ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸು ಆಮದು ತಡೆಗೆ ಕನಿಷ್ಠ ದರ

Last Updated 6 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಕಾಳುಮೆಣಸು ಬೆಲೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಹೀಗಾಗಿ ದೇಶಿ ಬೆಳೆಗಾರರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು ಕನಿಷ್ಠ ಆಮದು ದರ ನಿಗದಿ (ಎಂಐಪಿ) ಮಾಡಿದೆ.

ಸಂಬಾರ ಮಂಡಳಿ ಪ್ರಸ್ತಾವನೆಯಂತೆಯೇ ಪ್ರತಿ ಕೆ.ಜಿಗೆ ₹ 500 ಕನಿಷ್ಠ ಆಮದು ದರ ನಿಗದಿ ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ನೆರೆಯ ದೇಶಗಳಿಂದ ಅಗ್ಗದ ದರದಲ್ಲಿ ಆಮದಾಗುತ್ತಿರುವುದರಿಂದ ಪ್ರತಿ ಕೆ.ಜಿಗೆ ₹ 730 ರಷ್ಟಿದ್ದ ಬೆಲೆ ಈಗ ₹ 300ಕ್ಕೆ ಕುಸಿತ ಕಂಡಿದೆ.

ಕಾಳುಮೆಣಸು ಕೊಯ್ಲು ಚುರುಕು ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಕನಿಷ್ಠ ಆಮದು ದರ ನಿಗದಿ ಮಾಡುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.ವಿಯೆಟ್ನಾಂನಿಂದ ಕಳಪೆ ಗುಣ
ಮಟ್ಟದ ಕಾಳುಮೆಣಸು ಆಮದಾ
ಗುತ್ತಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಾಣುತ್ತಿದೆ. ಹೀಗಾಗಿ ಆಮದು ವಿರೋಧಿಸಿ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು.

ಒಂದು ವರ್ಷದಲ್ಲಿ ಕಾಳುಮೆಣಸು ಬೆಲೆ ಶೇ 35 ರಷ್ಟು ಇಳಿಕೆ ಕಂಡಿದೆ. ಇದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಆಮದು ತಡೆಯಲು ಕಠಿಣ ಕ್ರಮ ಕೈಗೊಳುವಂತೆ ಬೆಳೆಗಾರರ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿತ್ತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಈಚೆಗಷ್ಟೇ ಕೇಂದ್ರ  ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ, ಕಾಳುಮೆಣಸು ಆಮದು ತಡೆಯುವಂತೆ ಮನವಿ ಸಲ್ಲಿಸಿದ್ದರು.

ಕೇರಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದ  (ಎಸ್‌ಎಎಫ್‌ಟಿಎ) ಇರುವುದರಿಂದ ಶ್ರೀಲಂಕಾದಲ್ಲಿ ಆಮದು ಸುಂಕ ಕಡಿಮೆ ಇದೆ. ಹೀಗಾಗಿ ಶ್ರೀಲಂಕಾದ ಮೂಲಕ ಭಾರತಕ್ಕೆ ಕಾಳು ಮೆಣಸು ಹೆಚ್ಚಿನ ಪ್ರಮಾಣದಲ್ಲಿ ಆಮದಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT