ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆ ತಗ್ಗಿಸುವಂತೆ ಮಾಡಿದೆ ದೆಹಲಿಯ ವಾಯುಮಾಲಿನ್ಯ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ದೆಹಲಿಯ ಫಿರೋಜ್‌ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್‌ ತಂಡಗಳ ನಡುವಿನ ಟೆಸ್ಟ್‌ ಪಂದ್ಯ, ದೆಹಲಿಯ ಪರಿಸರ ಮಾಲಿನ್ಯದ ಘೋರ ಚಿತ್ರಣವನ್ನು ಇಡೀ ಜಗತ್ತಿನ ಮುಂದೆ ತೆರೆದಿಟ್ಟಿದೆ. ಮಾಲಿನ್ಯಭರಿತ ಹವೆಯಲ್ಲಿ ಉಸಿರಾಡಲು ಕಷ್ಟವಾಗಿ ಎರಡು ಸಲ ಪಂದ್ಯಕ್ಕೆ ಅಡ್ಡಿ ಉಂಟಾಯಿತು. ಕೊನೆಗೆ ಮುಖಗವಸು ಕಟ್ಟಿಕೊಂಡು ಶ್ರೀಲಂಕಾ ಆಟಗಾರರು ಮೈದಾನಕ್ಕೆ ಇಳಿದರು. ಒಬ್ಬ ಆಟಗಾರ ವಾಂತಿ ಕೂಡ ಮಾಡಿಕೊಂಡರು. ದೆಹಲಿಯಲ್ಲಿ ವಾಯುಮಾಲಿನ್ಯ ತೀರಾ ಆತಂಕಕಾರಿ ಮಟ್ಟ ಮುಟ್ಟಿದೆ ಎನ್ನುವುದು ಈ ಪಂದ್ಯದ ಮೂಲಕ ಇಡೀ ಜಗತ್ತಿಗೇ ಗೊತ್ತಾಯಿತು. ಅಪಾಯದ ಮಟ್ಟಕ್ಕೆ ಏರಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷ ದೆಹಲಿಯಲ್ಲಿ ರಣಜಿ ಕ್ರಿಕೆಟ್‌ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಈಗ ನೋಡಿದರೆ ಅಂತರರಾಷ್ಟ್ರೀಯ ಮಟ್ಟದ ಪಂದ್ಯದ ಸಂದರ್ಭದಲ್ಲಿ ದೇಶಕ್ಕೆ ಅವಮಾನ ಉಂಟಾಗುವ ಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲೇ, ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾಗಿರುವ ದೆಹಲಿ ಸರ್ಕಾರಕ್ಕೆ ಮತ್ತೆ ಛೀಮಾರಿ ಹಾಕಿದೆ.

‘ಈ ವಾರ ದೆಹಲಿಯ ವಾಯುಮಾಲಿನ್ಯ ಗರಿಷ್ಠ ಮಟ್ಟ ಮುಟ್ಟಲಿದೆ ಎಂದು ಎಲ್ಲ ಪತ್ರಿಕೆಗಳಲ್ಲೂ ವರದಿಗಳು ಪ್ರಕಟವಾಗಿವೆ. ತನ್ನ ನಿರ್ದೇಶನದ ಹೊರತಾಗಿಯೂ ಮಾಲಿನ್ಯದ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಸಮಗ್ರ ಕ್ರಿಯಾ ಯೋಜನೆಯನ್ನು ಏಕೆ ರೂಪಿಸಿಲ್ಲ’ ಎಂದು ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಕಿಡಿ ಕಾರಿದ್ದಾರೆ. ಇದು ಕೇವಲ ಕ್ರಿಕೆಟ್‌ನ ಪ್ರಶ್ನೆಯಲ್ಲ; ಯಾವುದೇ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನು ನಿರ್ವಹಿಸುವಲ್ಲಿ ಭಾರತಕ್ಕೆ ಸೂಕ್ತ ಸಾಮರ್ಥ್ಯವಿಲ್ಲ ಎನ್ನುವ ತಪ್ಪು ಅಭಿಪ್ರಾಯವೂ ಇದರಿಂದ ಹರಡುವ ಸಾಧ್ಯತೆ ಇದೆ. ಜಗತ್ತಿನ ಸಣ್ಣ ಪುಟ್ಟ ದೇಶಗಳೆಲ್ಲ ಒಲಿಂಪಿಕ್‌ ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿವೆ. ನಾವು ಇನ್ನೂ ಕಾಮನ್‌ವೆಲ್ತ್‌ ಕ್ರೀಡಾಕೂಟ ನಿರ್ವಹಣೆಯ ಮಟ್ಟದಿಂದ ಮೇಲಕ್ಕೆ ಹೋಗಿಲ್ಲ. ಒಲಿಂಪಿಕ್‌ ಕ್ರೀಡಾಕೂಟವನ್ನು ನಾವು ನಡೆಸಬೇಕೆಂದು ಬಯಸಿದರೂ ಇಂತಹ ಘಟನೆಗಳಿಂದಾಗಿ ಅದು ಮುಂದೆ ಸಾಧ್ಯವಾಗದೇ ಹೋಗಬಹುದು.

ಸಮ ಮತ್ತು ಬೆಸ ನೋಂದಣಿ ಸಂಖ್ಯೆಗಳ ವಾಹನಗಳನ್ನು ದಿನ ಬಿಟ್ಟು ದಿನ ರಸ್ತೆಗಿಳಿಸುವ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಹಸಿರು ಪೀಠವು ಇತ್ತೀಚೆಗೆ ಸೂಚಿಸಿದ್ದರೂ ದೆಹಲಿ ಸರ್ಕಾರ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ‘ದ್ವಿಚಕ್ರ ವಾಹನಗಳಿಗೆ ಈ ನಿಯಮದಿಂದ ವಿನಾಯ್ತಿ ನೀಡಬೇಕು; ಅಲ್ಲದೆ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಆಗಿರುವುದರಿಂದ ಕ್ರಿಯಾ ಯೋಜನೆ ಸಲ್ಲಿಸಲು ಇನ್ನಷ್ಟು ಸಮಯಾವಕಾಶ ಬೇಕು’ ಎಂದು ಸರ್ಕಾರ ಕೇಳಿರುವುದು ಪೀಠವನ್ನು ಸಹಜವಾಗಿಯೇ ಕೆರಳಿಸಿದೆ. ದೆಹಲಿಯ ರಸ್ತೆಗಳಲ್ಲಿ ಓಡಾಡುತ್ತಿರುವ 60 ಲಕ್ಷಕ್ಕೂ ಹೆಚ್ಚು ವಾಹನಗಳಿಂದಲೇ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ ಎನ್ನುವುದು ಸ್ಪಷ್ಟ. ಅತ್ಯಾಧುನಿಕ ತಂತ್ರಜ್ಞಾನದ ಮಾಲಿನ್ಯಮುಕ್ತ ಬಸ್‌ಗಳನ್ನು ರಸ್ತೆಗಳಿಸುವ ಪ್ರಸ್ತಾವದ ಬಗ್ಗೆಯೂ ದೆಹಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ. ಜತೆಗೆ ನೆರೆಯ ರಾಜ್ಯಗಳಾದ ಪಂಜಾಬ್‌, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನಗಳ ಗದ್ದೆಗಳಲ್ಲಿ ಕಟಾವಿನ ಬಳಿಕ ಉಳಿಯುವ ವ್ಯರ್ಥ ವಸ್ತುಗಳಿಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟಕ್ಕೆ ಏರಿದೆ. ‘ಈ ನಾಲ್ಕೂ ರಾಜ್ಯಗಳ ಜತೆ ಸೇರಿ ತಕ್ಷಣ ಕ್ರಿಯಾ ಯೋಜನೆಯೊಂದನ್ನು ರೂಪಿಸಿ ಜಾರಿಗೆ ತನ್ನಿ’ ಎಂದು ಹಸಿರು ಪೀಠವು ಕೇಂದ್ರ ಪರಿಸರ ನಿಯಂತ್ರಣ ಮಂಡಳಿ ಮತ್ತು ದೆಹಲಿ ಪರಿಸರ ನಿಯಂತ್ರಣ ಸಮಿತಿಗೆ ಕಳೆದ ವಾರವೇ ಸ್ಪಷ್ಟವಾಗಿ ಸೂಚಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ಜನರ ಆರೋಗ್ಯದ ಜತೆಗೆ ಚೆಲ್ಲಾಟವಾಡುವ ಸರ್ಕಾರಗಳ ಈ ನಿರ್ಲಕ್ಷ್ಯ ಧೋರಣೆ ಎಳ್ಳಷ್ಟೂ ಸರಿಯಲ್ಲ. ದೇಶವಾಸಿಗಳ ಜೀವಕ್ಕೆ ಸಂಬಂಧಿಸಿದ ಈ ಪ್ರಶ್ನೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜಕೀಯ ಭಿನ್ನಮತ
ಗಳನ್ನು ಮರೆತು ಸರ್ಕಾರಗಳು ಒಟ್ಟು ಸೇರಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT