ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಮಾರ್ಟ್‌’ ಕಾಮಗಾರಿ ವಿಳಂಬ: ಬೇಸರ

ಸ್ಮಾರ್ಟ್‌ಸಿಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ
Last Updated 6 ಡಿಸೆಂಬರ್ 2017, 9:24 IST
ಅಕ್ಷರ ಗಾತ್ರ

ತುಮಕೂರು:  ‘₹129.59 ಕೋಟಿ ಮೊತ್ತದ ಯೋಜನೆಗಳಿಗೆ ಸಂಬಂಧಿಸಿದ ಕಡತಗಳು ಅನುಮತಿಗಾಗಿ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವುದರಿಂದ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿ ಆರಂಭಗೊಳ್ಳಲು ವಿಳಂಬವಾಗುತ್ತಿದೆ’ ಎಂದು ಎಸ್‌.ಪಿ.ಮುದ್ದಹನುಮೇಗೌಡ ಬೇಸರ ವ್ಯಕ್ತಪಡಿಸಿದರು.

ನಗರದ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಮಾನಿಕೆರೆಯಲ್ಲಿ ಬಂಡು ನಿರ್ಮಾಣ, ಗುಬ್ಬಿ ರಸ್ತೆಯಿಂದ ಕ್ಯಾತಸಂದ್ರದವರೆಗೆ ರಿಂಗ್‌ ರಸ್ತೆ, ತುಮಕೂರು ನಗರದಲ್ಲಿ ಕೇಂದ್ರೀಕೃತ ಸಂಚಾರ ನಿಯಂತ್ರಣದ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳ ಕಡತಗಳು ಆಯಾ ಇಲಾಖೆಯ ಕಚೇರಿಗಳಲ್ಲಿ ಹಾಗೆಯೇ ಬಿದ್ದಕೊಂಡಿವೆ. ಶೀಘ್ರವೇ ಸಚಿವ ಜಯಚಂದ್ರ ಮತ್ತು ಶಾಸಕ ರಫೀಕ್‌ ಅಹಮದ್‌ ಅವರೊಡನೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.

ವಿವಿಧ ಅನುಮತಿಗಳಿಗಾಗಿ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವ ಯೋಜನೆಗಳಿಗೆ ಅನುಮತಿ ಪಡೆದು ಈ ತಿಂಗಳ ಅಂತ್ಯಕ್ಕೆ ಒಟ್ಟಾರೆ ₹ 464 ಕೋಟಿ ಯೋಜನೆಗಳಿಗೆ ರೂಪುರೇಷೆಯನ್ನು ಸಿದ್ಧಪಡಿಸಲಾಗುವುದು ಎಂದರು.

‘ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಅನುಮತಿ ಪಡೆಯಲು ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಅನುಮತಿ ದೊರೆತ ನಂತರ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.

ಹಿರೇಹಳ್ಳಿಯಿಂದ ವಸಂತ
ನರಸಾಪುರ ಕೈಗಾರಿಕಾ ಪ್ರದೇಶದವರೆಗೆ ಸುಮಾರು 32 ಕಿ.ಮೀ. ಉದ್ದದ ತುಮಕೂರು ಪೆರಿಫೆರಲ್‌ ರಸ್ತೆಯ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಮೀಕ್ಷೆ ನಡೆಸಿದೆ. ಈ ರಸ್ತೆ ನಿರ್ಮಾಣವಾದರೆ ತುಮಕೂರು ನಗರದ ವಾಹನ ದಟ್ಟಣೆ ಕಡಿಮೆಯಾಗಲಿದೆ ಎಂದು ಹೇಳಿದರು.

ಶಾಸಕ ಡಾ.ರಫೀಕ್ ಅಹಮ್ಮದ್, ಉಪಮೇಯರ್‌ ಫರ್ಜಾನಾ ಖಾನಂ, ಪಾಲಿಕೆ ಆಯುಕ್ತ ಮಂಜುನಾಥಸ್ವಾಮಿ, ಟೂಡಾ ಆಯುಕ್ತ ರಂಗಸ್ವಾಮಿ ಇದ್ದರು.

***

ನಗರದಲ್ಲಿ ಏನೇನು ಅಭಿವೃದ್ಧಿ?

‘ಸ್ಮಾರ್ಟ್‌ಸಿಟಿ ಯೋಜನೆಯ ಅಡಿಯಲ್ಲಿ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಕಾಲ್ನಡಿಗೆ ಪಥ, ಸ್ಕೇಟಿಂಗ್, ಬ್ಯಾಸ್ಕೆಟ್ ಬಾಲ್ ಕೋರ್ಟ್ ಸೇರಿದಂತೆ ಹಲವು ಜನೋಪಯೋಗಿ ಕಾಮಗಾರಿಗಳು ಶೀಘ್ರವೇ ಆರಂಭವಾಗಲಿವೆ’ ಎಂದು ಮುದ್ದಹನುಮೇಗೌಡ ತಿಳಿಸಿದರು.

‘ಅಮಾನಿಕೆರೆಯಲ್ಲಿ ಸ್ಮಾರ್ಟ್ ಲಾಂಜ್ ನಿರ್ಮಾಣ ಸೇರಿದಂತೆ ಸುಮಾರು ₹ 24.82 ಕೋಟಿ ಮೊತ್ತದ ಕಾಮಗಾರಿಗಳಿಗೆ ಡಿಸೆಂಬರ್‌ ಅಂತ್ಯದೊಳಗೆ ಚಾಲನೆ ನೀಡಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ಈಗ ₹ 216 ಕೋಟಿ ಬಂದಿದೆ. ಈ ಮೊತ್ತಕ್ಕೆ ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ’ ಎಂದು ತಿಳಿಸಿದರು.

***

20 ಕೆರೆಗಳ ಅಭಿವೃದ್ಧಿ

‘ದಾವಣಗೆರೆ ನಗರಕ್ಕೆ ಹೋಲಿಸಿದರೆ ತುಮಕೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆರೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ ಒಂದಕ್ಕೊಂದು ಸಂಪರ್ಕ ಕಾಲುವೆಗಳಿವೆ. ಇಂತಹ 20 ಕೆರೆಗಳನ್ನು ಸ್ಮಾರ್ಟ್ ಸಿಟಿ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ ಮತ್ತು ನಶಿಸಿ ಹೋಗುವ ಕೆರೆಗಳನ್ನು ಸಂರಕ್ಷಿಸಿದಂತಾಗುತ್ತದೆ’ ಎಂದು ಸ್ಮಾರ್ಟ್‌ ಸಿಟಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿರುದ್ಧ ಶ್ರವಣ ತಿಳಿಸಿದರು.

***

ಅಮಾನಿಕೆರೆಯಲ್ಲಿ ಸ್ಮಾರ್ಟ್‌ ಲಾಂಜ್‌ ನಿರ್ಮಾಣ

ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿಗಳಿಗೆ ಚಾಲನೆ

ಪೆರಿಫೆರಲ್‌ ರಸ್ತೆಗೆ ಹೆದ್ದಾರಿ ಪ್ರಾಧಿಕಾರದ ಸಮೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT