ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೋವುಂಡು ಬೆಳಕಾದ ಅಂಬೇಡ್ಕರ್’

ಜಿಲ್ಲೆಯ ವಿವಿಧೆಡೆ ಮಹಾ ಪರಿನಿರ್ವಾಣ ದಿನದ ಆಚರಣೆ; ಸಂವಿಧಾನ ಶಿಲ್ಪಿಗೆ ನಮನ
Last Updated 7 ಡಿಸೆಂಬರ್ 2017, 4:28 IST
ಅಕ್ಷರ ಗಾತ್ರ

ಕೆ.ಆರ್.ನಗರ: ಡಾ.ಬಿ.ಆರ್.ಅಂಬೇಡ್ಕರ್ ಸಾಕಷ್ಟು ನೋವುಂಡು ಜನರ ಬದುಕಿಗೆ ಬೆಳಕಾಗಿದ್ದಾರೆ ಎಂದು ಪರಿಶಿಷ್ಟ ಜಾತಿ, ಜನಾಂಗ ಹಿತರಕ್ಷಣಾ ಸಮಿತಿ ಜಿಲ್ಲಾ ಘಟಕದ ಸದಸ್ಯ ಹನಸೋಗೆ ನಾಗರಾಜು ಹೇಳಿದರು.

ಪಟ್ಟಣದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮಗಾದ ನೋವು ಶೋಷಿತರು ಅನುಭವಿಸುವಂತಾಗಬಾರದು ಎಂದು ಸಂವಿಧಾನದಲ್ಲಿ ಮೀಸಲಾತಿ ತಂದರು. ಆದರೆ, ಮೀಸಲಾತಿಗೆ ಅನುಗುಣವಾಗಿ ಅನುಪಾತಗಳು ಆಗಲೇ ಇಲ್ಲ. ರಾಜಕೀಯ ಪಕ್ಷಗಳು ಮತಬ್ಯಾಂಕಿಗಾಗಿ ಮೀಸಲಾತಿ ಪಟ್ಟಿಯಲ್ಲಿ ಉಪಜಾತಿ ಸೇರಿಸುವ ಕೆಲಸ ಮಾಡಿದರು. ಅಂಬೇಡ್ಕರ್ ಕನಸು ನನಸು ಮಾಡಲು ಬಿಡಲೇ ಇಲ್ಲ. ರಾಜಕೀಯ ಪಕ್ಷಗಳು ಅವರು ಜೀವಂತವಾಗಿದ್ದಾಗಲೂ ನೆಮ್ಮದಿಯಿಂದ ಇರಲು ಬಿಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಶಿಷ್ಟರು ಮೀಸಲಾತಿಯಿಂದಲೇ ಮೇಲೆ ಬರುತ್ತಿದ್ದಾರೆ ಎಂದು ಕೆಲವರು ವ್ಯವಸ್ಥಿತವಾಗಿ ಹುಯಿಲು ಎಬ್ಬಿಸುತ್ತಿದ್ದಾರೆ. ಆದರೆ, ತುಳಿತಕ್ಕೆ ಒಳಗಾದ ಪರಿಶಿಷ್ಟರೇ ಇಂದು ಮೀಸಲಾತಿಯಿಂದ ವಂಚಿತರಾಗುತ್ತಿದ್ದಾರೆ. ತುಳಿತಕ್ಕೆ ಒಳಗಾದ ವರ್ಗಗಳು ಮೇಲೆ ಬರಲು ಸಂವಿಧಾನ ಕಷ್ಟಪಟ್ಟು ಬರೆದಿದ್ದೇನೆ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷಗಳು ಅವಕಾಶ ಮಾಡಿಕೊಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೀಸಲಾತಿ ಉಪಜಾತಿಗಳಿಗೆ ಹಂಚಿ ಹೋಗುತ್ತಿದೆ. ನಾವ್ಯಾರೂ ಈ ಬಗ್ಗೆ ಚಿಂತನೆ ಮಾಡುತ್ತಿಲ್ಲ. ದಲಿತ ವರ್ಗಗಳ ಪಟ್ಟಿಯಲ್ಲಿ ಎಲ್ಲ ಉಪಜಾತಿಗಳು ಸೇರಿಸಿದ ದಿನದಿಂದಲೇ ದಲಿತ ಸಮೂಹ ಸಿಡಿದೇಳಬೇಕಾಗಿತ್ತು. ರಾಜಕೀಯ ಪಕ್ಷಗಳು ಮೀಸಲಾತಿ ಪಟ್ಟಿಯಲ್ಲಿ ಎಲ್ಲ ಉಪ ಜಾತಿ ಸೇರಿಸುವ ಕೆಲಸ ಮಾಡಿದವೇ ಹೋರತು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿಲ್ಲ. ದಲಿತ ಸಮೂಹ ಕೂಡ ಧ್ವನಿ ಎತ್ತಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಸಾ.ರಾ.ಮಹೇಶ್, ಜಿಲ್ಲಾ ಪಂಚಾಯಿತಿ ಸದ್ಯರಾದ ಡಿ.ರವಿಶಂಕರ್, ಅಚ್ಯುತಾನಂದ, ಮಾಜಿ ಸದಸ್ಯ ಅರ್ಜುನಹಳ್ಳಿ ರಾಜಯ್ಯ, ಆದಿ ಜಾಂಬವ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಲೋಕೇಶ್, ಮುಖಂಡರಾದ ಹಂಗರಬಾಯನಹಳ್ಳಿ ಎಂ.ತಮ್ಮಣ್ಣ, ಶಾಂತಿರಾಜ್, ಡಿ.ಕೆ.ಕೊಪ್ಪಲು ರಾಜಯ್ಯ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಸದಸ್ಯ ಎನ್.ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಗೊರಗುಂಡಿ ಶ್ರೀನಿವಾಸಪ್ರಸಾದ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಮುಖಂಡರಾದ ಕಾಳಯ್ಯ, ಲೋಕೇಶ್, ಚಲುವರಾಜ್, ತಹಶೀಲ್ದಾರ್ ಮಹೇಶ್ ಚಂದ್ರ ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT