ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೇ ಕ್ಯಾಮೆರಾ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಣ್ಣಂಚಿನಿಂದಲೇ ಯಾರು ಯಾರನ್ನು ಎಲ್ಲಿ ಬೇಕಾದರೂ ಸೆರೆಹಿಡಿಯಬಹುದು. ಕಣ್ಣಿನ ಸಣ್ಣ ಅಲುಗಾಟದಿಂದ ಬೇಕಾದ ಎಲ್ಲವನ್ನೂ ಕಣ್ಣ ಮುಂದೆ ತರಿಸಿಕೊಳ್ಳಬಹುದು, ಹುಡುಕಬಹುದು, ಸಂದೇಶವನ್ನೂ ರವಾನಿಸಬಹುದು. ಇಂಥ ಕಲ್ಪನೆಗಳಿಗೆ ಜೀವ ತುಂಬಿ ವಾಸ್ತವಕ್ಕೆ ತರುವ ಪ್ರಯತ್ನ ವೇಗ ಪಡೆದಿದ್ದು 2009ರಲ್ಲಿ.

ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ತೆಳುವಾದ ಕಾಂಟ್ಯಾಕ್ಟ್ ಲೆನ್ಸ್ ಒಳಗೆ ಸರ್ಕಿಟ್‌ ಅಳವಡಿಸಿತ್ತು. ಆಂಟೆನಾ, ರೇಡಿಯೊ ತರಂಗಗಳನ್ನು ಗ್ರಹಿಸುವ ರಿಸೀವರ್ ಹಾಗೂ ಎಲ್‍ಇಡಿ ಇಟ್ಟು ಹೊರಗಿನಿಂದ ಬ್ಯಾಟರಿಯಿಂದ ರೇಡಿಯೊ ಕಂಪನಗಳ ಮೂಲಕ ಶಕ್ತಿ ವರ್ಗಾಯಿಸಲಾಗಿತ್ತು. ಇದರಿಂದ ಲೆನ್ಸ್ ಒಳಗಿನ ಎಲ್‍ಇಡಿ ಬೆಳಗುವುದು ಸಾಧ್ಯವಾಗಿತ್ತು.

ಇದೇ ತಂಡದ ಬ್ರಿಯನ್ ಆಟಿಸ್ ಮತ್ತು ಬಾಬಕ್ ಪರ್ವಿಜ್ ಎಂಬ ಸಂಶೋಧಕರು ‘ಗೂಗಲ್ ಎಕ್ಸ್’ ಲ್ಯಾಬ್‍ನೊಂದಿಗೆ ಕಾರ್ಯನಿರ್ವಹಿಸಿದ್ದು, ಗ್ಲೂಕೋಸ್ (ಸಕ್ಕರೆ ಅಂಶ) ಪತ್ತೆ ಮಾಡುವ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿಪಡಿಸಿದ್ದಾರೆ. 2014ರಲ್ಲಿ ಗೂಗಲ್ ತನ್ನ ಈ ಹೊಸ ಯೋಜನೆಯ ಕುರಿತು ಬಹಿರಂಗಪಡಿಸಿತ್ತು.

ಆವರೆಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕಂಡವರು ಇರಲಿಲ್ಲ. ದೇಹದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಕಣ್ಣೀರಿನಿಂದ ಪತ್ತೆ ಮಾಡಬಹು ದಾದ ಲೆನ್ಸ್‌ಗಳ ಅಭಿವೃದ್ಧಿ ಮತ್ತು ಬಳಕೆ ಕುರಿತು ಗೂಗಲ್ ಆಹಾರ ಮತ್ತು ಡ್ರಗ್ ಆಡಳಿತ ಮಂಡಳಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಿತ್ತು.

‘ಇನ್ನೋವೇಗಾ’ ಎಂಬ ಕಂಪನಿಯು 2014ರಲ್ಲಿ ಜಾಗತಿಕ ಎಲೆಕ್ಟ್ರಾನಿಕ್ಸ್ ಮೇಳದಲ್ಲಿ ವಿಶೇಷವಾದ ಐಆಪ್ಟಿಕ್ ಕನ್ನಡಕವನ್ನು ಪ್ರದರ್ಶಿಸಿತ್ತು. ಕಣ್ಣಮುಂದೆ ನಮ್ಮದೇ ಜಗತ್ತನ್ನು ತೆರೆದುಕೊಂಡು ಅಥವಾ ಸೂಕ್ಷ್ಮ ವಸ್ತುಗಳನ್ನು ವರ್ಧಿಸಿಕೊಂಡು ಕಾಣು‌ವುದು, ಕಾರ್ಯನಿರ್ವಹಿಸುವುದು ಇದರಿಂದ ಸಾಧ್ಯವಿತ್ತು. ಆದರೆ, ಇದಕ್ಕೆ ಪೂರಕವಾದ ಉಪಕರಣಗಳನ್ನು ಕನ್ನಡಕದ ಮಸೂರ ಹೊಂದಿತ್ತೇ ಹೊರತು ಕಣ್ಣಿನೊಳಗೆ ಅಳವಡಿಸುವ ಲೆನ್ಸ್ ಅದಾಗಿರಲಿಲ್ಲ.

ಈಗಾಗಲೇ ವೈದ್ಯಕೀಯ ವಲಯದಲ್ಲಿ ಗೂಗಲ್ ಗ್ಲಾಸ್‍ಗಳ ಬಳಕೆ ಹೆಚ್ಚಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವಾಗ, ಇಲ್ಲವೇ ತುರ್ತು ಸಂದರ್ಭಗಳಲ್ಲಿ ಮತ್ತೊಂದು ಕಾರ್ಯ ನಿರ್ವಹಿಸುತ್ತಲೇ ಬೇಕಾದ ಮಾಹಿತಿಯನ್ನು ಈ ಗ್ಲಾಸ್‍ಗಳಿಂದ ಪಡೆಯುವ ವ್ಯವಸ್ಥೆ ಇದೆ. ಇದೇ ಜಾಗದಲ್ಲಿ ಕಣ್ಣಿನೊಳಗೆ ಹಾಕಿಕೊಳ್ಳುವ ಸ್ಮಾರ್ಟ್‌ಲೆನ್ಸ್‌ಗಳು ಬಂದರೆ ಸಂವಹನ ಮತ್ತಷ್ಟು ಸುಧಾರಿಸಲಿದೆ ಹಾಗೂ ಹೊಸ ಸಂಶೋಧನೆಗಳಿಗೆ ನಾಂದಿಯಾಗಲಿದೆ.

ಇದರಿಂದಾಗಿ ಕೈಗಳ ಬಳಕೆಯಿಲ್ಲದೆ ಕಣ್ಣಿನ ಅಲುಗಾಟದಿಂದಲೇ ಅಗತ್ಯವಿರುವುದನ್ನು ತೆರೆದು ಓದಬಹುದು, ಚಿತ್ರಗಳನ್ನು ಕಾಣುವುದು, ಸೆರೆಹಿಡಿಯುವುದು ಹಾಗೂ ಆಗ್ಮೆಂಟೆಡ್ ರಿಯಾಲಿಟಿ ಮೂಲಕ ಗೇಮಿಂಗ್ ಮನರಂಜನೆಗೆ ಮತ್ತೊಂದು ಆಯಾಮ ಸಿಗಲಿದೆ.

ಚಿತ್ರ ಸೆರೆಹಿಡಿಯುವ ತಂತ್ರಜ್ಞಾನವನ್ನೂ ಕಾಂಟ್ಯಾಕ್ಟ್ ಲೆನ್ಸ್‌ಗಳಲ್ಲಿ ಅಳವಡಿಸುವ ಸಂಬಂಧ ಗೂಗಲ್ ಪೇಟೆಂಟ್ ಪಡೆದುಕೊಂಡಿತ್ತು. 2016ರಲ್ಲಿ ಸೋನಿ, ಸ್ಯಾಮ್‍ಸಂಗ್ ಸಂಸ್ಥೆಗಳೂ ಇಂಥದ್ದೇ ಸ್ಮಾರ್ಟ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಅಳವಡಿಕೆಗೆ ಪೇಟೆಂಟ್ ಪಡೆದುಕೊಂಡಿವೆ. ಕಣ್ಣಿನೊಳಗಿನ ಲೆನ್ಸ್‌ಗಳು ಫೋಟೊ ಜತೆಗೆ ವಿಡಿಯೊ ಕೂಡ ರೆಕಾರ್ಡ್ ಮಾಡುವ ಸಾಧ್ಯತೆಯನ್ನು ಇತ್ತೀಚಿನ ಸಂಶೋಧನೆಗಳು ಹೊರ ತಂದಿವೆ. ಗೇಮಿಂಗ್‍ನಲ್ಲಿ ಬಳಕೆಯಾಗುವ ಕೆಲವು ‘ಸ್ಪೈ ಲೆನ್ಸ್’ಗಳೂ ಈಗಾಗಲೇ ಇ-ಮಾರುಕಟ್ಟೆಯಲ್ಲಿ ಲಭ್ಯ.

ಕಾಂಟ್ಯಾಕ್ಟ್ ಲೆನ್ಸ್ ಹಾಗೂ ಅದನ್ನು ಸ್ವಚ್ಛಗೊಳಿಸಲು, ಸಂಗ್ರಹಿಸಲು ಬಳಸುವ ರಾಸಾಯನಿಕಗಳು ಕಣ್ಣು ಉರಿ, ಕಡಿತ ತರುವ ಅಪಾಯ ಕಡಿಮೆ ಇರುತ್ತದೆಯೋ ಅದನ್ನು ತಜ್ಞರು ಧರಿಸಲು ಶಿಫಾರಸು ಮಾಡುತ್ತಾರೆ. ಎಲೆಕ್ಟ್ರಾನಿಕ್ ಸರ್ಕಿಟ್‌ ಒಳಗೊಂಡ ಇಂಥ ಅತ್ಯಾಧುನಿಕ ಕಾಂಟ್ಯಾಕ್ಟ್ ಲೆನ್ಸ್ ಅಧಿಕೃತವಾಗಿ ಇ-ಮಾರುಕಟ್ಟೆ ಮೂಲಕ ಎಲ್ಲರಿಗೂ ದೊರೆಯುವಂತಾಗಲು ಇನ್ನೂ ಕೆಲವು ವರ್ಷಗಳು ಕಾಯಲೇಬೇಕಿದೆ.

ಏನೆಲ್ಲ ಅಳವಡಿಸಿ... ಕಾಂಟ್ಯಾಕ್ಟ್ ಲೆನ್ಸ್‌ನೊಳಗೆ ಸೂಕ್ಷ್ಮ ಮತ್ತು ಹಗುರವಾದ ಚಿಪ್, ಸರ್ಕ್ಯೂಟ್‌, ಸಂದೇಶ ರವಾನಿಸುವ ಆಂಟೆನಾ, ಎಲ್‍ಇಡಿ ಸೇರಿ ಚಿತ್ರ ಸೆರೆಹಿಡಿಯಲು ಅಗತ್ಯವಾದ ಪುಟ್ಟ ಎಲೆಕ್ಟ್ರಾನಿಕ್ ವಸ್ತುಗಳನ್ನು ಎರಡು ಪದರಗಳಲ್ಲಿ ಅಳವಡಿಸಲಾಗುತ್ತದೆ. ಗೂಗಲ್ ಪ್ರಕಾರ, ಒಂದು ಕ್ಯಾಮೆರಾ, ಸೆನ್ಸರ್ ಮತ್ತು ನಿಯಂತ್ರಿತ ಸರ್ಕಿಟ್‌ ಇರುತ್ತದೆ.

ಮೆಟಲ್-ಆಕ್ಸೈಡ್ ಅರೆವಾಹಕ (ಸೆಮಿಕಂಡಕ್ಟರ್) ಹಾಗೂ ಚಾರ್ಜ್-ಕಪಲ್ಡ್ ಡಿವೈಸ್(ಸಿಸಿಡಿ) ಇಮೇಜ್ ಸೆನ್ಸರ್ ಬಳಕೆ ಮೂಲಕ ಸಂಗ್ರಹಿಸಿದ ಬೆಳಕನ್ನು ಡಿಜಿಟಲ್ ಮಾಹಿತಿ ರೂಪ ನೀಡಬಹುದಾಗಿದೆ. ಯಾವಾಗ ಕ್ಯಾಮೆರಾ ಚಾಲನೆಗೊಂಡು ಚಿತ್ರವನ್ನು ಡಿಜಿಟಲ್ ರೂಪದಲ್ಲಿ ರವಾನಿಸಬೇಕು ಎಂಬುದನ್ನು ನಿರ್ವಹಿಸುವುದು ನಿಯಂತ್ರಿತ ಸರ್ಕಿಟ್‌ ವ್ಯವಸ್ಥೆ.

ಈ ಎಲ್ಲ ವ್ಯವಸ್ಥೆ ಕಾರ್ಯನಿರ್ವಹಣೆಗೆ ವಿದ್ಯುತ್ ಶಕ್ತಿ ಅತ್ಯಗತ್ಯ. ನೇರವಾಗಿ ಬ್ಯಾಟರಿ ಅಥವಾ ಸೌರ ಮೂಲದಿಂದ ಕಣ್ಣಿನೊಳಗೆ ವಿದ್ಯುತ್ ಒದಗಿಸುವುದು ಸಮಸ್ಯೆಯೇ ಸರಿ. ಪ್ರಸ್ತುತ ಇದಕ್ಕೆ ಕಂಡುಕೊಂಡಿರುವ ಪರಿಹಾರ ರೇಡಿಯೊ ಕಂಪನಾಂಕ. ವಿದ್ಯುತ್ ಅನ್ನು ರೇಡಿಯೊ ಕಂಪನಗಳ ಮೂಲಕ ಲೆನ್ಸ್‌ಗೆ ರವಾನಿಸುವುದು.

ಲೆನ್ಸ್ ಒಳಗಿನ ರಿಸೀವರ್ ಆ ಕಂಪನಗಳನ್ನು ವಿದ್ಯುತ್ ಆಗಿ ಪರಿವರ್ತಿಸಿಕೊಂಡು ಕಾರ್ಯನಿರ್ವಹಿಸುತ್ತದೆ. ಫೋಟೊ ಡಯೋಡ್ (ಫೋನ್ ಪರದೆಯಿಂದ ಮೂಡುವ ಬೆಳಕು) ಬಳಸಿ ಚಾರ್ಜ್ ಆಗುವುದು, ಅದರ ಮೂಲಕವೇ ಮಾಹಿತಿ ರವಾನೆಯಾಗುವ ತಂತ್ರಜ್ಞಾನ ಬಳಸಿರುವ ಬಗೆಗೆ ಕೆಲ ತಂತ್ರಜ್ಞಾನ ವಿಶ್ಲೇಷಣ ವೆಬ್‍ಸೈಟ್‍ಗಳು ವರದಿ ಮಾಡಿವೆ. ಲೆನ್ಸ್ ಧರಿಸುವವರು ಕ್ಲಿಕ್ಕಿಸಿದ ಫೋಟೊಗಳನ್ನು ಅದೇ ಪರದೆಯಲ್ಲಿ ಎಲ್‍ಇಡಿ ಸಹಾಯದಿಂದ ಕಾಣುವ ವ್ಯವಸ್ಥೆ ಅಳವಡಿಸಲು ಪ್ರಯತ್ನ ನಡೆದಿದೆ. ಎರಡು ಲೆನ್ಸ್‌ಗಳನ್ನು ಧರಿಸುವ ಬಳಕೆದಾರರು 3ಡಿ ಚಿತ್ರಗಳನ್ನು ಪಡೆಯಲು ಸಾಧ್ಯವಿದೆ.

ಕ್ಯಾಮೆರಾದೊಂದಿಗೆ ಪರದೆ: ಚಿತ್ರ ಸೆರೆಹಿಡಿಯುವ ಜತೆಗೆ ಅದನ್ನು ಕಣ್ಣಿನೊಳಗೇ ಕಾಣಲು ಪರದೆಯ ಅಗತ್ಯವಿರುತ್ತದೆ. ಪೂರ್ಣ ಪ್ರಮಾಣದಲ್ಲಿ ಇದರ ಅಭಿವೃದ್ಧಿಯಾದಲ್ಲಿ ಗೂಗಲ್ ಗ್ಲಾಸ್‍ನಂತೆಯೇ ವಾಸ್ತವದ ಮಾಹಿತಿಯನ್ನು ವರ್ಧಿಸಿ ಮತ್ತೊಂದು ಆಯಾಮದಲ್ಲಿ ಕಾಣಬಹುದು. ಲೆನ್ಸ್ ರವಾನಿಸಿದ ಚಿತ್ರಕ್ಕೆ ಪೂರಕವಾದ ಮಾಹಿತಿಯನ್ನು ಅದರೊಂದಿಗೆ ಸಂಪರ್ಕಿಸಲಾದ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ರವಾನಿಸುತ್ತದೆ. ಇಂದಿನ ಬಹುತೇಕ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳು ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿರುವುದರಿಂದ ಈ ಲೆನ್ಸ್‌ಗಳನ್ನು ಅದಕ್ಕೆ ಪೂರಕವಾಗಿಯೇ ಅಭಿವೃದ್ಧಿ ಪಡಿಸಲಾಗುತ್ತಿದೆ.

ಅಂಧರಿಗೆ ಸಹಕಾರಿ
ಕಣ್ಣಿನ ದೃಷ್ಟಿ ಇಲ್ಲದವರ ನಿತ್ಯದ ಓಡಾಟದಲ್ಲಿಯೂ ಈ ಸ್ಮಾರ್ಟ್ ಲೆನ್ಸ್‌ಗಳು ಸಹಕಾರಿಯಾಗಬಲ್ಲವು. ರಸ್ತೆಯಲ್ಲಿ ಓಡಾಡುವಾಗ, ದೂರದ ಪ್ರಯಾಣದಲ್ಲಿ ಎದುರಾಗುವ ಅಡೆತಡೆಗಳು ಅಥವಾ ಅಪಾಯದ ಕುರಿತು ಈ ಲೆನ್ಸ್ ಅಂಧರಿಗೆ ಎಲ್‍ಇಡಿ ಬೆಳಕು ಅಥವಾ ಧ್ವನಿ ತರಂಗಗಳನ್ನು ರವಾನಿಸಿ ಎಚ್ಚರಿಕೆಯನ್ನೂ ನೀಡುತ್ತದೆ. ಎದುರಿಗೆ ಮಾತನಾಡುವವರ ಮುಖಲಕ್ಷಣವನ್ನು ಸಂಗ್ರಹಿಸಿಕೊಳ್ಳುವುದರಿಂದ ಬೇರೆ ಯಾವುದೇ ಸ್ಥಳದಲ್ಲಿ ಆ ವ್ಯಕ್ತಿಯನ್ನು ಕಂಡರೂ ಕೆಲವು ಸೂಕ್ಷ್ಮ ಸಂದೇಶಗಳ ಮೂಲಕ ವ್ಯಕ್ತಿಯ ಗುರುತು ತಿಳಿಸುವ ವ್ಯವಸ್ಥೆಗೂ ಪ್ರಯತ್ನಿಸಲಾಗುತ್ತಿದೆ.

ಖಾಸಗಿತನಕ್ಕೆ ಧಕ್ಕೆ?: ಇಂಥದೊಂದು ಸ್ಮಾರ್ಟ್ ಲೆನ್ಸ್ ಮಾದರಿ ಸಿದ್ಧಗೊಂಡು ಮೂರು ವರ್ಷ ಕಳೆದಿದ್ದರೂ ಅಧಿಕೃತವಾಗಿ ಲೆನ್ಸ್‌ನಲ್ಲಿ ಬಳಕೆಯಾಗಿರುವ ವಸ್ತುಗಳು, ತಂತ್ರಜ್ಞಾನ ಹಾಗೂ ಅದರ ಬಳಕೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಗೂಗಲ್ ಸೇರಿ ಇನ್ನಾವುದೇ ಸಂಸ್ಥೆ ಬಹಿರಂಗ ಪಡಿಸಿಲ್ಲ. ಎಲ್ಲವನ್ನೂ ಎಲ್ಲರನ್ನೂ ಹಾಗೂ ಎಲ್ಲಿ ಬೇಕಾದರೂ ಚಿತ್ರಗಳನ್ನು ಸೆರೆಹಿಡಿಯುವ ರಹಸ್ಯ ಕ್ಯಾಮೆರಾಗಳಂಥ ಇಂಥ ಕಾಂಟ್ಯಾಕ್ಟ್ ಲೆನ್ಸ್‌ಗಳ ವಿರುದ್ಧ ಈಗಾಗಲೇ ಖಾಸಗಿತನಕ್ಕೆ ಧಕ್ಕೆಯಾಗುವ ಆರೋಪಗಳು ಸುತ್ತಿಕೊಂಡಿದೆ.

ಯಾವುದೇ ಅನುಮಾನ ಬಾರದಂತೆ, ಅನುಮತಿಯನ್ನೂ ಪಡೆಯದಂತೆ ನಗುನಗುತ್ತಲೇ ಕಣ್ಣಿನಿಂದ ಎದುರಿನವರ ಫೋಟೊ ಕ್ಲಿಕ್ಕಿಸುತ್ತಿರಬಹುದು. ಇದರಿಂದ ಸೂಕ್ಷ್ಮ ವಿಚಾರಗಳು, ಅತ್ಯಂತ ಖಾಸಗಿಯಾದ ಸಂದರ್ಭಗಳು ಸುಲಭದಲ್ಲಿ ಬಹಿರಂಗಗೊಳ್ಳುವ ಅಪಾಯದ ಕುರಿತೂ ಚರ್ಚೆ ನಡೆದಿದೆ.

ಯಾರೇ ಈ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್ ಧರಿಸಿದರೂ ಒಳಗೆ ಬಳಸಲಾಗಿರುವ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ರಾಸಾಯನಿಕ ಕಣ್ಣಿಗೆ ಅಪಾಯಕಾರಿಯಾಗದಂತೆ, ಅತ್ಯಂತ ತೆಳುವಾಗಿಯೂ ಇರುವಂತೆ ಸಿದ್ಧಪಡಿಸುವುದು ಸಂಶೋಧಕರು ಸ್ವೀಕರಿಸಿರುವ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT