಾಗಿದೆ.

ಕುಟುಂಬದವರು ಹಗಲು ರಾತ್ರಿ ದುಡಿಮೆ ಮಾಡುತ್ತಿದ್ದು, ದಿನಕ್ಕೆ ಎರಡು ಹೊತ್ತು ಮಾತ್ರ ಊಟ ನೀಡಲಾಗುತಿತ್ತು. ರೇಷ್ಮೆ ಹುಳು ಸಾಕಣೆ, ಕೃಷಿ ಕಾರ್ಯ, ಜಾನುವಾರುಗಳ ಸಾಕಣೆಗೆ ಈ ಕಾರ್ಮಿಕರನ್ನು ಬಳಸಿ ಕೊಳ್ಳಲಾಗುತ್ತಿತ್ತು. ಬಾಲಕಿಯ ಕೈಯಲ್ಲಿ ಮನೆಕೆಲಸವನ್ನೂ ಮಾಡಿಸಲಾಗಿತ್ತು. ಕೆಲವು ಬಾರಿ ಮಾಲೀಕರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಯನ್ನೂ ಮಾಡಿದ್ದರು ಎಂದು
ದೂರಲಾಗಿದೆ.

‘ನಾನು 9ನೇ ತರಗತಿಯಲ್ಲಿ ಶೇ 92 ಅಂಕ ಗಳಿಸಿದ್ದೇನೆ, ಆದರೆ ಇಲ್ಲಿ ಕೆಲಸ ಮಾಡುತ್ತಿರುವ ಕಾರಣ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ನಾನು ಹೊರಗೆ ಹೋಗಲು ಪ್ರಯತ್ನಿಸಿದರೆ ಅಥವಾ ಪಕ್ಕದ ಫಾರ್ಮ್‌ನಲ್ಲಿ ಇರುವ ನನ್ನ ಸ್ನೇಹಿತರನ್ನು ಭೇಟಿಯಾಗಲು ಪ್ರಯತ್ನಿಸಿದರೆ ಮಾಲೀಕ ನನ್ನನ್ನು ಗದರಿಸುತ್ತಿದ್ದ. ಇಲ್ಲಿ ನಾನಾಗಲೀ, ನನ್ನ ಅಪ್ಪ- ಅಮ್ಮಂದಿರಾಗಲಿ ಸುಖವಾಗಿಲ್ಲ. ತೀವ್ರ ಹಿಂಸೆ ಅನುಭವಿಸುತ್ತಿದ್ದೇವೆ. ಈಗ ಬಿಡುಗಡೆ ಸಿಕ್ಕಿದ್ದು, ಓದು ಮುಂದುವರಿಸಲು ಬಯಸಿದ್ದೇನೆ’ ಎಂದು ರಕ್ಷಣೆಗೆ ಒಳಗಾದ ಬಾಲಕಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT