ಬನಶಂಕರಿ ಬಡಾವಣೆ 6ನೇ ಹಂತದ ನಿವೇಶನಗಳ ಜಾಗ ಗುರುತು ಮಾಡಿದ ಅರಣ್ಯ ಇಲಾಖೆ

ಬಿಡಿಎ ಬಡಾವಣೆಗೂ ಒತ್ತುವರಿ ತೂಗುಗತ್ತಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬನಶಂಕರಿ ಬಡಾವಣೆಯೂ ಅರಣ್ಯ ಜಾಗ ಒತ್ತುವರಿಯ ತೂಗುಗತ್ತಿಯನ್ನು ಎದುರಿಸುತ್ತಿದೆ.

ಬಿಡಿಎ ಬಡಾವಣೆಗೂ ಒತ್ತುವರಿ ತೂಗುಗತ್ತಿ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿರುವ ಬನಶಂಕರಿ ಬಡಾವಣೆಯೂ ಅರಣ್ಯ ಜಾಗ ಒತ್ತುವರಿಯ ತೂಗುಗತ್ತಿಯನ್ನು ಎದುರಿಸುತ್ತಿದೆ.

ಬಡಾವಣೆಯ ಆರನೇ ಹಂತದ ಎರಡನೇ ಬ್ಲಾಕ್‌ನ 38 ನಿವೇಶನಗಳು ಒತ್ತುವರಿಯಾದ ಜಾಗದಲ್ಲಿವೆ ಎಂದು ಅರಣ್ಯ ಇಲಾಖೆಯವರು ಗುರುತು ಮಾಡಿದ್ದಾರೆ. ಇದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

‘ಬನಶಂಕರಿ ಬಡಾವಣೆಯ 6ನೇ ಹಂತದಲ್ಲಿ ತುರಹಳ್ಳಿ ಅರಣ್ಯ ಸಂಬಂಧಿಸಿದ ಜಾಗ ಒತ್ತುವರಿಯಾಗಿರುವುದು ಇಲಾಖೆಯ ದಾಖಲೆಗಳಲ್ಲಿ ಕಂಡು ಬರುತ್ತದೆ. ಈ ಬಗ್ಗೆ ನಮ್ಮ ಅಧಿಕಾರಿಗಳು ಪ್ರಾಥಮಿಕ ಸರ್ವೆ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ಸರ್ವೆ ನಡೆಸಿದ ಬಳಿಕವಷ್ಟೇ, ಒತ್ತುವರಿ ಕುರಿತು ಖಚಿತ ತೀರ್ಮಾನಕ್ಕೆ ಬರಲು ಸಾಧ್ಯ. ಸದ್ಯಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ’ ಎಂದು ಬೆಂಗಳೂರು ನಗರ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ ’ಪ್ರಜಾವಾಣಿ’ಗೆ ತಿಳಿಸಿದರು.

ಒತ್ತುವರಿಯಾಗಿಲ್ಲ: ಬಿಡಿಎ

‘ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವೇ ಈ ಬಡಾವಣೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಬಡಾವಣೆ ನಿರ್ಮಿಸುವ ಮುನ್ನವೇ ಅರಣ್ಯ ಇಲಾಖೆ ಜೊತೆ ಸೇರಿ ಜಂಟಿ ಸರ್ವೆ ಮಾಡಲಾಗಿತ್ತು. ಅವರು ಜಾಗವನ್ನು ತೋರಿಸಿದ ಬಳಿಕವೇ ನಿವೇಶನಗಳನ್ನು ನಿರ್ಮಿಸಲಾಗಿದೆ. ಬಡಾವಣೆ ನಿರ್ಮಿಸಿದ 17 ವರ್ಷಗಳ ಬಳಿಕ ಅರಣ್ಯ ಇಲಾಖೆಯವರಿಗೆ ಜಾಗ ಒತ್ತುವರಿ ಆಗಿರುವ ಬಗ್ಗೆ ಏಕೆ ಸಂದೇಹ ಬಂದಿದೆಯೋ ತಿಳಿಯುತ್ತಿಲ್ಲ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಷ್ಟು ವರ್ಷ ಏನು ಮಾಡುತ್ತಿದ್ದರು:

‘ಈ ಬಡಾವಣೆ ನಿರ್ಮಾಣವಾಗಿದ್ದು 2000ದಲ್ಲಿ. ಇಷ್ಟು ವರ್ಷ ಅರಣ್ಯ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದರು? ನಿವೇಶನ ಹಂಚಿಕೆಗೆ ಮುನ್ನವೇ ಏಕೆ ಅವರು ಎಚ್ಚೆತ್ತುಕೊಳ್ಳಲಿಲ್ಲ’ ಎಂದು ಬನಶಂಕರಿ ಆರನೇ ಹಂತದ ಎರಡನೇ ಬ್ಲಾಕ್‌ ಹಾಗೂ ಕರಿಯನಪಾಳ್ಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ಪ್ರಶ್ನಿಸಿದರು.


‘ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿ ಭವಿಷ್ಯದಲ್ಲಿ ಯಾವುದೇ ತರಕಾರು ಬರಬಾರದು ಎಂಬ ಕಾರಣಕ್ಕೆ ನಾವೆಲ್ಲ ಬಿಡಿಎ ನಿವೇಶನ ಖರೀದಿಸಿದ್ದೇವೆ. ವಾಸಕ್ಕಾಗಿಯೇ ಇಲ್ಲಿ ನಿವೇಶನ ಖರೀದಿಸಿದವರೇ ಹೆಚ್ಚು. ಅರಣ್ಯ ಇಲಾಖೆ ಗಡಿ ಗುರುತು ಮಾಡಿಕೊಟ್ಟ ಬಳಿಕವೇ ಇಲ್ಲಿ ಬಡಾವಣೆ ಅಭಿವೃದ್ಧಿಪಡಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಾರೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ನಮಗೆ ನೆಮ್ಮದಿ ಇಲ್ಲದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಬಡಾವಣೆಯಲ್ಲಿ ನಿವೇಶನ ಹೊಂದಿರುವವರ ಪೈಕಿ ಹಿರಿಯ ನಾಗರಿಕರೇ ಹೆಚ್ಚು. ‘ನಮ್ಮ ನಿವೇಶನಗಳನ್ನು ಉಳಿಸಿಕೊಡಿ’ ಎಂದು ಬಡಾವಣೆಯ ಹಿರಿಯ ನಾಗರಿಕರ ಬಳಗದವರು ಬಿಡಿಎ ಆಯುಕ್ತರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಜೀವಮಾನವಿಡೀ ಗಳಿಸಿದ ಆದಾಯದಲ್ಲಿ ಮನೆ ನಿರ್ಮಿಸಿಕೊಂಡಿದ್ದೇವೆ. ಈಗ ಏಕಾಏಕಿ ಈ ಭೂಮಿ ಅರಣ್ಯ ಇಲಾಖೆಯದು ಎಂದರೆ  ನಮ್ಮ ಪಾಡೇನು?
–ಮೋಹನ ಕುಮಾರ್‌, ಬಡಾವಣೆಯ ನಿವಾಸಿ

ಜಂಟಿ ಸರ್ವೆಗೆ ಆದೇಶ

‘ಬನಶಂಕರಿ ಬಡಾವಣೆಯ ಕೆಲವು ಜಾಗಗಳಿಗೆ ಅರಣ್ಯ ಇಲಾಖೆಯವರು ಗುರುತು ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಗಮನಕ್ಕೆ ತಂದಿದ್ದಾರೆ. ಒತ್ತುವರಿ ಬಗ್ಗೆ ಅರಣ್ಯ ಇಲಾಖೆಯಿಂದ ನಮಗೆ ಯಾವ ಪತ್ರವೂ ಬಂದಿಲ್ಲ. ಈ ಜಾಗದ ಬಗ್ಗೆ ನಮಗಂತೂ ಯಾವುದೇ ಗೊಂದಲ ಇಲ್ಲ. ಆದರೂ, ನಿವಾಸಿಗಳ ಆತಂಕ ದೂರ ಮಾಡುವ ಸಲುವಾಗಿ ಅರಣ್ಯ ಇಲಾಖೆಯವರ ಜೊತೆ ಸೇರಿ ಜಂಟಿ ಸರ್ವೆ ನಡೆಸಲು ಆದೇಶ ಮಾಡಲಾಗಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೂ ಕಲ್ಪಿಸಿಲ್ಲ ಮೂಲ ಸೌಕರ್ಯ’

‘ಬನಶಂಕರಿ ಬಡಾವಣೆಗೆ ಬಿಡಿಎ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಇಲ್ಲಿಗೆ ಈಗಲೂ ಕಾವೇರಿ ನೀರು ಪೂರೈಕೆ ಆಗುತ್ತಿಲ್ಲ. ಒಳಚರಂಡಿ ಸೌಕರ್ಯವಿಲ್ಲ. ಬಡಾವಣೆ ನಿರ್ಮಿಸಿದ ಬಳಿಕ ಇಲ್ಲಿನ ರಸ್ತೆಗಳಿಗೆ ಒಮ್ಮೆ ಮಾತ್ರ ಡಾಂಬರೀಕರಣ ನಡೆಸಲಾಗಿದೆ. ಈ ರಸ್ತೆಗಳ ಡಾಂಬರು ಕಿತ್ತು ಹೋಗಿದೆ’ ಎಂದು ಸತೀಶ್‌ ದೂರಿದರು.

’ಈ ಬಡಾವಣೆ ಇನ್ನೂ ಬಿಬಿಎಂಪಿಗೆ ಹಸ್ತಾಂತರ ಆಗಿಲ್ಲ. ನಾವು ಈಗಲೂ ಬಿಡಿಎಗೆ ತೆರಿಗೆ ಕಟ್ಟುತ್ತಿದ್ದೇವೆ. ಹಾಗಾಗಿ, ಮೂಲಸೌಕರ್ಯ ಕಲ್ಪಿಸಿ ಎಂದು ಬಿಬಿಎಂಪಿಯವರನ್ನು ಕೇಳುವಂತಿಲ್ಲ. ಬಿಡಿಎ ಅಧಿಕಾರಿಗಳು ನಮ್ಮ ಸಮಸ್ಯೆಗಳ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ’ ಎಂದು ಅವರು
ಬೇಸರ ವ್ಯಕ್ತಪಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ರದ್ದುಪಡಿಸಲಿ: ಕವಿ ಡಾ.ಸಿದ್ಧಲಿಂಗಯ್ಯ ಒತ್ತಾಯ

ವಿಶ್ವ ಪುಸ್ತಕ ದಿನಾಚರಣೆ
ರಾಯಧನ, ಕಾಗದದ ಮೇಲಿನ ಜಿಎಸ್‌ಟಿ ರದ್ದುಪಡಿಸಲಿ: ಕವಿ ಡಾ.ಸಿದ್ಧಲಿಂಗಯ್ಯ ಒತ್ತಾಯ

23 Apr, 2018
ಕ್ಯಾಬ್‌ ಕಂಪನಿಗಳಿಗೆ ಮೂಗುದಾರ ಹಾಕೋರ‍್ಯಾರು?

ಓಲಾ, ಉಬರ್‌ ಕಂಪನಿಗಳ ನಿಯಂತ್ರಣಕ್ಕೆ ಮೀನಮೇಷ
ಕ್ಯಾಬ್‌ ಕಂಪನಿಗಳಿಗೆ ಮೂಗುದಾರ ಹಾಕೋರ‍್ಯಾರು?

23 Apr, 2018

ಬೆಂಗಳೂರು
ತ್ಯಾಜ್ಯ ಪುನರ್ಬಳಕೆ ಬಗ್ಗೆ ಮಕ್ಕಳ ಕಾರ್ಯಾಗಾರ

‘ರಿಪೇರಿ, ಪುನರಾವರ್ತನೆ ಹಾಗೂ ಪುನರ್ಬಳಕೆ’ ಉದ್ದೇಶದೊಂದಿಗೆ ಅರಮನೆ ರಸ್ತೆಯ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ನಲ್ಲಿ ಮಕ್ಕಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

23 Apr, 2018
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ನ್ಯಾಯಾಂಗ ವಶಕ್ಕೆ

ಬೆಂಗಳೂರು
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ನವೀನ್ ನ್ಯಾಯಾಂಗ ವಶಕ್ಕೆ

23 Apr, 2018

ಬೆಂಗಳೂರು
ಕಠುವಾ ಘಟನೆ ಖಂಡಿಸಿ ಪ್ರತಿಭಟನೆ; ಎಫ್‌ಐಆರ್‌ ದಾಖಲು

ಕಠುವಾದಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ವಿಜಯನಗರದ ಚುನಾವಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

23 Apr, 2018