ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾಜ್‌ ಟ್ರಸ್ಟ್‌ಗೆ ನೀಡಿದ್ದ 354 ಎಕರೆ ವಶ

Last Updated 6 ಡಿಸೆಂಬರ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯ್ದೆಯಲ್ಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿದ್ದ ಜಮನ್‌ಲಾಲ್‌ ಬಜಾಜ್‌ ಸೇವಾ ಟ್ರಸ್ಟ್‌ನಿಂದ 354 ಎಕರೆಯನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಲು ನಿರ್ಧರಿಸಲಾಗಿದೆ.

ಉಪವಿಭಾಗಾಧಿಕಾರಿ ಎಂ.ಕೆ. ಜಗದೀಶ್‌ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಬೆಂಗಳೂರು ಉತ್ತರ ವಿಭಾಗದ ಭೂನ್ಯಾಯಮಂಡಳಿಯ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಈ ಭೂಮಿಯ ಅಂದಾಜು ಮೊತ್ತ ₹ 2,500 ಕೋಟಿ.

ಬಾಂಬೆ ಪಬ್ಲಿಕ್‌ ಟ್ರಸ್ಟ್‌ ಕಾಯ್ದೆ ಅಡಿ 1942ರಲ್ಲಿ ನೋಂದಾಯಿಸಿಕೊಂಡ ಟ್ರಸ್ಟ್‌ ಬೆಂಗಳೂರಿನಲ್ಲಿ ಶಾಖೆ ಹೊಂದಿದೆ. ಭೂಸುಧಾರಣೆ ಕಾಯ್ದೆ ಜಾರಿಗೆ ಬಂದ ಬಳಿಕ ಟ್ರಸ್ಟ್‌ ತನ್ನ ಒಡೆತನದಲ್ಲಿರುವ ಭೂಮಿಯ ವಿವರವನ್ನು ನಮೂನೆ 11ರ ಮೂಲಕ ಕಂದಾಯ ಇಲಾಖೆಗೆ 1974ರ ಡಿ.31 ಹಾಗೂ 1975ರ ಜ.2ರಂದು ಸಲ್ಲಿಸಿತ್ತು. ಮಾಗಡಿ ರಸ್ತೆಯ ಹೇರೋಹಳ್ಳಿ (154 ಎಕರೆ 19 ಗುಂಟೆ), ಗಿಡದಕೊನೆಹಳ್ಳಿ (52 ಎಕರೆ 06 ಗುಂಟೆ), ಶ್ರೀಗಂಧಕಾವಲ್‌ (186 ಎಕರೆ 34 ಗುಂಟೆ) ಗ್ರಾಮಗಳಲ್ಲಿ ಒಟ್ಟು 404.10 ಎಕರೆ ಭೂಮಿ ಈ ಟ್ರಸ್ಟ್‌ ಹೆಸರಿನಲ್ಲಿತ್ತು. ಇದರಲ್ಲಿ 12 ಎಕರೆ 33 ಗುಂಟೆ ಎ– ಖರಾಬು ಹಾಗೂ 42 ಎಕರೆ 16 ಗುಂಟೆ ಬಿ– ಖರಾಬು ಸೇರಿದೆ.

ಕಾಯ್ದೆಯ ಮಿತಿಗಿಂತ ಹೆಚ್ಚುವರಿ ಭೂಮಿ ಹೊಂದಿದ ಸಂಬಂಧ ಭೂ ನ್ಯಾಯಮಂಡಳಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಟ್ರಸ್ಟ್‌ 213 ಎಕರೆ 20 ಗುಂಟೆ ಹೆಚ್ಚುವರಿ ಭೂಮಿ ಹೊಂದಿದ್ದು, ಅದನ್ನು ಸರ್ಕಾರಕ್ಕೆ ಮರಳಿಸಬೇಕು ಎಂದು 2010ರಲ್ಲಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್‌ ಹೈಕೋರ್ಟ್‌ನ ಮೆಟ್ಟಿಲೇರಿತ್ತು.

ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂನ್ಯಾಯಮಂಡಳಿಯೇ ಈ ಪ್ರಕರಣವನ್ನು ಪುನರ್‌ಪರಿಶೀಲಿಸಿ ತೀರ್ಪು ನೀಡಬೇಕು ಎಂದು ಹೈಕೋರ್ಟ್‌ 2014ರ ಮಾರ್ಚ್‌ 3ರಂದು ಆದೇಶ ಹೊರಡಿಸಿತ್ತು. ಅದರ ಆಧಾರದಲ್ಲಿ ಮತ್ತೆ ವಿಚಾರಣೆ ನಡೆಸಿದ ಭೂನ್ಯಾಯಮಂಡಳಿ ಆದೇಶ ಹೊರಡಿ
ಸಿದೆ. ಈಗಿನ ವಿಚಾರಣೆ ವೇಳೆ ಹೆಚ್ಚುವರಿ ಭೂಮಿ ಪ್ರಮಾಣ 354 ಎಕರೆಗೆ ಏರಿದೆ.

ಏನಿದು ಪ್ರಕರಣ: ಟ್ರಸ್ಟ್‌ ನಗರದಲ್ಲಿ ಹೊಂದಿರುವ ಆಸ್ತಿಗಳ ಬಗ್ಗೆ ಬೆಂಗಳೂರು ಉತ್ತರ ತಾಲ್ಲೂಕಿನ ವಿಶೇಷ ತಹಶೀಲ್ದಾರ್‌ ಅವರು 1999ರಲ್ಲಿ ತನಿಖೆ ನಡೆಸಿದ್ದರು. ಟ್ರಸ್ಟ್‌ ಹೆಚ್ಚುವರಿಯಾಗಿ 389 ಎಕರೆ ಹೊಂದಿದೆ ಎಂದು ಅವರು ವರದಿ ಸಲ್ಲಿಸಿದ್ದರು. ಇದರಲ್ಲಿ 36 ಎಕರೆ 14 ಗುಂಟೆ ತೋಟದ ಬೆಳೆಯ ಭೂಮಿ. ಉಳಿದ 352 ಎಕರೆ 36 ಗುಂಟೆ ಮಳೆಯಾಶ್ರಿತ ಭೂಮಿ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

‘ಇದು ಕೃಷಿ ಭೂಮಿ ಅಲ್ಲ. ಈ ಭೂಮಿ ಭೂಸುಧಾರಣೆ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ಪ್ರತಿಪಾದಿಸಿದ್ದರು. ಜತೆಗೆ, ‘ಈ ಭೂಮಿ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹೇರೋಹಳ್ಳಿ ಹಾಗೂ ಶ್ರೀಗಂಧಕಾವಲ್‌ನಲ್ಲಿರುವ 342 ಎಕರೆ ನಗರ ಭೂಮಿತಿ ಕಾಯ್ದೆಯಡಿ (ಯುಎಲ್‌ಸಿ ಕಾಯ್ದೆ) ಬರುತ್ತದೆ. ಟ್ರಸ್ಟ್‌ನ ಮಾಲೀಕತ್ವದಲ್ಲಿರುವ ಸಮಗ್ರ ಭೂಮಿಯನ್ನು ಕರ್ನಾಟಕ ಭೂಸುಧಾರಣೆ ಕಾಯ್ದೆ ವ್ಯಾಪ್ತಿಯಡಿ ಪರಿಗಣಿಸಲು ಸಾಧ್ಯವಿಲ್ಲ’ ಎಂಬುದೂ ಪ್ರತಿವಾದಿಗಳ ವಾದವಾಗಿತ್ತು.

‘ಟ್ರಸ್ಟ್‌ 1974 ಹಾಗೂ 1975ರಲ್ಲಿ ತನ್ನ ಒಡೆತನದಲ್ಲಿರುವ ಭೂಮಿಯ ವಿವರವನ್ನು ಕಂದಾಯ ಇಲಾಖೆಗೆ ನೀಡಿತ್ತು. ಆದರೆ, ನಗರ ಭೂಮಿತಿ ಕಾಯ್ದೆ ಜಾರಿಗೆ ಬಂದಿದ್ದು 1976ರಲ್ಲಿ. ಹೀಗಾಗಿ ಪ್ರತಿವಾದಿಯ ವಾದ ಇಲ್ಲಿಗೆ ಅನ್ವಯವಾಗುವುದಿಲ್ಲ’ ಎಂದು 41 ಪುಟಗಳ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

‘ಕೃಷಿ ಭೂಮಿ ಅಲ್ಲ ಎಂದು ಟ್ರಸ್ಟ್‌ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿತ್ತು. ಆದರೆ, ಈ ಜಾಗಕ್ಕೆ ಪ್ರತಿ ವರ್ಷ ಭೂಕಂದಾಯ ಕಟ್ಟಿದೆ. ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಭೂ ನ್ಯಾಯಮಂಡಳಿ ಆದೇಶದಲ್ಲಿಉಲ್ಲೇಖಿಸಲಾಗಿದೆ.

‘ಟ್ರಸ್ಟ್‌ ಹೊಂದಿರುವ ಹೆಚ್ಚುವರಿ ಭೂಮಿಯ ದಾಖಲೆಗಳನ್ನು ಸರ್ಕಾರದ ಖಾತೆಗೆ ವರ್ಗಾಯಿಸಲಾಗುತ್ತದೆ. ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ಭೂಮಿ ಸ್ವಾಧೀನಕ್ಕೆ ಪಡೆದು ಬೇಲಿ ಹಾಕುತ್ತೇವೆ’ ಎಂದು ಜಗದೀಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ರಸ್ಟ್‌ನ ಕಟ್ಟಡವಿರುವ ಪ್ರದೇಶವನ್ನು ಒಳಗೊಂಡಂತೆ ಅದರ ಸುತ್ತಲಿನ 35 ಎಕರೆ ಭೂಮಿಯನ್ನು ನಿಯಮಾನುಸಾರ ಸಂಸ್ಥೆಗೆ ಬಿಟ್ಟುಕೊಡಲಾಗಿದೆ. ಟ್ರಸ್ಟ್‌ನ ಸುಪರ್ದಿಯಲ್ಲಿದ್ದ ಒಂದು ಭಾಗದಲ್ಲಿ ಬಿಡಿಎ ಬಡಾವಣೆ ನಿರ್ಮಾಣವಾಗಿದೆ’ ಎಂದೂ ಅವರು ಮಾಹಿತಿ ನೀಡಿದರು.

‘ಭೂಮಾಪನಾ ಇಲಾಖೆಯ ಅಧಿಕಾರಿಗಳು 2001ರಲ್ಲಿ ಸರ್ವೆ ನಡೆಸಿದ್ದಾಗ 15 ಎಕರೆಯಲ್ಲಿ ಕಟ್ಟಡಗಳು ಇದ್ದವು. ಈಗಿನ ಸಮೀಕ್ಷೆ ಪ್ರಕಾರ 67 ಎಕರೆ ಜಾಗದಲ್ಲಿ ಕಟ್ಟಡಗಳು ಇವೆ’ ಎಂದು ಅವರು ಮಾಹಿತಿ ನೀಡಿದರು.

ಮಾಗಡಿ ರಸ್ತೆಯ ಮೂರು ಗ್ರಾಮಗಳಲ್ಲಿ ಇರುವ ಜಾಗ

ಈಗಲೂ ಭೂ ಕಂದಾಯ ಕಟ್ಟುತ್ತಿರುವ ಟ್ರಸ್ಟ್‌

67 ಎಕರೆಯಲ್ಲಿ ಟ್ರಸ್ಟ್‌ನ ಕಟ್ಟಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT