ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಗೆ ಅನುಮತಿ

Last Updated 6 ಡಿಸೆಂಬರ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಬಳಕೆಗೆ ವಿಧಿಸಿರುವ ನಿರ್ಬಂಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮೌಖಿಕ ನಿರ್ದೇಶನ ನೀಡಿದೆ.

ಈ ಕುರಿತಂತೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ 17 ಕ್ರೀಡಾ ತರಬೇತುದಾರರು ಸೇರಿದಂತೆ ಒಟ್ಟು 33 ಜನ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (‍ಪಿಐಎಲ್‌) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ವಕೀಲ ಎಚ್‌.ಎಸ್‌.ಪ್ರದೀಪ್‌, ‘2018ರ ಏಪ್ರಿಲ್‌ನಲ್ಲಿ ಆಸ್ಟ್ರಿಯಾದಲ್ಲಿ ಕಾಮನ್‌ ವೆಲ್ತ್ ಗೇಮ್ಸ್‌, ಜುಲೈನಲ್ಲಿ ಫಿನ್ಲೆಂಡ್‌ನಲ್ಲಿ ಜ್ಯೂನಿಯರ್ ವಿಶ್ವ ಅಥ್ಲೆಟಿಕ್ಸ್‌ ಮತ್ತು ಆಗಸ್ಟ್‌
ನಲ್ಲಿ ಇಂಡೋನೇಷ್ಯಾದಲ್ಲಿ ಏಷ್ಯನ್‌ ಗೇಮ್ಸ್‌ ನಡೆಯಲಿವೆ. ಇವಕ್ಕೆಲ್ಲಾ 2018ರ ಮಾರ್ಚ್ ಒಳಗೆ ಆಯ್ಕೆ ನಡೆಯುತ್ತದೆ. ಈ ದಿಸೆಯಲ್ಲಿ ನಿತ್ಯದ ತರಬೇತಿ ನಡೆಸಲು ಕ್ರೀಡಾಪಟುಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಸರ್ಕಾರದ ವಕೀಲರು, ‘ಕ್ರೀಡಾಪಟುಗಳ ಅಭ್ಯಾಸಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಬ್ಯಾರಿಕೇಡ್‌ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಬ್ಯಾರಿಕೇಡ್‌ ತೆರವು ಮಾಡದೇ ಹೋದಲ್ಲಿ ಕೋರ್ಟ್ ಗಮನಕ್ಕೆ ತನ್ನಿ’ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಿದೆ.

ಆಕ್ಷೇಪಣೆ ಏನು?: ‘ಅಕ್ಟೋಬರ್‌
ನಲ್ಲಿ ನಡೆದ 17 ವರ್ಷದ ಒಳಗಿನವರ ಫುಟಬಾಲ್‌ ವಿಶ್ವಕಪ್‌ ಪಂದ್ಯಾವಳಿಯ ಕಾರಣ ಕ್ರೀಡಾಂಗಣ ಬಳಕೆಗೆ ಅನುಮತಿ ನೀಡಿದ ಸರ್ಕಾರ ಜೆಎಸ್‌ಡಬ್ಲ್ಯೂ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಜೊತೆ ಒಪ್ಪಂದ ಮಾಡಿ
ಕೊಂಡಿದೆ. ಹೀಗಾಗಿ ಇಲ್ಲಿನ 400 ಮೀಟರ್‌ ಉದ್ದದ ಸಿಂಥೆಟಿಕ್‌ ಟ್ರ್ಯಾಕ್‌ ಹಾಗೂ ಮಧ್ಯಭಾಗದ ಮೈದಾನ ಬಳಸಲು ಅಥ್ಲೀಟ್‌ಗಳಿಗೆ ಅನುಮತಿ ನೀಡುತ್ತಿಲ್ಲ’ ಎಂಬುದು ಅರ್ಜಿದಾರರ ಆಕ್ಷೇಪ.

‘ಫುಟ್‌ಬಾಲ್‌ಗೆಂದೇ ಪ್ರತ್ಯೇಕ ಕ್ರೀಡಾಂಗಣವಿದ್ದರೂ ಖಾಸಗಿ ಕ್ಲಬ್‌ಗೆ ನೀಡಿರುವ ಅನುಮತಿ ಸರಿಯಲ್ಲ. ವಿಶ್ವಕಪ್‌ ಪಂದ್ಯಾವಳಿ ಮುಗಿದ ಬಳಿಕವೂ ಸಿಂಥೆಟಿಕ್‌ ಟ್ರ್ಯಾಕ್‌ಗಳ ಸುತ್ತ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಇವುಗಳನ್ನು ತೆರವುಗೊಳಿಸಿ ಅಥ್ಲೀಟ್‌ಗಳ ಅಭ್ಯಾಸಕ್ಕೆ ಅನುವು ಮಾಡಿಕೊಡುವಂತೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ಪ್ರಕರಣದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರು ಮತ್ತು ಜೆಎಸ್‌ಡಬ್ಲ್ಯೂ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT