ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜುಭಾಯಿ ಕ್ಷೇತ್ರದಲ್ಲಿ ರೂಪಾಣಿ–ರೂಪಾಯಿ ಕದನ!

Last Updated 6 ಡಿಸೆಂಬರ್ 2017, 20:20 IST
ಅಕ್ಷರ ಗಾತ್ರ

ರಾಜಕೋಟ್: ಕರ್ನಾಟಕದ ಈಗಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿನಿಧಿಸುತ್ತಿದ್ದ ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಈ ಬಾರಿ ಗುಜರಾತ್ ಹಾಲಿ ಮುಖ್ಯಮಂತ್ರಿ ವಿಜಯ ರೂಪಾಣಿ ಮತ್ತು ಅತ್ಯಂತ ಶ್ರೀಮಂತ ಅಭ್ಯರ್ಥಿ ಕಾಂಗ್ರೆಸ್ ನ ಇಂದ್ರನೀಲ ರಾಜಗುರು ಅವರ ನಡುವೆ ಭಾರೀ ಪೈಪೋಟಿ ನಡೆದಿದೆ.

ವಜುಭಾಯಿ ವಾಲಾ ಅವರು ಈ ಕ್ಷೇತ್ರದಲ್ಲಿ 35 ವರ್ಷ ಶಾಸಕರಾಗಿದ್ದರು. 18 ವರ್ಷ ಹಣಕಾಸು ಸಚಿವರೂ ಆಗಿದ್ದರು. ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಅವರಿಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ವಿಧಾನ ಮಂಡಲದ ಸದಸ್ಯರಲ್ಲದ ನರೇಂದ್ರ ಮೋದಿ ಏಕಾಏಕಿ ಮುಖ್ಯಮಂತ್ರಿಯಾದವರು. ವಜುಭಾಯಿ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾದ ನಂತರ ಇದೇ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ವಿಜಯ ರೂಪಾಣಿ ಅವರೂ ಮುಖ್ಯಮಂತ್ರಿಯಾದರು.

ಮೋದಿ ಅವರಿಗೂ ಸಚಿವರಾದ ಅನುಭವ ಇರಲಿಲ್ಲ. ರೂಪಾಣಿ ಅವರಿಗೂ ಸಚಿವ ಸ್ಥಾನದ ಅನುಭವ ಇರಲಿಲ್ಲ. ಆದರೆ ಇಬ್ಬರೂ ಮುಖ್ಯಮಂತ್ರಿಯಾದರು. ಆದರೆ ವಜುಭಾಯಿ ವಾಲಾ ಅವರಿಗೆ ಈ ಭಾಗ್ಯ ಇರಲಿಲ್ಲ. ಕೇಶುಭಾಯಿ ಪಟೇಲ್, ನರೇಂದ್ರ ಮೋದಿ ಹಾಗೂ ವಿಜಯ ರೂಪಾಣಿ ಹೀಗೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಕ್ಷೇತ್ರ ಇದು.

ಒಟ್ಟು ₹ 141 ಕೋಟಿ ಆಸ್ತಿ ಪ್ರಕಟಿಸಿಕೊಂಡಿರುವ ಕಾಂಗ್ರೆಸ್ ನ ಇಂದ್ರನೀಲ ರಾಜಗುರು ಮುಖ್ಯಮಂತ್ರಿ ರೂಪಾಣಿ ವಿರುದ್ಧ ಜಿದ್ದಾಜಿದ್ದಿಗೆ ಮುಂದಾಗಿರುವುದರಿಂದ ಈ ಕ್ಷೇತ್ರ ಕುತೂಹಲ ಕೆರಳಿಸಿದೆ. ಗುಜರಾತ್ ವಿಧಾನಸಭಾ ಕ್ಷೇತ್ರಗಳಲ್ಲಿಯೇ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿದೆ. 1985ರಿಂದ ಇಲ್ಲಿ ಬಿಜೆಪಿ ಒಮ್ಮೆಯೂ ಸೋತಿಲ್ಲ. ಈ ಬಾರಿ ಸೋಲಿಸದೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ತೊಡೆತಟ್ಟಿದೆ.
ರಾಜಕೋಟ್ ಬಹಳ ಕಾಲದಿಂದಲೂ ಬಿಜೆಪಿಯ ಭದ್ರಕೋಟೆ. 1975ರಲ್ಲಿ ನಗರ ಪಾಲಿಕೆ ಆರಂಭವಾದಾಗಿನಿಂದ ಒಮ್ಮೆ ಮಾತ್ರ ಬಿಜೆಪಿ ಸೋತಿದೆ. ಈಗಲೂ ನಗರ ಪಾಲಿಕೆ ಬಿಜೆಪಿ ಆಡಳಿತದಲ್ಲಿಯೇ ಇದೆ. ರಾಜಕೋಟ್‌ನ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿತ್ತು. ಆದರೆ 2012ರ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಜಕೋಟ್ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಇಂದ್ರನೀಲ ರಾಜಗುರು ಮೊದಲ ಬಾರಿಗೆ ಗೆದ್ದರು. ಈ ಬಾರಿ ಅವರು ಮುಖ್ಯಮಂತ್ರಿ ವಿಜಯ ರೂಪಾಣಿ ಅವರನ್ನು ಸೋಲಿಸುವ ಉದ್ದೇಶದಿಂದಲೇ ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ‘ಆ ಮನುಷ್ಯ (ವಿಜಯ ರೂಪಾಣಿ) ಕ್ಷೇತ್ರಕ್ಕೂ ಒಳ್ಳೆಯವನಲ್ಲ. ಗುಜರಾತಿಗೂ ಒಳ್ಳೆಯವನಲ್ಲ. ಕ್ಷೇತ್ರ ಮತ್ತು ರಾಜ್ಯವನ್ನು ಆತ ಇನ್ನಷ್ಟು ಹಾಳು ಮಾಡುವುದನ್ನು ತಡೆಯುವುದಕ್ಕಾಗಿಯೇ ನಾನು ಇಲ್ಲಿ ಸ್ಪರ್ಧಿಸಿದ್ದೇನೆ’ ಎಂದು ರಾಜಗುರು ಹೇಳುತ್ತಾರೆ.

ವೃತ್ತಿಯಿಂದ ವ್ಯಾಪಾರಿಯಾಗಿರುವ ರಾಜಗುರು ಒಂದು ವರ್ಷದಿಂದಲೇ ಇಲ್ಲಿ ತಯಾರಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲು 70 ಯುವಕರನ್ನು ನೇಮಿಸಿಕೊಂಡಿದ್ದಾರೆ. ಪ್ರಚಾರದ ಉಸ್ತುವಾರಿಯನ್ನು ದೆಹಲಿಯ ಸಂಸ್ಥೆಯೊಂದಕ್ಕೆ ಗುತ್ತಿಗೆ ಕೊಟ್ಟಿದ್ದಾರೆ. ಇದರ ಎಲ್ಲ ಉಸ್ತುವಾರಿಯನ್ನು ರಾಜಗುರು ಅವರ ಸಹೋದರಿ ಸಂಧ್ಯಾ ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ರೂಪಾಣಿ ವಿರುದ್ಧ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದಾರೆ. ‘ಯುತ್ ರಾಜಕೋಟಿಯನ್ಸ್’ ಎಂಬ ಕಾರ್ಯಕ್ರಮದ ಮೂಲಕ ಯುವಕರ ಮನೆ ಗೆಲ್ಲಲು ಯತ್ನಿಸಿದ್ದಾರೆ. ಜೊತೆಗೆ ಚಾಯ್ ವಾಲಾ ಪ್ರಧಾನಿ ನರೇಂದ್ರ ಮೋದಿಗೆ ಸಡ್ಡು ಹೊಡೆಯಲು ‘ಕಾಫಿ ವಿತ್ ಕಾಂಗ್ರೆಸ್’ ಎಂಬ ಕಾರ್ಯಕ್ರಮ ನಡೆಸಿದ್ದಾರೆ. ಕಾಫಿ ವಿತ್ ಕಾಂಗ್ರೆಸ್ ಕಾಯ್ರಕ್ರಮದಲ್ಲಿ ನಾಗರಿಕರು ರಾಜಗುರು ಅವರಿಗೆ ಯಾವುದೇ ಪ್ರಶ್ನೆ ಕೇಳಿ ಉತ್ತರ ಪಡೆದುಕೊಳ್ಳಬಹುದು. ಇದು ಸಾಕಷ್ಟು ಜನಪ್ರಿಯವಾಗಿದೆ.
ಗುಜರಾತಿನ ಇತರ ಕ್ಷೇತ್ರಗಳಂತೆ ಚುನಾವಣಾ ಪ್ರಚಾರ ಇಲ್ಲಿ ತಣ್ಣಗೆ ನಡೆದಿಲ್ಲ. ರಾಜಕೋಟ್ ಬೀದಿ ಬೀದಿಗಳಲ್ಲಿ ಪೋಸ್ಟರ್ ಗಳು ಹರಿದಾಡುತ್ತಿವೆ. ನಗರದ ಬಹುತೇಕ ಎಲ್ಲ ವಾಣಿಜ್ಯ ಜಾಹೀರಾತು ಫಲಕಗಳನ್ನು ಚುನಾವಣಾ ಫಲಕಗಳು ಆಕ್ರಮಿಸಿಕೊಂಡಿವೆ. ಅವುಗಳಲ್ಲಿಯೂ ಪೈಪೋಟಿ ಮಿತಿಮೀರಿದೆ.

‘ರಾಜಕೋಟ್ ಕಾ ಬೇಟಾ ರಾಜಕೋಟ್ ಕಾ ನೇತಾ’, ‘ವಿಕಾಸ್ ಮತ್ ವೋಟ್ ದೊ, ನರ್ಮದಾನಿ ನೀರ್ ಮಾತೆ ವೋಟ್ ದೊ’ ಎಂದು ಬಿಜೆಪಿ ಪ್ರಚಾರ ಮಾಡುತ್ತಿದ್ದರೆ ‘ಮಾರೊ ಮತ್ ರಾಜಕೋಟ್ ನೆ ಮಾರೊ ಮತ್ ಇಂದ್ರಾನಿಲ್ ನೆ’ ಎಂಬ ಕಾಂಗ್ರೆಸ್ ಪ್ರಚಾರ ಫಲಕಗಳು ರಾರಾಜಿಸುತ್ತಿವೆ. ‘ಥಯ್ಯೂ ನೆ ಸಾಲಿಡ್ ಕಾಮ್ (ಆಯ್ತಲ್ಲ ಸಾಲಿಡ್ ಕೆಲಸ)’ ಎಂದು ಬಿಜೆಪಿ ಪ್ರಚಾರ ಫಲಕ ಹೇಳಿದರೆ ‘ಕೇಮ್ ಕೆಹು ಸಾಲಿಡ್ ಕಾಮ್ (ಸಾಲಿಡ್ ಕೆಲಸ ಎಂದು ಏನಕ್ಕೆ ಹೇಳುತ್ತೀರಾ)’ ಎಂದು ಕಾಂಗ್ರೆಸ್ ಫಲಕ ಪ್ರಶ್ನಿಸುತ್ತದೆ.

ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಚುನಾವಣೆಯ ಪ್ರಮುಖ ವಿಷಯವಾಗಿದೆ. ಕರ್ನಾಟಕದಲ್ಲಿ 15 ದಿನಕ್ಕೆ, 30 ದಿನಕ್ಕೊಮ್ಮೆ ನೀರು ಬರುವುದು ಚುನಾವಣಾ ವಿಷಯ ಆಗಲ್ಲ. ಆದರೆ ಇಲ್ಲಿ ಪ್ರತಿ ದಿನ ಕೇವಲ 20 ನಿಮಿಷ ನೀರು ಬರುತ್ತದೆ ಎನ್ನುವುದೇ ಪ್ರಮುಖ ವಿಷಯವಾಗಿದೆ. ‘ಮೂರು ಮುಖ್ಯಮಂತ್ರಿಗಳನ್ನು ನೀಡಿದ ಈ ಕ್ಷೇತ್ರದಲ್ಲಿ ಈಗಲೂ ದಿನಕ್ಕೆ 20 ನಿಮಿಷ ಮಾತ್ರ ನೀರು ಬರುತ್ತದೆ. ಇದು ನಾಚಿಕೆಗೇಡಿನ ವಿಷಯ’ ಎಂದು ಇಂದ್ರನೀಲ ಹೇಳಿದರೆ ‘ನರ್ಮದಾ ನದಿಯಿಂದ ನೀರು ಪೂರೈಸುವ ಕೆಲಸ ಪ್ರಗತಿಯಲ್ಲಿದೆ. ಬೃಹತ್ ಕೊಳವೆಗಳನ್ನು ಅಳವಡಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ನೀರು ಹರಿದು ಬರಲಿದೆ’ ಎಂದು ರಾಜಕೋಟ್ ಬಿಜೆಪಿ ಅಧ್ಯಕ್ಷ ಕಮಲೇಶ ಭಾಯಿ ನಿರಾನಿ ಹೇಳುತ್ತಾರೆ.

‘ರಾಜಗುರು ಅವರು ಹಣದ ಮದದಿಂದ ಗೆಲ್ಲಲು ಹೊರಟಿದ್ದಾರೆ. ಆದರೆ ರಾಜಕೋಟ್ ನ ಜನ ಅದಕ್ಕೆ ಮರುಳಾಗುವುದಿಲ್ಲ’ ಎಂದು ಬಿಜೆಪಿ ಮುಖಂಡ ಭೀಮಜಿ ಭಾಯಿ ಪರಸಾನಿ ಹೇಳಿದರೆ ‘ಮುಖ್ಯಮಂತ್ರಿ ರೂಪಾಣಿ ಹಣವೇ ಇಲ್ಲ ಎಂದು ಹೇಳುತ್ತಾರೆ. ಆದರೆ ಕಳೆದ ಉಪ ಚುನಾವಣೆಯಲ್ಲಿ ಅವರು ಒಟ್ಟು ಆಸ್ತಿ ₹ 7 ಕೋಟಿ ಎಂದು ಘೋಷಿಸಿಕೊಂಡಿದ್ದರು. ಆದರೆ ಚುನಾವಣೆಗೆ ಅವರು ವೆಚ್ಚ ಮಾಡಿದ್ದು ₹ 9 ಕೋಟಿ. ಈ ಬಾರಿ ಅವರು ಒಟ್ಟು ಆಸ್ತಿ ₹ 9 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ ರಾಜಕೋಟ್ ಬೀದಿ ಬೀದಿಯಲ್ಲಿ ಅಳವಡಿಸಲಾದ ಜಾಹೀರಾತು ಫಲಕಗಳಿಗೇ ₹ 9 ಕೋಟಿ ವೆಚ್ಚವಾಗಿದೆ. ಈ ಹಣ ಎಲ್ಲ ಎಲ್ಲಿಂದ ಬಂತು’ ಎಂದು ರಾಜಗುರು ಪ್ರಶ್ನೆ ಮಾಡುತ್ತಾರೆ.

‘ಇಲ್ಲಿನ ಜನರು ನರೇಂದ್ರ ಮೋದಿ, ರೂಪಾಣಿ ಎಂದೆಲ್ಲ ನೋಡುವುದಿಲ್ಲ. ಅವರಿಗೆ ಬಿಜೆಪಿಯೇ ಮುಖ್ಯ. ಯಾಕೆಂದರೆ ಜನಸಂಘದ ಕಾಲದಿಂದಲೂ ಜನ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮೋದಿ ಬಂದಿದ್ದು ಈಗ. ಯಾರು ಎಷ್ಟೇ ಹಣ ಖರ್ಚು ಮಾಡಿದರೂ ಜನ ಮತ ಹಾಕುವುದು ಬಿಜೆಪಿಗೆ’ ಎಂದು ಪರಸಾನಿ ಹೇಳುತ್ತಾರೆ.

ಆದರೆ ಈ ಮಾತನ್ನು ಆಟೋ ಚಾಲಕ ನರೇಶ್ ಪರೀಖ್ ಒಪ್ಪುವುದಿಲ್ಲ. ‘ನಮಗೆ ಪಕ್ಷ ಗಿಕ್ಷ ಎಲ್ಲ ಮುಖ್ಯ ಅಲ್ಲ. ನರೇಂದ್ರ ಮೋದಿನೇ ಮುಖ್ಯ. ನಾವು ಓಟ್ ಹಾಕುವುದು ಅವರಿಗೆ’ ಎಂದು ಸ್ಪಷ್ಟಪಡಿಸುತ್ತಾರೆ. ‘ನಮ್ಮ ರಾಜ್ಯದ ವ್ಯಕ್ತಿ ಪ್ರಧಾನಿ ಆಗಿದ್ದಾರೆ. ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವದ ಎಲ್ಲೆಡೆ ಹಾರಿಸಿದ್ದಾರೆ. ಅವರಿಗೆ ಮತ ಹಾಕಬೇಕಲ್ಲದೆ ಇನ್ಯಾರಿಗೆ ಮತ ಹಾಕಬೇಕು’ ಎಂದು ಅವರು ಪ್ರಶ್ನೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT